varthabharthi


ರಾಷ್ಟ್ರೀಯ

ಮಾಜಿ ಸೇನಾಧಿಕಾರಿಗಳ ಆಗ್ರಹ

"ದೇಶ್ ಕೆ ಗದ್ದಾರೋಂ ಕೋ ಹೇಳಿಕೆ ನೀಡಿದ ಅನುರಾಗ್ ಠಾಕೂರ್ ಪ್ರಾಂತೀಯ ಸೇನೆಗೆ ರಾಜೀನಾಮೆ ನೀಡಲಿ"

ವಾರ್ತಾ ಭಾರತಿ : 13 Feb, 2020

ಹೊಸದಿಲ್ಲಿ: ದಿಲ್ಲಿಯ ರಿತಾಲ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ `ದೇಶ್ ಕೆ ಗದ್ದಾರೋಂ ಕೋ' ವಿವಾದಾತ್ಮಕ ಘೋಷಣೆ ಕೂಗಿ ವಿವಾದಕ್ಕೀಡಾಗಿದ್ದ ಕೇಂದ್ರ ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಅನುರಾಗ್ ಠಾಕುರ್ ಅವರು ಪ್ರಾಂತೀಯ ಸೇನೆಗೆ ರಾಜೀನಾಮೆ ನೀಡಬೇಕೆಂದು ನಿವೃತ್ತ ಸೇನಾಧಿಕಾರಿಗಳು ಆಗ್ರಹಿಸಿದ್ದಾರೆ.

ಜುಲೈ 2016ರಲ್ಲಿ ಪ್ರಾಂತೀಯ ಸೇನೆ ಸೇರಿದ್ದ ಠಾಕುರ್ ಅದರ ಭಾಗವಾಗುವ ಅರ್ಹತೆ ಹೊಂದಿಲ್ಲ ಎಂದು ನಿವೃತ್ತ ಸೇನಾಧಿಕಾರಿಗಳು ಹೇಳಿದ್ದಾರೆ.

"ಕ್ಯಾಪ್ಟನ್ ಅನುರಾಗ್ ಠಾಕುರ್ ಅವರು ದಿಲ್ಲಿ ಪ್ರಚಾರ ರ್ಯಾಲಿಯ ವೇಳೆ ನೀಡಿದ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಲು ಸೇನಾ ಕಾಯಿದೆಯಲ್ಲಿ ಏನಾದರೂ ನಿಯಮವಿದೆಯೇ?'' ಎಂದು ವೆಸ್ಟರ್ನ್ ಕಮಾಂಡ್‍ ನ ಮಾಜಿ ಮುಖ್ಯಸ್ಥ ನಿವೃತ್ತ ಲೆ. ಜನರಲ್ ಸುರೀಂದರ್ ಸಿಂಗ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಠಾಕೂರ್ ಅವರು ಸಕ್ರಿಯ ರಾಜಕಾರಣಿಯಾಗಿರುವುದರಿಂದ ಅವರು ಪ್ರಾಂತೀಯ ಸೇನೆಗೆ ಈಗಲೇ ರಾಜೀನಾಮೆ ನೀಡಬೇಕಿತ್ತು ಎಂದು ಗಡಿ ಭದ್ರತಾ ಪಡೆಯ ಮಾಜಿ ಐಜಿ ಬಿ ಎನ್ ಶರ್ಮ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಠಾಕುರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಹಲವಾರು ಮಾಜಿ ಸೇನಾಧಿಕಾರಿಗಳೂ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)