varthabharthi


ಕರಾವಳಿ

ಉಡುಪಿ: ಚಿನ್ನಾಭರಣ, ಹಣಕ್ಕಾಗಿ ವೃದ್ಧೆಯ ಕೊಲೆ

ವಾರ್ತಾ ಭಾರತಿ : 13 Feb, 2020

ಉಡುಪಿ, ಫೆ.13: ಒಂಟಿಯಾಗಿ ವಾಸವಾಗಿದ್ದ ವೃದ್ಧೆಯೊಬ್ಬರನ್ನು ಅವರಲ್ಲಿದ್ದ ಚಿನ್ನಾಭರಣ ಹಾಗೂ ಹಣದಾಸೆಗಾಗಿ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಗುರುವಾರ ನಿಟ್ಟೂರಿನಲ್ಲಿ ಬೆಳಕಿಗೆ ಬಂದಿದೆ.

ನಿಟ್ಟೂರು ವಿಷ್ಣುಮೂರ್ತಿ ನಗರದ ಮಾಲತಿ ಕಾಮತ್ (68) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು ಫೆ.12ರ ರಾತ್ರಿ 8ಗಂಟೆಯಿಂದ ಗುರುವಾರ ಬೆಳಗ್ಗೆ 7:30ರ ನಡುವಿನ ಅವಧಿಯಲ್ಲಿ ಅವರನ್ನು ಕೊಲೆ ಮಾಡಿ ಚಿನ್ನಾಭರು ಹಾಗೂ ನಗದನ್ನು ದೋಚಿದ್ದಾರೆ.

ರಾತ್ರಿ ಮಹಿಳೆ ಮಲಗಿರುವ ಸಂದರ್ಭ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಈ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ  ಕಿವಿ ಓಲೆ, ಮೈಮೇಲಿನ ಹಾಗೂ ಕಪಾಟಿನಲ್ಲಿದ್ದ ಚಿನ್ನಾಭರಣ ಸಹಿತ 60,000 ರೂ. ನಗದನ್ನು ದೋಚಿದ್ದಾರೆ ಎಂದು ದೂರು ನೀಡಿರುವ ಕಾಸರಗೋಡಿನ ಕುಂಬ್ಳೆಯಲ್ಲಿ ವಾಸವಾಗಿರುವ ಮಾಲತಿ ಅವರ ಪುತ್ರಿ ಶಾಂತಿ ಯಾನೆ ದಿವ್ಯ ನಾಯಕ್ ತಿಳಿಸಿದರು. ಚಿನ್ನಾಭರಣಗಳ ನಿಖರವಾದ ತೂಕ ಹಾಗೂ ಮೌಲ್ಯ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

ಒಂಟಿಯಾಗಿ ವಾಸ:  ಮಾಲತಿ ಕಾಮತ್ ಅವರ ಪತಿ ಈಗಾಗಲೇ ಮೃತಪಟ್ಟಿದ್ದಾರೆ. ಅವರಿಗೆ ಮೂರು ಪುತ್ರಿಯರಿದ್ದು, ಅವರೆಲ್ಲರಿಗೂ ಮದುವೆ ಯಾಗಿ ದೂರದ ಊರುಗಳಲ್ಲಿದ್ದಾರೆ. ಹೀಗಾಗಿ ಮಾಲತಿ ಒಂಟಿಯಾಗಿ ಮನೆಯಲ್ಲಿ ನೆಲೆಸಿದ್ದರು. ಕೆಲದಿನಗಳ ಹಿಂದೆ ಮನೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದ್ದು, ಇದರಿಂದ ಮನೆಯ ಮೇಲ್ಛಾವಣಿಯನ್ನು ತೆಗೆಯಲಾಗಿತ್ತು. ಇದರ ಲಾಭ ಪಡೆದುಕೊಂಡ ದುಷ್ಕರ್ಮಿಗಳು ರಾತ್ರಿ ವೇಳೆ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)