varthabharthi


ರಾಷ್ಟ್ರೀಯ

ದಿಲ್ಲಿ ವಿಧಾನಸಭೆ ಚುನಾವಣೆ

ಅನುರಾಗ್ ಠಾಕೂರ್, ಇತರ ನಾಯಕರು ಪ್ರಚೋದನಾತ್ಮಕ ಭಾಷಣ ಮಾಡಿದ್ದ 3 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು

ವಾರ್ತಾ ಭಾರತಿ : 11 Feb, 2020

ಹೊಸದಿಲ್ಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಚುನಾವಣಾ ಪ್ರಚಾರದ ವೇಳೆ ಪ್ರಚೋದನಾತ್ಮಕ ಭಾಷಣ ಮಾಡಿದ್ದ ಮೂರೂ  ಕ್ಷೇತ್ರಗಳಲ್ಲಿ ಆಪ್ ಜಯಭೇರಿ ಬಾರಿಸಿದೆ.

ಕೇಂದ್ರ ಸಚಿವ ಅನುರಾಗ್ ಠಾಕುರ್ ರಿತಾಲ ಕ್ಷೇತ್ರದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ `ದೇಶ್ ಕೆ ಗದ್ದಾರೋಂ ಕೋ ಗೋಲಿ ಮಾರೋ' ಎಂಬ ಘೋಷಣೆ ಹೇಳಿ ಭಾರೀ ವಿವಾದಕ್ಕೀಡಾಗಿ ನಂತರ ಚುನಾವಣಾ ಆಯೋಗದಿಂದ ನಿಷೇಧ ಎದುರಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮನೀಶ್ ಚೌಧುರಿ, ಆಪ್ ಅಭ್ಯರ್ಥಿ ಮಹೀಂದರ್ ಗೋಯೆಲ್ ಎದುರು ಪರಾಭವಗೊಂಡಿದ್ದಾರೆ.

``ಶಾಹೀನ್ ಬಾಗ್ ಪ್ರತಿಭಟನಾಕಾರರು ಮನೆಗಳನ್ನು ಪ್ರವೇಶಿಸಿ ಸೋದರಿಯರ ಹಾಗೂ ಪುತ್ರಿಯರ ಮೇಲೆ ಅತ್ಯಾಚಾರ ನಡೆಸುತ್ತಾರೆ'' ಎಂಬ ವಿವಾದಾತ್ಮಕ ಹೇಳಿಕೆಯನ್ನು ಪರ್ವೇಶ್ ಸಿಂಗ್ ನೀಡಿದ್ದ ವಿಕಾಸಪುರಿ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಮಹೀಂದರ್ ಯಾದವ್ ಬಿಜೆಪಿಯ ಸಂಜಯ್ ಸಿಂಗ್ ವಿರುದ್ಧ ಜಯ ಗಳಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು `ಉಗ್ರವಾದಿ' ಎಂದು ಪರ್ವೇಶ್ ಸಿಂಗ್ ಮದಿಪುರ್ ಕ್ಷೇತ್ರದ ರ್ಯಾಲಿಯಲ್ಲಿ ಹೇಳಿದ್ದರೆ ಅಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ. ಇಲ್ಲಿ ಆಮ್ ಆದ್ಮಿ ಪಕ್ಷದ ಗಿರೀಶ್ ಸೋನಿ ಜಯ ಗಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)