varthabharthi

ಸಿನಿಮಾ

ಇಂಡಿಯಾ ವರ್ಸಸ್ ಇಂಗ್ಲೆಂಡ್: ಎರಡು ದೇಶ ಮತ್ತು ಒಂದು ಸಂದೇಶ!

ವಾರ್ತಾ ಭಾರತಿ : 25 Jan, 2020
ಶಶಿಕರ ಪಾತೂರು

ಸಿನೆಮಾಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವುದಷ್ಟೇ ಅಲ್ಲ; ಅಲ್ಲಿರುವ ಭಾರತೀಯ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವಂಥ ಚಿತ್ರಗಳನ್ನು ನೀಡಿದವರು ನಾಗತಿಹಳ್ಳಿ ಚಂದ್ರಶೇಖರ್. ಅಂಥದೇ ಮತ್ತೊಂದು ಹೊಸ ಪ್ರಯತ್ನ ಇದು.

ವಿದೇಶದಲ್ಲೇ ಹುಟ್ಟಿ, ಬೆಳೆದು ಕನ್ನಡಾಭಿಮಾನ ಬೆಳೆಸಿಕೊಂಡ ಯುವಕ ಕನಿಷ್ಕ. ಅದಕ್ಕೆ ಕಾರಣ ಆತನ ತಂದೆತಾಯಿ. ಅವರು ಲಂಡನ್‌ನಲ್ಲಿ ನೆಲೆಸಿದ್ದರೂ ಸಹ ಮಗನಲ್ಲಿ ಭಾರತದ ಕುರಿತಾದ ಅಭಿಮಾನ ಬೆಳೆಸುವಲ್ಲಿ ಯಶಸ್ವಿಯಾಗಿರುತ್ತಾರೆ. ತಮ್ಮದೇ ಅಸೋಸಿಯೇಷನ್ ಮಕ್ಕಳಿಗೆ ಕನ್ನಡ ಹೇಳಿಕೊಡುವ ತಾಯಿ ಮತ್ತು ಯುವ ಜನಾಂಗದ ಕಾಳಜಿ ಹೊಂದಿರುವ ವೈದ್ಯ ತಂದೆಯ ಕಣ್ಣೋಟದಲ್ಲಿ ಬೆಳೆದವನು. ತನ್ನದೇ ವೀಡಿಯೊ ಬ್ಲಾಗ್ ಮೂಲಕ ಹಲವಾರು ಅಭಿಮಾನಿಗಳನ್ನು ಪಡೆದುಕೊಂಡವನು. ಹೀಗಿರುವಾಗ ಒಮ್ಮೆ ಭಾರತದ ಪ್ರವಾಸಿತಾಣಗಳ ಕುರಿತಾದ ಕಾರ್ಯಕ್ರಮಕ್ಕಾಗಿ ಆತ ವಿದೇಶದಿಂದ ಭಾರತಕ್ಕೆ ಬರುತ್ತಾನೆ. ಭಾರತದಲ್ಲಿ ಆತನನ್ನು ಸ್ವಾಗತಿಸಲು ಜೆಮಾಲಜಿಸ್ಟ್ ಒಬ್ಬರು ತಯಾರಾಗಿರುತ್ತಾರೆ. ಅವರ ಮೊಮ್ಮಗಳು ಮೇದಿನಿಯ ಜತೆ ಭಾರತೀಯ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುತ್ತಾನೆ. ಇದರ ನಡುವೆ ಲಂಡನ್‌ನಲ್ಲಿರುವ ತಂದೆ ತಾಯಿಗೆ ವೀಡಿಯೊ ಕಾಲ್ ಮೂಲಕ ಆಕೆಯನ್ನು ತೋರಿಸಿ ತಮಗಿಬ್ಬರಿಗೂ ಪ್ರೀತಿಯಾಗಿದೆ ಎನ್ನುತ್ತಾನೆ. ಇದೇ ವೇಳೆ ವಿದೇಶದಿಂದ ಅಪಹರಿಸಿದ ಬ್ಲೂ ಡೈಮಂಡ್ ಒಂದನ್ನು ಅಪಹರಿಸುವ ಸ್ಮಗ್ಲರ್‌ಗಳು ಅದನ್ನು ಅನಿವಾರ್ಯ ಸಂದರ್ಭವೊಂದರಲ್ಲಿ ಕನಿಷ್ಕನ ಬ್ಯಾಗ್‌ನೊಳಗೆ ಹಾಕಿರುತ್ತಾರೆ. ಮುಂದೆ ಕನಿಷ್ಕನ ಭಾರತೀಯ ಪ್ರೇಮ ಮತ್ತು ಮೇದಿನಿಯೊಂದಿಗಿನ ಪ್ರೇಮ ಎರಡೂ ಕೂಡ ಸಂದೇಹಕ್ಕೆ ಒಳಗಾಗುತ್ತದೆ. ಅವುಗಳಿಂದ ಆತ ಹೇಗೆ ಪಾರಾಗುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಕಥೆ. ಆದರೆ ಮೇಲ್ನೋಟದ ಈ ಕಥೆಯೊಂದಿಗೆ ದೇಶ, ಭಾಷೆ ಮತ್ತು ಇತಿಹಾಸದ ಕುರಿತಾದ ಕಾಳಜಿಯನ್ನು ಎಚ್ಚರಿಸುವಂತೆ ಮಾಡಿರುವುದೇ ಚಿತ್ರದ ವಿಶೇಷ.

ಚಿತ್ರದ ಮೂಲಕ ವಸಿಷ್ಠ ಸಿಂಹ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ನಿಜ ಹೇಳಬೇಕೆಂದರೆ ಅವರು ಆರಂಭದ ದಿನಗಳಿಂದಲೂ ಹೀರೋ ಮೆಟೀರಿಯಲ್ಲೇ. ಆದರೂ ಯಾಕೋ ಅವರಿಗೆ ಖಳನ ಪಾತ್ರದಿಂದ ಸರಿಯಾದ ವಿಮೋಚನೆ ನೀಡುವವರೇ ಬಂದಿರಲಿಲ್ಲ. ಈ ಚಿತ್ರ ಅದನ್ನು ಮಾಡಿಕೊಟ್ಟಿದೆ ಅಷ್ಟೇ. ನಾಗತಿಹಳ್ಳಿಯವರ ಚಿತ್ರವಾದ ಕಾರಣ, ಇಲ್ಲಿ ಕಮರ್ಷಿಯಲ್ ನಾಯಕನ ಅಬ್ಬರದ ಸಂಭಾಷಣೆಗಳನ್ನು ನಿರೀಕ್ಷಿಸುವಂತಿಲ್ಲ. ಆದರೆ ಕಥಾ ನಾಯಕನಿಗೆ ಬೇಕಾದ ಎಲ್ಲ ಗುಣಗಳನ್ನು ತೋರಿಸಲಾಗಿದೆ. ಕಂಠಾದಲ್ಲಿನ ಶ್ರೇಷ್ಠತೆಗೆ ಇಲ್ಲಿ ಅವರ ವೃತ್ತಿಯಲ್ಲಿನ ಗಂಭೀರತೆ ಕೂಡ ಸಾಥ್ ನೀಡಿದೆ. ಕನಿಷ್ಕನ ಜೋಡಿ ಮೇಧಿನಿಯಾಗಿ ಮಾನ್ವಿತಾ ಹರೀಶ್ ನಟಿಸಿದ್ದಾರೆ. ಚೆಲ್ಲು ಚೆಲ್ಲು ಹುಡುಗಿಯಾದರೂ, ಭಾರತದ ಮೇಲೆ ಅಭಿಮಾನ ಇರಿಸಿರುವ ಹುಡುಗಿಯ ಪಾತ್ರ. ಭಾವನಾತ್ಮಕ ದೃಶ್ಯಗಳನ್ನು ಅವರು ತಮ್ಮ ಎಂದಿನ ಶೈಲಿಯಲ್ಲೇ ಹೊರಗೆಡಹಿದ್ದಾರೆ. ಕನಿಷ್ಕನ ತಾಯಿಯಾಗಿ ಸುಮಲತಾ ಮತ್ತು ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಸುಮಲತಾ ಬಿಡುವಿನಲ್ಲಿ ಬೆಂಗಳೂರಿನ ಬಗ್ಗೆ ಮಾತನಾಡಿದರೆ, ಬೆಳವಾಡಿಯವರು ಮೃದಂಗ ನುಡಿಸುತ್ತಾರೆ. ವಿದೇಶದಲ್ಲಿದ್ದರೂ ನಮ್ಮವರು ಹೇಗೆ ಟಿಪಿಕಲ್ ಭಾರತೀಯ ಮೈಂಡ್‌ಸೆಟ್ ನಲ್ಲಿಯೇ ಇರುತ್ತಾರೆ ಎನ್ನುವುದಕ್ಕೆ ಇವರ ಪಾತ್ರಗಳೇ ಕನ್ನಡಿ. ಇವರಿಗೊಬ್ಬರು ಮಗಳೂ ಇರುತ್ತಾಳೆ. ಒಂದಷ್ಟು ತಿರುವುಗಳಿಗೆ ಆಕೆಯೂ ಮುನ್ನುಡಿ. ಅಂದಹಾಗೆ ಸ್ಮಗ್ಲರ್‌ಗಳ ಭಾರತೀಯ ಕೊಂಡಿಯಾಗಿ ಶಿವಮಣಿ ಮತ್ತು ಸಾಧು ಕೋಕಿಲ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿನ ಹಾಡುಗಳು ಅವರ ಹಿಂದಿನ ಶೈಲಿಗಿಂತ ವಿಭಿನ್ನವಾಗಿವೆ.

ಇದು ಎರಡು ದೇಶಗಳ ನಡುವಿನ ಸಂಬಂಧದ ಕಥೆ. ಸಾಮಾಜಿಕ ಜಾಲತಾಣದಲ್ಲಿ ದೇಶ ಭಕ್ತಿಯ ವಿಚಾರ ಬಂದೊಡನೆ ಅಲ್ಲಿ ಮೂಡಿಬರುವ ಎರಡು ಪಂಥಗಳು ಎಡ ಮತ್ತು ಬಲ!

ಹಾಗಾಗಿ ಚಿತ್ರದ ಪ್ರಥಮ ದೃಶ್ಯದಿಂದಲೇ ಗಾಂಧೀಜಿ, ನೆಹರೂ ಫೋಟೊಗಳು, ಸುಮಲತಾ ಅವರ ಕನ್ನಡಾಭಿಮಾನದ ಹಾಡು, ಹಾಡಲ್ಲಿ ಕಾಣಿಸುವ ಗಿರೀಶ್ ಕಾರ್ನಾಡ್, ಅನಂತಮೂರ್ತಿ ಮೊದಲಾದವರ ಚಿತ್ರಗಳು.. ಇವಿಷ್ಟನ್ನು ಕಂಡಾಗ ಇದೊಂದು ಎಡಪಂಥೀಯ ಚಿತ್ರವೇನೋ ಎಂಬ ಸಂದೇಹ ಬಂದರೆ ಚಿತ್ರ ಕೊನೆಯಾಗುತ್ತಾ ಬಂದ ಹಾಗೆ ಬ್ಲೂ ಡೈಮಂಡ್ ಶಿವನ ಮೂರನೇ ಕಣ್ಣಾದ ನೀಲಮಣಿ ಎನ್ನುವುದು, ಮಣಿಯನ್ನು ಅರ್ಚಕನನ್ನು ಬೆದರಿಸಿ ಅಪಹರಿಸಿರುವ ಬಗ್ಗೆ ಹೇಳುವುದು ಮತ್ತು ಅದಕ್ಕಾಗಿ ಬ್ರಿಟನ್ ಇಂದು ಕ್ಷಮೆ ಕೇಳಿ ವಜ್ರವನ್ನು ಮರಳಿಸುವಂತೆ ಮಾಡುವ ದೃಶ್ಯಗಳು ಧರ್ಮದ ವೈಭವೀಕರಣದ ಬಲಪಂಥೀಯ ಪ್ರಯತ್ನಗಳಂತೆ ಗೋಚರಿಸುತ್ತದೆ. ಅವೆಲ್ಲವನ್ನು ಬದಿಗಿಟ್ಟು ನೋಡುವವರಿಗೆ ಇದೊಂದು ದೇಶಪ್ರೇಮದ ಚಿತ್ರವಾಗಿ ಕಂಡರೆ ಅಚ್ಚರಿ ಇಲ್ಲ. ಮುಖ್ಯವಾಗಿ ಚಿತ್ರದಲ್ಲೊಂದು ಕಡೆ ಹೇಳುವಂತೆ ‘ಅಮೂಲ್ಯವಾಗಿದ್ದನ್ನು ಪಡೆಯಲು ಆಳಕ್ಕಿಳಿಯಬೇಕು’. ಮೇಲ್ನೋಟದಲ್ಲಿ ದಕ್ಕುವುದನ್ನೇ ಸಂದೇಶ ಎಂದುಕೊಳ್ಳದೆ, ಗುಣಮಟ್ಟದ ಚಿತ್ರವೊಂದನ್ನು ನೋಡುವ ಕಾತರತೆ ಇರುವವರು ನೋಡಬಹುದಾದ ಚಿತ್ರ ಇದು.

ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಣ: ವೈ. ಎನ್. ಶಂಕರೇಗೌಡ ಮತ್ತು ಇತರರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)