varthabharthi

ಸಂಪಾದಕೀಯ

ಜನವರಿ 30ರಂದು ಪ್ರತ್ಯಕ್ಷನಾದ ಗೋಡ್ಸೆ!

ವಾರ್ತಾ ಭಾರತಿ : 31 Jan, 2020

ಜನವರಿ 30 ಗಾಂಧೀಜಿಯನ್ನು ನಾಥೂರಾಂ ಗೋಡ್ಸೆ ಹತ್ಯೆಗೈದ ದಿನ. ‘ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸಲು ಗಾಂಧೀಜಿ ತಡೆಯಾದರು’ ಎನ್ನುವ ಒಂದೇ ಒಂದು ಕಾರಣವನ್ನು ಮುಂದಿಟ್ಟು ದುಷ್ಕರ್ಮಿಗಳು ನಾಥೂರಾಂ ಗೋಡ್ಸೆಯ ಕೈಯಲ್ಲಿ ಗಾಂಧೀಜಿಯನ್ನು ಕೊಲ್ಲಿಸಿದರು. ನ್ಯಾಯಾಲಯದ ವಿಚಾರಣೆಯಲ್ಲಿ ನಾಥೂರಾಂ ಗೋಡ್ಸೆಯ ಕೃತ್ಯ ಸಾಬೀತಾಗಿ ಆತನನ್ನು ಗಲ್ಲಿಗೇರಿಸಲಾಯಿತು. ಗೋಡ್ಸೆಯ ಜೊತೆ ಜೊತೆಗೇ ಆತನನ್ನು ಹುಟ್ಟಿಸಿದ ಸಂಘಟನೆಯನ್ನು ಕೂಡ ಗಲ್ಲಿಗೇರಿಸುವ ಹೊಣೆಗಾರಿಕೆ ದೇಶದ ಮೇಲಿತ್ತು. ಯಾಕೆಂದರೆ ಗೋಡ್ಸೆಯನ್ನು ಸೃಷ್ಟಿಸಿದವರ ಗುರಿ ಮಹಾತ್ಮಾ ಗಾಂಧೀಜಿ ಅಷ್ಟೇ ಆಗಿರಲಿಲ್ಲ. ಜಾತ್ಯತೀತ, ಪ್ರಜಾಸತ್ತಾತ್ಮಕವಾದ ದೇಶವನ್ನು ಆ ಮೂಲಕ ಗುಂಡಿಟ್ಟು ಸಾಯಿಸುವ ಸಂಚು ನಡೆಸಿದ್ದರು. ಸಂಚಿನ ಹಿಂದಿರುವವರನ್ನು ಸ್ವತಂತ್ರವಾಗಿ ಬಿಟ್ಟು, ಆಯುಧವಾಗಿ ಬಳಕೆಯಾದವನನ್ನು ಗಲ್ಲಿಗೇರಿಸುವುದರಿಂದ ಗಾಂಧಿಯ ಹತ್ಯೆಗೆ ನ್ಯಾಯಕೊಡಲು ಸಾಧ್ಯವಿದ್ದಿರಲಿಲ್ಲ. ದುರಂತವೆಂದರೆ, ಆರೆಸ್ಸೆಸ್‌ಗೆ ವಿಧಿಸಿದ ನಿಷೇಧವನ್ನು ಬಳಿಕ ಕಾಂಗ್ರೆಸ್ ಸರಕಾರವೇ ಹಿಂದೆಗೆದುಕೊಂಡಿತು. ಅದರ ಪರಿಣಾಮವನ್ನು ಇಂದು ದೇಶ ಉಣ್ಣುತ್ತಿದೆ.

ಗಾಂಧೀಜಿಯ ಹತ್ಯೆಗೈದ ದಿನವಾಗಿರುವ ಇಂದು, ‘ನಾನು ಸತ್ತಿಲ್ಲ’ ಎನ್ನುವುದನ್ನು ನಾಥೂರಾಂ ಗೋಡ್ಸೆ ದೇಶದ ಮುಂದೆ ಘೋಷಿಸಿದ್ದಾನೆ. ಹಿಂದುತ್ವದ ವಿಷವನ್ನು ತಲೆಗೇರಿಸಿಕೊಂಡ ಯುವಕನೊಬ್ಬನ ವೇಷದಲ್ಲಿ ಅವನು ಮತ್ತೆ ಗಾಂಧೀಜಿಯ ಕಡೆಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಗಾಂಧಿಯ ಬದಲಿಗೆ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸಿದ್ದಾನೆ. ಈ ದೇಶದ ಮೂಲನಿವಾಸಿಗಳನ್ನು ಅವರ ನೆಲದಲ್ಲೇ ವಿದೇಶಿಯರನ್ನಾಗಿಸುವ ಸಿಎಎ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಸರಕಾರ ಪೊಲೀಸರ ಮೂಲಕ ಹತ್ತಿಕ್ಕಿದಷ್ಟು ಅದು ವಿಸ್ತರಿಸಿಕೊಳ್ಳುತ್ತಿದೆ. ಜೆಎನ್‌ಯು, ಅಲಿಗಡ, ಜಾಮಿಯಾ ಸೇರಿದಂತೆ ದೇಶದ ವಿಶ್ವವಿದ್ಯಾನಿಲಯಗಳೆಲ್ಲ ಹೊಸದಾದ ಸ್ವಾತಂತ್ರ ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಹೋರಾಟವನ್ನು ಬೇರೆ ಬೇರೆ ತಂತ್ರಗಳ ಮೂಲಕ, ಬೇರೆ ಬೇರೆ ಶಕ್ತಿಗಳ ಮೂಲಕ ದಮನಿಸಲು ಸರಕಾರ ಹೊರಟಿದೆ. ಎಬಿವಿಪಿಯ ಗೂಂಡಾಗಳು ಪೊಲೀಸರ ನೇತೃತ್ವದಲ್ಲೇ ಜೆಎನ್‌ಯುನೊಳಗೆ ನುಗ್ಗಿ ದಾಂಧಲೆ ನಡೆಸಿದರು. ಜೆಎನ್‌ಯುವಿನ ದಾಳಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ದೇಶದ ವರ್ಚಸ್ಸಿಗೆ ಭಾರೀ ಕಳಂಕ ತಂದಿತು. ದಾಳಿಯನ್ನು ದೇಶದ ಪ್ರಜ್ಞಾವಂತರು ದೊಡ್ಡ ದನಿಯಲ್ಲಿ ಪ್ರತಿಭಟಿಸಿದರು. ಇದೀಗ ಜೆಎನ್‌ಯು ದಾಳಿಯ ಮುಂದುವರಿದ ಭಾಗವಾಗಿ, ಜಾಮಿಯಾ ವಿದ್ಯಾರ್ಥಿಯ ಮೇಲೆ, ಸಂಘಪರಿವಾರದ ಕಾರ್ಯಕರ್ತನೊಬ್ಬ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸಿದ್ದಾನೆೆ. ವಿಪರ್ಯಾಸವೆಂದರೆ ಜೆಎನ್‌ಯುವಿನಲ್ಲಿ ನಡೆದಿರುವುದು ಇಲ್ಲೂ ಮರುಕಳಿಸಿದೆ.

ಪೊಲೀಸರ ಸಮ್ಮುಖದಲ್ಲೇ ದುಷ್ಕರ್ಮಿ ಪಿಸ್ತೂಲ್ ಹಿಡಿದು ಗುಂಡು ಹಾರಿಸುತ್ತಿದ್ದ. ಇದಕ್ಕೆ ಮೊದಲು ದುಷ್ಕರ್ಮಿ ತಾನು ನಡೆಸಲಿರುವ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದ ಮತ್ತು ತನ್ನನ್ನು ತಾನು ‘ಹುತಾತ್ಮ’ ಎಂಬಂತೆ ಬಿಂಬಿಸಿ ಹೇಳಿಕೆಯನ್ನು ನೀಡಿದ್ದ. ಇದಾದ ಬಳಿಕ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಧಾವಿಸಿ ಗುಂಡಿನ ದಾಳಿ ನಡೆಸಿದ್ದ. ದುಷ್ಕರ್ಮಿ ಪಿಸ್ತೂಲ್ ಹಿಡಿದು ಪ್ರತಿಭಟನಾಕಾರರಿಗೆ ಬೆದರಿಕೆ ಹಾಕುತ್ತಿರುವಾಗ, ಪೊಲೀಸರು ಆತನನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ ಒಂದು ತಮಾಷೆ ಎಂಬಂತೆ ಅದನ್ನು ವೀಕ್ಷಿಸುತ್ತಿದ್ದರು. ಈ ಹಿಂದೆ ಜಾಮಿಯಾ ವಿವಿಯ ಒಳಗೆ ನುಗ್ಗಿ ಇದೇ ಪೊಲೀಸರು ತಮ್ಮ ಪೌರುಷವನ್ನು ಪ್ರದರ್ಶಿಸಿದ್ದರು. ಅಷ್ಟೇ ಅಲ್ಲ, ವಿದ್ಯಾರ್ಥಿನಿಯರ ಮೇಲೂ ಲಾಠಿಗಳನ್ನು ಬಳಸಿದ್ದರು. ಅಲ್ಲಿ ಅಮಾಯಕರ ಮೇಲೆ ಶೌರ್ಯ ಮೆರೆದಿದ್ದ ಪೊಲೀಸರಿಗೆ, ಇಲ್ಲಿ ಪಿಸ್ತೂಲ್ ಹಿಡಿದು ಭಯೋತ್ಪಾದನೆಗೆ ಇಳಿದಿದ್ದ ದುಷ್ಕರ್ಮಿಯನ್ನು ತಡೆಯುವುದು ತಮ್ಮ ಕರ್ತವ್ಯ ಅನ್ನಿಸಲೇ ಇಲ್ಲ. ಹಾಗೆ ನೋಡಿದರೆ ಪಿಸ್ತೂಲ್ ಹಿಡಿದು ಗುಂಡು ಹಾರಿಸಿದ ದುಷ್ಕರ್ಮಿಗಿಂತಲೂ ಖಾಕಿ ಧರಿಸಿದ ಪೊಲೀಸರೇ ಈ ದೇಶಕ್ಕೆ ಹೆಚ್ಚು ಅಪಾಯಕಾರಿಗಳು. ಧರ್ಮದ ವಿಷವನ್ನು ಹೀರಿದ ದುಷ್ಕರ್ಮಿ ಯಾವುದೇ ಮುಖವಾಡದಲ್ಲಿ ಅಲ್ಲಿಗೆ ಬಂದಿರಲಿಲ್ಲ. ಆದರೆ ಆತನ ಕೃತ್ಯವನ್ನು ಕೈ ಕಟ್ಟಿ ನೋಡುತ್ತಿದ್ದ ಪೊಲೀಸರು ಸಂವಿಧಾನದ ಮರೆಯಲ್ಲಿ ನಿಂತ ನಾಥೂರಾಂ ಗೋಡ್ಸೆಗಳಾಗಿದ್ದರು. ಅವರೆಲ್ಲರೂ ಆ ದುಷ್ಕರ್ಮಿಯ ಚಿಂತನೆಯನ್ನೇ ಮೆದುಳಲ್ಲಿ ಮೆತ್ತಿಕೊಂಡವರಾಗಿದ್ದರು. ಇದೀಗ ದುಷ್ಕರ್ಮಿಯನ್ನು ಬಂಧಿಸಲಾಗಿದೆ. ಆದರೆ ಪೊಲೀಸ್ ವೇಷದಲ್ಲಿರುವ ನಾಥೂರಾಂ ಗೋಡ್ಸೆಗಳನ್ನು ಶಿಕ್ಷಿಸುವವರು ಯಾರು?

ಈ ಘಟನೆ ಆಕಸ್ಮಿಕವಾಗಿ ಸಂಭವಿಸಿರುವುದಲ್ಲ. ಇತ್ತೀಚೆಗಷ್ಟೇ ಕೇಂದ್ರದ ಸಚಿವರೊಬ್ಬರು ಸಿಎಎ ಪ್ರತಿಭಟನಾಕಾರರ ವಿರುದ್ಧ ‘ಗೋಲಿಮಾರೋ ಸಾಲೋಂಕೋ’ ಎಂದು ನೆರೆದ ಕಾರ್ಯಕರ್ತರ ಮುಂದೆ ಘೋಷಣೆ ಕೂಗಿ, ಕೃತ್ಯಕ್ಕೆ ಪ್ರಚೋದಿಸಿದ್ದಾರೆ. ಕಾರ್ಯಕರ್ತರೂ ಅವರ ಜೊತೆಗೆ ಧ್ವನಿ ಸೇರಿಸಿದ್ದಾರೆ. ಆ ಸಚಿವನ ಹೇಳಿಕೆಯನ್ನು ಸರಕಾರದೊಳಗಿರುವ ನಾಯಕರಾರೂ ಖಂಡಿಸದೇ ವೌನವಾಗಿ ಬೆಂಬಲಿಸಿದ್ದಾರೆ. ಒಬ್ಬ ಕೇಂದ್ರ ಸಚಿವನಾಗಿದ್ದುಕೊಂಡು ಸಾರ್ವಜನಿಕರಿಗೆ ‘ಗುಂಡು ಹಾರಿಸಿ’ ಎಂದು ಕರೆ ಕೊಡುತ್ತಾನಾದರೆ, ಈ ಸಾಮಾನ್ಯ ಯುವಕ ಕೋವಿ ಹಿಡಿದು ಸಾರ್ವಜನಿಕವಾಗಿ ಗುಂಡು ಹಾರಿಸಿದರೆ ಅದರಲ್ಲಿ ಅಚ್ಚರಿಯೇನಿದೆ? ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಮೋದಿ ಸರಕಾರ ದೇಶವನ್ನು ಸಿಎಎ ಹೆಸರಿನಲ್ಲಿ ಅರಾಜಕತೆಗೆ ತಳ್ಳಿ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಮುಂದಾಗಿದೆ. ಆದುದರಿಂದಲೇ ಸಿಎಎ ಪ್ರತಿಭಟನಾಕಾರರ ವಿರುದ್ಧ ದಾಳಿ ನಡೆಸಲು ಕಾರ್ಯಕರ್ತರಿಗೆ ಬಹಿರಂಗವಾಗಿ ಕರೆ ನೀಡುತ್ತಿದ್ದಾರೆ. ಅದನ್ನು ತಲೆಯಲ್ಲಿ ತುಂಬಿಕೊಂಡು ಬೀದಿಗಿಳಿದ ಗೋಪಾಲ್ ಶರ್ಮಾ ಬಲಿಪಶು ಮಾತ್ರವಾಗಿದ್ದಾನೆ.

ಸಿಎಎ ವಿರುದ್ಧದ ಹೋರಾಟ ನಿಧಾನಕ್ಕೆ ನಾಥೂರಾಂ ಗೋಡ್ಸೆಯ ಚಿಂತನೆಯ ಹಿಂದಿರುವ ಶಕ್ತಿಗಳ ವಿರುದ್ಧ ಹೋರಾಟವಾಗಿ ಬದಲಾಗುತ್ತಿರುವುದನ್ನು ಇದು ಹೇಳುತ್ತಿದೆ. ಇದು ಸಾವರ್ಕರ್ ಅವರ ಹಿಂದುತ್ವ ಮತ್ತು ಗಾಂಧೀಜಿಯ ಹಿಂದ್ ಸ್ವರಾಜ್ ನಡುವಿನ ಸಂಘರ್ಷವಾಗಿರುವುದನ್ನು ಇಂದಿನ ಘಟನೆ ಎತ್ತಿ ಹಿಡಿದಿದೆ. ಈ ಹೋರಾಟ ಮಹಾತ್ಮಾ ಗಾಂಧೀಜಿಯ ರಾಮ ಮತ್ತು ನಾಥೂರಾಂ ಗೋಡ್ಸೆಯ ರಾಮನ ನಡುವಿನ ತಿಕ್ಕಾಟವಾಗಿದೆ. ವಿವೇಕಾನಂದ, ನಾರಾಯಣ ಗುರುಗಳ ಹಿಂದೂ ಧರ್ಮ ಮತ್ತು ಪ್ರಮೋದ್ ಮುತಾಲಿಕ್, ಪ್ರವೀಣ್‌ತೊಗಾಡಿಯರ ಹಿಂದೂಧರ್ಮದ ನಡುವಿನ ತಿಕ್ಕಾಟವಾಗಿದೆ. ಮಹಾತ್ಮಾ ಗಾಂಧೀಜಿಯ ಭಾರತ ಮತ್ತು ಗೋಳ್ವಾಲ್ಕರ್ ಅವರ ಭಾರತದ ನಡುವಿನ ಸಂಘರ್ಷವಾಗಿದೆ. ಈ ಹೋರಾಟದಲ್ಲಿ ತಮ್ಮ ತಮ್ಮ ಸ್ಥಾನ ಎಲ್ಲಿ ಎನ್ನುವುದನ್ನು ದೇಶದ ಜನರು ಗುರುತಿಸಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಸತ್ತಾತ್ಮಕ ದೇಶದ ಅಳಿವುಉಳಿವಿನ ಹೋರಾಟವೂ ಹೌದು. ಜನವರಿ 30ರಂದು ದಿಲ್ಲಿಯ ಬೀದಿಯಲ್ಲಿ ಪಿಸ್ತೂಲ್ ಹಿಡಿದು ಘೋಷಣೆಕೂಗುತ್ತಿದ್ದ ಹೊಸ ನಾಥೂರಾಂ ಭಾರತ ಎದುರಿಸುತ್ತಿರುವ ನಿಜವಾದ ಸವಾಲಾಗಿದ್ದಾನೆ. ಈತನ ವಿರುದ್ಧ ಒಂದಾಗಿ ನಿಲ್ಲದೇ ಇದ್ದರೆ ಈ ಬಾರಿ ಗಾಂಧಿಯ ಜೊತೆಗೆ ನಾವು ನಮ್ಮ ಅಂಬೇಡ್ಕರ್‌ರನ್ನೂ ಕಳೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಇದೀಗ ಅವರ ನೇರ ಗುರಿಯೇ ಅಂಬೇಡ್ಕರ್ ಅವರ ಸಂವಿಧಾನವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)