varthabharthi

ನಿಮ್ಮ ಅಂಕಣ

ಮಾನವೀಯತೆ ಬರಿದಾಯಿತೇ?

ವಾರ್ತಾ ಭಾರತಿ : 23 Jan, 2020
-ಪುನೀತ್ ಎನ್., ಅಶೋಕಪುರಂ, ಮೈಸೂರು

ಮಾನ್ಯರೇ,

  ಕರ್ನಾಟಕದಲ್ಲಿ ಇತ್ತೀಚೆಗೆ ಬರ ಮತ್ತು ಪ್ರವಾಹ ಒಟ್ಟಿಗೆ ಆಕ್ರಮಿಸಿ ಜನರ ಬದುಕನ್ನು ಬರಿದಾಗಿಸಿದೆ. ಈ ಪ್ರವಾಹ ಮತ್ತು ಬರದಿಂದ ನಲುಗಿದ ಜನಕ್ಕೆ ಇನ್ನೂ ಕೂಡ ಸರಿಯಾದ ರೀತಿಯಲ್ಲಿ ಸರಕಾರದಿಂದ ನೆರವು ದೊರಕಿಲ್ಲ. ಈ ನಡುವೆ ಉತ್ತರ ಕರ್ನಾಟಕದಿಂದ ಅನ್ನ ಹರಸಿ ಬೆಂಗಳೂರಿಗೆ ಬಂದ ಸಾವಿರಾರು ಜನರು ನಗರದ ಬೆಳ್ಳಂದೂರು ಹಾಗೂ ಕರಿಯಮ್ಮನ ಅಗ್ರಹಾರದ ಪ್ರದೇಶದಲ್ಲಿ ತಾವು ತಾತ್ಕಾಲಿಕವಾಗಿ ನೆಲೆಸಲು ಖಾಸಗಿ ನಿವೇಶನಗಳಲ್ಲಿ ಸೂರು ಕಟ್ಟಿಕೊಂಡಿದ್ದರು, ಇವರನ್ನು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಬಿಂಬಿಸಿ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಅವರನ್ನು ತೆರವುಗೊಳಿಸಿ ಅವರ ಬದುಕನ್ನು ಕಸಿದುಕೊಂಡಿದ್ದಾರೆ. ಇವರು ಈ ದೇಶದಲ್ಲಿ ಬಡವರು ಬದುಕಲೇ ಬಾರದು ಕೇವಲ ಶ್ರೀಮಂತಿಕೆಯ ಬಕಾಸುರ ಬಂಡವಾಳಶಾಹಿಗಳು ಮಾತ್ರ ಬದುಕಬೇಕೆಂದು ದೃಢ ಸಂಕಲ್ಪದೊಡನೆ ಅಧಿಕಾರ ನಡೆಸುತ್ತಾ ಇದ್ದಾರೆ ಎಂದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಒಂದೊಮ್ಮೆ ನಿಜವಾಗಿಯೂ ಬಾಂಗ್ಲಾದೇಶದ ಅಕ್ರಮ ವಲಸಿಗರು ಆಗಿದ್ದರೆ ಇವರನ್ನು ಯಾಕೆ ಇನ್ನೂ ಬಂದಿಸಿಲ್ಲ? ಕೇವಲ ಇವರ ಬದುಕನ್ನು ಕಿತ್ತುಕೊಳ್ಳುವುದೇ ಇವರ ಉದ್ದೇಶವಾಗಿದೆಯೇ? ಕಾನೂನಾತ್ಮಕವಾಗಿ ನ್ಯಾಯಯುತ ವಿಚಾರಣೆಯಿಲ್ಲದೆ ಯಾವುದೇ ವ್ಯಕ್ತಿಯನ್ನು ಇಂತಹವರೇ ಎಂದು ನಿರ್ಣಯಿಸಬಾರದು ಎಂಬುದು ತತ್ವವಾಗಿದೆ. ಆದರೆ ಬಿಬಿಎಂಪಿ ಅಧಿಕಾರಿಗಳು ಕಾನೂನುನನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ಕಾನೂನು ವಿರುದ್ಧ ತಮ್ಮ ಹೃದಯಹೀನ ಧೋರಣೆಯನ್ನು ಅನುಸರಿಸಿದೆ. ಇದೇ ರೀತಿಯ ಕ್ಷೀಪ್ರ ಕಾರ್ಯಚರಣೆಯನ್ನು ಯಾವುದೇ ರಾಜಕೀಯ ಅಥವಾ ಆರ್ಥಿಕ ಬಲಾಢ್ಯ ಶಕ್ತಿಗಳ ವಿರುದ್ಧ ಮಾಡಿರುವ ಸಾಕ್ಷ್ಯ ಸಿಗುವುದಿಲ್ಲ, ಏಕೆಂದರೆ ಬಡವರ ಬದುಕು ಇವರ ಅಧಿಕಾರದ ದರ್ಪದ ಸೋಗಲಾಡಿತನ ಹಾಗೂ ಲಂಚಗುಳಿತನದ ಕೈಗಳ ಎದುರು ಅಪಹಾಸ್ಯವಾಗಿರುತ್ತದೆ. ಹಾಗೆಯೇ ಉಳ್ಳವರ ಕೈಯೊಳಗೆ ಕೈಗೊಂಬೆಯಾಗಿರುತ್ತಾರೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಸ್ವಾತಂತ್ರ್ಯ, ಹಕ್ಕು ಕಲ್ಪಿಸಲಾಗಿದೆ. ಹಾಗೆಯೇ ಇನ್ನೊಬ್ಬರ ಜೀವಿಸುವ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು ಎಂದು ಕೂಡ ಹೇಳಿದೆ. ನಮ್ಮ ಸಂವಿಧಾನದ ಆಶಯ ಮತ್ತು ಕಾನೂನುನನ್ನು ಅರಿಯದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಸರಕಾರ ಕೈಗೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)