varthabharthi

ವಿಶೇಷ-ವರದಿಗಳು

ಮಾತು ಕತೆ

ಕಾಂಟ್ರಾಕ್ಟ್ ಕೃಷಿಗಿಂತ ಕೋ ಆಪರೇಟ್ ಕೃಷಿ ಉತ್ತಮ: ಡಾ. ಪ್ರಕಾಶ್ ಕಮ್ಮರಡಿ

ವಾರ್ತಾ ಭಾರತಿ : 15 Feb, 2020
ಸಂದರ್ಶನ: ಬಸವರಾಜು ಮೇಗಲಕೇರಿ

ಕೇಂದ್ರ ಸರಕಾರ ಮಂಡಿಸಿದ 2020-21ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ ಕುರಿತು ಮೂರು ಮುಖ್ಯ ಕಾಯ್ದೆಗಳನ್ನು ಪ್ರಸ್ತಾಪಿಸಿದೆ. ಅದರಲ್ಲಿ ಭೂಮಿ ಗುತ್ತಿಗೆ ಕಾಯ್ದೆ, ಎಪಿಎಂಸಿ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಹೊಸ ಮಾರ್ಕೆಟಿಂಗ್ ಕಾಯ್ದೆ ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್, ಅಂದರೆ ಕಾರ್ಪೊರೇಟ್ ಫಾರ್ಮಿಂಗ್ ಕಾಯ್ದೆಗಳನ್ನು ರಾಜ್ಯ ಸರಕಾರಗಳು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದೆ. ಒಪ್ಪಿಕೊಂಡರೆ ಉತ್ತೇಜನ, ಒಪ್ಪಿಕೊಳ್ಳದಿದ್ದರೆ ಅಭಿವೃದ್ಧಿಗೆ ಅನುದಾನ ಕುಂಠಿತ ಎಂಬುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಈ ಭೂಮಿ ಗುತ್ತಿಗೆ ಕಾಯ್ದೆಯಿಂದಾಗುವ ಸಾಧಕ-ಬಾಧಕಗಳನ್ನು, ಕೃಷಿ ಕ್ಷೇತ್ರವನ್ನು ಸ್ಪರ್ಧಾತ್ಮಕಗೊಳಿಸುವ ನೆಪದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರಕಾರಗಳ ನಡೆಯನ್ನು, ರೈತರು ಕಂಡುಕೊಳ್ಳಬೇಕಾದ ಪರಿಹಾರ ಮಾರ್ಗಗಳನ್ನು ಕುರಿತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಕೃಷಿ ಆರ್ಥಿಕ ತಜ್ಞರು ಆದ ಡಾ. ಪ್ರಕಾಶ್ ಕಮ್ಮರಡಿಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ...

ನಮ್ಮ ರೈತರೂ ಕೂಡ ನಾನು ನಾನು ಅನ್ನುವುದನ್ನು ಬಿಟ್ಟು ನಾವು ನಾವು ಎಂದಾಗಬೇಕು. ಒಗ್ಗೂಡಬೇಕು, ಒಂದಾಗಬೇಕು. ಸಹಕಾರಿ ಸಂಘ ಸ್ಥಾಪಿಸಿಕೊಳ್ಳಬೇಕು. ಸಂಘಟಿತ ದನಿ ಮುಂದೆ ಯಾವ ಸರಕಾರವೂ, ಕಂಪೆನಿಯೂ ಏನೂ ಮಾಡಲಾಗುವುದಿಲ್ಲ. ಈ ಸಹಕಾರಿ ತತ್ವದಲ್ಲಿ, ಸಂಘಟಿತರಾಗುವುದರಲ್ಲಿ ರೈತರಿಗೂ ಅನುಕೂಲವಿದೆ. ಎಂಟ್ಹತ್ತು ಜನ ಸೇರಿ ಬೋರು ಕೊರೆಸುವುದು, ನೀರು ಹಂಚಿಕೊಳ್ಳುವುದು, ಒಂದೇ ಯಂತ್ರವನ್ನು ಎಲ್ಲರೂ ಬಳಸುವುದು ಮಾಡಿದರೆ ಖರ್ಚು, ನಷ್ಟ, ಸಮಸ್ಯೆ ಕಡಿಮೆಯಾಗುತ್ತದೆ. ಬೆಳೆದ ಬೆಳೆಗೆ ರೈತರೇ ಬೆಲೆ ನಿಗದಿ ಮಾಡುವಾಗ ಒತ್ತಡ ಹಾಕಲು, ನ್ಯಾಯ ಕೇಳಲು ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಜನಶಕ್ತಿ ಮುಂದಾಗಬೇಕು, ಧನಶಕ್ತಿಯಲ್ಲ.

ವಾರ್ತಾಭಾರತಿ: ಕೇಂದ್ರ ಸರಕಾರ ಇತ್ತೀಚಿನ ಬಜೆಟ್‌ನಲ್ಲಿ ಭೂಮಿ ಗುತ್ತಿಗೆ ಕಾಯ್ದೆ ಬಗ್ಗೆ ಪ್ರಸ್ತಾಪಿಸಿದೆ, ರಾಜ್ಯ ಸರಕಾರಗಳ ಮೇಲೆ ಒತ್ತಡವನ್ನೂ ತಂದಿದೆ, ಏನಿದು?

ಪ್ರಕಾಶ್ ಕಮ್ಮರಡಿ: ಕೇಂದ್ರ ಸರಕಾರ ಕೃಷಿಗೆ ಸಂಬಂಧಿಸಿದ 2 ಪ್ರಮುಖ ಪ್ರಸ್ತಾವನೆಗಳನ್ನು ತರಲು ಹೊರಟಿದೆ. ಒಂದು: ಕೃಷಿಯನ್ನು ಸ್ಪರ್ಧಾತ್ಮಕ ಗೊಳಿಸುವುದು. ಎರಡನೆಯದು: ಇದಕ್ಕೆ ಪೂರಕವಾಗಿ ಮಾರುಕಟ್ಟೆಯನ್ನು ಉದಾರೀಕರಣಗೊಳಿಸುವುದು. ಇದು ಹೊಸದೇನಲ್ಲ. 90ರ ದಶಕದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಜಾಗತೀಕರಣ, ಉದಾರೀಕರಣ, ಖಾಸಗೀಕರಣವನ್ನು ಒಪ್ಪಿಕೊಂಡ ನಂತರ, ಅದು ನಿಧಾನವಾಗಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡ ಮೇಲೆ, ಈಗ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಅದಕ್ಕೆ ಕೇಂದ್ರ ಸರಕಾರ ಕಾಯ್ದೆಯ ರೂಪ ಕೊಡಲು ಮುಂದಾಗಿದೆ. ಅಷ್ಟೇ ಅಲ್ಲ, ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದೆ. ಯಾವ ರಾಜ್ಯ ಭೂಮಿ ಗುತ್ತಿಗೆ, ಎಪಿಎಂಸಿ ಸುಧಾರಣೆ ಮತ್ತು ಒಪ್ಪಂದ ಕೃಷಿಗೆ ಅಗತ್ಯವಾದ ಭೂಮಿ ಭೋಗ್ಯಕ್ಕೆ ಬೇಕಾದ ಮಾದರಿ ಕಾಯ್ದೆಯನ್ನು ಒಪ್ಪಿಕೊಳ್ಳುತ್ತದೋ, ಆ ರಾಜ್ಯಗಳಿಗೆ ಕೇಂದ್ರ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಹೇರಳವಾಗಿ ಅನುದಾನ ಹರಿದು ಬರಲಿದೆ ಎಂಬ ಆಸೆ ತೋರಿಸಿದೆ.

ಇದನ್ನು ರಾಜ್ಯ ಸರಕಾರಗಳು ಒಪ್ಪದೆ ಬೇರೆ ದಾರಿ ಇಲ್ಲ. ಒಪ್ಪಿದರೆ ಪರಂಪರಾಗತ ಕೃಷಿ, ಕುಟುಂಬ ಕೃಷಿ ಕಣ್ಮರೆಯಾಗಿ ಕಂಪೆನಿ ಕೃಷಿ ಚಾಲ್ತಿಗೆ ಬರುತ್ತದೆ. ಒಪ್ಪದೆ ಹೋದರೆ ಕೇಂದ್ರ ಸರಕಾರದ ಅವಕೃಪೆಗೆ ಒಳಗಾಗಬೇಕಾಗುತ್ತದೆ. ಅನುದಾನ ಕೈತಪ್ಪಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.

ವಾರ್ತಾಭಾರತಿ: ಒಪ್ಪಂದ ಕೃಷಿಯನ್ನು ಒಪ್ಪಿಕೊಳ್ಳಲೇಬೇಕೆ, ಬೇರೆ ಮಾರ್ಗವಿಲ್ಲವೇ?

ಪ್ರಕಾಶ್ ಕಮ್ಮರಡಿ: ಇದೆ. ಭಾರತ ಕೃಷಿಯಾಧಾರಿತ ದೇಶ. ರೈತರೆಂದರೆ ಶಕ್ತಿ. ಈ ಬಹುಸಂಖ್ಯಾತರನ್ನು ಮತ್ತವರ ಶಕ್ತಿಯನ್ನು ಒಗ್ಗೂಡಿಸುವ ಸಹಕಾರಿ ತತ್ವ ಮುನ್ನಲೆಗೆ ಬಂದರೆ, ಕಂಪೆನಿ ಕೃಷಿಯನ್ನೂ ನಿಭಾಯಿಸಬಹುದು. ಅಂದರೆ ಕಾಂಟ್ರಾಕ್ಟ್ ಕೃಷಿಯ ಬದಲಿಗೆ ಕೋ ಆಪರೇಟ್ ಕೃಷಿ ಹೆಚ್ಚಾಗಬೇಕು. ಇದಕ್ಕೆ ಉತ್ತಮ ಉದಾಹರಣೆಯಾಗಿ ಅಮುಲ್ ನೋಡಬಹುದು. ಅದರ ಯಶಸ್ಸನ್ನು ಗಮನಿಸಬಹುದು. ಅದನ್ನು ನಾವೂ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬಹುದು. ರೈತ ಸಂಘಟನೆಗಳು ಇತ್ತ ಗಮನ ಹರಿಸಬೇಕಾದದ್ದು ಇವತ್ತಿನ ತುರ್ತು. ನಮ್ಮ ರೈತರೂ ಕೂಡ ನಾನು ನಾನು ಅನ್ನುವುದನ್ನು ಬಿಟ್ಟು ನಾವು ನಾವು ಎಂದಾಗಬೇಕು. ಒಗ್ಗೂಡಬೇಕು, ಒಂದಾಗಬೇಕು. ಸಹಕಾರಿ ಸಂಘ ಸ್ಥಾಪಿಸಿಕೊಳ್ಳಬೇಕು. ಸಂಘಟಿತ ದನಿ ಮುಂದೆ ಯಾವ ಸರಕಾರವೂ, ಕಂಪೆನಿಯೂ ಏನೂ ಮಾಡಲಾಗುವುದಿಲ್ಲ. ಈ ಸಹಕಾರಿ ತತ್ವದಲ್ಲಿ, ಸಂಘಟಿತರಾಗುವುದರಲ್ಲಿ ರೈತರಿಗೂ ಅನುಕೂಲವಿದೆ. ಎಂಟ್ಹತ್ತು ಜನ ಸೇರಿ ಬೋರು ಕೊರೆಸುವುದು, ನೀರು ಹಂಚಿಕೊಳ್ಳುವುದು, ಒಂದೇ ಯಂತ್ರವನ್ನು ಎಲ್ಲರೂ ಬಳಸುವುದು ಮಾಡಿದರೆ ಖರ್ಚು, ನಷ್ಟ, ಸಮಸ್ಯೆ ಕಡಿಮೆಯಾಗುತ್ತದೆ. ಬೆಳೆದ ಬೆಳೆಗೆ ರೈತರೇ ಬೆಲೆ ನಿಗದಿ ಮಾಡುವಾಗ ಒತ್ತಡ ಹಾಕಲು, ನ್ಯಾಯ ಕೇಳಲು ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಜನಶಕ್ತಿ ಮುಂದಾಗಬೇಕು, ಧನಶಕ್ತಿಯಲ್ಲ.

ವಾರ್ತಾಭಾರತಿ: ಈ ಒಪ್ಪಂದ, ಗುತ್ತಿಗೆಯ ನೆಪದಲ್ಲಿ ಕೃಷಿ ಕ್ಷೇತ್ರವನ್ನೂ ಖಾಸಗಿಯವರಿಗೆ ಒಪ್ಪಿಸಲು ಸರಕಾರಗಳು ಮುಂದಾಗಿವೆಯೇ?

ಪ್ರಕಾಶ್ ಕಮ್ಮರಡಿ: ದೇಶ ಉದಾರೀಕರಣವನ್ನು ಒಪ್ಪಿಕೊಂಡ ಮೇಲೆ ಸರಕಾರಗಳು ನಿಧಾನವಾಗಿ ತಮ್ಮ ಸೇವೆ, ಪಾತ್ರ, ಜವಾಬ್ದಾರಿಗಳಿಂದ ನುಣುಚಿ ಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರವನ್ನೂ ಖಾಸಗಿಯವರ ಒಡೆತನಕ್ಕೆ, ಸಹಭಾಗಿತ್ವಕ್ಕೆ ಬಿಟ್ಟುಕೊಡುತ್ತಿರುವುದನ್ನೂ ನೋಡುತ್ತಿದ್ದೇವೆ. ಕೃಷಿ ಕ್ಷೇತ್ರಕ್ಕೂ ಅದು ಪಾದವೂರಿದೆ. ಈ ಒಪ್ಪಂದ ಕೃಷಿ, ಕಂಪೆನಿ ಕೃಷಿ ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ಕೆಲವು ಕಂಪೆನಿಗಳು ತಮಗೆ ಬೇಕಾದ ಉತ್ಪನ್ನಗಳನ್ನು- ಉದಾಹರಣೆಗೆ ಗರ್ಕಿನ್, ಪುಷ್ಪ, ಬೇಬಿ ಕಾರ್ನ್, ಔಷಧೀಯ ಸಸ್ಯಗಳು, ಸುಗಂಧ ಸಸ್ಯಗಳನ್ನು ಬೆಳೆಸುವ-ಬೆಳೆಯುವ ಮೂಲಕ ಒಪ್ಪಂದ ಕೃಷಿ ಈಗಾಗಲೇ ಚಾಲ್ತಿಯಲ್ಲಿದೆ. ಇಲ್ಲಿ ರೈತರು ಮತ್ತು ಕಂಪೆನಿಗಳ ನಡುವಿನ ಒಪ್ಪಂದ ಶಾಸನಬದ್ಧವಾಗಿಲ್ಲ. ಧುತ್ತನೆ ಎದುರಾಗುವ ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರವಿಲ್ಲ. ಬೆಳೆಗೆ ವಿಮೆ ಯಾರು ಮಾಡಿಸಬೇಕೆಂಬ ಬಗ್ಗೆ ಸ್ಪಷ್ಟತೆಯಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ರೈತನಿಗೆ ಉತ್ತಮ ಬೆಲೆ ಬಂದು ಅನುಕೂಲಕರ ಸ್ಥಿತಿ ನಿರ್ಮಾಣವಾಗಿದ್ದರೆ, ಹಲವೆಡೆ ಅನ್ಯಾಯವಾಗಿರುವುದೇ ಹೆಚ್ಚು. ಈ ಒಪ್ಪಂದ ರೈತ ಮತ್ತು ಕಂಪೆನಿ ನಡುವೆ ನಡೆಯುವುದರಿಂದ, ಸರಕಾರದ ಪಾತ್ರವಿಲ್ಲದಿರುವುದರಿಂದ, ಕಾನೂನು ಕಟ್ಟಳೆಯ ಅಂಕುಶ ವಿಲ್ಲದಿರುವುದರಿಂದ ರೈತನಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.

ಇದನ್ನೆಲ್ಲ ಮನಗಂಡ ಕೇಂದ್ರ ಸರಕಾರ, ಕೃಷಿ ಕ್ಷೇತ್ರದ ಮೇಲಿನ ತನ್ನ ಪಾತ್ರವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಒಪ್ಪಂದ ಕೃಷಿಗೆ ಕಾಯ್ದೆಯ ರೂಪ ಕೊಡಲು ಮುಂದಾಗಿದೆ. ಅದಕ್ಕೆ ರಾಜ್ಯಗಳು ಒಪ್ಪಿದರೆ ಉತ್ತೇಜನ ನೀಡುವುದಾಗಿ ಆಸೆ ತೋರಿಸಿದೆ. ಅಭಿವೃದ್ಧಿಯ ಮಂತ್ರ ಜಪಿಸಿದೆ. ಖಾಸಗಿ ಬೃಹತ್ ಕಂಪೆನಿ- ಅದು ಸ್ವದೇಶಿಯೋ, ವಿದೇಶಿಯೋ- ಅದು ಕೃಷಿ ಯಲ್ಲಿ ತೊಡಗಿಕೊಳ್ಳಲು, ವ್ಯಾಪಾರ ವಹಿವಾಟು ಗಳಲ್ಲಿ ನೇರವಾಗಿ ಪಾಲ್ಗೊಳ್ಳಲು ಅದಕ್ಕೆ ಮೂಲ ಉತ್ಪನ್ನ ಬೇಕು. ಆ ಉತ್ಪನ್ನಕ್ಕಾಗಿ ಅದು ಭೂಮಿಯನ್ನು ಅವಲಂಬಿಸಬೇಕು. ಆದರೆ ಭೂಮಿ ಖರೀದಿಸಲು ಕಾಯ್ದೆ ಕಾನೂನುಗಳು ಅಡ್ಡಿ ಬರುವುದರಿಂದ ಅದು ಸಾಧ್ಯವಿಲ್ಲ. ಆ ತೊಡಕನ್ನು ಈಗ ಕೇಂದ್ರ ಸರಕಾರ ಒಪ್ಪಂದ ಕೃಷಿಯ ಮೂಲಕ ತೊಡೆದುಹಾಕುತ್ತಿದೆ. ಜೊತೆಗೆ ರೈತರಿಗೂ ಅನುಕೂಲವಾಗುವಂತೆ ಕಾಯ್ದೆ ಕಾೂನು ರೂಪಿಸುವ ಮಾತನಾಡುತ್ತಿದೆ.

ವಾರ್ತಾಭಾರತಿ: ಹೀಗಾದರೆ ಪಾರಂಪರಿಕ ಕೃಷಿ, ಕುಟುಂಬ ಕೃಷಿ ಕಣ್ಮರೆಯಾಗಿ ಮತ್ತೆ ಬಂಡವಾಳ ಶಾಹಿಗಳ ಹಿಡಿತಕ್ಕೆ ಭೂಮಿ ಹೋಗಿ, ರೈತ ಬೀದಿಗೆ ಬೀಳುವುದಿಲ್ಲವೇ?

ಪ್ರಕಾಶ್ ಕಮ್ಮರಡಿ: ಕೇಂದ್ರ ಸರಕಾರ ಕೃಷಿಯಲ್ಲೂ ಅಭಿವೃದ್ಧಿ ತರಲು ಬಯಸುತ್ತಿದೆ. ಆಹಾರ ಧಾನ್ಯಗಳಿಗಿಂತ ವಾಣಿಜ್ಯ ಬೆಳೆಗಳತ್ತ ಆಸಕ್ತಿ ವಹಿಸುತ್ತಿದೆ. ರಫ್ತು ವಹಿವಾಟು ಉದ್ಯಮವನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಅದಕ್ಕಾಗಿಯೇ ಬಜೆಟ್‌ನಲ್ಲಿ ಕೃಷಿ ಉತ್ಪನ್ನಗಳನ್ನು ಶೇಖರಿಸಿಡಲು ದೊಡ್ಡ ಮಟ್ಟದ ಕೋಲ್ಡ್ ಸ್ಟೋರೇಜ್‌ಗಳು, ಸಾಗಿಸಲು ರೆಫ್ರಿಜರೇಟೆಡ್ ರೈಲುಗಳು ಹಾಗೂ ಕೃಷಿ ಉಡಾನ್-ವಿಮಾನಗಳ ಬಗ್ಗೆ ಉಲ್ಲೇಖಿಸಿದೆ. ಅಂದರೆ ಸ್ಪಷ್ಟವಾಗಿ, ಇವೆಲ್ಲವೂ ಸಣ್ಣ ಪುಟ್ಟ ರೈತರ ಬಳಕೆಗೆ ಬರುವಂಥದ್ದಲ್ಲ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಹಾಗೆಯೇ ಭಾರೀ ದೊಡ್ಡ ಮಟ್ಟದಲ್ಲಿ ಕೃಷಿ ಉತ್ಪಾದನೆ, ಸಂಗ್ರಹ ಮತ್ತು ಸಾಗಾಟ ಮಾಡುವ, ರಫ್ತು ವಹಿವಾಟುಗಳಲ್ಲಿ ಪಾಲ್ಗೊಳ್ಳುವ ಕಂಪೆನಿಗಳಿಗೆ ನೆರವಾಗುವಂಥದ್ದು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹೀಗಿದ್ದಾಗ ಪಾರಂಪರಿಕ, ಕುಟುಂಬ ಕೃಷಿ ಉಳಿಯುವುದು ಕಷ್ಟ. ಜೊತೆಗೆ ಈ ಪಾರಂಪರಿಕ ಕೃಷಿಗೆ ಸರಕಾರಗಳು ಎಷ್ಟು ದಿನಾಂತ ಸಾಲ, ಸಬ್ಸಿಡಿ, ಬೆಂಬಲ ಬೆಲೆ, ವಿಮೆ, ರಿಯಾಯಿತಿ ಕೊಡುವುದು. ಕೊಡುವುದಿಲ್ಲ ಎಂದು ಸರಕಾರಗಳು ಬಹಿರಂಗವಾಗಿ ಹೇಳುವುದಿಲ್ಲ. ಬದಲಿಗೆ ಈ ರೀತಿ ಹಿಂಬಾಗಿಲ ಮೂಲಕ ಒಪ್ಪಂದ ಕೃಷಿ, ಕಂಪೆನಿ ಕೃಷಿಗೆ ಹೆಚ್ಚು ಒತ್ತು ಕೊಡುತ್ತವೆ. ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ 21 ಲಕ್ಷ ಹೆಕ್ಟೇರ್ ಬೀಳುಬಿಟ್ಟ ಜಮೀನು ಇದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಬೀಳುಬಿಟ್ಟ ಜಮೀನು ಒಪ್ಪಂದ ಕೃಷಿಗೆ ಒಳಪಟ್ಟರೆ, ಉತ್ಪಾದನೆ ಹೆಚ್ಚಾಗಿ ದೇಶದ ಕೃಷಿ ಕ್ಷೇತ್ರ ಮತ್ತು ರೈತರು ಅಭಿವೃದ್ಧಿ ಹೊಂದುತ್ತಾರೆನ್ನುವುದು ಕೇಂದ್ರ ಸರಕಾರದ ಆಲೋಚನೆ.

ವಾರ್ತಾಭಾರತಿ: ಒಪ್ಪಂದ ಕೃಷಿಗೊಳಗಾದ ಭೂಮಿ, ಗುತ್ತಿಗೆ ಅವಧಿ ಮುಗಿದ ನಂತರ ಬರಡಾಗುವುದಿಲ್ಲವೇ?

ಪ್ರಕಾಶ್ ಕಮ್ಮರಡಿ: ಖಂಡಿತ ಆಗುತ್ತದೆ. ಒಪ್ಪಂದ ಕೃಷಿಗೊಳಪಟ್ಟ ಭೂಮಿಯಲ್ಲಿ ಕಂಪೆನಿಯವರು ಹೇಳುವ ಬೀಜ ಬಳಸಬೇಕು, ಅವರು ಹೇಳುವ ಬೆಳೆ ಬೆಳೆಯಬೇಕು. ಅದು ಒಂದೇ ರೀತಿಯ ಬೆಳೆಯಾದರೆ, ಉತ್ತಮ ಇಳುವರಿಗಾಗಿ ರಾಸಾಯನಿಕ ರಸಗೊಬ್ಬರ ಸುರಿದರೆ, ಕೀಟನಾಟಕ ಔಷಧಿ ಸಿಂಪಡಿಸಿದರೆ ಕೆಲವೇ ವರ್ಷಗಳಲ್ಲಿ ಭೂಮಿ ಬರಡಾಗಿ, ಉಪಯೋಗಕ್ಕೆ ಬಾರದಂತಾಗುತ್ತದೆ.

ವಾರ್ತಾಭಾರತಿ: ಹಾಗಾದರೆ ಇದಕ್ಕೆ ಪರಿಹಾರವೇನು?

ಪ್ರಕಾಶ್ ಕಮ್ಮರಡಿ: ರೈತರು ಸಂಘಟಿತರಾಗಬೇಕು. ಸಹಕಾರಿ ತತ್ವದಡಿ ಒಂದಾಗಬೇಕು. ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿಪಡಿಸುವಂತಾಗಬೇಕು. ಸರಕಾರದ ಕಾಯ್ದೆ ಮತ್ತು ಖಾಸಗಿ ಕಂಪೆನಿಗಳ ಪಾಲ್ಗೊಳ್ಳುವಿಕೆ ಕುರಿತು ಚರ್ಚೆಗಳಾಗಬೇಕು. ರೈತ ನಾಯಕರು, ಕೃಷಿ ತಜ್ಞರು, ಕೃಷಿ ಪಂಡಿತರು ಎಲ್ಲರನ್ನೂ ಸರಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ನಂತರ ಕಾಯ್ದೆ ಕಾನೂನು ರೂಪಿಸಬೇಕು. ಕೇರಳದಲ್ಲಿ ಮಹಿಳೆಯರ ಕೈಗೆ ಕೃಷಿ ಭೂಮಿ ಕೊಟ್ಟ ಉದಾಹರಣೆಗಳಿವೆ. ಅಲ್ಲಿ ಅವರು ಮಹಿಳಾ ಸಹಕಾರಿ ಸಂಘಗಳ ಮೂಲಕ ಕೃಷಿಯನ್ನು ಸುಸ್ಥಿರ ದಾರಿಗೆ ತಂದ ಕತೆಗಳಿವೆ. ದೇಶದ ಇತರ ಭಾಗದಲ್ಲೂ ಇದನ್ನು ಚಾಲ್ತಿಗೆ ತರಬೇಕು. ಹಾಗೆಯೇ ಈ ಕಾಲದ ವಿದ್ಯಾವಂತರು ಮತ್ತೆ ಕೃಷಿಯತ್ತ ಹೊರಳುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ಕೃಷಿಯ ಬಗ್ಗೆ ಪ್ಯಾಷನ್ ಇಟ್ಟುಕೊಂಡಂತ ಹವರನ್ನು ಗುರುತಿಸಿ ಸ್ಟಾರ್ಟ್‌ಪ್‌ಗಳನ್ನು ಆರಂಭಿಸಲು, ಆ ಮೂಲಕ ಕೃಷಿಗೆ ಹೊಸ ಆಯಾಯ ನೀಡಲು ಮುಂದಾಗಬೇಕು. ಬೀಳುಬಿಟ್ಟ ಜಮೀನುಗಳಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುವಂತೆ ಕಾಯ್ದೆಗಳನ್ನು ರೂಪಿಸಿ, ಸರಳೀಕರಿಸಬೇಕು. ಉತ್ಪತ್ತಿಯಾದ ವಿದ್ಯುತ್‌ಗೆ ತಕ್ಷಣ ಹಣ ಸಿಗುವಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಮೊದಲು ರೈತರ ಪರವಾಗಿರಲು ಅಧಿಕಾರಿಗಳು, ರಾಜಕೀಯ ನಾಯಕರು ಮನಸ್ಸು ಮಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)