varthabharthi


ನಿಮ್ಮ ಅಂಕಣ

ಪ್ರಜಾಪ್ರಭುತ್ವವನ್ನು ಬಲಪಡಿಸುವ, ಭಾರತವನ್ನು ಒಂದುಗೂಡಿಸುವ ಶಾಹೀನ್‌ಬಾಗ್ ಚಳವಳಿ

ವಾರ್ತಾ ಭಾರತಿ : 12 Feb, 2020
ರಾಮ್ ಪುನಿಯಾನಿ

ವಿಶ್ವಾದ್ಯಂತ ಪ್ರಜಾಪ್ರಭುತ್ವ ವ್ಯಾಪಿಸುತ್ತಿರುವಾಗ, ಪ್ರತಿಯೊಂದು ಪ್ರಜಾಸತ್ತಾತ್ಮಕ ದೇಶದಲ್ಲಿ ಎಷ್ಟರ ಮಟ್ಟಿಗೆ ಪ್ರಜಾಪ್ರಭುತ್ವ ಇದೆ ಎಂದು ನಿಗಾ ಇಡುವ ಒಂದು ಸಂಸ್ಥೆ ಇದೆ. ಅದೇ ‘ದಿ ಇಕನಾಮಿಕ್ಸ್ ಇಂಟೆಲಿಜೆನ್ಸ್ ಯೂನಿಟ್’. ಪ್ರತಿ ದೇಶದಲ್ಲಿಯೂ ಪ್ರಜಾಪ್ರಭುತ್ವವನ್ನು ಒಂದೆಡೆ ಬಲಪಡಿಸುವ ಹಾಗೂ ಇನ್ನೊಂದೆಡೆ ಅದನ್ನು ದುರ್ಬಲಗೊಳಿಸುವ ಅಂಶಗಳು, ಶಕ್ತಿಗಳು ಇರುತ್ತವೆ. ಭಾರತದಲ್ಲಿ ಆಧುನಿಕ ಶಿಕ್ಷಣ, ಸಾರಿಗೆ ಹಾಗೂ ಸಂಪರ್ಕ ಜಾಲಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಬುನಾದಿ ಹಾಕಿದವು ಮತ್ತು ಈ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಗಾಂಧೀಜಿ 1920ರಲ್ಲಿ ನಡೆಸಿದ ಅಸಹಕಾರ ಚಳವಳಿ ಪ್ರಧಾನ ಪಾತ್ರ ವಹಿಸಿತು. ಭಾರತದ ಸ್ವಾತಂತ್ರಕ್ಕಾಗಿ ನಡೆದ ಚಳವಳಿ ವಿಶ್ವದ ಇತಿಹಾಸದಲ್ಲೇ ನಡೆದ ಅತ್ಯಂತ ಬೃಹತ್ತಾದ ಜನರ ಚಳವಳಿಯಾಗಿತ್ತು.

1950ರ ಜನವರಿ 26ರಂದು ನಮ್ಮ ದೇಶ ತನಗೆ ತಾನೇ ಕೊಟ್ಟುಕೊಂಡ ಸಂವಿಧಾನದಲ್ಲಿ ನಮ್ಮ ಪ್ರಜಾಪ್ರಭುತ್ವ ಹೇಗಿರಬೇಕೆಂದು ವಿವರಿಸಲಾಗಿದೆ. ಈ ಸಂವಿಧಾನ ಹಾಗೂ ನೆಹರೂರವರು ಅಳವಡಿಸಿಕೊಂಡ ನೀತಿಗಳಿಂದಾಗಿ ಪ್ರಜಾಪ್ರಭುತ್ವೀಕರಣದ ಪ್ರಕ್ರಿಯೆ ಮತ್ತಷ್ಟು ಬಲಗೊಂಡಿತು. ಆದರೆ 1990ರ ದಶಕದ ಬಳಿಕ, ರಾಮಮಂದಿರ ಚಳವಳಿಯ ಆನಂತರ ಈ ಪ್ರಕ್ರಿಯೆ ವಿರೋಧವನ್ನೆದುರಿಸುತ್ತಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ಇದು ಇನ್ನಷ್ಟು ದುರ್ಬಲಗೊಳ್ಳುತ್ತಿದೆ. ಸರಕಾರವು ನಾಗರಿಕ ಹಕ್ಕುಗಳು, ಬಹುತ್ವ ಹಾಗೂ ಜನರು ಭಾಗಿಯಾಗುವ ರಾಜಕೀಯ ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆ. ಪರಿಣಾಮವಾಗಿ ಪ್ರಜಾಪ್ರಭುತ್ವಕ್ಕೆ ಗಂಭೀರ ಸ್ವರೂಪದ ಹಾನಿಯಾಗುತ್ತಿದೆ. ಇದರಿಂದಾಗಿ ಭಾರತ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಹತ್ತು ಸ್ಥಾನಗಳಿಂದ ಕೆಳಗಿಳಿದು ಈಗ 51ನೇ ಸ್ಥಾನದಲ್ಲಿದೆ. ಅದು ಈಗ 7.23 ಅಂಕಗಳಿಂದ 6.90 ಅಂಕಕ್ಕೆ ಇಳಿದಿದೆ.

ಶಾಹೀನ್ ಬಾಗ್ ಪ್ರತಿಭಟನೆಯೊಂದಿಗೆ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳುತ್ತಿರುವಾಗಲೇ ಅಂಕಗಳಲ್ಲಿ ಈ ಇಳಿಕೆ ಕಂಡು ಬಂದಿರುವುದು ಒಂದು ವ್ಯಂಗ್ಯವಾಗಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ಸರಕಾರವೊಂದು ಕಾಯ್ದೆಯಾಗಿ ಮಾಡಿದ ಹಿನ್ನೆಲೆಯಲ್ಲಿ ಆರಂಭವಾದ ಈ ಪ್ರಶಾಂತವಾದ ಶಾಹೀನ್‌ಬಾಗ್ ಚಳವಳಿ 2019ರ ಡಿಸೆಂಬರ್ 15ರಿಂದ ನಡೆಯುತ್ತಲೇ ಇದೆ. ಈ ಪ್ರತಿಭಟನೆಯಲ್ಲಿ ಮುಸ್ಲಿಮ್ ಮಹಿಳೆಯರು ನೇತೃತ್ವ ವಹಿಸಿರುವುದು ಗಮನಿಸ ಬೇಕಾದ ಅಂಶ. ಇಷ್ಟರವರೆಗೆ ನಡೆದ ಪ್ರತಿಭಟನೆಗಳಲ್ಲಿ ಮುಸ್ಲಿಮ್ ಪುರುಷರು ನಾಯಕತ್ವ ವಹಿಸಿದ್ದರು. ಉದಾಹರಣೆಗೆ ಶಾಬಾನು ತೀರ್ಪು ಹಾಗೂ ತ್ರಿವಳಿ ತಲಾಖ್ ರದ್ದತಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು. ಈ ಬಾರಿ ‘ಪ್ರತಿಭಟನಾಕಾರರನ್ನು ಅವರು ತೊಟ್ಟಿರುವ ಉಡುಪುಗಳಿಂದ ಗುರುತಿಸಬಹುದು’ ಎಂದು ನರೇಂದ್ರ ಮೋದಿ ಅವರು ಹೇಳಿದರಾದರೂ ಉಡುಪುಗಳಿಂದ ಗುರುತಿಸಲಾಗದಷ್ಟು ಮಂದಿ ಉಡುಪುಗಳಿಂದ ಗುರುತಿಸಲ್ಪಡುವವರಿಗಿಂತ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಈ ಪ್ರತಿಭಟನೆಗಳು ಭಾರತದ ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ನಡೆದ ಪ್ರತಿಭಟನೆಗಳೇ ಹೊರತು ಇಸ್ಲಾಮ್ ಅಥವಾ ಇತರ ಯಾವುದೇ ಧರ್ಮವನ್ನು ಉಳಿಸುವುದಕ್ಕಾಗಿ ನಡೆದ ಪ್ರತಿಭಟನೆಗಳಲ್ಲ. ಪ್ರತಿಭಟನೆಗಳಲ್ಲಿ ಮೊಳಗಿದ ಘೋಷಣೆಗಳು ಪ್ರಜಾಪ್ರಭುತ್ವದ ಹಾಗೂ ಭಾರತೀಯ ಸಂವಿಧಾನದ ರಕ್ಷಣೆ ಎಂಬ ವಿಷಯದ ಸುತ್ತ ಮೊಳಗಿದ ಘೋಷಣೆಗಳು. ‘ಅಲ್ಲಾಹು ಅಕ್ಬರ್’ ಅಥವಾ ‘ನಾರಾ-ಇ-ತಕ್‌ಬೀರ್’ಗೆ ಬದಲಾಗಿ ಭಾರತೀಯ ಸಂವಿಧಾನದ ಪೀಠಿಕೆ (ಪ್ರಿಯಾಂಬಲ್) ಇವುಗಳ ಧ್ಯೇಯ ವಾಕ್ಯವಾಗಿತ್ತು. ಪ್ರತಿಭಟನಾಕಾರರ ಮುಖ್ಯ ಹಾಡುಗಳಲ್ಲಿ ಫೈಝ್ ಅಹ್ಮದ್ ಫೈಝ್ ಅವರ ‘‘ಹಮ್ ದೇಖೇಂಗೇ’’ ಅನುರಣಿಸಿತು. ಈ ಹಾಡು ಧರ್ಮದ ಹೆಸರಿನಲ್ಲಿ ಪಾಕಿಸ್ತಾನದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಝಿಯಾ ಉಲ್ ಹಕ್ ಅವರ ಪ್ರಯತ್ನಗಳ ವಿರುದ್ಧ ನಡೆದ ಒಂದು ಪ್ರತಿಭಟನೆಯಾಗಿತ್ತು. ಇನ್ನೊಂದು ಪ್ರತಿಭಟನಾ ಹಾಡು ವರುಣ್ ಗ್ರೋವರ್ ಅವರು ‘ತಾನಾಶಾಹಿ ಆಯೇಂಗೆ..... ಹಮ್ ಕಾಗಜ್ ನಹೀ ದಿಖಾಯೇಂಗೆ’’ ಇದು ಸಿಎಎ- ಎನ್‌ಆರ್‌ಸಿ ವಿರುದ್ಧ ನಾಗರಿಕ ಅಸಹಕಾರ ಚಳವಳಿಗೆ ಕರೆ ನೀಡುವ ಒಂದು ಹಾಡು. ಮುಸ್ಲಿಮ್ ಮಹಿಳೆಯರ ಮೂಲ ಸಮಸ್ಯೆ ತ್ರಿವಳಿ ತಲಾಖ್ ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಮುಸ್ಲಿಮ್ ಮಹಿಳೆಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಮುಸ್ಲಿಮ್ ಸಮುದಾಯಕ್ಕೆ ಎದುರಾಗಿರುವ ಬೆದರಿಕೆಯೇ ಮೂಲ ಸಮಸ್ಯೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಯಾವುದೇ ಕೆಲವು ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ಮುಸ್ಲಿಮರ ನಾಗರಿಕತ್ವಕ್ಕೆ ಬೆದರಿಕೆ ಎದುರಾಗುವುದಾದಲ್ಲಿ ನಾಳೆ ತಮಗೂ ಈ ಬೆದರಿಕೆ ಎದುರಾಗಬಹುದೆಂದು ಎಲ್ಲ ಸಮುದಾಯಗಳ ಬಡತನ ರೇಖೆಗಿಂತ ಕೆಳಗಿರುವವರು, ಭೂರಹಿತರು ಹಾಗೂ ಆಶ್ರಯವಿಲ್ಲದವರು ಮನಗಾಣಲಾರಂಭಿಸಿದ್ದಾರೆ.

ಮೋದಿ ಸರಕಾರದ ನೀತಿಗಳು ಈ ಪ್ರತಿಭಟನೆಗಳಿಗೆ ಕಾರಣವಾಗಿವೆ. ಸಿಎಎ-ಎನ್‌ಆರ್‌ಸಿ ಪ್ರತಿಭಟನೆಗಳನ್ನು ತೀವ್ರಗೊಳಿಸಿದೆ. ಶಾಹೀನ್‌ಬಾಗ್ ಚಳವಳಿ ಕೇವಲ ಒಂದು ಪ್ರತಿಭಟನೆಯಲ್ಲ. ಅದು ಸರಕಾರದ ವಿಭಾಜಕ ನೀತಿಗಳ ವಿರುದ್ಧ ಕಂಡು ಬಂದಿರುವ ಪ್ರತಿರೋಧದ ಒಂದು ಸಂಕೇತ. ಶಾಹೀನ್‌ಬಾಗ್ ಸಮಾಜವನ್ನು ಈ ಹಿಂದೆ ಎಂದೂ ಕಂಡರಿಯದ ರೀತಿಯಲ್ಲಿ ಒಂದುಗೂಡಿಸುತ್ತಿದೆ. ಭಾರತೀಯ ಸಂವಿಧಾನ ಹಾಗೂ ನಮಗೆ ಪ್ರಿಯವಾದ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಶಾಹೀನ್‌ಬಾಗ್ ಚಳವಳಿಯನ್ನು ಬಲಪಡಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)