varthabharthi


ಪ್ರಚಲಿತ

ಇದು ಜೀವನ್ಮರಣದ ಹೋರಾಟ

ವಾರ್ತಾ ಭಾರತಿ : 19 Jan, 2020
ಸನತ್ ಕುಮಾರ್ ಬೆಳಗಲಿ

ಕಳೆದ ಒಂದೂವರೆ ತಿಂಗಳಿಂದ ಪ್ರತಿನಿತ್ಯವೂ ದಿಲ್ಲಿ, ಮುಂಬೈ, ಬೆಂಗಳೂರು, ಕಲಬುರಗಿ, ಹೈದರಾಬಾದ್ ಮುಂತಾದ ಕಡೆ ಸಭೆ, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಲೇ ಇದ್ದಾರೆ. ಸಾಂಸ್ಕೃತಿಕ ಜಗತ್ತು ದೊಡ್ಡ ಪ್ರಮಾಣದಲ್ಲಿ ಈ ಹೋರಾಟಕ್ಕೆ ಸ್ಪಂದಿಸುತ್ತಿದೆ. ಈ ಹೋರಾಟದಲ್ಲಿ ಮುಸ್ಲಿಮರನ್ನು ಒಂಟಿಯಾಗಿರಲು ಬಿಡುವುದಿಲ್ಲ ಎಂದು ಎಲ್ಲ ಸಮುದಾಯಗಳ ಮನುಷ್ಯ ಪ್ರೀತಿಯ ಮನಸ್ಸುಗಳು ಒಂದಾಗಿ ನಿಂತಿವೆ.


ಜನಾಂಗ ದ್ವೇಷದ ವಿಷ ತುಂಬಿದ ಕರಾಳ ಪೌರತ್ವ ಕಾಯ್ದೆಯ ವಿರುದ್ಧ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹೋರಾಟ ಈ ದೇಶದ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದು ಭವಿಷ್ಯದ ಭಾರತಕ್ಕೆ ಹೊಸ ದಿಕ್ಕು ತೋರಿಸುವ ಹೋರಾಟವಾಗಿದೆ.ದೇಶದ ರಾಜಧಾನಿ ದಿಲ್ಲಿ, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಷ್ಟ್ರವ್ಯಾಪಿ ಈ ಹೋರಾಟ ಪ್ರತಿ ನಿತ್ಯವೂ ನಡೆಯುತ್ತಲೆ ಇದೆ, ಇದು ಅಂತಿಂಥ ಹೋರಾಟವಲ್ಲ ಅಳಿವು ಉಳಿವಿನ ಮಹಾಸಮರ.

ದೇಶದ ಸ್ವಾತಂತ್ರ ಹೋರಾಟದ ನಂತರ ಭಾರತ ಕಂಡ ಎರಡನೇ ಮಹಾ ಜನ ಚಳವಳಿ ಇದು. 1974-75 ರಲ್ಲಿ ನಡೆದ ಜಯಪ್ರಕಾಶ್ ನಾರಾಯಣ (ಜೆ.ಪಿ) ಚಳವಳಿಯನ್ನು ಮತ್ತು 2013 ರಲ್ಲಿ ನಡೆದ ಅಣ್ಣಾ ಹಝಾರೆ ನಾಯಕತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನಗಳನ್ನು ಕೂಡ ಎರಡನೇ ಸ್ವಾತಂತ್ರ ಸಂಗ್ರಾಮ ಎಂದು ವರ್ಣಿಸಲಾಗುತ್ತದೆ. ಆದರೆ ಈ ಎರಡೂ ಚಳವಳಿಗಳಿಗೆ ಜೆಪಿ ಮತ್ತು ಅಣ್ಣಾ ಹಝಾರೆ ಅಂಥವರ ನಾಯಕತ್ವವೇನೋ ಸಿಕ್ಕಿತ್ತು. ಆದರೆ ನಿರ್ದಿಷ್ಟ ಗೊತ್ತು ಗುರಿಗಳಿಲ್ಲದ ಅವುಗಳನ್ನು ತೆರೆ ಮರೆಯಲ್ಲಿ ಕುಳಿತು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ನಿಯಂತ್ರಿಸುತ್ತಿತ್ತು.ಅಣ್ಣಾ ಹಝಾರೆ ಚಳವಳಿಯಲ್ಲಂತೂ ಸಂಘಪರಿವಾರ ಸ್ವಯಂ ಸೇವಕ ಪಡೆ ಮತ್ತು ಕಾರ್ಪೊರೇಟ್ ಹಣ, ಬಾಬಾ ರಾಮ್‌ದೇವರಂತಹ ವ್ಯಾಪಾರಿ ಧಾರ್ಮಿಕ ದಂಧೆ ಕೋರರ ಪ್ರಹಸನಗಳು ಪ್ರಮುಖ ಪಾತ್ರ ವಹಿಸಿದ್ದವು. ಇವೆರಡೂ ಚಳವಳಿಗೆ ಪರ್ಯಾಯದ ಸ್ಪಷ್ಟ ಪರಿಕಲ್ಪನೆ ಇರಲಿಲ್ಲ. ಇದರ ಸಂಪೂರ್ಣ ಲಾಭ ಪಡೆದ ಕೋಮುವಾದಿ ಶಕ್ತಿಗಳು ಅಧಿಕಾರ ಸ್ವಾಧೀನಪಡಿಸಿಕೊಂಡು, ಸಂವಿಧಾನದ ಸಮಾಧಿಯ ಮೇಲೆ ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಹೊರಟಿವೆ.

ಈ ಬಾರಿ ಕರಾಳ ಪೌರತ್ವ ಕಾಯ್ದೆಯ ವಿರುದ್ಧ ಭುಗಿಲೆದ್ದ ಆಕ್ರೋಶ ಚಳವಳಿಯ ರೂಪತಾಳಿದೆ. ಇದಕ್ಕೆ ಯಾವುದೇ ಒಬ್ಬ ವ್ಯಕ್ತಿಯ ನಾಯಕತ್ವವಿಲ್ಲ. ವಿದ್ಯಾರ್ಥಿ ಯುವಜನರ ಸಾಮೂಹಿಕ ನೇತೃತ್ವ ಇದಕ್ಕಿದೆ. ಫ್ಯಾಶಿಸ್ಟ್ ಪರಿವಾರದ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಹಸ್ತಕ್ಷೇಪವಿಲ್ಲದೆ ನಡೆದ ಮೊದಲ ರಾಷ್ಟ್ರವ್ಯಾಪಿ ಆಂದೋಲನವಿದು. ಪ್ರತಿಪಕ್ಷಗಳು ಕೈ ಚೆಲ್ಲಿ ಕುಳಿತಾಗ ದೇಶಪ್ರೇಮಿ, ಸಂವಿಧಾನ ಪ್ರೇಮಿ ತರುಣ ತರುಣಿಯರು ಸೋತ ಭಾರತದ ಪರವಾಗಿ ಸಿಡಿದೆದ್ದ ಸಾತ್ವಿಕ ಶಕ್ತಿಯಿದು.

ಈ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಜನ ಭಾಗವಹಿಸಿದ್ದಾರೆಂಬುದೇನೋ ನಿಜ, ಆದರೆ ವಾಸ್ತವವಾಗಿ ಇದರಲ್ಲಿ ಅವರಷ್ಟೇ ಇಲ್ಲ. ಮನುಷ್ಯ ಪ್ರೀತಿಯ ಭಾರತೀಯರೆಲ್ಲರೂ ಇದ್ದಾರೆ. ರಾಷ್ಟ್ರಧ್ವಜವೇ ಇವರ ಹೋರಾಟದ ಸಂಕೇತ.ಗಾಂಧಿ, ಅಂಬೇಡ್ಕರ್ ಫೋಟೊಗಳು ಮಾತ್ರವಲ್ಲ ಅವರ ಆಶಯಗಳೇ ಮುನ್ನಡೆಸುವ ದಾರಿದೀಪಗಳಾಗಿವೆ. ಅಂತಲೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೊಂಚ ಗಾಬರಿಯಾದಂತೆ ಕಾಣುತ್ತದೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತ್ ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲ ಎಂಬ ಅವಕಾಶವಾದಿ ವೈರಾಗ್ಯ ಪ್ರದರ್ಶಿಸುತ್ತಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ಪ್ರತಿನಿತ್ಯವೂ ದಿಲ್ಲಿ, ಮುಂಬೈ, ಬೆಂಗಳೂರು, ಕಲಬುರಗಿ, ಹೈದರಾಬಾದ್ ಮುಂತಾದ ಕಡೆ ಸಭೆ, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಲೇ ಇದ್ದಾರೆ. ಸಾಂಸ್ಕೃತಿಕ ಜಗತ್ತು ದೊಡ್ಡ ಪ್ರಮಾಣದಲ್ಲಿ ಈ ಹೋರಾಟಕ್ಕೆ ಸ್ಪಂದಿಸುತ್ತಿದೆ. ಈ ಹೋರಾಟದಲ್ಲಿ ಮುಸ್ಲಿಮರನ್ನು ಒಂಟಿಯಾಗಿರಲು ಬಿಡುವುದಿಲ್ಲ ಎಂದು ಎಲ್ಲ ಸಮುದಾಯಗಳ ಮನುಷ್ಯ ಪ್ರೀತಿಯ ಮನಸ್ಸುಗಳು ಒಂದಾಗಿ ನಿಂತಿವೆ. ಬಸವಣ್ಣ, ವಿವೇಕಾನಂದ, ಜ್ಯೋತಿಬಾ, ಗಾಂಧಿ, ಅಂಬೇಡ್ಕರ್, ಸುಭಾಶ್ಚಂದ್ರ ಭೋಸ್, ಭಗತ್‌ಸಿಂಗ್, ಕುವೆಂಪು ನಡೆದಾಡಿದ ನೆಲವಿದು.

ಸರ್ವ ಜನಾಂಗದ ಶಾಂತಿಯ ತೋಟವಾದ ಈ ಭಾರತದಲ್ಲಿ ಪೌರತ್ವ ಕಾಯ್ದೆ ಹೆಸರಿನಲ್ಲಿ ದೇಶದ ಮೂಲ ನಿವಾಸಿಗಳನ್ನೇ ಅತಂತ್ರ ಮಾಡುವ, ದೇಶದಿಂದ ಹೊರದಬ್ಬುವ ಈ ಕುತಂತ್ರದ ವಿರುದ್ಧ ಆರಂಭವಾದ ಈ ಹೋರಾಟ ಭಾರತದ ರಾಜಕೀಯಕ್ಕೆ ಹೊಸ ತಿರುವನ್ನು ಕೊಡಲಿದೆ.ಇದೊಂದು ಸೈದ್ಧಾಂತಿಕ ಸಂಘರ್ಷ. ಮನುವಾದಿ, ಮನಿವಾದಿ, ಪುರೋಹಿತಶಾಹಿ ತ್ರಿವಳಿ ಶಕ್ತಿಗಳ ವಿರುದ್ಧ ತಳ ಸಮುದಾಯಗಳ ಜನ ಮತ್ತು ಎಲ್ಲ ಜನಸಮುದಾಯಗಳ ಪ್ರಜ್ಞಾವಂತ ಜನ ಒಂದಾಗಿ ಈ ಭಾರತವನ್ನು ಉಳಿಸಿಕೊಳ್ಳಬೇಕಾಗಿದೆ.

ಈಗ ಪೌರತ್ವ ಕಾನೂನಿನ ಹೆಸರಿನಲ್ಲಿ ಮುಸ್ಲಿಮರನ್ನು ಡಿಟೆನ್ಷನ್ ಸೆಲ್‌ಗೆ ಹಾಕಿ ನಂತರ ದಲಿತರು ಮತ್ತು ಮಹಿಳೆಯರ ಮೀಸಲು ವ್ಯವಸ್ಥೆಯನ್ನು ರದ್ದುಗೊಳಿಸಿ ಅಂತಿಮವಾಗಿ ಸಂವಿಧಾನವನ್ನೇ ಬುಡಮೇಲು ಮಾಡಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ದೇಶದ ಮೇಲೆ ಬಲವಂತವಾಗಿ ಹೇರುವುದು ಇವರ ಒಳಸಂಚಾಗಿದೆ. ಸಂವಿಧಾನದ ವಿರುದ್ಧ ನಡೆದ ಈ ಸಂಚನ್ನು ವಿಫಲಗೊಳಿಸುವುದೇ ದೇಶದ ಮುಂದಿನ ಇಂದಿನ ಮುಖ್ಯ ಸವಾಲಾಗಿದೆ. ಅತ್ಯಂತ ಸಂತಸದ ಸಂಗತಿ ಅಂದರೆ ಈ ಬಾರಿ ಬಿಸಿರಕ್ತದ ತರುಣ, ತರುಣಿಯರು ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಇವರೇ ಭಾರತದ ಭರವಸೆಯ ಬೆಳಕಾಗಿದ್ದಾರೆ.

ಈ ಭರವಸೆಯ ಬೆಳಕನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗಬೇಕಾಗಿದೆ. ಈ ಚಳವಳಿಗೆ ಹಿನ್ನಡೆಯಾದರೆ ದಮನಿತ ಸಮುದಾಯಗಳು, ವೈಚಾರಿಕ ಧ್ವನಿಗಳು ಮತ್ತೆ ಮೇಲೇಳಲು ಎಷ್ಟೋ ವರ್ಷಗಳ ವರೆಗೆ ಕಾಯಬೇಕಾಗುತ್ತದೆ. ಅಂತಲೇ ಇದು ಜೀವನ್ಮರಣದ ಹೋರಾಟವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)