varthabharthi


ವಿಶೇಷ-ವರದಿಗಳು

ಸಾವರ್ಕರ್ ಮತ್ತು ಬಿಜೆಪಿ

ವಾರ್ತಾ ಭಾರತಿ : 14 Feb, 2020
ಎ. ಜಿ. ನೂರಾನಿ

ಭಾಗ 1

1980ರಲ್ಲಿ ಆರೆಸ್ಸೆಸ್‌ನ ದ್ವಿಸದಸ್ಯತ್ವದ ಪ್ರಶ್ನೆಯ ನೆಲೆಯಲ್ಲಿ ಜನಸಂಘ ಜನತಾ ಪಕ್ಷದಿಂದ ಬೇರೆಯಾದಾಗ ಅದು ಎರಡು ಹೆಸರುಗಳನ್ನು ಅಳವಡಿಸಿಕೊಂಡಿತು. ಆ ಎರಡು ಹೆಸರುಗಳು ಸಾವರ್ಕರ್ ಮತ್ತು ಅವರ ಹಿಂದುತ್ವಕ್ಕೆ ನೇರವಾಗಿ ವಿರುದ್ಧವಾದ ಹೆಸರುಗಳು. ಒಂದು ನಿಜವನ್ನು ಮರೆಸುವ ಹೆಸರು: ಭಾರತೀಯ ಜನತಾ ಪಕ್ಷ; ಅದು ಜಯಪ್ರಕಾಶ್ ನಾರಾಯಣ್ ಅವರ ಸೃಷ್ಟಿಯಾಗಿದ್ದ ನಿಜವಾದ ಜನತಾ ಪಕ್ಷ ಎಂಬ ರೀತಿಯಲ್ಲಿ. ಇನ್ನೊಂದು ಹೆಸರು: ತನ್ನ ಸಿದ್ಧಾಂತವಾಗಿ ‘ಗಾಂಧಿಯನ್ ಸೋಷಿಯಲಿಸಂ’. ಈ ಎರಡೂ ಹೆಸರುಗಳಲ್ಲಿ ಸಾವರ್ಕರ್ ಅಥವಾ ಅವರ ಹಿಂದುತ್ವದ ಬಗ್ಗೆ ಒಂದೇ ಒಂದು ಶಬ್ದ ಇರಲಿಲ್ಲ. ಬಿಜೆಪಿ ಹಿಂದುತ್ವವನ್ನು ಅಳವಡಿಸಿಕೊಂಡಿದ್ದು, ಆಲಂಗಿಸಿದ್ದು 1989 ಮತ್ತು 90ರ ಸುಮಾರಿನಲ್ಲಿ.

ಎ. ಜಿ. ನೂರಾನಿ ಸಾವರ್ಕರ್ ಅವರ 83 ವರ್ಷಗಳ ಜೀವಿತದಲ್ಲಿ ಅವರನ್ನು ಒಬ್ಬ ಹೀರೋ ಎಂದು ಹಾಡಿ ಹೊಗಳಲು ಬೇಕಾದ ದಾಖಲೆ ಯಾವುದಿದೆ? ಬ್ರಿಟಿಷ್ ಸರಕಾರಕ್ಕೆ ಬರೆದುಕೊಟ್ಟ ಆರು ಕ್ಷಮಾಯಾಚನೆ ಪತ್ರಗಳು. ಇದು ಯಾವುದೇ ದೇಶದ ಸಮಗ್ರ ಸ್ವಾತಂತ್ರ್ಯ ಚಳವಳಿಯಲ್ಲಿ ಈ ಹಿಂದೆ ಎಂದೂ ಕಂಡು ಕೇಳರಿಯದ ದಾಖಲೆ. ಇದಕ್ಕೆ 1909ರಿಂದ 1948ರ ನಡುವೆ ಅವರು ನಡೆಸಿದ್ದ ನಾಲ್ಕು ಕೊಲೆಯ ಒಳಸಂಚುಗಳನ್ನು ಸೇರಿಸಿ. ಕೊನೆಯ ಕೊಲೆಯ ಸಂಚು ಗಾಂಧೀಜಿಯವರ ಕೊಲೆಯಲ್ಲಿ ಕೊನೆಗೊಂಡಿತು.

ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಸಾವರ್ಕರ್ ಅವರಿಗೆ ತನ್ನ ನಿಷ್ಠೆಯನ್ನು ಘೋಷಿಸುತ್ತಾ ಬಂದಿದೆ. ಅವರು 1923ರಲ್ಲಿ ಬರೆದ ಹಿಂದುತ್ವ ಪ್ರಬಂಧದಲ್ಲಿ ಪ್ರತಿಪಾದಿಸಿರುವ ಸಿದ್ಧಾಂತಕ್ಕೆ ತನ್ನ ನಿಷ್ಠೆಯನ್ನು ಪ್ರಕಟಿಸುತ್ತಾ ಬಂದಿದೆ. ‘ಹಿಂದೂಇಸಂ ಮತ್ತು ಹಿಂದುತ್ವ’ ಒಂದೇ ಅಲ್ಲ, ಅವು ಬೇರೆ ಬೇರೆ ಎಂಬುದನ್ನು ಸೂಚಿಸಲು ಅವರು ಟಂಕಿಸಿದ ಶಬ್ದ ‘ಹಿಂದುತ್ವ’. ಈ ಹೀರೋ ಮತ್ತು ಇವರ ಸಿದ್ಧಾಂತದ ಮೇಲೆ (1925ರಲ್ಲಿ ಸ್ಥಾಪಿತವಾದ) ಆರೆಸ್ಸೆಸ್‌ಗೆ, (1951ರಲ್ಲಿ ಸ್ಥಾಪಿತವಾದ) ಜನಸಂಘಕ್ಕೆ ಮತ್ತು (1980ರಲ್ಲಿ ಸ್ಥಾಪಿತವಾದ) ಬಿಜೆಪಿಗೆ ಯಾವಾಗ ಪ್ರೀತಿ ಉಕ್ಕಲು ಆರಂಭವಾಯಿತು ಎಂದು ನಾವು ಕೇಳಲು ಇದು ಸಕಾಲ.

ಖಂಡಿತವಾಗಿಯೂ ಈ ಸಂಘಟನೆಗಳು ಜನಿಸಿದಂದಿನಿಂದ ಅಲ್ಲ. ಇವುಗಳಿಗೆ ಸಾವರ್ಕರ್ ಅವರ ಜೊತೆಗಿನ ನಂಟು ತೀರಾ ಇತ್ತೀಚಿನದು ಮತ್ತು ಇದು ಅವಕಾಶವಾದಿಯಾದ ನಂಟು. 1980ರಲ್ಲಿ ಆರೆಸ್ಸೆಸ್‌ನ ದ್ವಿಸದಸ್ಯತ್ವದ ಪ್ರಶ್ನೆಯ ನೆಲೆಯಲ್ಲಿ ಜನಸಂಘ ಜನತಾ ಪಕ್ಷದಿಂದ ಬೇರೆಯಾದಾಗ ಅದು ಎರಡು ಹೆಸರುಗಳನ್ನು ಅಳವಡಿಸಿಕೊಂಡಿತು. ಆ ಎರಡು ಹೆಸರುಗಳು ಸಾವರ್ಕರ್ ಮತ್ತು ಅವರ ಹಿಂದುತ್ವಕ್ಕೆ ನೇರವಾಗಿ ವಿರುದ್ಧವಾದ ಹೆಸರುಗಳು. ಒಂದು ನಿಜವನ್ನು ಮರೆಸುವ ಹೆಸರು: ಭಾರತೀಯ ಜನತಾ ಪಕ್ಷ; ಅದು ಜಯಪ್ರಕಾಶ್ ನಾರಾಯಣ್ ಅವರ ಸೃಷ್ಟಿಯಾಗಿದ್ದ ನಿಜವಾದ ಜನತಾ ಪಕ್ಷ ಎಂಬ ರೀತಿಯಲ್ಲಿ. ಇನ್ನೊಂದು ಹೆಸರು: ತನ್ನ ಸಿದ್ಧಾಂತವಾಗಿ ‘ಗಾಂಧಿಯನ್ ಸೋಷಿಯಲಿಸಂ’. ಈ ಎರಡೂ ಹೆಸರುಗಳಲ್ಲಿ ಸಾವರ್ಕರ್ ಅಥವಾ ಅವರ ಹಿಂದುತ್ವದ ಬಗ್ಗೆ ಒಂದೇ ಒಂದು ಶಬ್ದ ಇರಲಿಲ್ಲ. ಬಿಜೆಪಿ ಹಿಂದುತ್ವವನ್ನು ಅಳವಡಿಸಿಕೊಂಡಿದ್ದು, ಆಲಂಗಿಸಿದ್ದು 1989 ಮತ್ತು 90ರ ಸುಮಾರಿನಲ್ಲಿ. ಆಗಲೇ ಅದು ಬಾಬರಿ ಮಸೀದಿಯನ್ನು ಪಡೆಯುವುದನ್ನು ತನ್ನ ಗುರಿಯಾಗಿಸಿ 1989ರ ಜೂನ್ 11ರ ಪಾಲಂಬೂರ್ ನಿಲುವಳಿಯಲ್ಲಿ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರಕಟಿಸಿತು. 1985ರ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ‘ಗಾಂಧಿಯನ್ ಸೋಷಿಯಲಿಸಂ’ ಅನ್ನು ತ್ಯಜಿಸಿತು. ರಾಷ್ಟ್ರೀಯ ಕಾರ್ಯಕಾರಿ ತನ್ನ ಬೋಗಸ್ ‘ಬುದ್ಧಿಜೀವಿ’ ದೀನದಯಾಳ್ ಉಪಾಧ್ಯಾಯ ಅವರ ‘ಇಂಟಗ್ರಲ್ ಹೈಮನಿಸಂ’ ಎಂಬ ಶಬ್ದಗಳೊಂದಿಗೆ ಅದನ್ನು ಮರಳಿ ಬಳಕೆಗೆ ತಂದಿತು. ಬಳಿಕ ಇದನ್ನು ಕೂಡ ಕೈಬಿಟ್ಟು ‘ಹಿಂದುತ್ವ’ ಎಂಬ ಪದವನ್ನು ಬಳಸಲಾರಂಭಿಸಿತು. ಬಿಜೆಪಿ ಎನ್ನುವುದು ಒಂದು ರಾಜಕೀಯ ಊಸರವಳ್ಳಿ.

 1990ರ ಸೆಪ್ಟಂಬರ್ 25ರಂದು ಎಲ್.ಕೆ. ಅಡ್ವಾಣಿ ತನ್ನ ‘ರಥಯಾತ್ರೆ’ ಆರಂಭಿಸಿದರು. ಆದರೆ ಅವರು ತನ್ನ ನಿಜವಾದ ಬಣ್ಣವನ್ನು, ನಿಲುವನ್ನು ವ್ಯಕ್ತಪಡಿಸಿದ್ದು ಅಂಡಮಾನ್‌ನ ಪೋರ್ಟ್ ಬ್ಲೇರ್‌ನಲ್ಲಿ: ‘‘ವೀರ ಸಾವರ್ಕರ್ ಪ್ರತಿಪಾದಿಸಿದ್ದ ಹಿಂದುತ್ವದ ಬಗ್ಗೆ ನನಗೇ ನಾಚಿಕೆ ಪಡಲು ಕಾರಣವಿಲ್ಲ ಅದು (ಹಿಂದುತ್ವ) ದೇಶದ ಪರಂಪರೆಯಲ್ಲಿ ತನ್ನ ಬೇರುಗಳನ್ನು ಹೊಂದಿರುವ, ಎಲ್ಲವನ್ನೂ ಒಳಗೊಳ್ಳುವ ಒಂದು ಸಿದ್ಧಾಂತ.’’ ಹಾಗಾದರೆ ಆ ಸಿದ್ಧಾಂತವನ್ನು ಕಂಡುಹಿಡಿಯಲು ಅಡ್ವಾಣಿಯವರಿಗೆ ಯಾಕಾಗಿ ಅಷ್ಟೊಂದು ಸಮಯ ಬೇಕಾಯಿತು?

 ಸ್ವಂತ ಸ್ವಾತಂತ್ರ್ಯ ಚಳವಳಿಯಲ್ಲಿದ್ದ ಯಾರೂ ಕೂಡ, ಚಳವಳಿಯಲ್ಲಿ ಭಗತ್ ಸಿಂಗ್ ಅವರ ಪಾತ್ರವನ್ನು ಉಲ್ಲೇಖಿಸಿದಂತೆ, ಸಾವರ್ಕರ್ ಅವರ ಪಾತ್ರವನ್ನು ಉಲ್ಲೇಖಿಸಲೇ ಇಲ್ಲ ಎಂಬುದು ಗಮನಾರ್ಹ. 1998ರ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಮಾತ್ರ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು: ‘‘ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆಯೇ ಹಿಂದುತ್ವದ ತಿರುಳು’’ ಮತ್ತು ‘‘ಶ್ರೀರಾಮ ಭಾರತದ ಪ್ರಜ್ಞೆಯ ಮೂಲದಲ್ಲಿದ್ದಾನೆ’’ ಈ ಎರಡನ್ನೂ ಒಂದಕ್ಕೊಂದು ಜೋಡಿಸಲಾಯಿತು.

ಸಾವರ್ಕರ್ ಓರ್ವ ಭಾರತೀಯ ರಾಷ್ಟ್ರೀಯವಾದಿಯಾಗಿ ತನ್ನ ಸಾರ್ವಜನಿಕ ಜೀವನವನ್ನು ಆರಂಭಿಸಿದವರು. ಅಂತಿಮವಾಗಿ ಓರ್ವ ಹಿಂದೂ ರಾಷ್ಟ್ರೀಯವಾದಿಯಾದರು. ಅವರ ಮೊದಲ ಪುಸ್ತಕ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857’ ನಿಜವಾಗಿಯೂ ಪ್ರಶಂಸಾರ್ಹ ಕೃತಿ. ಕೋಮು ದ್ವೇಷದಿಂದ ಮುಕ್ತವಾದ ಅದು ಓರ್ವ ನಿಜವಾದ ರಾಷ್ಟ್ರೀಯ ವಾದಿಯ ಕೃತಿ. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ: ‘‘ಮೌಲ್ವಿಗಳು ಬೋಧಿಸಿದ, ವಿದ್ವಾಂಸರಾದ ಬ್ರಾಹ್ಮಣರು ಆಶೀರ್ವದಿಸಿದ ದಿಲ್ಲಿಯ ಮಸೀದಿಗಳಿಂದ ಮತ್ತು ಬನಾರಸ್‌ನ ದೇವಾಲಯಗಳಿಂದ ಮೊಳಗಿದ ಆ ಪ್ರಾರ್ಥನೆಗಳು, ತತ್ವಗಳು ಯಾವುವು? ಆ ಶ್ರೇಷ್ಠ ತತ್ವಗಳೇ ಸ್ವಧರ್ಮ ಮತ್ತು ಸ್ವರಾಜ್...’’

ಕೊನೆಯ ಮೊಗಲ್ ಚಕ್ರವರ್ತಿ ಬಹದ್ದೂರ್ ಶಾ ಝಫರ್ ಮತ್ತು ಮಹಾನ್ ದೇಶಭಕ್ತ ಮೌಲ್ವಿ ಅಹಮದ್ ಶಾ ಬಗ್ಗೆ ಸಾವರ್ಕರ್ ಬಹಳ ಹೊಗಳಿಕೆಯ ಮಾತನ್ನು ಬರೆದಿದ್ದರು. ಹಾಗೆಯೇ ಹೈದರಲಿ ಮತ್ತು ಟಿಪ್ಪುಸುಲ್ತಾನ್ ಬಗ್ಗೆ ಕೂಡ ಸಾವರ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘‘ಭಾರತದ ಸ್ವಾತಂತ್ರ್ಯಕ್ಕೆ ಇರುವ ಅಪಾಯವನ್ನು ಮೊದಲು ಗುರುತಿಸಿದವರು ಪೂನಾದ ನಾನಾ ಫಡ್ನವೀಸ್ ಮತ್ತು ಮೈಸೂರಿನ ಹೈದರ್ ಸಾಹಿಬ್...’’ ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857’ನೇ ಲೇಖಕ (ಸಾವರ್ಕರ್) ತನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಓರ್ವ ವ್ಯಕ್ತಿಯಾಗಿದ್ದರು. ಪ್ರಾದೇಶಿಕ ಹಾಗೂ ಧಾರ್ಮಿಕ ಅನನ್ಯತೆಗಳನ್ನು ಬೆಸೆಯಲು ಬಯಸಿದ ವ್ಯಕ್ತಿಯಾಗಿದ್ದರು. ಭಾರತೀಯ ರಾಷ್ಟ್ರಕ್ಕೆ ನಿಷ್ಠನಾದ ಲೇಖಕ ಆಗಿದ್ದರು. ಕುತೂಹಲದ ಸಂಗತಿ ಎಂದರೆ ಆ ಪುಸ್ತಕದಲ್ಲಿ ಅಯೋಧ್ಯೆಯ ಕುರಿತು ಒಂದು ಇಡೀ ಭಾಗ ಇದೆ. ಆದರೆ ಅದರಲ್ಲಿ ಅವರ ಇಂದಿನ ರಾಜಕೀಯ ಉತ್ತರಾಧಿಕಾರಿಗಳು ಹೇಳುವ ಒಂದೇ ಒಂದು ಸುಳ್ಳು ಇಲ್ಲ. ಅಲ್ಲಿ ಇರುವ ಸಂದೇಶ ಒಂದೇ ರಾಷ್ಟ್ರೀಯ ಏಕತೆ. ಆದ್ದರಿಂದ, ಈಗ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಇರುವ ವಿರೋಧವನ್ನು, ವೈಮನಸ್ಸನ್ನು ಗತಕಾಲದ ಇತಿಹಾಸಕ್ಕೆ ಸೇರಿಸಿ ಬಿಡಬಹುದು. ಅವರ ಸದ್ಯದ (ಅಂದಿನ) ಸಂಬಂಧ ಆಳುವವರು ಮತ್ತು ಆಳಿಸಿಕೊಳ್ಳುವವರ, ವಿದೇಶಿಯರ ಮತ್ತು ದೇಶೀಯ ನಡುವಿನ ಸಂಬಂಧವಾಗಿರಲಿಲ್ಲ. ಬದಲಾಗಿ ಸಹೋದರರ ನಡುವಿನ ಸಂಬಂಧವಾಗಿತ್ತು, ಅವರ ನಡುವಿನ ವ್ಯತ್ಯಾಸ ಕೇವಲ ಧರ್ಮವಷ್ಟೇ ಆಗಿತ್ತು. ಯಾಕೆಂದರೆ ಅವರಿಬ್ಬರೂ ಕೂಡ ಹಿಂದೂಸ್ಥಾನದ ಮಣ್ಣಿನ ಮಕ್ಕಳು. ಅವರ ಹೆಸರುಗಳು ಬೇರೆ ಬೇರೆ, ಆದರೆ ಅವರೆಲ್ಲ ಒಂದೇ ತಾಯಿಯ, ಭಾರತದ ಮಕ್ಕಳು. ಆದ್ದರಿಂದ ಒಂದೇ ತಾಯಿಯ ಮಕ್ಕಳಾದ ಅವರು ರಕ್ತ ಸಂಬಂಧಿಗಳಾದ ಸಹೋದರರಾಗಿದ್ದರು. ನಾನಾ ಸಾಹಿಬ್ ದಿಲ್ಲಿಯ ಬಹದ್ದೂರ್ ಶಾ, ಮೌಲ್ವಿ ಅಹಮ್ಮದ್ ಶಾ, ಖಾನ್ ಬಹದ್ದೂರ್ ಖಾನ್ ಮತ್ತು 1857ರ ಇತರ ನಾಯಕರಿಗೆ ಈ ಭಾವನೆ ಇತ್ತು ಮತ್ತು ಆದ್ದರಿಂದ ಅವರು ತಮ್ಮ ಶತ್ರುತ್ವವನ್ನು ಬದಿಗಿರಿಸಿ ಸ್ವದೇಶ್ ಧ್ವಜದ ಸುತ್ತ ಒಂದುಗೂಡಿದರು. ಈಗ ಈ ಶತ್ರುತ್ವ ಅತಾರ್ಕಿಕ, ಅರ್ಥಹೀನ ಮತ್ತು ಮೂರ್ಖತನವಲ್ಲದೇ ಬೇರೇನೂ ಅಲ್ಲ. ಸಂಕ್ಷೇಪವಾಗಿ ಹೇಳುವುದಾದರೆ ನಾನಾ ಸಾಹಿಬ್ ಮತ್ತು ಅಝೀಮುಲ್ಲಾ ಅವರ ನೀತಿಯ ಮುಖ್ಯಾಂಶಗಳೆಂದರೆ, ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಹೆಗಲಿಗೆ ಹೆಗಲು ಕೊಟ್ಟು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ಮತ್ತು ಸ್ವಾತಂತ್ರ್ಯ ಪಡೆದಾಗ ಭಾರತದ ಆಳ್ವಿಕೆ ನಡೆಸುವವರ ಹಾಗೂ ರಾಜಕುಮಾರರ ನೇತೃತ್ವದಲ್ಲಿ ಭಾರತದ ಸಂಯುಕ್ತ ಸಂಸ್ಥಾನ ‘ದಿ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ ರಚಿಸಲ್ಪಡಬೇಕು.

ಸಾವರ್ಕರ್ ತನ್ನ ಪುಸ್ತಕದಲ್ಲಿ ಹಿಂದೂಗಳ ಹಾಗೂ ಮುಸ್ಲಿಮರ ನಡುವಿನ ಈ ಏಕತೆಯ, ಒಗ್ಗಟ್ಟಿನ ವಿಷಯವನ್ನು ಆಗಾಗ ಪ್ರಸ್ತಾಪಿಸಿರುತ್ತಾರೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಎರಡೂ ಕಡೆಯವರು ಸಹೋದರರಂತೆ ನಡೆದುಕೊಳ್ಳಬೇಕು, ಕೆಲಸ ಮಾಡಬೇಕು ಎನ್ನುವುದನ್ನು ಒತ್ತಿ ಹೇಳಿರುತ್ತಾರೆ.

‘‘(ದಿಲ್ಲಿಯಲ್ಲಿ) ಈ ಐದು ದಿನಗಳು ಹಿಂದೂಸ್ಥಾನದ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುತ್ತದೆ. ಯಾಕೆಂದರೆ ಈ ಐದು ದಿನಗಳು ಕನಿಷ್ಠ ಸದ್ಯದ ಮಟ್ಟಿಗಾದರೂ ಘಜನಿ ಮುಹಮ್ಮದ್ ದಿನಗಳಿಂದ ಆರಂಭವಾದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಮುಂದುವರಿದಿದ್ದ ಸಂಘರ್ಷದ ಅಂತ್ಯವನ್ನು ಮಿಲಿಟರಿ ಡ್ರಮ್‌ಗಳ ಸದ್ದಿನೊಂದಿಗೆ ಘೋಷಿಸಿವೆ. ಹಿಂದೂಗಳು ಮತ್ತು ಮುಸ್ಲಿಮರು ಎದುರಾಳಿಗಳಲ್ಲ. ಗೆದ್ದವರು ಮತ್ತು ಸೋತವರು ಅಲ್ಲ. ಬದಲಾಗಿ, ಸಹೋದರರು ಎಂದು ಮೊದಲು ಘೋಷಿಸಲಾಯಿತು...’’

ಸಾವರ್ಕರ್ ಅವರ ಪುಸ್ತಕದಲ್ಲಿ ‘ಮುಸ್ಲಿಮರ ಅರ್ಧಚಂದ್ರ’ದ ಬಗ್ಗೆ ಹೊಗಳಿಕೆ ಇದ್ದಂತೆಯೇ ‘ಮರಾಠರ ಈಟಿ’ಗಳ ಬಗ್ಗೆಯೂ ಕೂಡ ಹೊಗಳಿಕೆ ಇತ್ತು. (ಪುಟ 78) ಆದ್ದರಿಂದ, ‘‘ನಿಜವಾದ ಅರ್ಥದಲ್ಲಿ ನಾವು ಹೇಳಿದೆವು ಭಾರತದ ಸಿಂಹಾಸನವನ್ನು ಬಹುದ್ದೂರ್ ಶಾ ಅಲಂಕರಿಸಿದ್ದು ಅಧಿಕಾರದ ಮರುಸ್ಥಾಪನೆ ಯಲ್ಲ, ಬದಲಾಗಿ ಅದು ಬಹಳ ಕಾಲದಿಂದ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ನಡೆಯುತ್ತಾ ಬಂದಿದ್ದ ಯುದ್ಧದ ಅಂತ್ಯ ಮತ್ತು ದಬ್ಬಾಳಿಕೆಯ ಕೊನೆ.’’

ಕೇವಲ ಮುಸ್ಲಿಮ್ ನಾಯಕರು, ಗಣ್ಯರು ಮಾತ್ರವಲ್ಲ ಮುಸ್ಲಿಮ್‌ಜನಸಾಮಾನ್ಯರು, ಮುಲ್ಲಾಗಳು ಕೂಡ ಆ ಪುಸ್ತಕದಲ್ಲಿ ಭಾರೀ ಹೊಗಳಿಕೆ ಪಡೆಯುತ್ತಾರೆ. ‘‘ನಗರದ ಬೃಹತ್ ಮುಸ್ಲಿಮರ ಸಂಖ್ಯೆಯಲ್ಲಿ, ಮುಲ್ಲಾಗಳು ತುಂಬಾ ಬಿಝಿಯಾಗಿದ್ದರು. ತಮ್ಮ ದೇಶ ಮತ್ತು ಧರ್ಮಕ್ಕಾಗಿ ಸಾವಿರಾರು ಮಂದಿ ಮುಸ್ಲಿಮರು ಯುದ್ಧರಂಗದಲ್ಲಿ ತಮ್ಮ ರಕ್ತ ನೀಡಲು ದೃಢ ನಿಶ್ಚಯ ಮಾಡಿ (ಮುಲ್ಲಾಗಳು) ನೀಡುವ ಸಂಕೇತಕ್ಕಾಗಿ ಕಾಯುತ್ತಿದ್ದರು.’’

‘‘ಮುಸ್ಲಿಮರೇ ನೀವು ಕುರ್‌ಆನ್‌ನ್ನು ಗೌರವಿಸುತ್ತೀರಾದರೆ ಮತ್ತು ಹಿಂದೂಗಳೇ ನೀವು ಗೋ ಮಾತೆಯನ್ನು ಪೂಜಿಸುತ್ತೀರಾದರೆ ಈಗ ನೀವು ನಿಮ್ಮ ನಡುವಿನ ಸಣ್ಣಪುಟ್ಟ ಭಿನ್ನತೆಗಳನ್ನು, ವ್ಯತ್ಯಾಸಗಳನ್ನು ಮರೆತು ಬಿಡಿ ಮತ್ತು ಈ ಪವಿತ್ರ ಯುದ್ಧದಲ್ಲಿ ಒಂದಾಗಿ, ಒಂದೇ ಬ್ಯಾನರ್ ಅಡಿಯಲ್ಲಿ ಹೋರಾಡುತ್ತಾ ಯುದ್ಧರಂಗಕ್ಕೆ ಧುಮುಕಿರಿ ಮತ್ತು ಭಾರತದಿಂದ ಬ್ರಿಟಿಷರ ಹೆಸರನ್ನು ರಕ್ತದ ತೊರೆಗಳಿಂದ ಗುಡಿಸಿ ಹಾಕಿರಿ. ಈ ಯುದ್ಧದಲ್ಲಿ ಹಿಂದೂಗಳು ಮುಸ್ಲಿಮರ ಜೊತೆಗೆ ಕೈಜೋಡಿಸಿದಲ್ಲಿ ಅವರ ದೇಶ ಭಕ್ತಿಗೆ ಪ್ರತಿಫಲವಾಗಿ ಗೋಹತ್ಯೆ ಕೊನೆಗೊಳ್ಳುತ್ತದೆ. (ಪುಟ 140-141) ಬಿಜೆಪಿ ಹೇಳುವ ಸಾವರ್ಕರ್ ಈ ಸಾವರ್ಕರ್ ಅಲ್ಲ.

ತನ್ನ ಬಾಳ ಸಂಜೆಯಲ್ಲಿ ಸಾವರ್ಕರ್ ಇದಕ್ಕಿಂತ ಸಂಪೂರ್ಣವಾಗಿ ಬೇರೆಯೇ ಆದ ಒಂದು ‘ಇತಿಹಾಸ’ ಬರೆದರು. ಅದು ಪ್ರತೀಕಾರದ ಭಾವನೆಯಿಂದ ಕೂಡಿತ್ತು. ಅಲ್ಲಿ ಟಿಪ್ಪುಸುಲ್ತಾನ್ ಅನಾಗರಿಕ (ದಿ ಸ್ಯಾವೇಜ್) ಆಗಿದ್ದಾನೆ. 1857ರ ದಂಗೆಯಲ್ಲಿ ಮುಸ್ಲಿಮರ ಪಾತ್ರವನ್ನು ಅಲ್ಲಿ ಅದುಮಿಡಲಾಗಿದೆ.

ಅವರ ಇನ್ನೊಂದು ರಾಷ್ಟ್ರೀಯವಾದಿ ಕಾರ್ಯವೆಂದರೆ 1910 ಜುಲೈ 8ರಂದು ಎಸ್.ಎಸ್. ಮೌರ್ಯ ಹಡಗಿನಿಂದ ಅದು ಫ್ರಾನ್ಸ್ ನ ಮಾರ್ಸೆಲ್ ತಲುಪಿದಾಗ ತಪ್ಪಿಸಿಕೊಂಡದ್ದು. ಅವರನ್ನು ಬಂಧಿಸಿ 1910 ಜುಲೈ 22ರಂದು ಮುಂಬೈಗೆ ಕರೆತರಲಾಯಿತು. ವಿಶೇಷ ನ್ಯಾಯಾಲಯದಲ್ಲಿ 69 ದಿನಗಳ ಕಾಲ ವಿಚಾರಣೆ ನಡೆದು ಅವರಿಗೆ ಗಡಿಪಾರು ಶಿಕ್ಷೆ ವಿಧಿಸಲಾಯಿತು.

ಎಂ.ಎಂ.ಟಿ. ಜಾಕ್ಸನ್ ಅವರ ಕೊಲೆ ಮೊಕದ್ದಮೆ ಎರಡನೇ ಪ್ರಕರಣದಲ್ಲಿ ಅವರಿಗೆ ಐವತ್ತು ವರ್ಷಗಳ ಕಾಲ ಅಂಡಮಾನ್‌ಗೆ ಗಡಿಪಾರು ಶಿಕ್ಷೆ ವಿಧಿಸಲಾಯಿತು. 1911 ಜುಲೈ 4ರಂದು ಅವರನ್ನು ಅಂಡಮಾನ್‌ನ ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯೂಲರ್ ಜೈಲಿಗೆ ತರಲಾಯಿತು. ಅವರು 1966ರಲ್ಲಿ ನಿಧನರಾದರು. ಈ ಐವತ್ತೈದು ವರ್ಷಗಳ ನಡುವಿನ ಅವಧಿ ಸಂಪೂರ್ಣವಾಗಿ ಭಿನ್ನವಾದ ಕಥೆಯನ್ನು ಹೇಳುತ್ತದೆ.

1. ಸಾವರ್ಕರ್ ಅವರನ್ನು ಅಂಡಮಾನ್‌ಗೆ ತಂದ ಆರು ತಿಂಗಳೊಳಗಾಗಿ ಅವರು ಬ್ರಿಟಿಷರಿಗೆ ಒಂದು ಕ್ಷಮೆಯಾಚನೆ ಪತ್ರ ಬರೆದರು. ಆ ಪತ್ರ ಸಿಗುತ್ತಿಲ್ಲ ಆದರೆ 1913ರಲ್ಲಿ ಅವರು ಬರೆದ ಕ್ಷಮಾಯಾಚನೆ ಪತ್ರದಲ್ಲಿ ಅದರ ಉಲ್ಲೇಖವಿದೆ.

2. 1913 ನವೆಂಬರ್ 14ರ ಅರ್ಜಿ ಈ ಅರ್ಜಿಯಲ್ಲಿ ಅವರು ಹೀಗೆ ಬರೆದಿದ್ದಾರೆ: ‘‘ಸರಕಾರ ದಯೆತೋರಿ ನನ್ನನ್ನು ಬಿಡುಗಡೆ ಮಾಡಿದಲ್ಲಿ ನಾನು ಸಾಂವಿಧಾನಿಕ ಬೆಳವಣಿಗೆಯ ಅತ್ಯಂತ ಪ್ರಬಲ ವಕ್ತಾರನಾಗುತ್ತೇನೆ ಹಾಗೂ ಇಂಗ್ಲಿಷ್ ಸರಕಾರಕ್ಕೆ ನಿಷ್ಠರಾಗಿರುತ್ತೇನೆ...’’

ಕೃಪೆ: frontline

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)