varthabharthi

ಸಂಪಾದಕೀಯ

ಸೇವೆಗೆ ಹೊಸ ವ್ಯಾಖ್ಯಾನ ನೀಡಿದ ಪದ್ಮಶ್ರೀ ಹಾಜಬ್ಬ

ವಾರ್ತಾ ಭಾರತಿ : 15 Feb, 2020

ಸಾಧಾರಣವಾಗಿ ಬಡವರು ಸೇವೆಯ ಫಲಾನುಭವಿಗಳು ಮತ್ತು ಶ್ರೀಮಂತರು ಅಥವಾ ಸಶಕ್ತರು ಸೇವೆಯ ನೇತೃತ್ವ ವಹಿಸಿಕೊಳ್ಳುವವರು ಎನ್ನುವ ಸಾಂಪ್ರದಾಯಿಕ ನಂಬಿಕೆಯೊಂದು ಸಮಾಜದಲ್ಲಿದೆ. ಈ ದೇಶದಲ್ಲಿ ಸೇವೆಗಾಗಿ ಗುರುತಿಸಿಕೊಂಡ ಬೃಹತ್ ಶ್ರೀಮಂತರು ಹಲವರಿದ್ದಾರೆ. ವಿಪ್ರೋ, ಇನ್ಫೋಸಿಸ್‌ನಂತಹ ಕಾರ್ಪೊರೇಟ್ ಕುಳಗಳು ಸಮಾಜದ ಬಡವರಿಗಾಗಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಧ್ಯಮಗಳ ಮೂಲಕ ಗುರುತಿಸಿಕೊಳ್ಳುತ್ತಿವೆ. ಹಲವು ಉದ್ಯಮಿಗಳು ತಮ್ಮ ವ್ಯವಹಾರಗಳ ಜೊತೆ ಜೊತೆಗೇ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಟ್ರಸ್ಟ್ ಗಳನ್ನು ಮಾಡಿಕೊಂಡು ತಮ್ಮ ಸಮುದಾಯ ಅಥವಾ ಸಮಾಜಕ್ಕೆ ಕೊಡುಗೆಗಳನ್ನು ಕೊಡುತ್ತಾ ಸುದ್ದಿಯಲ್ಲಿವೆ. ಹಾಗೆಯೇ ವಿವಿಧ ಸಂಘಟನೆಗಳು, ಧಾರ್ಮಿಕ ಮಠಗಳು ಕೂಡ ಈ ಸಾಲಿನಲ್ಲಿ ಸೇರಿಕೊಳ್ಳುತ್ತವೆ. ಮದರ್ ತೆರೇಸಾರಂತಹ ತಾಯಿಯ ಸೇವೆ ವಿಶ್ವಮಾನ್ಯವಾಗಿದೆ. ಆದರೆ ಅವರ ಬೆನ್ನಿಗೆ ಅಂತರ್‌ರಾಷ್ಟ್ರೀಯ ಮಟ್ಟದ ಸಂಘಟನೆಗಳಿದ್ದವು ಎನ್ನುವುದನ್ನೂ ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ. ಇವರೆಲ್ಲರ ಗುರಿ ಬಡವರ, ದುರ್ಬಲರ ಸೇವೆಯೇ ಆಗಿದೆ. ಇಂದು ಈ ದೇಶದಲ್ಲಿ ದುರ್ಬಲರ ಏಳಿಗೆಗಾಗಿ ಸರಕಾರ ಮಾಡುವಷ್ಟೇ ಸಹಾಯವನ್ನು ಇಂತಹ ಸಂಸ್ಥೆ, ಸಂಘಟನೆಗಳು ಮಾಡುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

   ಆದರೆ ಸಮಾಜ ಸೇವೆ ಹಣವಿದ್ದವರ ‘ಗುತ್ತಿಗೆ’ಯೇನೂ ಅಲ್ಲ ಎನ್ನುವುದು ಮೊದಲ ಬಾರಿಗೆ ಹಾಜಬ್ಬರವರಿಂದ ಸಾಬೀತಾಯಿತು. ಈ ಹಿಂದೆ ಇಂತಹದೇ ಸಾಧನೆಯನ್ನು ಸಾಲುಮರ ತಿಮ್ಮಕ್ಕ ಮಾಡಿ ತೋರಿಸಿದ್ದರು. ರಸ್ತೆಯಲ್ಲಿ ಸಾಲುಮರಗಳನ್ನು ನೆಟ್ಟು, ಅದಕ್ಕೆ ನೀರುಣಿಸುವ ಮೂಲಕ ನೂರಾರು ಮರಗಳ ತಾಯಿಯಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಅದೇ ರೀತಿಯಲ್ಲಿ ಸಾಧನೆಗೆ ಇನ್ನೊಂದು ಮಾದರಿ ಹಾಜಬ್ಬ. ಸಾಧಾರಣವಾಗಿ ಶಾಲೆ ಕಾಲೇಜುಗಳನ್ನು ಕಟ್ಟುವವರು ಬೃಹತ್ ಉದ್ಯಮಿಗಳು. ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಾಲೇಜುಗಳನ್ನು, ವಿಶ್ವವಿದ್ಯಾನಿಲಯಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ಗುರುತಿಸಿಕೊಂಡ ಉದ್ಯಮಿಗಳಿದ್ದಾರೆ. ಅವರು ಕಟ್ಟಿರುವ ಈ ಶಿಕ್ಷಣ ಸಂಸ್ಥೆಗಳನ್ನು ಕೇವಲ ಸೇವೆಯೆಂದು ಭಾವಿಸುವಂತಿಲ್ಲ. ಇದರ ಹಿಂದೆ ಔದ್ಯಮಿಕ ಉದ್ದೇಶಗಳೂ ಇವೆ. ಈ ಕಾಲೇಜುಗಳು ಹಣದ ತಳಹದಿಯ ಮೇಲೆ ನಿಂತಿವೆ. ಈ ಕಾಲೇಜುಗಳು ಸೇವೆಗಿಂತ ಹಣ ಸಂಪಾದನೆಯ ಭಾಗವಾಗಿಯೂ ಕೆಲಸ ಮಾಡುತ್ತಿವೆ. ಆದುದರಿಂದ ಹಾಜಬ್ಬರ ನಿಷ್ಕಳಂಕ ಸೇವೆಯ ಜೊತೆಗೆ ಇದನ್ನು ತಳಕು ಹಾಕಲು ಸಾಧ್ಯವಿಲ್ಲ. ಹಾಜಬ್ಬ ಕಟ್ಟಿದ ಶಾಲೆ, ಈ ದೇಶದ ಬೃಹತ್ ಉದ್ಯಮಿಗಳು ಕಟ್ಟಿದ ಬೃಹತ್ ವಿಶ್ವವಿದ್ಯಾನಿಲಯಗಳಿಗಿಂತಲೂ ದೊಡ್ಡದಾಗಿ ಕಾಣುವುದು ಈ ಕಾರಣಕ್ಕಾಗಿ.

 ಬುದ್ಧ ತನ್ನ ಧರ್ಮ ಪ್ರಚಾರಕ್ಕಾಗಿ ವಿವಿಧ ದಾನಿಗಳಿಂದ ದೇಣಿಗೆಗಳನ್ನು ಪಡೆಯುತ್ತಿದ್ದನಂತೆ. ಆಗ ಅಲ್ಲಿಗೆ ಒಬ್ಬ ಬಡ ವೃದ್ಧೆ ದೇಣಿಗೆ ನೀಡಲು ಮುಂದೆ ಬಂದಳು. ದೊಡ್ಡ ದೊಡ್ಡ ವರ್ತಕರೆಲ್ಲ ಆಕೆಯನ್ನು ವ್ಯಂಗ್ಯ ಮಾಡಿ ದೂರ ತಳ್ಳಲು ನೋಡಿದರು. ಬುದ್ಧ ಅವಳೆಡೆಗೆ ಧಾವಿಸಿ ಆಕೆಯ ಕೈಯಿಂದ ಒಂದು ವರಹವನ್ನು ಸ್ವೀಕರಿಸಿ ಹೇಳಿದನಂತೆ, ‘ಈ ಒಂದು ವರಹ ಉಳಿದವರು ನೀಡಿದ ಕೋಟಿ ವರಹಗಳಿಗಿಂತ ಬೆಲೆ ಬಾಳುತ್ತದೆ. ಯಾಕೆಂದರೆ, ಈಕೆ ತನ್ನಲ್ಲಿದ್ದ ಸರ್ವ ಸಂಪತ್ತನ್ನು ದೇಣಿಗೆಯಾಗಿ ನೀಡಿದ್ದಾಳೆ’

 ‘ಹಣವಿದ್ದಿದ್ದರೆ ನಾನೂ ಸಮಾಜಸೇವೆ ಮಾಡುತ್ತಿದ್ದೆ’ ಎಂದು ಹೇಳುವ ಅಥವಾ ರಾಜಕೀಯ ಮತ್ತು ಇನ್ನಿತರ ಆರ್ಥಿಕ ಕಾರಣಗಳನ್ನು ದೃಷ್ಟಿಯಲ್ಲಿಟ್ಟು ಸಮಾಜ ಸೇವೆ ಮಾಡುವ ‘ಸಮಾಜ ಸೇವಕ’ರಿಗೆ ಹರೇಕಳ ಹಾಜಬ್ಬ ಒಂದು ಉತ್ತರವಾಗಿದ್ದಾರೆ. ಸೇವೆ ಮಾಡಲು ಹಣದ ಅಗತ್ಯವಿಲ್ಲ, ಅದಕ್ಕೆ ಬೇಕಾಗಿರುವುದು ಇಚ್ಛಾಶಕ್ತಿ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ. ಅನೇಕರು ಸಮಾಜಸೇವೆಗೈದು ಆ ಮೂಲಕ ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಬಳಿಕ ತಣ್ಣಗೆ ಉಳಿದು ಬಿಡುತ್ತಾರೆ. ಆದರೆ ಹಾಜಬ್ಬ ಶಾಲೆ ಕಟ್ಟಲು ಹೊರಟಾಗ ಇಂತಹ ಪ್ರಶಸ್ತಿಗಳನ್ನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಮಂಗಳೂರಿನಲ್ಲಿ ಕಿತ್ತಳೆ ಮಾರಿ ಬದುಕು ದೂಡುತ್ತಿದ್ದ ಅವರಲ್ಲಿ, ತಮ್ಮೂರಿಗೂ ಒಂದು ಶಾಲೆ ಬೇಕು ಎಂಬ ಆಸೆ ಮೂಡಿತು. ಕಿತ್ತಳೆ ಮಾರಿ ಮನೆಯನ್ನು ಪೊರೆಯುವುದೇ ಕಷ್ಟವಾಗಿರುವಾಗ, ಶಾಲೆಯೊಂದು ಬೇಕು ಎಂದು ಚಿಂತಿಸತೊಡಗಿದ್ದೇ ಅವರ ಒಳಗಿನ ಉದಾತ್ತತೆಯನ್ನು ಹೇಳುತ್ತದೆ. ಕೆಲವು ಶ್ರೀಮಂತರ ಹಣ ‘ಶ್ವಾನದ ಮೊಲೆಯಲ್ಲಿರುವ ಹಾಲಿನಂತೆ’ ತನಗಾಯಿತು ತನ್ನ ಮಕ್ಕಳಿಗಾಯಿತು ಎಂದು ತಿಜೋರಿಯಲ್ಲಿರುತ್ತದೆ. ಆದರೆ ಹಾಜಬ್ಬ ತನ್ನ ಮೊಲೆಯಲ್ಲಿ ಹಾಲೇ ಇಲ್ಲದಿದ್ದರೂ, ತನ್ನ ಊರಿಗೆ ಅಕ್ಷರದ ಹಾಲೂಡಿಸುವ ಕನಸೊಂದನ್ನು ಕಂಡರು.

ನಾವು ಒಳಿತಿನ ಕನಸುಗಳನ್ನು ಕಂಡರೆ, ಅದು ನನಸಾಗುವ ದಾರಿ ತನ್ನಷ್ಟಕ್ಕೇ ತೆರೆದುಕೊಂಡು ಹೋಗುತ್ತದೆ ಎನ್ನುವುದು ಅವರ ಪಾಲಿಗೆ ನಿಜವಾಯಿತು. ಕೈಯಲ್ಲಿ ಹಣವಿಲ್ಲದಿದ್ದರೂ ವಿವಿಧ ಗಣ್ಯರ ನಿವಾಸಗಳಿಗೆ, ಸರಕಾರಿ ಕಚೇರಿಗಳಿಗೆ ಅಲೆಯುತ್ತಾ ತಮ್ಮ ಕನಸನ್ನು ನಿಜ ಮಾಡಿ ತೋರಿಸಿಯೇ ಬಿಟ್ಟರು. ಹಾಜಬ್ಬರ ಮೂಲಕ ಭೂಮಿಗಿಳಿದದ್ದು ಒಂದು ಸಣ್ಣ ಪ್ರಾಥಮಿಕ ಶಾಲೆಯೇ ಆಗಿರಬಹುದು. ಆದರೆ ಅದು ಬೃಹತ್ ಉದ್ಯಮಿಗಳು ಕಟ್ಟಿದ ಬೃಹತ್ ಕಾಲೇಜುಗಳ ಎತ್ತರವನ್ನು ಮೀರಿಸಿ ಎಲ್ಲರ ಗಮನವನ್ನು ಸೆಳೆಯಿತು. ಯಾವಾಗ ಹಾಜಬ್ಬರ ನಿಷ್ಕಳಂಕ ಸೇವೆ ಮಾಧ್ಯಮಗಳಲ್ಲಿ ಪ್ರಕಟವಾಯಿತೋ ಅವರನ್ನು ಸನ್ಮಾನಗಳು ಅರಸಿಕೊಂಡು ಬಂದವು. ವಿಶೇಷವೆಂದರೆ ಸನ್ಮಾನದಲ್ಲಿ ಸಿಕ್ಕಿದ ಹಣವನ್ನೂ ಅವರು ಶಾಲೆಗಾಗಿ ನೀಡತೊಡಗಿದರು. ತಮ್ಮ ಮುಂದೆ ಕಿತ್ತಳೆ ಹಣ್ಣು ಮಾರುತ್ತಾ ಬದುಕುತ್ತಿದ್ದ ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ವ್ಯಕ್ತಿಯೊಬ್ಬ ತನ್ನ ಸೇವೆಯ ಕಾರಣಕ್ಕಾಗಿ ಪ್ರಚಾರ ಪಡೆದುಕೊಳ್ಳುತ್ತಿರುವುದು ಹಲವು ಶ್ರೀಮಂತ ಉದ್ಯಮಿಗಳ ಆತ್ಮವನ್ನು ಚುಚ್ಚತೊಡಗಿತ್ತು. ಹಲವರು ‘‘ಆತನಿಗೆ ಹುಚ್ಚು’’ ಎಂದರು. ‘‘ತನ್ನ ಮನೆಯನ್ನು ಸಾಕಲಾರದಾತ ಶಾಲೆಗೆ ಹಣ ಕೊಡುತ್ತಿದ್ದಾನೆ’’ ಎಂದು ನಿಂದಿಸಿದರು. ಅವರೆಲ್ಲರ ಅಸಹನೆಯ ಮುಖ್ಯ ಕಾರಣ ‘‘ಹಣವಿದ್ದೂ ತಮ್ಮಿಂದ ಸಾಧ್ಯವಾಗದೇ ಇದ್ದುದನ್ನು ಕೈಯಲ್ಲಿ ಹಣವಿಲ್ಲದೆ ಕಿತ್ತಳೆ ಹಣ್ಣು ಮಾರುತ್ತಿದ್ದ ಓರ್ವ ಮಾಡಿದನಲ್ಲ’ ಎನ್ನುವ ಕೀಳರಿಮೆಯಾಗಿತ್ತು. ಪರೋಕ್ಷವಾಗಿ ಈ ಬಡ ಹಾಜಬ್ಬ ಅವರು ದುಡ್ಡಿದ್ದೂ , ಸಮಾಜಕ್ಕಾಗಿ ನಯಾಪೈಸೆ ಕೊಡುಗೆಯಾಗಿ ಕೊಡದೆ ಸ್ವಾರ್ಥಿಗಳಾಗಿ ಬಾಳುತ್ತಿರುವ ಶ್ರೀಮಂತರ ಆತ್ಮಸಾಕ್ಷಿಯನ್ನು ಚುಚ್ಚಿದ್ದರು.

ಪದ್ಮಶ್ರೀ ಪ್ರಶಸ್ತಿ ಪಡೆದರೂ ಹಾಜಬ್ಬ ತನ್ನ ಸರಳತೆಯನ್ನು ಕೈ ಬಿಡಲಿಲ್ಲ. ಇಂದಿಗೂ ಅವರು ಕಸಪೊರಕೆಯಿಂದ ಶಾಲೆಯ ಅಂಗಳವನ್ನು ಗುಡಿಸಬಲ್ಲರು. ಯಾವುದೇ ರಾಜಕೀಯಕ್ಕೆ ಅಥವಾ ಇನ್ನಿತರ ದುರುದ್ದೇಶಕ್ಕೆ ಈ ಗೌರವವನ್ನು ಬಳಸಿಕೊಳ್ಳಲಿಲ್ಲ. ತನ್ನ ವಿನಯವನ್ನು ತ್ಯಜಿಸಲಿಲ್ಲ. ಹರೇಕಳ ಎನ್ನುವ ಪುಟ್ಟ ಊರು ಇಂದು ಹಾಜಬ್ಬರಿಂದಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಈ ಕಾರಣದಿಂದ ಹರೇಕಳ ಹಾಜಬ್ಬರ ಸಾಧನೆ ಗೌರವಿಸಿ ಮಂಗಳೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟನ್ನು ನೀಡಬೇಕು. ಹರೇಕಳದಲ್ಲಿರುವ ಶಾಲೆಗೆ ಹಾಜಬ್ಬರ ಹೆಸರನ್ನು ಇಡಬೇಕು. ಸೇವೆಗಿರುವ ಹಲವು ದಾರಿಗಳನ್ನು ಈ ಮೂಲಕ ಮುಂದಿನ ತಲೆಮಾರಿನ ಜನರಿಗೆ ತಿಳಿಸಿಕೊಡುವ ಪ್ರಯತ್ನ ನಡೆಯಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)