varthabharthi


ರಾಷ್ಟ್ರೀಯ

ಸಿಎಎ ವಿರುದ್ಧ ಭಾಷಣ ಆರೋಪ: ಡಾ.ಕಫೀಲ್ ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ

ವಾರ್ತಾ ಭಾರತಿ : 14 Feb, 2020

 ಲಕ್ನೋ, ಫೆ.14: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿವಾದಾತ್ಮಕ ಪೌರತ್ವ ಕಾಯ್ದೆ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಉತ್ತರಪ್ರದೇಶದ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಅಡಿ ಪ್ರಕರಣ ದಾಖಲಿಸಲಾಗಿದೆ.

ಅಲಿಗಢ ಜಿಲ್ಲಾ ಮ್ಯಾಜಿಸ್ಟ್ರೇಟರು ಖಾನ್ ವಿರುದ್ಧ ಎನ್‌ಎಸ್‌ಎ  ಅಡಿ ಕೇಸ್ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ(ಅಪರಾಧ)ಅಶುತೋಷ್ ದ್ವಿವೇದಿ ಹೇಳಿದ್ದಾರೆ.

‘‘ಕಫೀಲ್ ವಿರುದ್ಧ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸಲಾಗಿದೆ ಎಂಬ ವಿಚಾರ ಶುಕ್ರವಾರ ಬೆಳಗ್ಗೆ ತಿಳಿದು ಬಂತು. ಅವರು ಇನ್ನು ತಕ್ಷಣಕ್ಕೆ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ. ಈ ಕ್ರಮ ಸ್ವೀಕಾರಾರ್ಹವಲ್ಲ. ರಾಜ್ಯ ಸರಕಾರದ ಆಜ್ಞೆಯ ಮೇರೆಗೆ ಕಫೀಲ್‌ರನ್ನು ಗುರಿಯಾಗಿರಿಸಲಾಗಿದೆ’’ ಎಂದು ಕಫೀಲ್ ಸಹೋದರ ಆದೀಲ್ ಖಾನ್ ಹೇಳಿದ್ದಾರೆ.

 ಕಫೀಲ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಕಳೆದ ತಿಂಗಳು ಖಾನ್‌ರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಕಫೀಲ್ ಖಾನ್‌ಗೆ ಸೋಮವಾರ 60,000 ರೂ. ಬಾಂಡ್ ಮೇಲೆ ಜಾಮೀನು ಲಭಿಸಿದೆ. ಆದರೆ ಅವರು ಇನ್ನೂ ಮಥುರಾ ಜೈಲಿನಿಂದ ಬಿಡುಗಡೆಯಾಗಿಲ್ಲ. ಜಾಮೀನು ಲಭಿಸಿದ ಹೊರತಾಗಿಯೂ ಖಾನ್‌ರನ್ನು ಮಥುರಾ ಜೈಲಿನಿಂದ ಇನ್ನೂ ಬಿಡುಗಡೆ ಮಾಡದಿರುವುದನ್ನು ಪ್ರಶ್ನಿಸಿ ಕಫೀಲ್ ಕುಟುಂಬಸ್ಥರು ಅಲಿಗಢದ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್‌ರನ್ನು ಸಂಪರ್ಕಿಸಿದ್ದಾರೆ. ಮುಂಬೈನಲ್ಲಿ ಖಾನ್‌ರನ್ನು ಬಂಧಿಸಿದ ತಕ್ಷಣ ಅಲಿಗಢಕ್ಕೆ ಕರೆತರಲಾಗಿತ್ತು. ಬಳಿಕ ಅವರನ್ನು ನೆರೆಯ ಮಥುರಾ ಜಿಲ್ಲಾ ಬಂಧಿಖಾನೆಯಲ್ಲಿಟ್ಟಿದ್ದಾರೆ.

ವಿಶ್ವವಿದ್ಯಾಲಯದ ಶಾಂತಿಯ ವಾತಾವರಣವನ್ನು ಕದಡಲು ಯತ್ನಿಸಿದ ಹಾಗೂ ಸಮುದಾಯದ ಸಾಮರಸ್ಯವನ್ನು ಹಾಳುಗೆಡಹಿದ್ದಾರೆ ಎಂದು ಡಿ.13ರಂದು ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಡಾ.ಖಾನ್ ವಿರುದ್ಧ ಪ್ರಕರಣ ದಾಖಲಾದ ಎರಡು ದಿನಗಳ ಬಳಿಕ ಎಎಂಯುನಲ್ಲಿ ದೊಡ್ಡ ಪ್ರಮಾಣದ ಘರ್ಷಣೆ ಭುಗಿಲೆದ್ದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)