varthabharthi

ಸಂಪಾದಕೀಯ

ಬಜೆಟ್ ಎಂಬ ಅಂತೆಕಂತೆಗಳ ಪುರಾಣ

ವಾರ್ತಾ ಭಾರತಿ : 2 Feb, 2020

ಕೆೀಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21 ನೇ ಸಾಲಿನ ಮುಂಗಡ ಪತ್ರ ಎಂಬ ಅಂತೆಕಂತೆಗಳ ಪುರಾಣವನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ.ಸಮಸ್ಯೆಗಳ ಬೆಂಕಿಯಲ್ಲಿ ಬೆಂದು ಹೋಗುತ್ತಿರುವ ಜನಸಾಮಾನ್ಯರಿಗೆ ಏನನ್ನೂ ನೀಡದ ಈ ಆಯವ್ಯಯ ಬರೀ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ. 22.17 ಕೋಟಿ ರೂ.ಆದಾಯ ನಿರೀಕ್ಷೆಯಿಟ್ಟುಕೊಂಡಿರುವ, ಅಜಮಾಸು 30.42 ಕೋಟಿ ರೂ. ಖರ್ಚು ತೋರಿಸಿರುವ ಈ ಬಜೆಟ್ ಭಾರೀ ಪ್ರಮಾಣದ ವಿತ್ತೀಯ ಕೊರತೆ ತೋರಿಸಿದೆ. ವಾಸ್ತವಾಂಶ ಹೀಗಿರುವಾಗ ತಾನು ಭರವಸೆ ನೀಡಿದಂತೆ ಮೂಲಭೂತ ಸೌಕರ್ಯಕ್ಕೆ ನೂರು ಕೋಟಿ ರೂ.ಎಲ್ಲಿಂದ ಒದಗಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.

ನೋಟು ನಿಷೇಧದ ಬಳಿಕ ಗ್ರಾಮೀಣ ಉದ್ದಿಮೆಗಳು ಸಂಪೂರ್ಣ ನೆಲಕಚ್ಚಿವೆ. ಗ್ರಾಮೀಣ ಕೃಷಿ ಉದ್ದಿಮೆಗಳು ಕೂಡ ಜರ್ಜರಿತವಾಗಿವೆ. ನೋಟು ನಿಷೇಧದ ಬಳಿಕ, ನಿಧಾನಕ್ಕೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆಗಳನ್ನು ಸರಕಾರ ನೀಡುತ್ತಲೇ ಬರುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಪ್ರದೇಶಗಳಿಗೆ ನೀಡುವ ಅನುದಾನಗಳು ಇಳಿಕೆಯಾಗುತ್ತಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ಯೋಜನೆಗಳಿಗೆ ಈ ಬಾರಿಯೂ ಅನುದಾನ ಕಡಿತಗೊಳಿಸಲಾಗಿದೆ.ವಾಸ್ತವವಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 95,000 ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ. ಇದು ಅನ್ಯಾಯದ ಪರಮಾವಧಿ. ಜನರ ಕೊಳ್ಳುವ ಸಾಮರ್ಥ್ಯ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ. ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಾಗಿದೆ. ಆರ್ಥಿಕ ಪ್ರಗತಿ ದರ ಕುಂಟುತ್ತಲೇ ಸಾಗಿದೆ. ಇಂತಹ ಸಂದರ್ಭದಲ್ಲಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಯಾವ ಯೋಜನೆಯೂ ಈ ಬಜೆಟ್‌ನಲ್ಲಿಲ್ಲ.
  
ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ಜೀವವಿಮೆಯ ಶೇರು ಮಾರಾಟ ನಿರ್ಧಾರ ಸಾರ್ವಜನಿಕ ಉದ್ಯಮಗಳ ಖಾಸಗೀಕರಣದ ಇನ್ನೊಂದು ಉದಾಹರಣೆಯಾಗಿದೆ. ಈಗಾಗಲೇ ಏರ್ ಇಂಡಿಯಾ ಮಾರಾಟಕ್ಕೆ ಸಿದ್ಧವಾಗಿರುವ ಸರಕಾರ ದೇಶದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಒಂದೊಂದಾಗಿ ನಾಶ ಮಾಡುತ್ತ ಹೊರಟಿದೆ. ಬಿಎಸ್ಸೆನ್ನೆಲ್ ಈಗಾಗಲೇ ಐಸಿಯುನಲ್ಲಿದೆ. ಮುಂಬರುವ ದಿನಗಳಲ್ಲಿ ರೈಲ್ವೆಗೂ ಗಂಡಾಂತರ ಕಾದಿದೆ. ಅಂದರೆ ನೋಟು ನಿಷೇಧದ ಬಳಿಕ ಅರ್ಥವ್ಯವಸ್ಥೆಯಲ್ಲಾಗಿರುವ ಏರುಪೇರುಗಳಿಂದ ಸರಕಾರದ ಬಳಿ ಆಡಳಿತ ನಡೆಸುವುದಕ್ಕೂ ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರ ಲಾಭದಾಯಕವಾಗಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಮಾರಿ ಹಣ ಹೊಂದಿಸಬೇಕಾದ ಸ್ಥಿತಿಗೆ ಬಂದು ನಿಂತಿದೆ. ಸೇವೆಯಭಾಗವಾಗಿದ್ದ ಸಾರಿಗೆ, ರೈಲ್ವೇಗಳೆಲ್ಲ ನಿಧಾನಕ್ಕೆ ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ. ಎಲ್ಲವನ್ನೂ ಖಾಸಗಿಯವರಿಗೆ ಕೊಟ್ಟು ಸಿಕ್ಕಿದ ದುಡ್ಡನ್ನು ಜೇಬಿಗಿಳಿಸುತ್ತಿರುವ ಸರಕಾರದ ಕ್ರಮದಿಂದಾಗಿ ಜನರು ನಿಧಾನಕ್ಕೆ ಖಾಸಗಿ ಉದ್ಯಮಿಗಳ ನಿಯಂತ್ರಣಕ್ಕೊಳಗಾಗುತ್ತಿದ್ದಾರೆ. ಸರಕಾರ ಹೆಸರಿಗಷ್ಟೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮುಂಗಡ ಪತ್ರದಲ್ಲಿ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಿದೆ.ಈಗಾಗಲೇ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ನಮ್ಮ ರಾಜ್ಯಕ್ಕೆ ಕೇಂದ್ರೀಯ ತೆರಿಗೆಯಲ್ಲಿ ನ್ಯಾಯವಾಗಿ ದೊರಕಬೇಕಾದ ಪಾಲಿನಲ್ಲೂ ಒಂಬತ್ತು ಸಾವಿರ ಕೋಟಿ ರೂ.ಕಡಿತ ಮಾಡಲಾಗಿದೆ. ಕರ್ನಾಟಕ ಕಳೆದುಕೊಳ್ಳಬಹುದಾದ ಕೇಂದ್ರದ ಪಾಲು ಎಷ್ಟು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲವಾದರೂ ಇದು ಹನ್ನೊಂದು ಸಾವಿರ ಕೋಟಿ ರೂ. ವರೆಗೂ ಏರಬಹುದು ಎಂದು ಅಂದಾಜು ಮಾಡಲಾಗಿದೆ.
 
ವರಮಾನ ತೆರಿಗೆ ಸಂಗ್ರಹ ಕಡಿಮೆಯಾಗಿರುವುದರಿಂದ 2019-20ರ ಹಣಕಾಸು ವರ್ಷದಲ್ಲಿ ಸರಕಾರದ ವರಮಾನ ಮತ್ತು ಖರ್ಚಿನ ನಡುವಿನ ಅಂತರ ಹೆಚ್ಚಾಗಿ ಆರ್ಥಿಕ ಶಿಸ್ತು ಈಗಾಗಲೇ ಹಳಿ ತಪ್ಪಿದೆ. 2020-21ರ ವರ್ಷದಲ್ಲಿ ಚೇತರಿಸುವ ಯಾವ ಸೂಚನೆಗಳೂ ಈ ಬಜೆಟ್‌ನಲ್ಲಿಲ್ಲ. ಆದಾಯತೆರಿಗೆಯನ್ನು ಸುಲಭಗೊಳಿಸಲು ಹೊರಟು ಇನ್ನಷ್ಟು ಕಗ್ಗಂಟುಗೊಳಿಸಿದೆ. ಒಂದು ರೀತಿಯಲ್ಲಿ ಒಂದೆಡೆ ಕೊಟ್ಟಂತೆ ಮಾಡಿ ಇನ್ನೊಂದೆಡೆಯಿಂದ ಕಿತ್ತುಕೊಳ್ಳಲು ಹೊರಟಿದೆ. ಈ ಬಾರಿ ಅನಿವಾಸಿಗಳ ಆದಾಯಗಳಿಗೂ ತೆರಿಗೆ ಕತ್ತರಿ ಬಿದ್ದಿದೆ. ಒಟ್ಟಾರೆ ಹೇಳುವುದಾದರೆ ನಿರ್ಮಲಾ ಸೀತಾರಾಮನ್ ಅವರ ಮುಂಗಡ ಪತ್ರ ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಗುಟುಕು ನೀರು ಹಾಕಿ ಬದುಕಿಸುವ ಹತಾಶ ಪ್ರಯತ್ನವಾಗಿದೆ. ಬಜೆಟ್ ಭಾಷಣದಲ್ಲಿ ಮಹಾ ವ್ಯಕ್ತಿಗಳ ಮಾತುಗಳನ್ನು ಉಲ್ಲೇಖಿಸಿದ ಮಾತ್ರಕ್ಕೆ ಪಾತಾಳಕ್ಕೆ ಕುಸಿದಿರುವ ಜಿಡಿಪಿ ದಿಢೀರನೆ ಮೇಲೇರುವುದಿಲ್ಲ.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳವಾಗಬೇಕೆಂಬುದು ಸಂಬಳದಾರರ ಮತ್ತು ಮಧ್ಯಮ ವರ್ಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅದನ್ನು ಈಡೇರಿಸುವಲ್ಲಿ ಹಣಕಾಸು ಸಚಿವರು ವಿಫಲಗೊಂಡಿದ್ದಾರೆ.

ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದ ವರೆಗೆ ಶಿಕ್ಷಣದ ಗುಣಮಟ್ಟ ಪಾತಾಳಕ್ಕೆ ಹೋಗಿದೆ. ಶೈಕ್ಷಣಿಕ ವಲಯದ ಸಮಸ್ಯೆಗಳನ್ನು ಆದ್ಯತಾ ವಲಯಗಳನ್ನಾಗಿ ಗುರುತಿಸಬೇಕಾಗುತ್ತದೆ ಎಂದು ಶಿಕ್ಷಣ ತಜ್ಞರು ಬಜೆಟ್ ಪೂರ್ವ ಸಭೆಯಲ್ಲಿ ಪ್ರತಿಪಾದಿಸಿದ್ದರು. ಆದರೆ ಈ ಮುಂಗಡ ಪತ್ರದಲ್ಲಿ ಅದರ ಪ್ರಸ್ತಾವವೇ ಇಲ್ಲ. ಶಿಕ್ಷಣ ರಂಗಕ್ಕೆ ಮೀಸಲಾಗಿರಿಸಿದ ಹಣ ಸ್ವಲ್ಪ ಹೆಚ್ಚಳವಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳದ ಪ್ರಮಾಣ ಕುಸಿದಿದೆ. ಕಳೆದ ವರ್ಷ ಪ್ರಕಟಿಸಿದ ಕೆಲ ಯೋಜನೆಗಳ ಮುಂದುವರಿಕೆಯ ಪ್ರಸ್ತಾವವೂ ಇಲ್ಲ.

ದೇಶದಲ್ಲಿ ನಿರುದ್ಯೋಗ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ.ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಸಮಸ್ಯೆ ಹಾಗೇ ಉಳಿದಿದೆ. ರೈತರ ಆತ್ಮಹತ್ಯೆಗಳು ಹೆಚ್ಚುತ್ತಲೇ ಇವೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಉಲ್ಬಣಿಸುತ್ತಲೇ ಇವೆ. ಅವುಗಳ ಪರಿಹಾರಕ್ಕೆ ಈ ಮುಂಗಡ ಪತ್ರದಲ್ಲಿ ಯಾವ ಯೋಜನೆಯೂ ಇಲ್ಲ. ಇದೊಂದು ಬಂಡವಾಳವಿಲ್ಲದ ಬಡಾಯಿ ಅಂದರೆ ಅತಿಶಯೋಕ್ತಿಯಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)