varthabharthi


ವಿಶೇಷ-ವರದಿಗಳು

ಸಾವರ್ಕರ್ ಮತ್ತು ಬಿಜೆಪಿ

ವಾರ್ತಾ ಭಾರತಿ : 15 Feb, 2020
ಎ.ಜಿ. ನೂರಾನಿ

ಭಾಗ-2

3) 1924ರ ಜನವರಿ 5ರಂದು ಸಾವರ್ಕರ್‌ರವರ ಬಿಡುಗಡೆಗೆ ಅಂದಿನ ಮುಂಬೈ ಸರಕಾರ ಹೊರಡಿಸಿದ ಆಜ್ಞೆ:

‘‘ಬಿಡುಗಡೆಗೆ ವಿಧಿಸಲಾಗಿರುವ ಷರತ್ತುಗಳು. 1. ಉಲ್ಲೇಖಿಸಲಾದ ವಿನಾಯಕ್ ದಾಮೋದರ್ ಸಾವರ್ಕರ್ ಮುಂಬೈಯ ರಾಜ್ಯಪಾಲರ ಆಡಳಿತಕ್ಕೊಳಪಟ್ಟ ಪ್ರದೇಶದ ಒಳಗಡೆಯೇ ವಾಸಿಸತಕ್ಕದ್ದು... ಸರಕಾರ ಅನುಮತಿ ಇಲ್ಲದೆ ಈ ಪ್ರದೇಶಗಳ ವ್ಯಾಪ್ತಿಯಿಂದ ಹೊರಗೆ ಹೋಗುವಂತಿಲ್ಲ. 2. ಸರಕಾರದ ಒಪ್ಪಿಗೆ ಇಲ್ಲದೆ ಅವರು ಐದು ವರ್ಷಗಳ ಕಾಲ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ...’’

‘‘ಮಿಸ್ಟರ್ ಸಾವರ್ಕರ್ ಈಗಾಗಲೇ ಈ ಷರತ್ತುಗಳಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿದ್ದಾರೆ...’’ (‘ಸಾವರ್ಕರ್ ಆ್ಯಂಡ್ ಗಾಂಧಿ’’, ಫ್ರಂಟ್‌ಲೈನ್, ಮಾರ್ಚ್ 28, 2003)

4) 1948ರ ಜನವರಿ 30ರಂದು ಗಾಂಧೀಜಿ ಅವರ ಹತ್ಯೆಯ ಬಳಿಕ, 1948ರ ಫೆಬ್ರವರಿ 28ರಂದು ಸಾವರ್ಕರ್ ಪೊಲೀಸ್ ಕಮಿಷನರ್ ಅವರಿಗೆ ಬರೆದ ಪತ್ರ ‘‘ಎಲ್ಲ ಅನುಮಾನಗಳನ್ನು ನಿವಾರಿಸಲು ನಾನು ಯಾವುದೇ ಕೋಮುವಾದಿ ಅಥವಾ ರಾಜಕೀಯ ಸಾರ್ವಜನಿಕ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವೆಂದು, ಈ ಷರತ್ತಿನ ಮೇರೆಗೆ ನನ್ನ ಬಿಡುಗಡೆಯಾದಲ್ಲಿ ನಾನು ಸರಕಾರಕ್ಕೆ ಮುಚ್ಚಳಿಕೆ ಪತ್ರ ಬರೆದು ಕೊಡಲು ಸಿದ್ಧನಿದ್ದೇನೆ ಎಂದು ಈ ಮೂಲಕ ತಮಗೆ ತಿಳಿಯಪಡಿಸಲು ಬಯಸುತ್ತೇನೆ.’’

5) 1950ರಲ್ಲಿ ಬರೆದುಕೊಟ್ಟ ಮುಚ್ಚಳಿಕೆ ಪತ್ರ 1950ರ ಪ್ರತಿಬಂಧಕ ತಡೆ ಕಾಯ್ದೆಯ ಪ್ರಕಾರ 1950ರ ಎಪ್ರಿಲ್ 4ರಂದು, ಹಿಂದೂ ಮಹಾಸಭಾದ ಇತರ ನಾಯಕರೊಂದಿಗೆ ಸಾವರ್ಕರ್ ಅವರನ್ನು ಬಂಧಿಸಲಾಯಿತು. ಜೈಲಿನಿಂದ ತನ್ನನ್ನು ಬಿಡುಗಡೆ ಮಾಡಬೇಕೆಂದು ಯಾಚಿಸಿ 1950ರ ಎಪ್ರಿಲ್ 26ರಂದು ಅವರು ರಾಜ್ಯ ಸರಕಾರಕ್ಕೆ ಒಂದು ಪತ್ರ ಬರೆದರು. ಅವರ ಜೀವನ ಚರಿತ್ರೆಕಾರ ಧನಂಜಯ್ ತೀರ್ ಹೀಗೆ ದಾಖಲಿಸುತ್ತಾರೆ: ‘‘ಒಂದು ವೇಳೆ ಸರಕಾರ ಬೇಷರತ್ ಆಗಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಒಪ್ಪದಿದ್ದಲ್ಲಿ, ತಾನು ಹಾಲಿ ರಾಜಕಾರಣದಲ್ಲಿ, ಸರಕಾರ ವಿಧಿಸುವ ಯಾವುದೇ ಅವಧಿಯವರೆಗೆ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇರೆಗೆ ತನ್ನನ್ನು ಬಿಡುಗಡೆ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು... ತಾನು ರಾಜಕೀಯ ರಂಗದಿಂದ ನಿವೃತ್ತನಾಗುವ ಬಗ್ಗೆ ಅದಾಗಲೇ ಯೋಚಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಕೂಡ ಅವರು ಹೇಳಿದರು...’’

‘‘ಮುಂಬೈ ಸರಕಾರ ಸಾವರ್ಕರ್‌ರ ವಿನಂತಿಯನ್ನು, ಕೊಡುಗೆಯನ್ನು ತಿರಸ್ಕರಿಸಿತು. ಅವರ ಪುತ್ರ ವಿಶ್ವಾಸ್ ಮುಂಬೈ ಹೈಕೋರ್ಟ್‌ನಲ್ಲಿ ಒಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಮುಖ್ಯ ನ್ಯಾಯಮೂರ್ತಿಗಳಾದ ಎಂ.ಸಿ. ಛಾಗ್ಲಾ ಮತ್ತು ಪಿ.ಬಿ ಗಜೇಂದ್ರಗಡ ಅವರ ಮುಂದೆ ಅದು ವಿಚಾರಣೆಗೆ ಬಂದಾಗ ಅಡ್ವೊಕೇಟ್ ಜನರಲ್ ಸಿ. ಕೆ. ದಫ್ತರಿ ಸರಕಾರದ ಸೂಚನೆ ಪಡೆಯಲು ಒಂದು ದಿವಸ ಕಾಲಾವಕಾಶ ಕೇಳಿದರು. ಸಾವರ್ಕರ್ ತಾನು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಹಾಗೂ ಮುಂಬೈಯ ತನ್ನ ಮನೆಯಲ್ಲೇ ಉಳಿಯುವುದಾಗಿ ಸರಕಾರಕ್ಕೆ ಮುಚ್ಚಳಿಕೆ ಬರೆದು ಕೊಡುವುದಾದಲ್ಲಿ ಸರಕಾರ ಅವರ ಬಿಡುಗಡೆಗೆ ಸಮ್ಮತಿಸುವುದಾಗಿ ಜುಲೈ 13ರಂದು ಸಿ. ಕೆ. ದಫ್ತರಿ ನ್ಯಾಯಾಲಯಕ್ಕೆ ತಿಳಿಸಿದರು. ಸಾವರ್ಕರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಕೆ. ಎನ್. ಧರಪ್ ಸರಕಾರದ ಷರತ್ತುಗಳಿಗೆ ಸಾವರ್ಕರ್ ಒಪ್ಪಿರುವುದಾಗಿ ನೀಡಿದ ಮುಚ್ಚಳಿಕೆಯ ಆಧಾರದಲ್ಲಿ ನ್ಯಾಯಮೂರ್ತಿಗಳು ಅವರು ಬಿಡುಗಡೆಗೆ ಆಜ್ಞೆ ಹೊರಡಿಸಿದರು. ಈ ಮುಚ್ಚಳಿಕೆಯ ಅವಧಿ ಒಂದು ವರ್ಷದವರೆಗೆ ಅಥವಾ ಭಾರತದಲ್ಲಿ ನಡೆಯುವ ಮುಂದಿನ ಸಾರ್ವತ್ರಿಕ ಚುನಾವಣೆಗಳವರೆಗೆ ಅಥವಾ ಭಾರತ ಯಾವುದೇ ಯುದ್ಧದಲ್ಲಿ ಒಳಗೊಳ್ಳುವವರೆಗೆ, ಇವುಗಳಲ್ಲಿ ಯಾವುದು ಮೊದಲು ಸಂಭವಿಸುತ್ತದೋ ಅಲ್ಲಿಯವರೆಗೆ’’.

‘‘ಒಂದು ವರ್ಷದವರೆಗೆ ನಾನು ರಾಜಕಾರಣ ದಲ್ಲಿ ಭಾಗವಹಿಸದಂತೆ ಸರಕಾರ ನನ್ನ ಮೇಲೆ ವಿಧಿಸಿರುವ ನಿಷೇಧದ ನೆಲೆಯಲ್ಲಿ ನಾನು ಹಿಂದೂ ಮಹಾಸಭಾದ ಪ್ರಾಥಮಿಕ ಸದಸ್ಯತ್ವಕ್ಕೆ ಕೂಡ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಲೇಬೇಕಾಗಿದೆ’’ ಎಂದು ಸಾವರ್ಕರ್ 1950ರ ಜುಲೈ 20ರಂದು ಹೇಳಿದ್ದರು.

6) 1939ರ ಅಕ್ಟೋಬರ್ 9ರಂದು ಸಾವರ್ಕರ್ ಭಾರತದ ಪಕ್ಕಾ ಸಾಮ್ರಾಜ್ಯಶಾಹಿ ವೈಸ್ರಾಯ್ ಲಾರ್ಡ್ ಲಿನ್‌ಲಿತ್‌ಗೊ ಅವರನ್ನು ಮುಂಬೈಯಲ್ಲಿ ಭೇಟಿಯಾಗಿ ತಾನು ಬ್ರಿಟಿಷರಿಗೆ ಸಹಕಾರ ನೀಡುವುದಾಗಿ ವಾಗ್ದಾನ ನೀಡಿದರು. ಲಿನ್‌ಲಿತ್‌ಗೊ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿ ಲಾರ್ಡ್ ಝೆಟ್‌ಲಾಂಡ್‌ಗೆ ಆ ಬಗ್ಗೆ ಹೀಗೆ ವರದಿ ಮಾಡಿದರು: ‘‘ಅವರು (ಸಾವರ್ಕರ್) ಬ್ರಿಟಿಷ್ ಸರಕಾರ ಈಗ ಹಿಂದೂಗಳ ಕಡೆಗೆ ತಿರುಗಬೇಕು ಮತ್ತು ಅವರ (ಹಿಂದೂಗಳ) ಬೆಂಬಲದೊಂದಿಗೆ ಕಾರ್ಯವೆಸಗಬೇಕು ಎಂದು ಹೇಳಿದರು. ಕಳೆದ ವರ್ಷಗಳಲ್ಲಿ ನಮ್ಮ ಮತ್ತು ಹಿಂದೂಗಳ ನಡುವೆ ಸಾಕಷ್ಟು ಸಮಸ್ಯೆಗಳಿದ್ದವಾದರೂ,.. ಈಗ ನಮ್ಮ ಹಿತಾಸಕ್ತಿಗಳು ಒಂದೇ ಸ್ವರೂಪದ್ದಾಗಿದೆ. ಆದ್ದರಿಂದ ನಾವು ಒಟ್ಟಾಗಿ ಕೆಲಸ ಮಾಡಲೇಬೇಕಾಗಿದೆ. ಅವರು (ಸಾವರ್ಕರ್) ಈ ಹಿಂದೆ ಒಂದು ಕ್ರಾಂತಿ ಪಕ್ಷಕ್ಕೆ ಆತುಕೊಂಡವರಾಗಿದ್ದರು. ಆದರೆ ಈಗ ನಮ್ಮ ಹಿತಾಸಕ್ತಿಗಳು ಪರಸ್ಪರ ಒಂದಕ್ಕೊಂದು ಬಹಳ ಹತ್ತಿರವಾಗಿವೆ. ಹಿಂದೂಯಿಸಂ ಮತ್ತು ಗ್ರೇಟ್ ಬ್ರಿಟನ್ ಈಗ ಮಿತ್ರ ರಾಗಬೇಕು ಮತ್ತು ಹಾಗಾಗಿ (ನಮ್ಮ ಮತ್ತು ಹಿಂದೂಗಳ ನಡುವಿನ) ಹಳೆಯ ವಿರೋಧದ ಅವಶ್ಯಕತೆ ಇನ್ನು ಮುಂದಕ್ಕೆ ಇಲ್ಲವಾಗಿದೆ.’’

ಮನುಕುಲದ ಸಮಗ್ರ ಇತಿಹಾಸದಲ್ಲಿ ಇಷ್ಟೊಂದು ಅಂಗಲಾಚುವ, ಇಷ್ಟೊಂದು ಬಾರಿ ನೀಡಲಾದ ಕ್ಷಮಾಯಾಚನೆ ಪತ್ರಗಳಿಗೆ ಯಾವುದೇ ಪೂರ್ವನಿದರ್ಶನವಿದೆಯೇ?

(ಮುಂದುವರಿಯುವುದು)

ಕೃಪೆ: frontline

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)