varthabharthi

ಸಂಪಾದಕೀಯ

ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಕಪಾಳ ಮೋಕ್ಷ

ವಾರ್ತಾ ಭಾರತಿ : 11 Feb, 2020

ಆರೆಸ್ಸೆಸ್ ನಿಯಂತ್ರಿತ ಬಿಜೆಪಿಯ ಜನಾಂಗ ದ್ವೇಷದ ರಾಜಕಾರಣಕ್ಕೆ ದಿಲ್ಲಿಯ ಮತದಾರರು ಮುಟ್ಟಿ ನೋಡಿಕೊಳ್ಳುವಂತೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಧಾನ ಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ಎಲ್ಲ ಶಕ್ತಿಯನ್ನು ಬಳಸಿದ್ದರು. ಅಮಿತ್ ಶಾ ಗಲ್ಲಿ, ಗಲ್ಲಿಗೆ, ಮನೆ ಬಾಗಿಲಿಗೆ ಹೋಗಿ ಮತ ಯಾಚಿಸಿದ್ದರು. ಸ್ವತಃ ಪ್ರಧಾನಿ ತನ್ನ ಪೀಠದ ಘನತೆ ಮರೆತು ಆಡ ಬಾರದ ಮಾತುಗಳನ್ನು ಆಡಿದ್ದರು. ಬಿಜೆಪಿಯ ಕೇಂದ್ರ ಮಂತ್ರಿಯೊಬ್ಬರು ‘‘ದೇಶ್‌ಕೆ ಗದ್ದಾರೊಂಕೊ ಗೋಲಿಮಾರೊ ಸಾಲೊಂಕೊ’’ ಎಂದು ಕೂಗಿದ್ದರು, ಕೂಗಿಸಿದ್ದರು. ಇಂತಹ ದುರಹಂಕಾರದ ಮತಾಂಧ ರಾಜಕೀಯವನ್ನು ದಿಲ್ಲಿಯ ಪ್ರಜ್ಞಾವಂತ ಮತದಾರರು ಸೋಲಿಸಿದರು. ಇದರ ಶ್ರೇಯಸ್ಸು ಆಮ್ ಆದ್ಮಿ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪಕ್ಷದ ಒಡನಾಡಿಗಳಿಗೆ ಸಲ್ಲಬೇಕು.

 ಭಾರತದ ಕೆಲ ರಾಜ್ಯಗಳ ಮತದಾರರು ಬಿಜೆಪಿಯ ಮಠ ಮಂದಿರ, ಗೋವಿನ ಭಾವನಾತ್ಮಕ ರಾಜಕೀಯಕ್ಕೆ ಮರುಳಾಗಿರಬಹುದು, ಆದರೆ ಇದು ಬಹಳ ಕಾಲ ನಡೆಯುವುದಿಲ್ಲ. ಶಾಲೆ, ಆಸ್ಪತ್ರೆ, ಆರೋಗ್ಯ, ರಸ್ತೆ ಹೀಗೆ ಮೂಲಭೂತ ಸೌಕರ್ಯಗಳ ನೈಜ ಅಂಶಗಳ ಮುಂದೆ ದೇವರು, ಧರ್ಮ, ಮತಾಂಧತೆಯ ದುರುಪಯೋಗದ ರಾಜಕೀಯ ಸೋಲುತ್ತದೆ ಎಂಬುದು ದಿಲ್ಲಿಯ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.

 ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಾಧನೆ. ಆದರೆ ಬಿಜೆಪಿಯ ಮತಗಳಿಕೆ ಪ್ರಮಾಣದಲ್ಲಿ ಕಳೆದ ಬಾರಿಗಿಂತ ಹೆಚ್ಚಾಗಿರುವುದು ತಳ್ಳಿ ಹಾಕಲಾಗದ ಅಂಶವಾಗಿದೆ.

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ದೇಶದಲ್ಲಿ ನೆಮ್ಮದಿ, ಆರ್ಥಿಕ ಸ್ಥಿರತೆ ಮಾಯವಾಗುತ್ತ ಬಂತು. 2019ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಭಾರತದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಜಿಡಿಪಿ ಪಾತಾಳಕ್ಕೆ ಕುಸಿಯಿತು. ನಿರುದ್ಯೋಗ ಪ್ರಮಾಣ ನಲವತ್ತೈದು ವರ್ಷಗಳ ದಾಖಲೆಯನ್ನು ಮೀರಿಸಿತು. ಜನಸಾಮಾನ್ಯರ ಬದುಕು ಅಸಹನೀಯವಾಯಿತು. ಇದನ್ನೆಲ್ಲ ಟೀಕಿಸಿದವರನ್ನು ದೇಶದ್ರೋಹದ ಆರೋಪಕ್ಕೆ ಗುರಿಪಡಿಸಲಾಯಿತು. ಪ್ರಧಾನಿಯನ್ನು ಟೀಕಿಸಿದರೆ ದೇಶ ವಿರೋಧಿ ಎಂದು ಹೆಸರಿಸಿ ಅವರ ಧ್ವನಿಯನ್ನು ಹತ್ತಿಕ್ಕಲಾಯಿತು. ಒಂದು ವಿಧದ ಅಘೋಷಿತ ತುರ್ತುಸ್ಥಿತಿ ದೇಶದ ಮೇಲೆ ಹೇರಲ್ಪಟ್ಟಿತು. ಹೀಗಾಗಿ ಜನರಲ್ಲಿ ನಿಧಾನವಾಗಿ ಅಸಮಾಧಾನ ಹೆಚ್ಚಾಗತೊಡಗಿತು. ಇದರಿಂದ ಹತಾಶಗೊಂಡ ಸಂಘೀ ಭಕ್ತ ಪಡೆ ದೈಹಿಕ ದಾಳಿಗೆ ಮುಂದಾಯಿತು.ತಮ್ಮನ್ನು ವಿಮರ್ಶಿಸಿದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡುಬೀದಿಯಲ್ಲಿ ಹಲ್ಲೆ ನಡೆಸಿತು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಕೂಡ ಅನೇಕ ಬಾರಿ ದಾಳಿ ನಡೆಯಿತು. ರಾಜಧಾನಿ ದಿಲ್ಲಿಯಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದಲ್ಲಿ ಮತ್ತು ಜಾಮಿಯಾ ಮಿಲ್ಲಿಯಾ ವಿವಿ ಆವರಣದಲ್ಲಿ ಗೂಂಡಾಗಳನ್ನು ನುಗ್ಗಿಸಿ ಪ್ರತಿಭಟನಾಕಾರರ ಮೇಲೆ ಪುಂಡಾಟಿಕೆ ನಡೆಸಿತು. ಇದೆಲ್ಲದರಿಂದ ರೋಸಿ ಹೋದ ಜನರು ಈಗ ತಿರುಗಿ ಬೀಳುತ್ತಿದ್ದಾರೆ. ಇದಕ್ಕೆ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರತ್ಯಕ್ಷ ಉದಾಹರಣೆಯಾಗಿದೆ.

ಮೋದಿ ನೇತೃತ್ವದ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ತನ್ನ ಹಿಡನ್ ಅಜೆಂಡಾಗಳನ್ನು ಒಂದೊಂದಾಗಿ ಜಾರಿಗೊಳಿಸಲು ಮುಂದಾಯಿತು. ಜಮ್ಮು -ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ನೀಡುವ 370ನೇ ಪರಿಚ್ಛೇದ ರದ್ದುಗೊಳಿಸಿ ಇಡೀ ರಾಜ್ಯದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಿದೆ. ಬಿಜೆಪಿ ಸರಕಾರದ ಈ ದುಂಡಾವರ್ತನೆಯನ್ನು ಸಹಿಸುವುದಿಲ್ಲ ಎಂದು ದಿಲ್ಲಿ ಮತದಾರರು ಎಚ್ಚರಿಕೆ ನೀಡಿದ್ದಾರೆ.

ದಿಲ್ಲಿ ವಿಧಾನಸಭೆಯ ಈ ಚುನಾವಣಾ ಫಲಿತಾಂಶ ಸಂಘಪರಿವಾರದ ಕೋಮುವಾದಿ ಹುನ್ನಾರದ ಸಂಪೂರ್ಣ ಪರಾಭವವಲ್ಲ. ಆದರೆ ಅದಕ್ಕೆ ಹಿನ್ನಡೆಯಾಗಿದೆ. ಕರಾಳ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾದ ನಂತರ ದಿಲ್ಲಿಯಲ್ಲಿ ಮಾತ್ರವಲ್ಲ ದೇಶವ್ಯಾಪಿಯಾಗಿ ನಿರಂತರವಾಗಿ ನಡೆಯುತ್ತಿರುವ ಜನ ಪ್ರತಿಭಟನೆ ಕೂಡ ಈ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ ಅಂದರೆ ಅದರರ್ಥ ಕಾಂಗ್ರೆಸ್ ಮತಗಳೂ ಆಮ್ ಆದ್ಮಿಗೆ ಹೋಗಿವೆ ಎಂದು ಹೇಳಲಾಗುತ್ತದೆ. ಒಟ್ಟಾರೆ ಬಿಜೆಪಿ ವಿರೋಧಿ ಮತಗಳು ವಿಶೇಷ ವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಜನರ ಮತಗಳು ಆಮ್ ಆದ್ಮಿ ಗೆಲುವಿಗೆ ನೆರವಾಗಿವೆ.

ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ತಮ್ಮ ಸಾಧನೆಗಳನ್ನು ಮುಂದಿಟ್ಟು ಚುನಾವಣೆಗೆ ಹೋದರು. ಸರಕಾರಿ ಶಾಲೆಗಳಿಗೆ ಅವರು ನೀಡಿದ ಕಾಯಕಲ್ಪ, ಜನರ ಮನಸ್ಸನ್ನು ಗೆದ್ದಿತು. ಈ ಚುನಾವಣೆಯಲ್ಲೂ ಬಿಜೆಪಿ ಕೋಮು ರಾಜಕೀಯ ಮಾಡಲು ಹೋಗಿ ಮುಖಕ್ಕೆ ಇಕ್ಕಿಸಿಕೊಂಡಿತು.

ಕರ್ನಾಟಕದ ಮತದಾರರಿಗೆ ಹೋಲಿಸಿದರೆ ದಿಲ್ಲಿಯ ಮತದಾರರು ಪ್ರಜ್ಞಾವಂತರು.ಇಲ್ಲಿ ಸಿದ್ದರಾಮಯ್ಯ ಸರಕಾರ ಐದು ವರ್ಷಗಳ ಕಾಲ ಸುಭದ್ರ ಸರಕಾರ ನೀಡಿದರು.ಅನ್ನಭಾಗ್ಯದಂತಹ ಜನಪರ ಕಾರ್ಯಕ್ರಮ ಕೊಟ್ಟರು. ಅವರ ಮೇಲೆ ಯಾವುದೇ ಆರೋಪಗಳಿರಲಿಲ್ಲ. ಆರ್ಥಿಕ ಪರಿಸ್ಥಿತಿ ಸುಸ್ಥಿರವಾಗಿತ್ತು. ಆದರೂ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಜಾತಿ, ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಿದವು. ಕರಾವಳಿ ಜಿಲ್ಲೆಯಲ್ಲಿ ಮತೀಯ ಕಾಯಿಲೆ ವ್ಯಾಪಿಸಿತು. ಹೀಗಾಗಿ ಕೆಲಸ ಮಾಡಿಯೂ ಸಿದ್ದರಾಮಯ್ಯ ಸೋತರು. ಆದರೆ ಜನಪರ ಕೆಲಸ ಮಾಡಿದ ಅರವಿಂದ ಕೇಜ್ರಿವಾಲ್‌ರನ್ನು ದಿಲ್ಲಿಯ ಮತದಾರರು ಕೈಬಿಡಲಿಲ್ಲ. ಜಾತಿ, ಧರ್ಮ, ಕೋಮು ನೋಡಿ ಅವರು ಮತ ಹಾಕಲಿಲ್ಲ. ಅಂತಲೇ ಅವರು ಪ್ರಜ್ಞಾವಂತರು ಎಂದು ಹೇಳಿದರೆ ತಪ್ಪಿಲ್ಲ.

ದಿಲ್ಲಿ ವಿಧಾನಸಭೆ ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಬಿಜೆಪಿಯ ಸಂಸದರು, ಮುಖ್ಯಮಂತ್ರಿಗಳು ಹರಸಾಹಸ ಮಾಡಿದರೂ ಬಿಜೆಪಿ ಎರಡಂಕಿಗೆ ತಲುಪಲಿಲ್ಲವೆಂಬುದು ಗಮನಾರ್ಹ ಅಂಶವಾಗಿದೆ.

ದಿಲ್ಲಿಯ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿರುವಂತೆ ಜಾತ್ಯತೀತ ಪ್ರತಿಪಕ್ಷಗಳಿಗೂ ಒಂದು ಸಂದೇಶವನ್ನು ನೀಡಿದೆ. ಫ್ಯಾಶಿಸ್ಟ್ ಕೋಮು ವಾದ ಪೂರ್ತಿ ಸೋತಿಲ್ಲ. ಅದು ಗಾಯಗೊಂಡಿದೆ. ಈ ವಿಷಸರ್ಪದ ಅಪಾಯ ತಪ್ಪಿದ್ದಲ್ಲ. ಈಗಲಾದರೂ ಎಲ್ಲ ಸಮಾನ ಮನಸ್ಕ ಪಕ್ಷಗಳು ಒಂದು ಸಾಮಾನ್ಯ ಕಾರ್ಯಕ್ರಮದ ಆಧಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲವಾದರೆ ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂಬುದನ್ನು ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)