varthabharthi

ಸಂಪಾದಕೀಯ

ಸಂಪುಟ ವಿಸ್ತರಣೆ: ಸಿನೆಮಾ ಮುಗಿದಿಲ್ಲ

ವಾರ್ತಾ ಭಾರತಿ : 8 Feb, 2020

ಅನರ್ಹರು ಅರ್ಹರಾದರು. ಇದೀಗ ‘ಅನರ್ಹ ಅರ್ಹ’ರು ಸಚಿವರೂ ಆಗಿದ್ದಾರೆ. ಇನ್ನಾದರೂ ರಾಜ್ಯದಲ್ಲಿ ಸರಕಾರ ರಾಜ್ಯದ ಅಭಿವೃದ್ಧಿಗೆ ಗಮನ ನೀಡಬಹುದೇ ಎಂದು ನಿರೀಕ್ಷಿಸಿದರೆ, ಮತ್ತೆ ನಿರಾಸೆಯೇ ಕಾದಿದೆ. ಯಾಕೆಂದರೆ ಬಿಜೆಪಿಯೊಳಗಿರುವ ಮೂಲ ನಿವಾಸಿಗಳು-ವಲಸಿಗರ ಸಮಸ್ಯೆ ಸಿಎಎ-ಎನ್‌ಆರ್‌ಸಿ ಕಾಯ್ದೆಗಿಂತಲೂ ಬಿಗಡಾಯಿಸಿದೆ. ಸಿಎಎ ಕಾಯ್ದೆ ಅಸ್ಸಾಮ್‌ನಲ್ಲಿ ವಲಸಿಗರ ಸಮಸ್ಯೆಯನ್ನು ಹುಟ್ಟು ಹಾಕಿ ಮೂಲ ನಿವಾಸಿಗಳಿಗೆ ಸಮಸ್ಯೆ ಸೃಷ್ಟಿಸುತ್ತದೆ ಎಂದು ಜನರು ಬೀದಿಗಿಳಿದಂತೆಯೇ, ಬಿಜೆಪಿಯೊಳಗಿರುವ ಮೂಲನಿವಾಸಿಗಳು ಕೂಡ ಬೀದಿಗಿಳಿಯುವ ಸೂಚನೆಗಳು ಕಾಣುತ್ತಿವೆ. ಯಡಿಯೂರಪ್ಪ ಒಬ್ಬರನ್ನು ಹೊರತು ಪಡಿಸಿದಂತೆ, ನೂತನ ಸಚಿವರ ಪ್ರಮಾಣವಚನ ಬಿಜೆಪಿಯೊಳಗಿರುವ ಯಾವುದೇ ನಾಯಕರಲ್ಲಿ ಸಂಭ್ರಮ ತಂದಂತಿಲ್ಲ. ಪ್ರಮುಖ ನಾಯಕರಾರೂ ನೂತನ ಸಚಿವರನ್ನು ಅಭಿನಂದಿಸುವ ಹೇಳಿಕೆಯನ್ನೂ ನೀಡಿಲ್ಲ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರು ನೂತನ ಸಚಿವರಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ ‘‘ನಿಮಗಾಗಿ ನಾನು ತುಂಬಾ ತೊಂದರೆ ಅನುಭವಿಸಿದ್ದೇನೆ. ಶತ್ರುಗಳಿಗೆ ಆಹಾರವಾಗದೆ ಸಚಿವರಾಗಿ ಕೆಲಸ ಮಾಡಿ’’. ಇಲ್ಲಿ ಶತ್ರುಗಳು ಯಾರು ಎನ್ನುವುದನ್ನು ಪ್ರತ್ಯೇಕ ವಿವರಿಸಬೇಕಾಗಿಲ್ಲ.

ಇಂದು ಬಿಜೆಪಿಗೆ ಬಿಜೆಪಿಯೇ ವಿರೋಧಪಕ್ಷವಾಗಿದೆ. ಇಂತಹ ವಾತಾವರಣದಲ್ಲಿ ಸರಕಾರ ನಡೆಸುವುದು ಸುಲಭವೇನೂ ಅಲ್ಲ. ಸಂಪುಟ ವಿಸ್ತರಣೆಯಿಂದ ಸಮಸ್ಯೆ ಮುಕ್ತಾಯವಾಗಿಲ್ಲ. ಸಿನೆಮಾ ಮಧ್ಯಂತರಕ್ಕೆ ತಲುಪಿದೆ ಎಂದಷ್ಟೇ ಭಾವಿಸಬೇಕು. ಸಿನೆಮಾ ಮುಖ್ಯ ತಿರುವು ಪಡೆದುಕೊಳ್ಳುವುದು ಖಾತೆ ಹಂಚಿಕೆಯ ಬಳಿಕ. ಯಾರ ಖಾತೆಯನ್ನು ಕಿತ್ತು ಯಾರಿಗೆ ಕೊಡಲಾಗುತ್ತದೆ ಎನ್ನುವುದೇ ಕೂತೂಹಲಕಾರಿಯಾಗಿದೆ. ಈಗಾಗಲೇ ಸಚಿವರಾಗಿರುವ ಮೂಲ ಬಿಜೆಪಿಗರು ವಲಸಿಗರ ಜೊತೆಗೆ ಖಾತೆಯನ್ನು ಹಂಚಿಕೊಳ್ಳಲು ಸಿದ್ಧರಿದ್ದಂತಿಲ್ಲ. ಜೊತೆಗೆ ಮೂಲ ಬಿಜೆಪಿಗರಲ್ಲೇ ಹಲವರು ಸಚಿವಾಕಾಂಕ್ಷಿಗಳಾಗಿ ಭ್ರಮ ನಿರಸನಗೊಂಡಿದ್ದಾರೆ. ವರಿಷ್ಠರ ಆದೇಶದ ಮೇರೆಗೆ ಅವರು ವೌನವಹಿಸಿ ಕೂತಿದ್ದಾರೆ. ಅದರ ಅರ್ಥ ಬಿಜೆಪಿಯೊಳಗೆ ಎಲ್ಲವೂ ಸರಿಯಿದೆ ಎಂದಲ್ಲ. ಇದೇ ಸಂದರ್ಭದಲ್ಲಿ ಎಚ್. ವಿಶ್ವನಾಥ್ ರೆಕ್ಕೆ ಹರಿದ ಹಕ್ಕಿಯಂತೆ ಕುಂಟುತ್ತಾ ಓಡಾಡುತ್ತಿದ್ದಾರೆ. ಒಳಗೊಳಗೆ ಬುಸುಗುಡುತ್ತಿದ್ದರೂ, ಅವರನ್ನು ಯಡಿಯೂರಪ್ಪ ಸಮಾಧಾನಿಸಿ ಸುಮ್ಮಗಾಗಿಸಿದ್ದಾರೆ. ಸಚಿವ ಸ್ಥಾನವಿಲ್ಲದೇ ಇದ್ದರೆ ಇನ್ನೊಂದು ಮಿನಿ ಸೂಟ್‌ಕೇಸನ್ನಾದರೂ ಅವರಿಗೆ ನೀಡಬೇಕಾದ ಅನಿವಾರ್ಯ ಸ್ಥಿತಿ ಯಡಿಯೂರಪ್ಪರದು. ಆದರೆ ವಿಶ್ವನಾಥ್ ಅವರಿಗೆ ತಮ್ಮ ಹಣೆಗೆ ಅಂಟಿಕೊಂಡಿರುವ ‘ಅನರ್ಹತೆ’ಯ ಹಚ್ಚೆಯನ್ನು ಸಚಿವ ಸ್ಥಾನದ ಮೂಲಕ ಉಜ್ಜಿ ತೆಗೆಯುವ ಹಟ ಇದ್ದಂತಿದೆ. ಬಿಜೆಪಿ ಸರಕಾರದಲ್ಲಿ ಯಾವುದಾದರೂ ಒಂದು ಸ್ಥಾನವನ್ನು ತನ್ನದಾಗಿಸಿಕೊಳ್ಳದೇ ಹೋದರೆ ಅವರು ರಾಜಕೀಯವಾಗಿ ಶಾಶ್ವತ ಮೂಲೆಗುಂಪಾಗಬೇಕಾಗುತ್ತದೆ.

ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಯಾಕೆಂದರೆ, ಈ ಸರಕಾರದ ಜೊತೆಗೇ ಬಿಜೆಪಿಯೊಳಗೆ ಯಡಿಯೂರಪ್ಪ ಅವರ ಯುಗ ಅಂತ್ಯವಾಗುವ ಸೂಚನೆಗಳಿವೆ. ಹೊಸ ನಾಯಕರು ಈ ಅನರ್ಹರನ್ನು ಮತ್ತೆ ತಲೆಯಲ್ಲಿ ಹೊತ್ತುಕೊಳ್ಳುವುದು ಕಷ್ಟ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪರಿಗೆ ಆಪ್ತರಾಗಿದ್ದವರೆಲ್ಲ, ಬಿಜೆಪಿಯೊಳಗೆ ಅನಾಥರಾಗುವ ಸಾಧ್ಯತೆಗಳಿವೆ. ಆ ಕಾರಣದಿಂದಲೇ ವಿಶ್ವನಾಥ್ ಈ ಅವಧಿಯಲ್ಲೇ ಸ್ಥಾನಕ್ಕಾಗಿ ಪಟ್ಟು ಹಿಡಿದು ನಿಂತಿರುವುದು. ಆಪರೇಷನ್ ಕಮಲದ ಸಂಚನ್ನು ಬಹಿರಂಗಪಡಿಸುತ್ತೇನೆ ಎನ್ನುವ ಬ್ಲಾಕ್‌ಮೇಲ್ ಕೂಡ ಅವರಿಂದ ನಡೆಯುತ್ತಿದೆ. ಮುಂದೊಂದು ದಿನ ಈ ಪಂಜರದ ಹಕ್ಕಿ, ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವುದು ಮಾತ್ರವಲ್ಲ, ಪುಸ್ತಕವನ್ನೂ ಬರೆಯುವ ಸಾಧ್ಯತೆಗಳಿವೆ. ಅಂತಹದೊಂದು ಪುಸ್ತಕ ಬರೆದದ್ದೇ ಆದರೆ, ಅದು ರಾಜಕೀಯ ಕೃತಿಯಾಗಿ ಮಹತ್ವವನ್ನು ಪಡೆಯಬಹುದು. ಭವಿಷ್ಯದಲ್ಲಿ ಉಳಿದ ರಾಜಕಾರಣಿಗಳಿಗೆ ಒಂದು ಅಧ್ಯಯನ ಪುಸ್ತಕವಾಗಿಯೂ ಚಿರಸ್ಥಾಯಿಯಾಗಿ ಉಳಿಯಬಹುದು.

ಕಾಂಗ್ರೆಸ್‌ನಿಂದ ಬಂದ ಅನರ್ಹ ಶಾಸಕರೊಬ್ಬರು ಇನ್ನೂ ಕೂಡ ‘‘ನನ್ನ ನಾಯಕ ಸಿದ್ದರಾಮಯ್ಯ’’ ಎಂದೇ ಹೇಳುತ್ತಿದ್ದಾರೆ. ಇದರ ಉದ್ದೇಶವೇನು? ಈ ಮೂಲಕ ಸಿದ್ದರಾಮಯ್ಯರಿಗೆ ಮುಜುಗರ ಉಂಟು ಮಾಡಲು ಯತ್ನಿಸುತ್ತಿದ್ದಾರೆಯೇ? ಅಥವಾ ಬಿಜೆಪಿಯೊಳಗೆ ನನ್ನದು ತಾತ್ಕಾಲಿಕ ಸಂಬಂಧ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದಾರೆಯೇ? ಯಡಿಯೂರಪ್ಪರ ಮುಖ್ಯಮಂತ್ರಿ ಅವಧಿ ಮುಗಿದಾಕ್ಷಣ, ಬಿಜೆಪಿಯಿಂದ ಅವರು ಮತ್ತೆ ಕಾಂಗ್ರೆಸ್‌ಗೆ ಹಾರುವುದಕ್ಕಾಗಿ ಸಿದ್ದರಾಮಯ್ಯರ ಚುಂಗು ಹಿಡಿದುಕೊಂಡಿದ್ದಾರೆಯೆ? ಒಂದು ರೀತಿಯಲ್ಲಿ ನೋಡಿದರೆ ಈಗ ರಾಜ್ಯದಲ್ಲಿರುವ ಸರಕಾರ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಂದುವರಿದ ಭಾಗವೇ ಆಗಿದೆ. ಇದನ್ನು ಸಂಪೂರ್ಣವಾಗಿ ಬಿಜೆಪಿಯ ಸರಕಾರ ಎಂದು ಕರೆಯುವಂತಿಲ್ಲ. ಅಂದರೆ ಹಿಂದೆ ಜೆಡಿಎಸ್-ಕಾಂಗ್ರೆಸ್ ಜೊತೆಯಾಗಿದ್ದರೆ ಈಗ ಅವರೊಂದಿಗೆ ಬಿಜೆಪಿ ಸೇರಿಕೊಂಡಿದೆ. ಯಾಕೆಂದರೆ ಸುಮಾರು 10 ಸಚಿವರೂ ಕಾಂಗ್ರೆಸ್, ಜೆಡಿಎಸ್‌ನಲ್ಲಿ ನಿನ್ನೆಯವರೆಗೆ ಇದ್ದವರು. ಮೊನ್ನೆಯವರೆಗೆ ಬಿಜೆಪಿಗೆ ಭ್ರಷ್ಟರಾಗಿ ಕಂಡ ಈ ನಾಯಕರನ್ನು ಕರೆಸಿ ಅವರಿಗೆ ಸ್ಥಾನಗಳನ್ನು ಕೊಡಲಾಗಿದೆ. ಬಹುಶಃ ತಮ್ಮ ಪಕ್ಷದಲ್ಲಿ ಯೋಗ್ಯರಿಲ್ಲ ಎನ್ನುವ ಕಾರಣಕ್ಕಾಗಿ ಬೇರೆ ಪಕ್ಷಗಳಿಂದ ಯಡಿಯೂರಪ್ಪ ಶಾಸಕರನ್ನು ತಂದು ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಇದು ಮೂಲ ಬಿಜೆಪಿಗರಿಗೆ ಮಾಡಿರುವ ಅವಮಾನವೂ ಹೌದು. ಆದರೆ ಸಿಕ್ಕಿದ್ದು ಸೀರುಂಡೆ ಎಂದು ತೃಪ್ತಿಪಟ್ಟುಕೊಳ್ಳುವುದು ಅನಿವಾರ್ಯ.

ಖಾತೆ ಹಂಚದೇ ಸಂಪುಟ ವಿಸ್ತರಣೆಯಿಂದ ಆಡಳಿತಕ್ಕೆ ಯಾವ ಪ್ರಯೋಜನವೂ ಇಲ್ಲ. ಆಡಳಿತ ಸುಗಮವಾಗಬೇಕಾದರೆ ಆದಷ್ಟು ಬೇಗ ಅರ್ಹರಿಗೆ ಅರ್ಹ ಖಾತೆಗಳನ್ನು ಹಂಚಿ ಅವರು ಸರಕಾರದಲ್ಲಿ ಸಕ್ರಿಯವಾಗುವಂತೆ ನೋಡಿಕೊಳ್ಳಬೇಕು. ಎರಡನೇ ಸವಾಲನ್ನು ಯಡಿಯೂರಪ್ಪ ಗೆಲ್ಲುತ್ತಾರೆಯೇ ಎನ್ನುವುದರಲ್ಲೇ, ನಾಡಿನ ಭವಿಷ್ಯವಿದೆ. ಒಂದು ವೇಳೆ ಅದರಲ್ಲಿ ಗೆದ್ದರೆ, ಕೊನೆಯ ಒಂದು ವರ್ಷವನ್ನಾದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಯಡಿಯೂರಪ್ಪ ವ್ಯಯ ಮಾಡಬಹುದು. ಇಲ್ಲವಾದರೆ ವಲಸಿಗರು-ಮೂಲನಿವಾಸಿಗಳ ತಿಕ್ಕಾಟದ ನಡುವೆ ಯಡಿಯೂರಪ್ಪ ಮುಗಿದು ಹೋಗಬೇಕಾಗುತ್ತದೆ. ತಮ್ಮ ರಾಜಕೀಯ ಬದುಕಿನ ಕೊನೆಯ ಅಂಚಿನಲ್ಲಿದ್ದಾರೆ ಯಡಿಯೂರಪ್ಪ. ಅವರು ರಾಜಕೀಯ ವಿದಾಯ ಹೇಳುವಾಗ, ಕೆಲವು ಸವಿ ನೆನಪುಗಳನ್ನು ಬಿಟ್ಟು ಹೋಗಬೇಕು ಎನ್ನುವುದು ನಾಡಿನ ಜನತೆಯ ಆಗ್ರಹವಾಗಿದೆ. ಅದಕ್ಕೆ ಪಕ್ಷದೊಳಗಿರುವ ಉಳಿದ ನಾಯಕರು ಅವಕಾಶ ಮಾಡಿಕೊಡುವ ಬಗ್ಗೆ ಅನುಮಾನಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)