ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನ ಕೊಲೆ
ಬೆಂಗಳೂರು, ಜ.23: ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕೊಲೆಗೈದಿರುವ ಪ್ರಕರಣ ಇಲ್ಲಿನ ಚಾಮರಾಜಪೇಟೆಯ ಆಝಾದ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ನಾಗರಭಾವಿ ನಿವಾಸಿ ಲೋಕಿ (35) ಕೊಲೆಯಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ಆಝಾದ್ ನಗರದ ಮಮತಾ ಸ್ಕೂಲ್ ಬಳಿ ಬುಧವಾರ ರಾತ್ರಿ 11ಗಂಟೆ ಸುಮಾರಿಗೆ ಲೋಕಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ, ಹಲ್ಲೆಗೈದು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ಲೋಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಹಳೇ ದ್ವೇಷದ ಕಾರಣಕ್ಕಾಗಿಯೇ ಯುವಕನ್ನು ಕೊಲೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
Next Story