varthabharthi

ಸಂಪಾದಕೀಯ

ಬೀದರ್ ಶಾಲೆಯ ಮೇಲೆ ಎರಗಿದ ಪೊಲೀಸರು ಕಲ್ಲಡ್ಕದಲ್ಲೇಕೆ ಮೌನ?

ವಾರ್ತಾ ಭಾರತಿ : 5 Feb, 2020

ಶಾಲೆ ವಿದ್ಯಾರ್ಥಿಗಳಿಗೆ ಪ್ರಶ್ನಿಸುವುದನ್ನು ಕಲಿಸುತ್ತದೆ. ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುವ ಶಿಕ್ಷಣ ಎಂದಿಗೂ ಹೊಸತನ್ನು ಸೃಷ್ಟಿಸಲಾರದು. ಬರೇ ಪುಸ್ತಕದೊಳಗಿರುವ ಬದನೆಕಾಯಿಯನ್ನಷ್ಟೇ ಅಲ್ಲ, ವರ್ತಮಾನದ ಬೆಳವಣಿಗೆಗಳನ್ನು ಅವರಿಗೆ ತಿಳಿಸಿಕೊಡುವ ಮಹತ್ವದ ಹೊಣೆಗಾರಿಕೆಯೂ ಶಿಕ್ಷಣಕ್ಕಿದೆ. ಆದರೆ ನಮ್ಮ ಸರಕಾರ, ಪ್ರಶ್ನಿಸುವುದು ತಪ್ಪು ಎಂದು ವಿದ್ಯಾರ್ಥಿಗಳಿಗೆ ಕಟುವಾದ ಎಚ್ಚರಿಕೆಯನ್ನು ನೀಡಲು ಹೊರಟಿದೆ. ಬೀದರ್‌ನಲ್ಲಿ ತನ್ನನ್ನು ಪ್ರಶ್ನಿಸಿದ ಎಳೆ ವಿದ್ಯಾರ್ಥಿಗಳ ಮೇಲೆ ಸರಕಾರ ಪೊಲೀಸರನ್ನು ಬಳಸಿ ಕ್ರೌರ್ಯವನ್ನು ಪ್ರದರ್ಶಿಸಿದೆ. ತುರ್ತುಪರಿಸ್ಥಿತಿಯಲ್ಲೂ ಈ ದೇಶ ಇಂತಹ ಸ್ಥಿತಿಯನ್ನು ಅನುಭವಿಸಿಲ್ಲ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸರಕಾರದ ಸಿಎಎ ಕಾಯ್ದೆಯನ್ನು ವಿರೋಧಿಸಿ ನಾಟಕವೊಂದನ್ನು ಪ್ರದರ್ಶಿಸಿದರು ಎನ್ನುವುದನ್ನು ಮುಂದಿಟ್ಟು, ಶಾಲೆಯ ಮೇಲೆ ದೇಶದ್ರೋಹದ ಆರೋಪ ದಾಖಲಿಸಿದ್ದಲ್ಲದೆ ವಿದ್ಯಾರ್ಥಿಯ ತಾಯಿಯನ್ನು ಮತ್ತು ಶಾಲೆಯ ಅಧ್ಯಾಪಕಿಯನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಎಳೆ ವಿದ್ಯಾರ್ಥಿಗಳನ್ನು ಪೊಲೀಸರು ಪದೇ ಪದೇ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ವಿಶ್ವವಿದ್ಯಾನಿಲಯದೊಳಗೆ ಪೊಲೀಸರನ್ನು ನುಗ್ಗಿಸಿದ ಸರಕಾರ, ಆ ಕಾರಣಕ್ಕಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳನ್ನು ಎದುರಿಸಿತ್ತು. ಆದರೆ ಬೀದರ್‌ನಲ್ಲಿ ಪ್ರಾಥಮಿಕ ಶಾಲೆಯೊಳಗೇ ಪೊಲೀಸರನ್ನು ನುಗ್ಗಿಸಿದೆ. ಎಳೆ ಮಕ್ಕಳು ಶಾಲೆಯಲ್ಲಿ ನಡೆಸಿದ ನಾಟಕವನ್ನು ಅದ್ಯಾವುದೋ ದೇಶದ್ರೋಹದ ಚಟುವಟಿಕೆ ಎಂಬಂತೆ ಬಿಂಬಿಸಿ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದೆ. ಸರಕಾರದ ಯಾವುದೇ ನೀತಿಯನ್ನು ವಿರೋಧಿಸುವುದು ದೇಶದ್ರೋಹ ಎಂಬ ಎಚ್ಚರಿಕೆಯನ್ನು ಅದು ಈ ಮೂಲಕ ದೇಶಕ್ಕೆ ನೀಡಲು ಮುಂದಾಗಿದೆ. ಸಿಎಎ ಕಾಯ್ದೆಯ ಕುರಿತಂತೆ ಮಾಜಿ ನ್ಯಾಯಾಧೀಶರು, ವಕೀಲರು, ಸಂವಿಧಾನ ತಜ್ಞರು ಕೂಡ ಟೀಕೆಗಳನ್ನು ಮಾಡುತ್ತಿದ್ದಾರೆ. ಇಡೀ ದೇಶವನ್ನೇ ಧರ್ಮಾಧಾರಿತವಾಗಿ ಒಡೆಯುವ ಹುನ್ನಾರದ ವಿರುದ್ಧ ದೇಶ ಜಾತಿ ಧರ್ಮಗಳನ್ನು ಮೀರಿ ಒಂದಾಗಿ ಮಾತನಾಡುತ್ತಿದೆ. ಜನವಿರೋಧಿ ಕಾಯ್ದೆಯ ವಿರುದ್ಧ ಪ್ರತಿಭಟಿಸುವುದು ಪ್ರಜಾಪ್ರಭುತ್ವ ದೇಶದಲ್ಲಿ ಒಂದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲೇ ಇಲ್ಲ ಎನ್ನುವುದು ಬೀದರ್ ಘಟನೆಯಿಂದ ಜಗಜ್ಜಾಹೀರಾಗಿದೆ. ಎಳೆ ಮಕ್ಕಳು ಆಡಿದ ನಾಟಕವನ್ನೇ ಸಹಿಸಲು ಸಾಧ್ಯವಿಲ್ಲದ ಸರಕಾರ, ಪರೋಕ್ಷವಾಗಿಯೇ ತನ್ನ ಕಾಯ್ದೆ ಸಂವಿಧಾನ ವಿರೋಧವಾದುದು ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ಸಣ್ಣ ಮಕ್ಕಳ ವಿರುದ್ಧ ಪೊಲೀಸರನ್ನು ಬಿಟ್ಟು ವಿಚಾರಣೆಯ ಹೆಸರಲ್ಲಿ ಮಾನಸಿಕವಾಗಿ ದೌರ್ಜನ್ಯವನ್ನು ನೀಡುವುದು ಮಕ್ಕಳ ಹಕ್ಕಿನ ಸ್ಪಷ್ಟ ಉಲ್ಲಂಘನೆೆ. ಇದೇ ಸಂದರ್ಭದಲ್ಲಿ ಘಟನೆಗೆ ಯಾವೊಂದು ಸಂಬಂಧವೂ ಇಲ್ಲದ ವಿದ್ಯಾರ್ಥಿಯ ತಾಯಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಡಕುಟುಂಬಕ್ಕೆ ಸೇರಿದ ಈ ಮಹಿಳೆಯ ಬಂಧನದಿಂದಾಗಿ ಆಕೆಯ ಮಗಳು ಬೀದಿಪಾಲಾಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಶಾಲೆಯ ಶಿಕ್ಷಕಿಯನ್ನೂ ಬಂಧಿಸಲಾಗಿದೆ.

ಸರಕಾರದ ಕಾನೂನು, ಕಾಯ್ದೆ ಜನವಿರೋಧಿಯಾಗಿದ್ದರೆ ಅದನ್ನು ವಿರೋಧಿಸುವುದು ಜನರ ಹಕ್ಕು. ಶಾಲೆಯಲ್ಲಿ ಯಾವ ನಾಟಕ ಪ್ರದರ್ಶಿಸಬೇಕು, ಪ್ರದರ್ಶಿಸಬಾರದು ಎನ್ನುವ ಮಾರ್ಗದರ್ಶನವನ್ನು ಮಾಡಲು ಶಿಕ್ಷಣ ಇಲಾಖೆಯೊಳಗೇ ವ್ಯವಸ್ಥೆಗಳಿವೆ. ಶಿಕ್ಷಣ ತಜ್ಞರಿದ್ದಾರೆ. ನಾಟಕ, ನೃತ್ಯ, ಸಂಗೀತದಂತಹ ಸೃಜನಶೀಲ ವಿಷಯಗಳಿಗೆ ಪೊಲೀಸರ ಹಸ್ತಕ್ಷೇಪವೇ ಖಂಡನೀಯ. ಇದೊಂದು ರೀತಿ ‘ಕತ್ತೆ ಕಸ್ತೂರಿಯ ಪರಿಮಳ’ವನ್ನು ಆಸ್ವಾದಿಸಿದಂತೆ. ಇಬ್ಬರು ಮಹಿಳೆಯರನ್ನು ಬಂಧಿಸಿ, ವಿದ್ಯಾರ್ಥಿಗಳನ್ನು ಪದೇ ಪದೇ ವಿಚಾರಣೆ ನಡೆಸುವ, ದೇಶದ್ರೋಹದ ಮೊಕದ್ದಮೆ ಹೂಡುವ ಯಾವ ಘಟನೆಯೂ ಅಲ್ಲಿ ಸಂಭವಿಸಿಲ್ಲ. ಸಿಎಎ ಕಾಯ್ದೆಯ ಕುರಿತಂತೆ ದೇಶಾದ್ಯಂತ ಭಿನ್ನಾಭಿಪ್ರಾಯಗಳಿರುವುದರಿಂದ, ಒಂದು ಶಾಲೆಯಲ್ಲಿ ಅದರ ವಿರುದ್ಧ ನಾಟಕವೊಂದು ನಡೆದರೆ ಅದು ಯಾವ ರೀತಿಯಲ್ಲೂ ಅಪರಾಧವಲ್ಲ. ಎಳೆ ಮಕ್ಕಳ ಮೇಲೂ ಪೊಲೀಸರನ್ನು ಬಳಸುವ ಮೂಲಕ ಈ ದೇಶದ ಪ್ರಜಾಪ್ರಭುತ್ವ ಅಮಾನತಿನಲ್ಲಿವೆ ಎಂಬ ಎಚ್ಚರಿಕೆಯನ್ನು ಸರಕಾರ ಜನರಿಗೆ ನೀಡುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಬೀದರ್ ಶಾಲೆಯ ಒಂದು ಪುಟ್ಟ ಪ್ರಹಸನಕ್ಕೆ ಇಷ್ಟೆಲ್ಲ ರಂಪಾಟ ಮಾಡಿರುವ ಸರಕಾರ, ನಿಜಕ್ಕೂ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಮೂಲಕ ದೇಶದ್ರೋಹದ ಚಟುವಟಿಕೆಯನ್ನು ಆಯೋಜಿಸಿದಾಗ ಅದನ್ನು ಮೌನವಾಗಿ ಅನುಮೋದಿಸಿತ್ತು.. ಈ ಸಂವಿಧಾನ ವಿರೋಧಿ ಚಟುವಟಿಕೆ ನಡೆದಿರುವುದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರಭಟ್ಟರ ಶಾಲೆಯಲ್ಲಿ.

ವಿವಿಧ ಪೊಲೀಸ್ ಅಧಿಕಾರಿಗಳು, ರಾಷ್ಟ್ರಮಟ್ಟದ ರಾಜಕೀಯ ನಾಯಕರ ಉಪಸ್ಥಿತಿಯಲ್ಲೇ ಈ ಕೃತ್ಯ ನಡೆಯಿತು. ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಸುಪ್ರೀಂಕೋರ್ಟ್ ಮಹಾ ಅಪರಾಧ ಕೃತ್ಯ ಎಂದು ಕರೆದಿದೆ. ಈ ಧ್ವಂಸ ಸಂವಿಧಾನಕ್ಕೆ ಮಾಡಿದ ಮೋಸ ಮಾತ್ರವಲ್ಲ, ಈ ದೇಶದ ಸಹಸ್ರಾರು ಅಮಾಯಕರು ಈ ಘಟನೆಯಿಂದ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ಕೃತ್ಯ ದೇಶಾದ್ಯಂತ ದ್ವೇಷದ ಕಿಚ್ಚನ್ನು ಹಚ್ಚಿತ್ತು. ಆದರೆ ಈ ಬಾಬರಿ ಮಸೀದಿ ಧ್ವಂಸವನ್ನು ಕಲ್ಲಡ್ಕ ಭಟ್ಟರ ಶಾಲೆಯ ಮೈದಾನದಲ್ಲಿ ನೂರಾರು ಮಕ್ಕಳು ಸೇರಿ ಅಭಿನಯಿಸಿ ತೋರಿಸಿದರು. ಇದು ಎಳೆ ಮಕ್ಕಳಲ್ಲಿ ಒಂದು ಶಾಲೆ ಹೇಗೆ ದ್ವೇಷ, ಹಿಂಸೆಯನ್ನು ಬಿತ್ತಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ. ಈ ಶಾಲೆಯಲ್ಲಿ ನಡೆದಿರುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ಶಿಕ್ಷಣ ಪ್ರತಿಪಾದಿಸುವ ವೌಲ್ಯಗಳ ವಿರೋಧಿಯೂ ಹೌದು. ಇದರ ವಿರುದ್ಧ ಯಾವ ಪೊಲೀಸರೂ ಸ್ವಯಂ ದೂರು ದಾಖಲಿಸಲಿಲ್ಲ. ಯಾರೋ ದೂರು ಸಲ್ಲಿಸಿದರು ಎನ್ನುವ ಕಾರಣಕ್ಕೆ ಮನಸ್ಸಿಲ್ಲದ ಮನಸ್ಸಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

 ಆದರೆ ಬೀದರ್‌ನಲ್ಲಿ ಸಂಭವಿಸಿದ್ದು ಇಲ್ಲಿ ಏನೂ ಸಂಭವಿಸಲಿಲ್ಲ. ಈವರೆಗೆ ಬಾಬರಿ ಮಸೀದಿ ಧ್ವಂಸ ನಾಟಕವನ್ನು ಕಲಿಸಿದ ಶಿಕ್ಷಕರನ್ನಾಗಲಿ, ವಿದ್ಯಾರ್ಥಿಗಳ ತಂದೆತಾಯಿಗಳನ್ನಾಗಲಿ ಪೊಲೀಸರು ಬಂಧಿಸಿಲ್ಲ. ಆಡಳಿತ ಮಂಡಳಿಯ ಮೇಲೆ ದೇಶದ್ರೋಹದ ಪ್ರಕರಣವೂ ದಾಖಲಾಗಲಿಲ್ಲ. ಕನಿಷ್ಠ ಪ್ರಭಾಕರಭಟ್ಟರನ್ನಾದರೂ ವಿಚಾರಣೆ ನಡೆಸಬಹುದಿತ್ತು. ಅದೂ ನಡೆದಿಲ್ಲ. ವಿದ್ಯಾರ್ಥಿಗಳ ಕೈಯಲ್ಲಿ ಒಂದು ಕ್ರಿಮಿನಲ್ ಅಪರಾಧವನ್ನು ನಾಟಕವಾಗಿ ಆಡಿಸಿದ್ದಕ್ಕೆ ಶಿಕ್ಷಣ ಇಲಾಖೆ ಈ ಸಂಸ್ಥೆಗೆ ನೋಟಿಸ್ ನೀಡಬಹುದಿತ್ತು. ಬದಲಿಗೆ ಶಿಕ್ಷಣ ಅಧಿಕಾರಿಗಳೇ ಈ ನಾಟಕವನ್ನು ವೀಕ್ಷಿಸಿ ಅದಕ್ಕೆ ಸಾಂಸ್ಕೃತಿಕ ಅನುಮೋದನೆಯನ್ನು ನೀಡಿದರು. ಇಂತಹ ಶಾಲೆಯಿಂದ ಹೊರಬರುವ ವಿದ್ಯಾರ್ಥಿಗಳು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಬಹುದು? ವಿದ್ಯಾರ್ಥಿಗಳ ಮಾತ್ರವಲ್ಲ, ಭವಿಷ್ಯದ ಸಮಾಜದ ದೃಷ್ಟಿಯಿಂದಲೂ ಈ ಶಾಲೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿತ್ತು. ಆದರೆ ಅಧಿಕಾರಿಗಳು ಇದನ್ನು ವೌನವಾಗಿ ಅನುಮೋದಿಸುವ ಮೂಲಕ, ವಿದ್ಯಾರ್ಥಿಗಳ ಭವಿಷ್ಯವನ್ನು ಅಂಧಕಾರಕ್ಕೆ ಒಯ್ಯುವಲ್ಲಿ ಕೈ ಜೋಡಿಸಿದರು. ಬೀದರ್ ಮತ್ತು ಕಲ್ಲಡ್ಕ ಪ್ರಕರಣ ಈ ದೇಶದ ಸಂವಿಧಾನದ ಭವಿಷ್ಯವನ್ನು ಹೇಳಿದೆ. ಸಂವಿಧಾನ ಪರವಾಗಿ ಮಾತನಾಡಿದವರು ಜೈಲಲ್ಲಿದ್ದರೆ, ಸಂವಿಧಾನದ ವಿರುದ್ಧ ಮಾತನಾಡಿದ ಶಾಲೆಯ ಮುಖ್ಯಸ್ಥರು ಗಣ್ಯರಾಗಿ ತಿರುಗಾಡುತ್ತಿದ್ದಾರೆ. ಬೀದರ್‌ನಲ್ಲಿ ವಿದ್ಯಾರ್ಥಿಗಳಿಂದ ಆಡಿಸಿದ ನಾಟಕವನ್ನು ಬೀದಿ ಬೀದಿಗಳಲ್ಲಿ ಅಭಿನಯಿಸುವ ಮೂಲಕ ಸರಕಾರದ ಸಂವಿಧಾನ ವಿರೋಧಿ ಕೃತ್ಯದ ವಿರುದ್ಧ ಪ್ರತಿಭಟನೆ ನಡೆಯಬೇಕಾಗಿದೆ. ಅಷ್ಟೇ ಅಲ್ಲ, ಸಂವಿಧಾನದ ವಿರುದ್ಧ ವಿದ್ಯಾರ್ಥಿಗಳನ್ನು ಬಳಸುವ ಕಲ್ಲಡ್ಕದಂತಹ ಶಾಲೆಯ ಕುರಿತಂತೆಯೂ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)