varthabharthi

ರಾಷ್ಟ್ರೀಯ

ಮೃತ ಯೋಧರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಆಗ್ರಹಿಸಿ ಮಾಜಿ ಯೋಧರ ಧರಣಿ

ವಾರ್ತಾ ಭಾರತಿ : 27 Jan, 2020

ಅಹ್ಮದಾಬಾದ್, ಜ.27: ಸರಕಾರಿ ಉದ್ಯೋಗದಲ್ಲಿ ಮಾಜಿ ಸೈನಿಕರಿಗೆ ನೀಡಿರುವ ಮೀಸಲಾತಿಯ ಕಟ್ಟುನಿಟ್ಟಾದ ಅನುಷ್ಟಾನಕ್ಕೆ ಆಗ್ರಹಿಸಿ ಮತ್ತು ಮೃತ ಯೋಧರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿ ಅಹ್ಮದಾಬಾದ್‌ನಲ್ಲಿ ಸೋಮವಾರ ಮಾಜಿ ಯೋಧರು ಹಾಗೂ ಕುಟುಂದವರು ಜಾಥಾ ನಡೆಸಿದರು.

14 ಬೇಡಿಕೆ ಮುಂದಿರಿಸಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಯೋಧರು ರವಿವಾರದಿಂದ ಶಾಹಿಭಾಗ್‌ನ ಶಹೀದ್ ಸ್ಮಾರಕದ ಬಳಿ ಧರಣಿ ಮುಷ್ಕರ ನಡೆಸುತ್ತಿದ್ದು ಸೋಮವಾರ ಗಾಂಧೀನಗರದಲ್ಲಿರುವ ಸಚಿವಾಲಯ ಕಟ್ಟಡದವರೆಗೆ ಕಾರು ರ್ಯಾಲಿ ನಡೆಸಿದ್ದಾರೆ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರದ ರೀತಿಯಲ್ಲಿಯೇ ಗುಜರಾತ್ ಸರಕಾರವೂ ಕರ್ತವ್ಯದಲ್ಲಿರುವಾಗ ಮೃತಪಟ್ಟ ಯೋಧರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಧನ ಒದಗಿಸಬೇಕು. ಆದರೆ ಗುಜರಾತ್ ಸರಕಾರ ಕೇವಲ 1 ಲಕ್ಷ ರೂ. ನೀಡುತ್ತಿದೆ ಎಂದು ಮಾಜಿ ಯೋಧರು ಅಸಮಾಧಾನ ವ್ಯಕ್ತಪಡಿಸಿದರು.

ಮೃತ ಯೋಧರ ಕುಟುಂಬದವರಿಗೆ ಪಿಂಚಣಿ ನೀಡಬೇಕು. ನಿವೃತ್ತ ಯೋಧರಿಗೆ ಸರಕಾರಿ ಉದ್ಯೋಗದಲ್ಲಿ ನೀಡಿರುವ ಮೀಸಲಾತಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂಬ ಬೇಡಿಕೆ ಮುಂದಿರಿಸಿ ಪ್ರತಿಭಟನೆ ನಡೆದಿದೆ ಎಂದು ಗುಜರಾತ್ ಮಾಜಿ ಯೋಧರ ಯೂನಿಯನ್ ಅಧ್ಯಕ್ಷ ಜಿತೇಂದ್ರ ನಿಮಾವತ್ ತಿಳಿಸಿದ್ದಾರೆ. ಯುದ್ಧದಲ್ಲಿ ಮೃತಪಟ್ಟ ಯೋಧರ ಸ್ಮರಣಾರ್ಥ ಗಾಂಧೀನಗರದಲ್ಲಿ ಸ್ಮಾರಕ ನಿರ್ಮಾಣ, ನಿವೃತ್ತ ಯೋಧರಿಗೆ ನಿಯಮದಂತೆ ಜಮೀನು ಮಂಜೂರುಗೊಳಿಸುವುದು, ಬಂದೂಕು ಲೈಸೆನ್ಸ್ ನೀಡುವಾಗ ಅಥವಾ ನವೀಕರಿಸುವಾಗ ನಿವೃತ್ತ ಯೋಧರಿಗೆ ಆದ್ಯತೆ, ಮಾಜಿ ಯೋಧರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದಲ್ಲಿ ಮೀಸಲಾತಿ ಒದಗಿಸುವುದು ಇತ್ಯಾದಿ 14 ಬೇಡಿಕೆಗಳನ್ನು ವಿಜಯ್ ರೂಪಾನಿ ನೇತೃತ್ವದ ಬಿಜೆಪಿ ಸರಕಾರ ಈಡೇರಿಸುವ ಭರವಸೆಯಿದೆ ಎಂದವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)