varthabharthi


ಪ್ರಚಲಿತ

ಅಪರಾಧವೇ ಅಧಿಕಾರವಾದಾಗ ಜನತಂತ್ರ ಅತಂತ್ರ

ವಾರ್ತಾ ಭಾರತಿ : 12 Jan, 2020
ಸನತ್ ಕುಮಾರ್ ಬೆಳಗಲಿ

ಇತ್ತೀಚಿನ ಆರೋಗ್ಯಕರ ಬೆಳವಣಿಗೆಯೆಂದರೆ ದೇಶದ ವಿದ್ಯಾರ್ಥಿಗಳು ಯುವಕರು ದಗಲ್‌ಬಾಜಿ ಕರಾಳ ನಾಝಿ ಶಕ್ತಿಯ ವಿರುದ್ಧ ಸಿಡಿದು ನಿಂತಿದ್ದಾರೆ. ಉದಾಹರಣೆಗೆ, ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪೌರತ್ವ ಕಾನೂನು ಪರವಾಗಿ ಒತ್ತಾಯದಿಂದ ಸಹಿ ಮಾಡಿಸಲು ಬಂದಿದ್ದ ಬಿಜೆಪಿ, ಎಬಿವಿಪಿ ಕಾರ್ಯಕರ್ತರನ್ನು ವಿದ್ಯಾರ್ಥಿಗಳು ತಡೆದು ನಿಲ್ಲಿಸಿ ವಾಪಸ್ ಕಳಿಸಿದ್ದಾರೆ. ಈ ದೇಶದ ಜನತಂತ್ರದ ನಿಜವಾದ ರಕ್ಷಾ ಕವಚ ಈ ವಿದ್ಯಾರ್ಥಿ ಶಕ್ತಿಯಾಗಿದೆ.


ಹಿಟ್ಲರ್ ಕಾಲದ ಜರ್ಮನಿಯ ದಿನಗಳನ್ನು ನಾವೀಗ ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ. ಅದೇ ರೀತಿಯ ಜನಾಂಗ ದ್ವೇಷ ಇಲ್ಲೀಗ ದೇಶಭಕ್ತಿಯ ವೇಷ ತೊಟ್ಟು ಬಂದಿದೆ. 78 ವರ್ಷಗಳ ಹಿಂದೆ ಜರ್ಮನಿಯ ಪಾರ್ಲಿಮೆಂಟ್‌ಗೆ ಬೆಂಕಿ ಹಚ್ಚಿ ಸುಟ್ಟ ಹಿಟ್ಲರ್ ಅದರ ಆರೋಪವನ್ನು ಕಮ್ಯುನಿಸ್ಟ್ ನಾಯಕ ಡಿಮಿಟ್ರೊವ್ ತಲೆಗೆ ಕಟ್ಟಿದ. ಒಂದು ವಾರದ ಹಿಂದೆ ದಿಲ್ಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡು ಕಬ್ಬಿಣದ ರಾಡು ಮತ್ತು ದೊಣ್ಣೆಗಳೊಂದಿಗೆ ಬಂದು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷಾ ಘೋಷ್, ಪ್ರಾಧ್ಯಾಪಕಿ ಸುಚರಿತಾ ಸೇನ್ ಮೇಲೆ ಹಲ್ಲೆ ಮಾಡಿ ತಲೆ ಬುರುಡೆ ಒಡೆದವರು ಯಾರೆಂದು ಎಲ್ಲರಿಗೂ ಗೊತ್ತು. ಆದರೆ, ಅಮಿತ್ ಶಾ ಕಣ್ಸನ್ನೆಯಂತೆ ಕೆಲಸ ಮಾಡುವ ದಿಲ್ಲಿ ಪೊಲೀಸರು ಒಂದು ವಾರ ಸುಮ್ಮನಿದ್ದು ನಂತರ ತಲೆ ಒಡೆಸಿಕೊಂಡ ಐಷಾ ಮೇಲೆ ಎಫ್‌ಐಆರ್ ದಾಖಲಿಸಿ ಆಕೆಯೊಂದಿಗೆ 9 ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ದೊಣ್ಣೆ ರಾಡುಗಳಿಂದ ವಿವಿ ಕ್ಯಾಂಪಸ್ ಒಳಗೆ ನುಸುಳಿ ಹೊಡೆದವರಾರು? ಎಬಿವಿಪಿಯನ್ನು ಯಾಕೆ ಹೆಸರಿಸುತ್ತಿಲ್ಲ ಎಂದು ಪ್ರಶ್ನಿಸಿದರೆ ಪೊಲೀಸರ ಬಳಿ ಉತ್ತರವಿಲ್ಲ.

ಈ ಸರಕಾರಿ ಪ್ರಾಯೋಜಿತ ದಾಳಿಗೆ ಅನುಕೂಲ ಮಾಡಿಕೊಡಲು ಇಡೀ ಪ್ರದೇಶದಲ್ಲಿ ಅಂದು ಸಂಜೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ‘ಜೆಎನ್‌ಯುನ ತುಕ್ಡೆ, ತುಕ್ಡೆ ಗ್ಯಾಂಗನ್ನು ಹತ್ತಿಕ್ಕಿ ಪಾಠ ಕಲಿಸಬೇಕಾಗಿದೆ’ ಎಂದು ದೇಶದ ಗೃಹಮಂತ್ರಿ ಅಮಿತ್ ಶಾ ಬಹಿರಂಗವಾಗಿ ಹೇಳಿದ್ದರು. ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಹಲ್ಲೆ ನಡೆದಿದೆ.

ಜೆಎನ್‌ಯುನಲ್ಲಿ ಕಬ್ಬಿಣದ ರಾಡುಗಳಿಂದ ವಿದ್ಯಾರ್ಥಿಗಳನ್ನು ಥಳಿಸಿದ್ದು ಎಬಿವಿಪಿ ಕಾರ್ಯಕರ್ತರೆಂದು ಎಬಿವಿಪಿ ನಾಯಕ ಅಕ್ಷತ ಅವಸ್ತಿ ಖಾಸಗಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಸಂಘದ ಆದೇಶದಂತೆ ಹೀಗೇ ಮಾಡಿದ್ದೇವೆ ಎಂದು ಹೇಳಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿ ನಾಯಕರ ಬಳಿ ಉತ್ತರವಿಲ್ಲ.

ಜೆಎನ್‌ಯು ಒಂದೇ ಅಲ್ಲ, ಇಡೀ ದೇಶದ ಪರಿಸ್ಥಿತಿ ತುಂಬ ಆತಂಕಕಾರಿಯಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೇ ಇದನ್ನು ಒಪ್ಪಿಕೊಂಡಿದ್ದಾರೆ. ಅಪರಾಧವೇ ಅಧಿಕಾರ ಸ್ಥಾನವನ್ನು ಕಬ್ಜಾ ಮಾಡಿಕೊಂಡು ಕುಳಿತಾಗ ಅಮಾಯಕರು ಅಪರಾಧಿಗಳಾಗುವ ಅಪರಾಧಿಗಳು ಅಮಾಯಕರಾಗಿ ಸೈದ್ಧಾಂತಿಕ ವಿರೋಧಿಗಳ ತಲೆ ಒಡೆಯುವ ಕಾರ್ಯ ನಡೆಯುತ್ತಲೇ ಇರುತ್ತವೆ. ಭಾರತದಲ್ಲಿ ಅಪರಾಧ ಧರ್ಮದ ರಕ್ಷಾಕವಚ ಹಾಗೂ ಪ್ರಭುತ್ವದ ಪರಮಾಧಿಕಾರ ಹೊಂದಿರುವ ಈ ದಿನಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ತನ್ನನ್ನು ಬೆಂಬಲಿಸುವ ಮೂರ್ಖ ಸಮೂಹವೊಂದನ್ನು ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ಮೂಲಕ ಸೃಷ್ಟಿಸಿಕೊಂಡು, ಭಿನ್ನವಾದ ಆಲೋಚನೆ, ಧರ್ಮ, ಸಂಸ್ಕೃತಿ ಆಹಾರ ಪದ್ಧತಿಗಳನ್ನು ಇಷ್ಟಪಡದ ಅದು ಮುಕ್ತ ಚಿಂತನೆಯ ಜೆಎನ್‌ಯುನಂಥ ಶಿಕ್ಷಣ ಸಂಸ್ಥೆಗಳನ್ನು ಸಹಿಸುವುದಿಲ್ಲ. ಇಂಥ ಅಸಹನೆಗೆ ರಾಜಕೀಯ ಪರಿಭಾಷೆಯಲ್ಲಿ ಫ್ಯಾಶಿಸಂ ಎಂದು ಕರೆಯುತ್ತಾರೆ. ಭಾರತದಲ್ಲಿ ಅದು ತನ್ನ ರಕ್ತ ಸಂಬಂಧಿ ಮನುವಾದದ ಜೊತೆ ಸೇರಿ ಮನುವಾದಿ ಫ್ಯಾಶಿಸಂ ಆಗಿದೆ. ಇದಕ್ಕೆ ‘ಮನಿ’ವಾದಿಗಳ ಆಸರೆಯೂ ಇದೆ.

ದಿಲ್ಲಿಯ ಜೆಎನ್‌ಯುನಲ್ಲಿ ಅಧಿಕಾರದಲ್ಲಿದ್ದವರೆ ಅಶಾಂತಿಗೆ ಕಾರಣವಾದರೆ ಇಲ್ಲಿ ನಮ್ಮ ಕರ್ನಾಟಕದಲ್ಲಿ ಕನ್ನಡ ನುಡಿ ಜಾತ್ರೆಗೆ ಇವರಿಂದ ಗಂಡಾಂತರ ಬಂದಿದೆ. ಬಾಂಬ್ ಬೆದರಿಕೆ ಬಂದಿರುವುದರಿಂದ ಶೃಂಗೇರಿಯಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮೊದಲ ದಿನವೇ ಮೊಟಕುಗೊಂಡು, ಎರಡನೇ ದಿನದ ಕಾರ್ಯಕ್ರಮ ರದ್ದಾಗಿದೆ. ಸಮ್ಮೇಳನದ ಮೇಲೆ ಹಿಂಸಾತ್ಮಕ ದಾಳಿ ನಡೆದರೆ ರಕ್ಷಣೆ ಕೊಡಲು ಆಗುವುದಿಲ್ಲ ಎಂದು ಪೊಲೀಸ್ ಇಲಾಖೆ ಕೈ ಚೆಲ್ಲಿದ್ದರಿಂದ ಇಂಥ ಸ್ಥಿತಿ ನಿರ್ಮಾಣವಾಗಿದೆ. ಬಾಂಬ್ ದಾಳಿಯ ಬೆದರಿಕೆ ಹಾಕಿದವರನ್ನು ಹುಡುಕಿ ಹಿಡಿಯುವ ಬದಲು ಸಾಹಿತ್ಯ ಸಮ್ಮೇಳನದ ಸಂಘಟಕರಿಗೇ ಎರಡನೇ ದಿನದ ಕಾರ್ಯಕ್ರಮ ರದ್ದುಗೊಳಿಸಲು ಪೊಲೀಸರು ಸೂಚಿಸಿದ್ದಾರೆ. ಇದರ ಅರ್ಥ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಪೊಲೀಸ್ ಇಲಾಖೆ ಹಾಗೂ ರಾಜ್ಯದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ.

ಕಳೆದ ವಾರ ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಪರಿಷತ್ತಿನ ಪದಾಧಿಕಾರಿಗಳು ಒಮ್ಮತದಿಂದ ಮಲೆನಾಡಿನ ಜನಪರ, ಪರಿಸರ ಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಗಡೆ ಅವರನ್ನು ಸರ್ವಾನುಮತದಿಂದ ಆರಿಸಿತು. ಇದು ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಟಿ.ರವಿಗೆ ಇಷ್ಟವಾಗಲಿಲ್ಲ. ಅವರು ತಕರಾರು ತಗೆದರು. ‘ಕಲ್ಕುಳಿ ವಿಠಲ ಹೆಗ್ಗಡೆ ನಕ್ಸಲ್ ಬೆಂಬಲಿಗ ಅವರನ್ನು ಬದಲಿಸಿ’ ಎಂದು ಪಟ್ಟು ಹಿಡಿದರು. ಆದರೆ, ಜಿಲ್ಲಾ ಸಾಹಿತ್ಯ ಪರಿಷತ್ತು ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಸಮ್ಮೇಳನಕ್ಕೆ ಸರಕಾರ ನೀಡುವ ಅನುದಾನ ಸ್ಥಗಿತಗೊಳಿಸಿದರೂ ಮಣಿಯಲಿಲ್ಲ. ಈ ಪ್ರಶ್ನೆಯಲ್ಲಿ ಪರಿಷತ್‌ನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಪರಿಷತ್‌ನ ಘನತೆ ಎತ್ತಿ ಹಿಡಿಯದೇ ಮಂತ್ರಿಯ ಆಜ್ಞಾಧಾರಕರಾಗಿ ಅನುದಾನದ ಹಣ ಬಿಡುಗಡೆ ಮಾಡದೆ ಅಡ್ಡಗಾಲು ಹಾಕಿದರು. ಅದಕ್ಕೂ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಶೋಕ ಮಣಿಯಲಿಲ್ಲ. ಕೊನೆಗೆ ಪೊಲೀಸರ ಮೂಲಕ ಸಮ್ಮೇಳನ ಮುಂದೂಡುವ ಒತ್ತಡ ತರಲಾಯಿತು. ಅದಕ್ಕೂ ಮಣಿಯಲಿಲ್ಲ. ಸಮ್ಮೇಳನಕ್ಕೆ ರಕ್ಷಣೆ ಕೊಡಲಾಗುವುದಿಲ್ಲ ಎಂದು ಪೊಲೀಸರ ಮೂಲಕ ಹೆದರಿಸಲಾಯಿತು. ಇದ್ಯಾವುದಕ್ಕೂ ಮಣಿಯದೇ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಇಲ್ಲಿ ಸಿ.ಟಿ. ರವಿ ಹೇರಿದ ಒತ್ತಡ, ಹಾಕಿದ ಬೆದರಿಕೆ ಇವೆಲ್ಲ ಫ್ಯಾಶಿಸ್ಟ್ ತಂತ್ರಗಳು.

ಈ ಎಲ್ಲ ಒತ್ತಡಗಳ ನಡುವೆ ಮೊದಲ ದಿನದ ಉದ್ಘಾಟನಾ ಸಮಾರಂಭವೇನೊ ನಡೆಯಿತು. ಎರಡನೇ ದಿನದ ಕಲಾಪ ರದ್ದಾಯಿತು. ಇದು ನಾಡು ನುಡಿಗೆ ಒದಗಿದ ದುಸ್ಥಿತಿ. ಸಚಿವ ಸಿ.ಟಿ.ರವಿ ಆಪಾದಿಸಿದಂತೆ ಕಲ್ಕುಳಿ ವಿಠಲ ಹೆಗ್ಗಡೆ ನಕ್ಸಲ್ ಬೆಂಬಲಿಗರಾಗಿದ್ದರೆ ಅಂಥ ಸಾಕ್ಷ್ಯಾಧಾರಗಳು ಸಚಿವರ ಬಳಿ ಇದ್ದರೆ ಪೊಲೀಸರಿಗೆ ದೂರು ನೀಡಿ ಹೆಗ್ಗಡೆ ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗಿತ್ತು. ಆದರೆ ಇದೆಲ್ಲ ಸುಳ್ಳೆಂದು ಸಿ.ಟಿ.ರವಿಗೂ ಗೊತ್ತು. ಆದರೆ, ಬಾಬಾ ಬುಡಾನ್‌ಗಿರಿ ದತ್ತಪೀಠ ವಿವಾದದ ಸಂದರ್ಭದಲ್ಲಿ ವಿಠಲ ಹೆಗ್ಗಡೆ ಸಿ.ಟಿ. ರವಿಯ ಕೋಮು ಪ್ರಚೋದಕ ಚಟುವಟಿಕೆಗಳನ್ನು ವಿರೋಧಿಸಿದ್ದರಿಂದ ಈಗ ನಕ್ಸಲ್ ಲೇಬಲ್ ಅಂಟಿಸಿ ಸಾಹಿತ್ಯ ಸಮ್ಮೇಳನ ಹಾಳಾಗಲು ಜಿಲ್ಲಾ ಮಂತ್ರಿಯೇ ಕಾರಣವಾಗಿರುವುದು ಈ ನಾಡಿನ ದುರಂತ.

ವಿಠಲ ಹೆಗ್ಗಡೆ ನಕ್ಸಲರ ಬೆಂಬಲಿಗರಾಗಿದ್ದರೆ ಸಚಿವ ಸಿ.ಟಿ.ರವಿ ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ ತಳಬುಡವಿಲ್ಲದ ಆರೋಪ ಮಾಡುವುದು ಕಾನೂನು ಪ್ರಕಾರ ಮಾನಹಾನಿಯಾಗುತ್ತದೆ. ಹೆಗ್ಗಡೆ ಅವರು ರವಿ ಮೇಲೆ ಮಾನನಷ್ಟ ಖಟ್ಲೆ ಹಾಕುವುದಾಗಿ ಹೇಳಿದ್ದಾರೆ.

ಫ್ಯಾಶಿಸಂಗೆ ಇನ್ನೊಂದು ಉದಾಹರಣೆ ಅಂದರೆ ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್. ಪೌರತ್ವ ಕಾನೂನಿನ ವಿರುದ್ಧ ದೇಶವ್ಯಾಪಿ ಮತ್ತು ಕರ್ನಾಟಕದಾದ್ಯಂತ ಪ್ರತಿಭಟನೆ ನಡೆದಾಗ ಮಂಗಳೂರು ಪೊಲೀಸರು ಗೋಲಿಬಾರ್ ಮಾಡಿ ಅಮಾಯಕರಿಬ್ಬರನ್ನು ಕೊಂದರು. ನಂತರ ಅದನ್ನು ಮುಚ್ಚಿ ಕೊಳ್ಳಲು ಕೇರಳದಿಂದ ಬಂದವರ ಕತೆ ಕಟ್ಟಿದರು. ಇದು ಸಿಎಂ ಯಡಿಯೂರಪ್ಪನವರಿಗೆ ಗೊತ್ತು. ಅವರೇನೋ 10 ಲಕ್ಷ ರೂಪಾಯಿ ಪರಿಹಾರವನ್ನು ಬಲಿಯಾದವರ ಕುಟುಂಬಗಳಿಗೆ ಘೋಷಿಸಿದರು. ಆದರೆ ಮಾರನೇ ದಿನವೇ ಅಗೋಚರ ಅಧಿಕಾರ ಕೇಂದ್ರದ ಒತ್ತಡಕ್ಕೆ ಮಣಿದು ಘೋಷಿಸಿದ ಪರಿಹಾರದ ಹೇಳಿಕೆಯನ್ನು ವಾಪಸ್ ಪಡೆದರು. ಅಂದರೆ ಉಗುಳಿದ ಉಗುಳನ್ನೇ ಮತ್ತೆ ನುಂಗಿದರು.

ಅದು ಹೋಗಲಿ, ಈ ಗೋಲಿಬಾರ್‌ನ ಕುರಿತು ಸಾಕ್ಷ ಸಂಗ್ರಹಿಸಲು, ಅಧ್ಯಯನ ನಡೆಸಲು ಬಂದಿದ್ದ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡರ ನೇತೃತ್ವದ ಜನತಾ ಅದಾಲತ್ ತಂಡಕ್ಕೆ ಪೊಲೀಸರು ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಈ ತಂಡದಲ್ಲಿ ನನ್ನ ಮಿತ್ರ ಹಿರಿಯ ವಕೀಲ ಬಿ.ಟಿ. ವೆಂಕಟೇಶ್, ಪತ್ರಕರ್ತ ಸುಗತ ಶ್ರೀನಿವಾಸರಾಜು ಇದ್ದರು. ಈ ತಂಡ ಮಂಗಳೂರಿಗೆ ಬಂದು ಸೂರ್ಯ ಹೊಟೇಲ್‌ನಲ್ಲಿ ಜನತಾ ಅದಾಲತ್ (ಸಾಕ್ಷ ಸಂಗ್ರಹ) ಸಭೆ ನಿಗದಿಯಾಗಿತ್ತು. ಈ ಸಭೆಯನ್ನು ನಡೆಸಲು ಪೊಲೀಸರು ಬಿಡಲಿಲ್ಲ. ಹೊಟೇಲ್ ಮಾಲಕರಿಗೆ ಬೆದರಿಕೆ ಹಾಕಿದರು. ಆದರೂ ಬೆದರಿಕೆ ನಡುವೆ ಸಭೆ ನಡೆಯಿತು ಎಂದು ಇದರ ಸಂಘಟಕ ಅಶೋಕ ಮರಿದಾಸ್ ನನಗೆ ಹೇಳಿದರು.

ನ್ಯಾಯಮೂರ್ತಿ ಗೋಪಾಲಗೌಡರ ತಂಡ ಹೈಲ್ಯಾಂಡ್ ಮತ್ತು ಯುನಿಟಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳನ್ನು ಕಂಡು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು. ಇದೆಲ್ಲ ಮುಗಿದ ನಂತರ ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪತ್ರಿಕಾಗೋಷ್ಠಿ ನಡೆಸಲು ಪೊಲೀಸರು ಬಿಡಲಿಲ್ಲ. ಹತ್ತಕ್ಕೂ ಹೆಚ್ಚು ಹೊಟೇಲ್‌ಗಳನ್ನು ಸಂಪರ್ಕಿಸಿ ಪತ್ರಿಕಾಗೋಷ್ಠಿಗೆ ಸ್ಥಳಾವಕಾಶ ಪಡೆಯಲು ಈ ತಂಡ ಯತ್ನಿಸಿತು. ಪೊಲೀಸರು ಈ ಎಲ್ಲ ಹೊಟೇಲ್‌ಗಳ ಮಾಲಕರನ್ನು ಸಂಪರ್ಕಿಸಿ, ನ್ಯಾಯಮೂರ್ತಿ ಗೋಪಾಲಗೌಡರ ಪತ್ರಿಕಾಗೋಷ್ಠಿಗೆ ಜಾಗ ನೀಡದಂತೆ ಒತ್ತಡ ಹೇರಿದರು. ಪೊಲೀಸರಿಂದ ಪರವಾನಿಗೆ ಪತ್ರ ತಂದರೆ ಮಾತ್ರ ಅವಕಾಶ ನೀಡುವುದಾಗಿ ಹೊಟೇಲ್ ಮಾಲಕರು ಅಸಹಾಯಕರಾಗಿ ಹೇಳಿದರು.

ಮನುವಾದಿ ಫ್ಯಾಶಿಸಂ ವಿರುದ್ಧ ಹೋರಾಟ ನಮ್ಮ ಇಂದಿನ ಮೊದಲ ಕರ್ತವ್ಯವಾಗಬೇಕಾಗಿದೆ. ಇತ್ತೀಚಿನ ಆರೋಗ್ಯಕರ ಬೆಳವಣಿಗೆಯೆಂದರೆ ದೇಶದ ವಿದ್ಯಾರ್ಥಿಗಳು ಯುವಕರು ದಗಲ್ ಬಾಜಿ ಕರಾಳ ನಾಝಿ ಶಕ್ತಿಯ ವಿರುದ್ಧ ಸಿಡಿದು ನಿಂತಿದ್ದಾರೆ. ಉದಾಹರಣೆಗೆ, ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪೌರತ್ವ ಕಾನೂನು ಪರವಾಗಿ ಒತ್ತಾಯದಿಂದ ಸಹಿ ಮಾಡಿಸಲು ಬಂದಿದ್ದ ಬಿಜೆಪಿ, ಎಬಿವಿಪಿ ಕಾರ್ಯಕರ್ತರನ್ನು ವಿದ್ಯಾರ್ಥಿಗಳು ತಡೆದು ನಿಲ್ಲಿಸಿ ವಾಪಸ್ ಕಳಿಸಿದ್ದಾರೆ. ಈ ದೇಶದ ಜನತಂತ್ರದ ನಿಜವಾದ ರಕ್ಷಾ ಕವಚ ಈ ವಿದ್ಯಾರ್ಥಿ ಶಕ್ತಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)