varthabharthi


ಅಂತಾರಾಷ್ಟ್ರೀಯ

ಭಾರತದಲ್ಲಿ ಮಾನವಹಕ್ಕುಗಳ ಪರಿಸ್ಥಿತಿಯ ಪರಿಶೀಲನೆಗೆ 4 ಅಮೆರಿಕ ಸೆನೆಟರ್‌ಗಳ ಆಗ್ರಹ

ವಾರ್ತಾ ಭಾರತಿ : 13 Feb, 2020

ವಾಶಿಂಗ್ಟನ್,ಫೆ.13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24-25ರಂದು ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳಲಿರುವಂತೆಯೇ, ಕಾಶ್ಮೀರದಲ್ಲಿ ಪ್ರಸಕ್ತ ಪರಿಸ್ಥಿತಿ ಹಾಗೂ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪರಾಮರ್ಶೆ ನಡೆಸಬೇಕೆಂದು ನಾಲ್ವರು ಅಮೆರಿಕನ್ ಸೆನೆಟರ್‌ ಆಗ್ರಹಿಸಿದ್ದಾರೆ. ತಮ್ಮನ್ನು ಭಾರತದ ಸುದೀರ್ಘ ಸ್ನೇಹಿತರೆಂದು ಬಣ್ಣಿಸಿಕೊಂಡಿರುವ ಈ ಸೆನೆಟರ್‌ಗಳು ಕಾಶ್ಮೀರದಲ್ಲಿ ಈಗಲೂ ನೂರಾರು ಕಾಶ್ಮೀರಿಗಳನ್ನು ಪ್ರತಿಬಂಧಾತ್ಮಕವಾದ ಬಂಧನದಲ್ಲಿರಿಸಲಾಗಿದೆಯೆಂದು ಆರೋಪಿಸಿದ್ದಾರೆ.

ಕಾಶ್ಮೀರದಲ್ಲಿ ಭಾರತವು ಅಂತರ್ಜಾಲ ಸಂಪರ್ಕವನ್ನು ಸ್ಥಗಿತಗೊಳಿಸಿದೆ, ವೈದ್ಯಕೀಯ ಸೇವೆ, ಉದ್ಯಮ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆಯುಂಟು ಮಾಡುತ್ತಿದೆಯೆಂದು ಈ ನಾಲ್ವರು ಸೆನೆಟರ್‌ಗಳ ಗುಂಪು, ಫೆೆಬ್ರವರಿ 12ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

 ಮೋದಿ ಸರಕಾರವು ಏಕಪಕ್ಷೀಯವಾಗಿ ಜಮ್ಮುಕಾಶ್ಮೀರದ ಸ್ವಾಯಂತ್ತೆಯನ್ನು ರದ್ದುಪಡಿಸಿ ಆರು ತಿಂಗಳಾದ ಬಳಿಕವೂ ಸರಕಾರವು ಕಾಶ್ಮೀರ ಪ್ರದೇಶದಲ್ಲಿ ಬಹುತೇಕವಾಗಿ ಇಂಟರ್‌ನೆಟ್ ಸಂರ್ಕವನ್ನು ಸ್ಥಗಿತಗೊಳಿಸಿದೆಯೆಂದು ಅದು ಆರೋಪಿಸಿದೆ.

  ಇದರ ಜೊತೆಗೆ ಭಾರತ ಸರಕಾರವು ಕೆಲವು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ  ಹಾಗೂ ದೇಶದ ಜಾತ್ಯತೀತ ಸ್ವರೂಪಕ್ಕೆ ಬೆದರಿಕೆಯೊಡ್ಡುವಂತ ಆತಂಕಕಾರಿ ಹೆಜ್ಜೆಗಳನ್ನು ಇಟ್ಟಿದೆ. ವಿವಾದಾತ್ಮಕವಾದ ಪೌರತ್ವತಿದ್ದುಪಡಿಯ ಕಾಯ್ದೆಯ ಅಂಗೀಕಾರ ಕೂಡಾ ಅವುಗಳಲ್ಲೊಂದಾಗಿದೆಯೆಂದು ಸೆನೆಟರ್‌ಗಳು ಪತ್ರದಲ್ಲಿ ತಿಳಿಸಿದ್ದಾರೆ.

 ಕಾಶ್ಮೀರದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ವ್ಯಕ್ತಿಗಳ ಬಂಧನ ಹಾಗೂ ಅವರನ್ನು ನೋಡಿಕೊಳ್ಳಲಾಗುತ್ತಿರುವ ರೀತಿ, ಜಮ್ಮುಕಾಶ್ಮೀರದಲ್ಲಿ ಸಂವಹನ ಮಾಧ್ಯಮಗಳ ಮೇಲೆ ವಿಧಿಸಿರುವ ನಿರ್ಬಂಧ, ಜಮ್ಮುಕಾಶ್ಮೀರದಲ್ಲಿನ ಧಾರ್ಮಿಕ ಸ್ವಾತಂತ್ರದ ಮೇಲೆ ಹೇರಲಾಗಿರುವ ನಿರ್ಬಂಧಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕೆಂದು ಅಮೆರಿಕ ವಿದೇಶಾಂಗ ಇಲಾಖೆಯನ್ನು ಸೆೆನೆಟರ್‌ಗಳು ಪತ್ರದಲ್ಲಿ ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)