varthabharthiಅನುಗಾಲ

ಚಪಾಕ್ ಮೇಲೆ ಆ್ಯಸಿಡ್ ದಾಳಿ

ವಾರ್ತಾ ಭಾರತಿ : 16 Jan, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

1975ರಲ್ಲಿದ್ದ ಮತ್ತು ಇಂದು ಮರಳಿ ಬಂದಿರುವ ಗತಿ-ಸ್ಥಿತಿಯನ್ನು ಗಮನಿಸಿದರೆ ರಾಜಾಶ್ರಯವನ್ನು ಬಯಸದಿದ್ದರೂ ರಾಜಾಗ್ರಹವನ್ನು ಪಡೆಯಬಾರದೆಂದು ಅರ್ಥವಾಗುತ್ತದೆ. ಆಳುವವರ ಅವಕೃಪೆಗೆ ತುತ್ತಾದರೆ ಅಪಾಯ; ಆಳುವವರ ಬೆಂಬಲಿಗರು ಅವಿವೇಕಿಗಳಾದರಂತೂ ಆಪತ್ತು ತಪ್ಪಿದ್ದಲ್ಲ. ಜೆಎನ್‌ಯು ಕಾರಣವಾಗಿ ದೀಪಿಕಾ ಪಡುಕೋಣೆಯ ಚಪಾಕ್ ಆಪತ್ತಿಗೊಳಗಾದರೆ ಅದು ಈ ದೇಶ ಯಾವ ಅವನತಿಯತ್ತ ಹೋಗುತ್ತಿದೆಯೆಂಬುದು ಗೊತ್ತಾಗಬೇಕು. ಒಂದೊಮ್ಮೆ ಪ್ರಗತಿಯ ಮತ್ತು ಆಧುನಿಕತೆಯ ಹಾದಿಯಲ್ಲಿದ್ದ ಅಫ್ಘಾನಿಸ್ತಾನ, ಇರಾನ್, ಇರಾಕ್ ಮುಂತಾದ ದೇಶಗಳು ಧಾರ್ಮಿಕ ಮತ್ತು ಮೂಲಭೂತವಾದದ ಮೌಢ್ಯಪರಂಪರೆಯ ಆಳ್ವಿಕೆಗೆ ಸಿಕ್ಕಿ ಒಮ್ಮೆಗೇ ಶತಮಾನಗಳಷ್ಟು ಹಿಂದೆ ಜಾರಿಕೊಂಡ ಉದಾಹರಣೆಗಳು ಕಣ್ಣಮುಂದೆ ಇದ್ದಾಗಲೂ ಭಾರತವು ಅದೇ ಹಾದಿಯನ್ನು ತುಳಿಯಲಾರಂಭಿಸಿದೆಯೆಂದರೆ ಅದು ಸಮೂಹ ವಿಸ್ಮತಿ ಮಾತ್ರವಲ್ಲ ವಿಕೃತಿಗೆ ಸಾಕ್ಷಿ.


ದೇಶವಿಖ್ಯಾತವಾದ ಜೆಎನ್‌ಯು ಹಿಂಸಾಚಾರದ ವಿರುದ್ಧ ಮತ್ತು ತಮ್ಮ ಶೈಕ್ಷಣಿಕ ಹಾಗೂ ನಾಗರಿಕ ಬೇಡಿಕೆಗಳನ್ನು ಒತ್ತಾಯಿಸುತ್ತಾ ಅಲ್ಲಿನ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಬಾಲಿವುಡ್‌ನ ಪ್ರಸಿದ್ಧ ತಾರೆ ದೀಪಿಕಾ ಪಡುಕೋಣೆ ಅಲ್ಲಿಗೆ ಭೇಟಿ ನೀಡಿದರು. ಆಕೆ ಏನೂ ಹೇಳಿಕೆ ನೀಡಲಿಲ್ಲ. ಅವರೊಡನೆ ಒಂದಷ್ಟು ನಿಮಿಷಗಳಷ್ಟೇ ಆಕೆ ಕಳೆದದ್ದು. ಆದರೆ ಆಕೆಯ ಭೇಟಿ ಸರಕಾರವನ್ನು ಮತ್ತು ಆಡಳಿತಾರೂಢರನ್ನು ಮತ್ತು (ಎಲ್ಲ ‘ಇಸಂ’ಗಳಿಗೆ ವಿರುದ್ಧವಾದ) ಅವರ ‘ಅಸಂ’‘ಖ್ಯಾತ’ ಮತಾಂಧ ಕೇಸರಿ ಬೆಂಬಲಿಗರನ್ನು ಕೆರಳಿಸಿತು. ‘‘ಬೇಟಿ ಬಚಾವೋ/ಬೇಟಿ ಪಢಾವೋ’’ ಘೋಷಣೆಗಳು, ಮಹಿಳಾ ಸಬಲೀಕರಣ ಇಂತಹ ಮುಖವಾಡಗಳು ಕೆಲವು ನಿಮಿಷಗಳಲ್ಲೇ ಕಳಚಿ ಬಿದ್ದವು. ತಕ್ಷಣ ಅವರ ಎಲ್ಲ ಮುಖಗಳು ಕಾಳಿಂದಿಯಂತೆ ವಿಷಕಾರತೊಡಗಿದವು. ಆಕೆಗೆ ರಾಜಕೀಯದ ಮೇ‘ಕಪ್ಪು’ಬಳಿದವು.

ಕಳೆದ ವಾರ ದೀಪಿಕಾ ಪಡುಕೋಣೆಯ ಬಹು ನಿರೀಕ್ಷಿತ ಹಿಂದಿ ಸಿನೆಮಾ ‘ಚಪಾಕ್’ ಬಿಡುಗಡೆಯಾಯಿತು. ಆ್ಯಸಿಡ್ ದಾಳಿಗೆ ತುತ್ತಾದ ಲಕ್ಷ್ಮೀ ಅಗರ್‌ವಾಲ್ ಎಂಬ ಯುವತಿಯೊಬ್ಬಳು ತನ್ನ ದುರಂತವನ್ನು ಮೀರಿ ಬದುಕಿನ ಯಾನವನ್ನು ಮುಂದುವರಿಸಿದ ನೈಜ ಘಟನೆಯನ್ನಧಾರಿಸಿದ ಈ ಕಥೆ ಮನಕಲಕುವುದು ಮಾತ್ರವಲ್ಲ, ಭಾರತದ (ಮತ್ತು ವಿಶ್ವದ) ಎಲ್ಲ ಅಂತಹ ಬಲಿಪಶುಗಳಿಗೆ ಭರವಸೆಯನ್ನು ಮೂಡಿಸುವಂಥದ್ದು. (ರಾಜಕಾರಣ ಮೂಲವಾಗಿದ್ದರೂ ಒಳ್ಳೆಯ ಕಾರಣವನ್ನು ಬೆಂಬಲಿಸಿದಂತೆ) ಕೆಲವು ಭಾಜಪೇತರ ರಾಜ್ಯ ಸರಕಾರಗಳು ಈ ಸಿನೆಮಾಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದವು. ಸಹಜವಾಗಿಯೇ ಎಲ್ಲ ಧರ್ಮಗಳ ಎಲ್ಲೆಯನ್ನು ಮೀರಿ ಕಲಾಭಿಮಾನಿಗಳು ನೋಡಬೇಕಾದ ಸಿನೆಮಾ ಇದು (ಆಗಬೇಕಾಗಿತ್ತು). ಅದೇ ದಿನ ಅಜಯ್‌ದೇವಗನ್ ಅಭಿನಯಿಸಿದ ‘ತಾನಾಜಿ’ ಎಂಬ ಮರಾಠಾ ವೀರನ ಚರಿತ್ರೆಯನ್ನು ಆಧರಿಸಿದ ಸಿನೆಮಾವೂ ಬಿಡುಗಡೆಯಾಯಿತು. ಅದೂ ನೋಡಬಹುದಾದ ಸಿನೆಮಾವೇ ಇರಬಹುದು. ಸುಮಾರಾಗಿ ‘ಪದ್ಮಾವತ್’ ಹಾಗೂ ‘ಪಾಣಿಪತ್’ ಸಾಲಿನ ಸಿನೆಮಾ ಅದು. ದೀಪಿಕಾ ಪಡುಕೋಣೆಯ ವಿರುದ್ಧ ಸಂಚು ರೂಪಿಸುವ ದೇಶಭಕ್ತರಿಗೆ ಇದು ರಸಗವಳವಾಗಿ, ವರದಾನವಾಗಿ ಸಿಕ್ಕಿತು.

ಪರಿಣಾಮವಾಗಿ ‘‘ಚಪಾಕ್ ನೋಡಬೇಡಿ, ತಾನಾಜಿ ನೋಡಿ’’ ಎಂಬ ಮೂರ್ಖ ಪ್ರಚಾರವನ್ನು ಎಲ್ಲ ಸ್ಥಾಪಿತ ಹಿತಾಸಕ್ತಿಗಳು ಮತ್ತು ಪಟ್ಟಭದ್ರ ಶಕ್ತಿಗಳು ಮಾಡಿದವು. ವಾಸ್ತವವಾಗಿ ಈ ಮಂದಿ ಭಾರತದ ಎಲ್ಲ ಮಹಿಳೆಯರ ಮೇಲೆ ಧಾರ್ಮಿಕ/ಮತೀಯ ಆ್ಯಸಿಡ್ ದಾಳಿ ಆರಂಭಿಸಿವೆ. ಇದರಿಂದಾಗಿ ತಾನಾಜಿ ಹಣ ಬಾಚುತ್ತಿದ್ದರೆ ಚಪಾಕ್ ಗಲ್ಲಾಪೆಟ್ಟಿಗೆಯಲ್ಲಿ ಸೋಲುತ್ತಿದೆ. ಸಂವೇದನಾರಹಿತವೆಂದೇ ಬಿಂಬಿತವಾಗಿರುವ ಉತ್ತರ ಪ್ರದೇಶ ಸರಕಾರವು ಚಪಾಕ್ ಸಿನೆಮಾಕ್ಕೆ ತೆರಿಗೆ ವಿನಾಯಿತಿ ನೀಡದೆ ತಾನಾಜಿ ಸಿನೆಮಾಕ್ಕೆ ಈ ವಿನಾಯಿತಿಯನ್ನು ನೀಡಿದೆ. ತಾನಾಜಿ ಸಿನೆಮಾಕ್ಕೆ ತೆರಿಗೆ ವಿನಾಯಿತಿ ಕೊಡುವುದು ಬಿಡುವುದು ಸರಕಾರದ ಮರ್ಜಿಗೆ, ವಿವೇಚನೆಗೆ ಬಿಟ್ಟದ್ದು. ಆದರೆ ಈ ನಿರ್ಧಾರವು ಯೋಗಿಯ ಸಹಜ ಸೇಡಿನ ಮತ್ತು ಪಕ್ಷಪಾತದ ರಾಜಕಾರಣದಂತೆ ಕಾಣುವುದು ಚಪಾಕ್ ಸಿನೆಮಾದ ಕುರಿತು ಕುರುಡಾಗಿ, ಕಿವುಡಾಗಿ ವರ್ತಿಸುವುದರಿಂದ. ತಾನಾಜಿಯಂತಹ ಸಿನೆಮಾಗಳು ಅನೇಕವಿರಬಹುದು; ಅನೇಕವು ಬರಬಹುದು. ಆದರೆ ಚಪಾಕ್ ಅಪರೂಪದ ಮತ್ತು ಮಾರ್ಮಿಕ ಸಂದೇಶವನ್ನು ಬೀರುವ ಚಿತ್ರ. ಎರಡು ಸಿನೆಮಾಗಳು ಏಕಕಾಲಕ್ಕೆ ಬಿಡುಗಡೆಯಾದಾಗ ಅವೆರಡೂ ಒಂದೇ ಪ್ರಮಾಣದಲ್ಲಿ ವ್ಯಾವಹಾರಿಕ ಯಶಸ್ಸನ್ನು ಕಾಣಬೇಕೆಂದೇನೂ ಇಲ್ಲ. ಜನರ ರುಚಿ, ಆಸಕ್ತಿ ಭಿನ್ನವಾಗಿರುತ್ತದೆ. ಇದು ಕಲಾಮಾಧ್ಯಮದ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಎಲ್ಲರಿಗೂ ಗೊತ್ತಿರುತ್ತದೆ. ಸಿನೆಮಾ ಮಾತ್ರವಲ್ಲ, ಯಾವುದೇ ಕಲಾಪ್ರಪಂಚವನ್ನು ಗಮನಿಸಿದರೆ ಒಳ್ಳೆಯವು ಸೋತದ್ದೂ ತೀರಾಸಾಮಾನ್ಯವಾದವು ಗೆದ್ದದ್ದೂ ಇವೆ. ಒಳ್ಳೆಯ ಕಲಾಪ್ರಯೋಗ/ವಸ್ತು/ವಿಚಾರಗಳು- ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ಇವು ಜನಪ್ರಿಯತೆಯಲ್ಲೂ ಗುಣಮಟ್ಟದಲ್ಲೂ ಜನಮನಗೆದ್ದ ಉದಾಹರಣೆಗಳು ಬೇಕಷ್ಟಿವೆ. ತಮ್ಮ ಕಾಲದಲ್ಲಿ ಜನಪ್ರಿಯವಾಗಿ ಆನಂತರ ನಶಿಸಿಹೋದವೂ ಇವೆ.

ಹಾಗೆಯೇ ಸಮಕಾಲೀನ ಜನಪ್ರಿಯತೆಯನ್ನಾಗಲೀ ಯಶಸ್ಸನ್ನಾಗಲೀ ಕಾಣದೆ ಬಳಲಿದ ಅನೇಕ ಕಲಾವಸ್ತುಗಳು ಕಾಲಾಂತರದಲ್ಲಿ ಜನಮನ್ನಣೆಯನ್ನು ಗಳಿಸಿದ್ದೂ ಇದೆ. ಜನರು ಯಾವುದನ್ನು ಹೇಗೆ ಗ್ರಹಿಸುತ್ತಾರೆಂದು ಅಳೆಯುವುದು ಕಷ್ಟ. ಆದರೆ ಯಾವ ಸಮಾಜದಲ್ಲಿ ಜಾತಿ-ಮತ, ಅಧಿಕಾರ, ರಾಕ್ಷಸೀಯ ಶಕ್ತಿ ಇವೇ ಒಟ್ಟು ಸೇರಿ ಯಾವುದೇ ಧನಾತ್ಮಕ ಮೌಲ್ಯವನ್ನು ಸದೆಬಡಿಯುವ ಸಂಚನ್ನು ಹೂಡಿದಾಗ ಇವೆಲ್ಲ ಸಹಜ. ಅಧಿಕಾರವು ಸೌಜನ್ಯವನ್ನು ಬೇಡುತ್ತದೆ. ಒಂದು ವೇಳೆ ಅದನ್ನು ನೀಡುವ ಮನಸ್ಥಿತಿಯಿಲ್ಲದಿದ್ದರೂ ಅಧಿಕಾರದ ಹಾದಿಯಲ್ಲಿ ಘೋಷಿಸಿದ, ಪ್ರಚಾರ ಮಾಡಿದ ಮೌಲ್ಯಗಳಿಗೆ ಸ್ಪಷ್ಟ ತಿಲಾಂಜಲಿ ನೀಡುವುದನ್ನು ನೋಡಿದರೆ ನಮ್ಮ ಸಮಾಜದ ಶೈಥಿಲ್ಯದ ಅರಿವಾಗುತ್ತದೆ. ಇದಕ್ಕೆ ಇಂಬು ಕೊಡುವಂತೆ ನಮ್ಮ ಸಕಲ ಕಲಾವಂತರೂ ಮೌನವಾಗಿದ್ದಾರೆ. ಸಮ್ಮೋಹನಾಸ್ತ್ರವನ್ನು ಅರ್ಜುನ ಪ್ರಯೋಗಿಸಿದ ಕಥೆ ಮಹಾಭಾರತದ ಉತ್ತರ ಗೋಗ್ರಹಣದ ಸಂದರ್ಭದಲ್ಲಿ ಉಲ್ಲೇಖವಾಗಿದೆ. ಎಲ್ಲರೂ ಸ್ಮತಿ ತಪ್ಪಿ ಮಲಗಿದರೆ ಭೀಷ್ಮರನ್ನು ಸೋಲಿಸುವ ಶಕ್ತಿ ಅದಕ್ಕಿರುವುದಿಲ್ಲ. ಆದರೂ ಅವರೂ ಪ್ರಜ್ಞಾಹೀನರಂತೆ ನಟಿಸುತ್ತಾರೆ.

ಮಲಗಿದವರ ವಸ್ತ್ರಾಭರಣಗಳನ್ನು ಉತ್ತರನು ಕಳಚಿ ಒಯ್ಯುವ ಸಂದರ್ಭದಲ್ಲಿ ಮಲಗಿದಂತೆ ನಟಿಸಿದ ಭೀಷ್ಮರು ತಾನು ಎಚ್ಚರಿದ್ದೇನೆಂದು ತಿಳಿಸಿ ತನ್ನ ವಸ್ತ್ರಾಭರಣಗಳನ್ನು ಕಳಚದಂತೆ ತಡೆಯುತ್ತಾರೆ. ಭೀಷ್ಮರು ಯಾವ ಉದ್ದೇಶದಿಂದ ಹೇಳಿದರೋ ವಿವರ ಸಾಲದು. ಆದರೆ ಇಂದು ಇಂತಹ ಅನೇಕ ಕಲಾಭೀಷ್ಮರು ಸ್ವಾರ್ಥದಿಂದ ಸುಮ್ಮನಿದ್ದಾರೆ. ಅವರಿಗೆ ತಮ್ಮ ಸ್ವತ್ತನ್ನು ರಕ್ಷಿಸಿಕೊಳ್ಳುವ ವರಾತ. ಯಾರಿಗೆ ಏನೇ ಆಗಲಿ, ತಾನು ಸುಖವಾಗಿರಬೇಕೆಂಬ ಅವಸರ. ನಮ್ಮ ಚರಿತ್ರೆ ಮತ್ತು ಪುರಾಣಗಳು ರಾಜಕಾರಣವೇ ಆಗಿವೆ. ಅವೆಲ್ಲವೂ ಅರಸೊತ್ತಿಗೆಯ ಕಥೆಗಳೇ. ಜನಸಾಮಾನ್ಯರು ಪೋಷಕಪಾತ್ರಗಳಂತೆ ಬಂದು ಹೋಗುತ್ತಾರೆಯೇ ವಿನಾ ಮುಖ್ಯ ಹರಿವಿನಲ್ಲಿ ಅವರ ಪಾತ್ರವಿರುವುದಿಲ್ಲ. ರಾಜಕಾರಣದಲ್ಲಿ ಎರಡು ವಿಧ. ಒಂದು: ಗೊತ್ತಾದ ಜಾತಿ, ಮತ, ಗುಂಪು, ಪಂಥ ಇತ್ಯಾದಿಗಳ ವರ್ತುಲದಲ್ಲಿ ಪ್ರಭಾವ ಬೆಳೆಸಿಕೊಂಡು ಅಧಿಕಾರ ರಾಜಕಾರಣದಲ್ಲಿ ತೊಡಗುವ ಸಾರ್ವಜನಿಕ ರಾಜಕಾರಣ. ಇನ್ನೊಂದು: ಸ್ವಂತಕ್ಕಾಗಿ ಹಲ್ಲುಗಿಂಜಿ ಅಧಿಕಾರಸ್ಥರ ಮುಂದೆ ಡೊಗ್ಗು ಸಲಾಮು ಹೊಡೆದೋ ಅಥವಾ ಪಂಚತಂತ್ರಗಳನ್ನು ಪ್ರಯೋಗಿಸಿ ತನ್ನ ಅರ್ಹತೆಗೆ ಮೀರಿದ ಸ್ಥಾನ-ಮಾನಗಳನ್ನು ಪಡೆಯುವ ವೈಯಕ್ತಿಕ ರಾಜಕಾರಣ. ಇಂದು ಈ ವೈಯಕ್ತಿಕ ರಾಜಕಾರಣವು ಗುಂಪುಗಟ್ಟಿದೆ. ಅನೇಕ ಮೂರ್ಖರು ಒಟ್ಟಾಗಿ ತಾವೇ ಬುದ್ಧಿವಂತರಂತೆ ಪ್ರತಿಪಾದಿಸಿದರೆ ಆಗ ನೈಜ ಬುದ್ಧಿವಂತರು, ಸಜ್ಜನರು ನೋಯುವುದು ಅನಿವಾರ್ಯ. ಹುಚ್ಚಾಸ್ಪತ್ರೆಯ ಎಲ್ಲ ರೋಗಿಗಳೂ ಒಟ್ಟಾದರೆ ವೈದ್ಯರನ್ನು, ಸಿಬ್ಬಂದಿಯನ್ನು ರೋಗಿಗಳನ್ನಾಗಿಸುವುದು ಅಶಕ್ಯವಲ್ಲ.

ಒಂದು ಕಾಲದ, ದೇಶದ ಸಂಸ್ಕೃತಿಯು ಅದರ ಸಂವೇದನಾಶೀಲತೆ ಯನ್ನವಲಂಬಿಸಿದೆ. ಎಲ್ಲಿ ಮೂರ್ಖರ ಸಂಖ್ಯೆಯು ಹೆಚ್ಚಿರುತ್ತದೋ ಅಲ್ಲಿ ಸಹಜವಾಗಿಯೇ ಒಳ್ಳೆಯದು ಸಾಯುತ್ತಿರುತ್ತದೆ. ಒಳ್ಳೆಯ ಸಮಾಜದಲ್ಲಿ, ಪರಿಸರದಲ್ಲಿ, ಒಳ್ಳೆಯವರು, ಬುದ್ಧಿವಂತರು ಹಂಸಗಳಂತೆಯೂ ಕೇಡಿಗರು, ಮೂರ್ಖರು ಬಕಗಳಂತಿರುತ್ತಾರೆ. ಆದರೆ ಯಾವ ಸಮಾಜದಲ್ಲಿ ಮತ್ತು ಕಾಲದಲ್ಲಿ ಬಕಗಳ ಸಂಖ್ಯೆಯೇ ಹೆಚ್ಚಿರುತ್ತದೆಯೋ ಅಲ್ಲಿ ಹಂಸಗಳು ನಶಿಸಿಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಪರಂಪರೆಯ ವಿವೇಕದ ಮಾತು.

ಎಲ್ಲವನ್ನೂ ಧಾರ್ಮಿಕಗೊಳಿಸುವುದು ಮತ್ತು ರಾಜಕೀಯಗೊಳಿಸುವುದು ಯಾವುದೇ ಸಮಾಜಕ್ಕೂ ಹಿತವಲ್ಲ. ಅಧಿಕಾರ ತತ್ಕಾಲದ್ದು. ಅದು ನೀಡುವ ಗರ್ವ ಮಳೆಗಾಲದ ಕೆಂಪು ನೀರಿನಂತೆ. ಅದು ಶಾಶ್ವತವಾಗಿ ಪ್ರವಹಿಸಲಾರದು. ಅಧಿಕಾರದಲ್ಲಿರುವಾಗ ಬೇಕಾಬಿಟ್ಟಿ ವರ್ತಿಸಿದರೆ, ಮಾತನಾಡಿದರೆ ಇದರ ದೀರ್ಘಾವಧಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಂದಿರಾ ಗಾಂಧಿ ಇದಕ್ಕೆ ಇತ್ತೀಚೆಗಿನ ನಿದರ್ಶನ. ವಿಶ್ವದ ರಾಜಕಾರಣವನ್ನು ಚರಿತ್ರೆಯನ್ನು ಗಮನಿಸಿದರೆ ಇಂತಹ ನೂರಾರು ಉದಾಹರಣೆಗಳು ಸಿಗುತ್ತವೆ. ಬರಿಯ ಶಕ್ತಿ ಕೇಡನ್ನು ಮಾಡೀತೇ ಹೊರತು ಹಿತನೀಡದು. ಆದರೆ ಈ ಎಲ್ಲ ಉದಾಹರಣೆಗಳನ್ನು ಮೀರುವ ಪ್ರಯತ್ನವು ಈಗ ನಡೆಯುತ್ತಿದೆ.

 ಆದರೂ ದೇಶದ ಬಹುಪಾಲು ಜನರು ಮತಧರ್ಮದ, ಧಾರ್ಮಿಕ ಅವಿವೇಕಿತನದ ಹೆಡೆಯಡಿಯಲ್ಲಿ ಸುಖವಾಗಿದ್ದೇವೆಂದು ಭ್ರಮಿಸಿ ಮಲಗಿದ್ದಾರೆ. ತಮ್ಮ ಭವಿಷ್ಯಕ್ಕೆ ಎರವಾಗುವ ಆತಂಕವೇ ಅವರಿಗಿಲ್ಲದಿರುವುದನ್ನು ಗಮನಿಸಿದರೆ ಮೌಢ್ಯವು ಎಷ್ಟು ಢಾಳಾಗಿ ಎರಗಿದೆಯೆಂಬುದು ಗೊತ್ತಾಗುತ್ತದೆ. ದೀಪಿಕಾ ಪಡುಕೋಣೆಯ ಸಂದರ್ಭದಲ್ಲಿ ಇದು ಸ್ಪಷ್ಟವಾಗಿದೆ. ದುರದೃಷ್ಟವೆಂದರೆ ಆಕೆ ತನ್ನ ಸಿನೆಮಾದ ಪ್ರಚಾರಕ್ಕೆ ಬಂದಳೆಂಬಂತೆ ಪ್ರಚಾರವೂ ನಡೆಯುತ್ತಿದೆ. ಒಂದು ವೇಳೆ ಆಕೆ ಅದೇ ಉದ್ದೇಶದಿಂದ ಬಂದಿದ್ದರೂ ಅದರ ಪ್ರಭಾವ ಮತ್ತು ಪರಿಣಾಮದಿಂದ ಕ್ರಿಯೆಗೆ ಹೊಸ ಆಯಾಮ ಸೃಷ್ಟಿಯಾಗಿದೆಯೆಂಬುದನ್ನು ಪ್ರಜ್ಞಾವಂತರು ಗ್ರಹಿಸಬೇಕು. ಆದರೆ ಜೆಎನ್‌ಯು ಚಳವಳಿಗಾರರ ಪೈಕಿ ಅನೇಕರು ಆಕೆ ಏನೂ ಮಾತನಾಡದೆ ಹೋದಳೆಂದು ಆಕೆಯನ್ನು ಆಕ್ಷೇಪಿಸಿ ಟೀಕಿಸುತ್ತಿದ್ದಾರೆ. ಹೀಗೆ ಎರಡೂ ಬಣಗಳು ಆಕೆಯನ್ನು ಟೀಕಿಸುವುದರಿಂದ ಆಕೆಗೆ ಯಾವ ನಿಲುವನ್ನು ತಳೆಯಬೇಕೆಂಬ ಗೊಂದಲವುಂಟಾಗಿರಬಹುದು. ಅದನ್ನು ಆಕೆ ಸಂವೇದನಾಪೂರ್ವಕವಾಗಿ ನಿರ್ಧರಿಸಬೇಕು.

ಈಗ ಚಪಾಕ್ ಸಿನೆಮಾದ ನಿರ್ದೇಶಕಿ ಮೇಘನಾ ಗುಲ್ಝಾರ್ ತೇಪೆಹಚ್ಚಲು ಶುರುಮಾಡಿದ್ದಾರೆ. ಆಕೆಗೆ ತನ್ನ ಸಿನೆಮಾ ಸೋಲಬಾರದು ಎಂಬುದೇ ಮಹತ್ವದ ಪ್ರಶ್ನೆ. ಹಣಹೂಡಿದವರಿಗೆ ಸೋಲು-ಗೆಲುವು ನಿರ್ಧಾರವಾಗುವುದು ಗಲ್ಲಾಪೆಟ್ಟಿಗೆಯಲ್ಲಿ; ಮೌಲ್ಯದಲ್ಲಲ್ಲ. (ದೀಪಿಕಾ ಪಡುಕೋಣೆ ಕೂಡಾ ಈ ಚಿತ್ರದ ನಿರ್ಮಾಪಕರಲ್ಲೊಬ್ಬರು!) ಈ ತೇಪೆಹಚ್ಚುವಿಕೆಯಲ್ಲಿ ಒಂದು ನೈಜ ವಾದವಿದೆ. ಅದನ್ನು ಗಮನಿಸಬೇಕಾದ್ದು ಮುಖ್ಯ. ಒಂದು ಸಿನೆಮಾವನ್ನು ನೀವು ಅದರ ಕಲಾವಿದರೊಬ್ಬರ ಧಾರ್ಮಿಕ-ರಾಜಕೀಯ ನಿಲುವಿನಿಂದಾಗಿ ವಿರೋಧಿಸುತ್ತಿದ್ದರೆ ಮತ್ತು ಆ ಸಿನೆಮಾ ಕಲೆಯಾಗಿ ಉತ್ತಮ ಗುಣಮಟ್ಟದ್ದಾಗಿದ್ದರೆ ಆಗ ನೀವು ರಾಜಕಾರಣದಲ್ಲಿ ಗೆದ್ದರೂ ಕಲೆಯನ್ನು ಆ ಮೂಲಕ ನಿಮ್ಮ ಸಮಾಜದ ಗುಣಮಟ್ಟವನ್ನು, ಬದುಕನ್ನು, ಭವಿಷ್ಯವನ್ನು ಕೆಡಿಸುತ್ತಿದ್ದೀರಿ ಮತ್ತು ನೀವು ಸೋತಿದ್ದೀರಿ ಎಂದು ಅರ್ಥ. ಉಳಿಯುವುದು ಕಲೆಯೇ ಹೊರತು ರಾಜಕಾರಣವಲ್ಲ. ಆಗ ನಿಮ್ಮ (ಅ)ಯೋಗ್ಯತೆಯು ಪರೀಕ್ಷೆಗೊಳಗಾಗುತ್ತದೆಯೇ ವಿನಾ ನಿಮ್ಮ ಅಧಿಕಾರಾವಧಿಯ ದರ್ಪವೂ ಅಲ್ಲ; ಗರ್ವವೂ ಅಲ್ಲ; ಶಕ್ತಿಯೂ ಅಲ್ಲ. ದೀಪಿಕಾಗೆ ಒದಗಿಬಂದ ಸ್ಥಿತಿಯ ಚಿಂತೆಯಾಗಬೇಕಾದ್ದು ಬಾಲಿವುಡ್‌ನ ಇತರರಿಗೆ. ರಾಜಕೀಯದ ಹೆಸರಿನಲ್ಲಿ ಕಲೆ ನಲುಗಿದರೆ ತಮ್ಮ ಮತ್ತು ತಾವು ಬದುಕುವ ಕಲಾಮಾಧ್ಯಮದ ಗತಿಯೇನಾಗಬೇಕು ಎಂದು ಎಲ್ಲರೂ ಒಂದೆಡೆ ಕುಳಿತು ಸಮಾಲೋಚಿಸಬೇಕಿತ್ತು.

ಆದರೆ ಪ್ರತಿಯೊಬ್ಬರೂ ಗರ್ವಜ್ಞರಂತೆ ತಮ್ಮ ಇಷ್ಟಾನಿಷ್ಟಗಳನ್ನು ಲೆಕ್ಕಹಾಕುತ್ತಿರುವುದರಿಂದ ಇಂದು ಚಪಾಕ್‌ಗೆ ಒದಗಿಬಂದದ್ದು ನಾಳೆ ತಮಗೆ ಎರವಾಗಬಹುದೆಂದು ಚಿಂತಿಸುವ ಪ್ರಮೇಯವಿರುವುದಿಲ್ಲ. 1975ರಲ್ಲಿದ್ದ ಮತ್ತು ಇಂದು ಮರಳಿ ಬಂದಿರುವ ಗತಿ-ಸ್ಥಿತಿಯನ್ನು ಗಮನಿಸಿದರೆ ರಾಜಾಶ್ರಯವನ್ನು ಬಯಸದಿದ್ದರೂ ರಾಜಾಗ್ರಹವನ್ನು ಪಡೆಯಬಾರದೆಂದು ಅರ್ಥವಾಗುತ್ತದೆ. ಆಳುವವರ ಅವಕೃಪೆಗೆ ತುತ್ತಾದರೆ ಅಪಾಯ; ಆಳುವವರ ಬೆಂಬಲಿಗರು ಅವಿವೇಕಿಗಳಾದರಂತೂ ಆಪತ್ತು ತಪ್ಪಿದ್ದಲ್ಲ. ಜೆಎನ್‌ಯು ಕಾರಣವಾಗಿ ದೀಪಿಕಾ ಪಡುಕೋಣೆಯ ಚಪಾಕ್ ಆಪತ್ತಿಗೊಳಗಾದರೆ ಅದು ಈ ದೇಶ ಯಾವ ಅವನತಿಯತ್ತ ಹೋಗುತ್ತಿದೆಯೆಂಬುದು ಗೊತ್ತಾಗಬೇಕು. ಒಂದೊಮ್ಮೆ ಪ್ರಗತಿಯ ಮತ್ತು ಆಧುನಿಕತೆಯ ಹಾದಿಯಲ್ಲಿದ್ದ ಅಫ್ಘಾನಿಸ್ತಾನ, ಇರಾನ್, ಇರಾಕ್ ಮುಂತಾದ ದೇಶಗಳು ಧಾರ್ಮಿಕ ಮತ್ತು ಮೂಲಭೂತವಾದದ ಮೌಢ್ಯಪರಂಪರೆಯ ಆಳ್ವಿಕೆಗೆ ಸಿಕ್ಕಿ ಒಮ್ಮೆಗೇ ಶತಮಾನಗಳಷ್ಟು ಹಿಂದೆ ಜಾರಿಕೊಂಡ ಉದಾಹರಣೆಗಳು ಕಣ್ಣಮುಂದೆ ಇದ್ದಾಗಲೂ ಭಾರತವು ಅದೇ ಹಾದಿಯನ್ನು ತುಳಿಯಲಾರಂಭಿಸಿದೆಯೆಂದರೆ ಅದು ಸಮೂಹ ವಿಸ್ಮತಿ ಮಾತ್ರವಲ್ಲ ವಿಕೃತಿಗೆ ಸಾಕ್ಷಿ.

ಇದು ಎಷ್ಟರ ಮಟ್ಟಿಗೆ ತಲುಪುತ್ತಿದೆಯೆಂದರೆ ದಿನನಿತ್ಯ ಹೊಸಹೊಸ ಧಾಟಿಯ ದುಷ್ಟಮಾತುಗಳು ವರದಿಯಾಗುತ್ತಿವೆ. ಭಾರತವು ಆರ್ಥಿಕ ಅವನತಿಯತ್ತ ದಾಪುಗಾಲು ಹಾಕುವ ವೇಗವನ್ನು ಮತ್ತು ಸಾಂಸ್ಕೃತಿಕ ದುಸ್ಥಿತಿಯತ್ತ ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲಾ ಅಥವಾ ಗೂಗಲ್ ಎಲ್‌ಎಲ್‌ಸಿಯ ಮಾತೃಸಂಸ್ಥೆ ಆಲ್ಫಾಬೆಟ್ ಕಂಪೆನಿಯ ಸುಂದರಪಿಚ್ಚೈ ಟೀಕಿಸಿದರೆ ದಿಲ್ಲಿಯ ಮಹಿಳಾ ಸಂಸದೆ ಮೀನಾಕ್ಷಿಲೇಖಿ ‘‘ಅವರು ಅಕ್ಷರಸ್ಥರಿರಬಹುದು, ಆದರೆ ಅವರಿಗೆ ಶಿಕ್ಷಣದ ಪಾಠವಾಗಬೇಕು’’ ಎಂದು ಲಜ್ಜೆಯಿಲ್ಲದೆ ಹೇಳುತ್ತಾರೆ. ಚಪಾಕ್ ಸಿನೆಮಾವನ್ನು ಬಹಿಷ್ಕರಿಸಲು ಕರೆಕೊಟ್ಟ ಅವಿವೇಕಿ ಅಂಧಾಭಿಮಾನಿಗಳು ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳನ್ನು ಬಹಿಷ್ಕರಿಸಲು ಕರೆಕೊಡುವರೇ? ಬಾಮಿಯಾನ್ ಬುದ್ಧನನ್ನು ತಾಲಿಬಾನ್ ಎಂಬ ಕುರುಡುತಂಡದ ಆಳ್ವಿಕೆಯು ಸ್ಫೋಟಗೊಳಿಸಿದ್ದನ್ನು ನೋಡಿದ್ದೇವೆ. ಭಾರತದ ಬುದ್ಧನ ಗತಿಯೇನೆಂಬುದನ್ನು ಕಾದು ನೋಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)