varthabharthi


ಸಿನಿಮಾ

ಡೆಮೋ ಪೀಸ್: ವಾಸ್ತವದ ಸಸಿಗೆ ಫ್ಯಾಂಟಸಿಯ ಕಸಿ

ವಾರ್ತಾ ಭಾರತಿ : 16 Feb, 2020

ಕಾಲೇಜ್ ವಿದ್ಯಾರ್ಥಿಯ ಕತೆ ಎಂದಾಗ ಸಾಮಾನ್ಯ ಪ್ರೇಕ್ಷಕರಲ್ಲಿ ಕೆಲವೊಂದು ನಿರೀಕ್ಷೆಗಳಿರುತ್ತವೆ. ಒಬ್ಬ ವಿದ್ಯಾರ್ಥಿ ನಾಯಕ, ಆತನಿಗೊಬ್ಬಳು ನಾಯಕಿ, ಮತ್ತೋರ್ವ ಖಳನಾಯಕ.. ಹೀಗೆ. ಇಂತಹ ಕಲ್ಪನೆಯೊಳಗೆ ಸಾಗದೆ, ಒಬ್ಬ ಹರೆಯದ ವಿದ್ಯಾರ್ಥಿಯ ನೈಜ ಭಾವನೆಗಳ ಸಮೀಪದಲ್ಲೇ ಸಾಗುವ ಚಿತ್ರ ಇದು.

ಹರ್ಷ ಒಬ್ಬ ಕಾಲೇಜ್ ಹುಡುಗ. ಮನೆಯಲ್ಲಿ ತಕ್ಕ ಮಟ್ಟಿಗೆ ಶ್ರೀಮಂತಿಕೆ ಇದೆ. ಆದರೆ ತನ್ನ ಕಾಲೇಜ್ ಲೈಫ್ ಎಂಜಾಯ್ ಮಾಡುವಷ್ಟು ದುಡ್ಡು ಕೈಗೆ ಸಿಗುತ್ತಿಲ್ಲ ಎನ್ನುವುದು ಆತನ ಚಿಂತೆ. ದುಡ್ಡಿಗಾಗಿ ಅಡ್ಡದಾರಿ ಹಿಡಿದು ಸಾಲ ಮಾಡುತ್ತಾನೆ. ಸಾಲಬಾಧೆ ತಾಳದೆ ಆತ್ಮಹತ್ಯೆಗೆ ನಿರ್ಧರಿಸುತ್ತಾನೆ. ಡಾಕ್ಟರ್ ಆತನ ಸಾವಿನ ಬಗ್ಗೆ ಖಚಿತ ಪಡಿಸುವಲ್ಲಿಗೆ ಚಿತ್ರದ ಮಧ್ಯಂತರ ತಲುಪಿರುತ್ತದೆ. ಕಮರ್ಷಿಯಲ್ ಚಿತ್ರವೊಂದು ಮಧ್ಯಂತರದಲ್ಲೇ ನಾಯಕನನ್ನು ಬಲಿ ತೆಗೆದುಕೊಳ್ಳುವುದಿಲ್ಲ. ಇದು ಕನಸಾಗಿರಬೇಕು ಅಥವಾ ನಾಯಕ ದ್ವಿಪಾತ್ರದಲ್ಲಿರಬೇಕು ಎನ್ನುವಷ್ಟನ್ನು ಪ್ರೇಕ್ಷಕರು ಕೂಡ ಅರಿತುಕೊಂಡಿದ್ದಾರೆ. ನಿರೀಕ್ಷೆ ಸುಳ್ಳಾಗುವುದಿಲ್ಲವಾದರೂ, ನಾಯಕ ಮರುಹುಟ್ಟು ಪಡೆಯುವ ರೀತಿಯೇ ವಿಭಿನ್ನ. ಕತೆ ದೇವಲೋಕಕ್ಕೆ ಶಿಫ್ಟಾಗುತ್ತದೆ. ಆತನಿಗೆ ಇನ್ನೂ ಐವತ್ತು ವರ್ಷಗಳ ಆಯಸ್ಸು ಇದೆ ಎಂದು ಅರಿತ ಬ್ರಹ್ಮದೇವ ಮರಳಿ ಭೂಮಿಗೆ ಕಳುಹಿಸುತ್ತಾನೆ. ಹಾಗೆ ಕಳುಹಿಸುವಾಗ ಕೈ ಇಟ್ಟಲ್ಲೆಲ್ಲ ದುಡ್ಡಾಗುವಂತೆ ವರನೀಡುತ್ತಾನೆ. ಹಾಗೆ ನೈಜತೆಯಿಂದ ಸಾಗುವ ಕತೆಗೆ ಫ್ಯಾಂಟಸಿ ನುಸುಳುತ್ತದೆ. ಆದರೆ ಆನಂತರ ಚಿತ್ರ ಮೊದಲಿನ ಟ್ರ್ಯಾಕಲ್ಲೇ ಸಾಗುತ್ತದೆ. ಒಂದು ರೀತಿ ನಿರ್ದೇಶಕರು ಪ್ರಥಮದಲ್ಲೇ ತೆಲುಗು ಶೈಲಿಯ ಸಿನೆಮಾ ಮಾಡಲು ಪ್ರಯತ್ನ ಮಾಡಿದಂತಿದೆ.

ಹದಿನೆಂಟರ ಆಸುಪಾಸಿನಲ್ಲಿ ಹುಡುಗರು ಹೇಗೆ ವರ್ತಿಸುತ್ತಾರೆ. ಅವರಿಗೆ ಹಣವೇ ಮುಖ್ಯ ಎಂದು ಯಾಕೆ ಅನಿಸುತ್ತದೆ. ಆದರೆ ನಿಜವಾದ ಸತ್ಯ ಏನಿರುತ್ತದೆ ಎನ್ನುವುದನ್ನು ಸ್ವಾನುಭವದ ಮೂಲಕ ಕಲಿಯುವ ಯುವಕನ ಕತೆ ಇದು. ಸಿನೆಮಾದಲ್ಲಿ ನಾಯಕನ ಪಾತ್ರ ಯಾವುದೇ ಇಮೇಜ್ ರಹಿತ ನಟನಿಗಷ್ಟೇ ಹೊಂದುವಂತಹ ಪಾತ್ರ. ಹಾಗಾಗಿ ಹರ್ಷನ ಪಾತ್ರಕ್ಕೆ ಭರತ್ ಬೋಪಣ್ಣ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮಾತ್ರವಲ್ಲ, ಪಾತ್ರಕ್ಕೆ ತಕ್ಕಂತೆ ಅಭಿನಯ ನೀಡುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ನವಯುವಕನ ಸಿಟ್ಟು ಸೆಡವು, ಆತಂಕ, ಬೇಜವಾಬ್ದಾರಿತನ ಎಲ್ಲವನ್ನೂ ಪಾತ್ರದ ಮೂಲಕ ತೋರಿಸಿದ್ದಾರೆ. ಮಧ್ಯಂತರದ ಬಳಿಕವಂತೂ ಉದ್ಧಟತನದ ವರ್ತನೆಗಳಲ್ಲಿ ಉಪೇಂದ್ರ ಮೈಗೆ ಹೊಕ್ಕಂತೆ ಅಭಿನಯಿಸಿದ್ದಾರೆ!

ಸೊನಾಲ್ ಮೊಂತೆರೋ ನಾಯಕನ ಕನಸಿನ ಹುಡುಗಿಯಾಗಿ ಮನಸೆಳೆಯುತ್ತಾರೆ. ಈಗಾಗಲೇ ಶೃಂಗಾರದ ಹೊಂಗೇ ಮರ ಹಾಡಿನಿಂದ ಗ್ಲಾಮರಸ್ ಹುಡುಗಿಯಾಗಿ ಗುರುತಿಸಿಕೊಂಡಿದ್ದ ಸೊನಾಲ್, ತಾನು ಪಕ್ಕದ್ಮನೆ ಹುಡುಗಿಯ ಪಾತ್ರದಲ್ಲಿ ಕೂಡ ಹೊಂದಿಕೊಳ್ಳಬಲ್ಲೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ರೇಖಾ ಅವರು ಮಮತಾಮಯಿ. ಕ್ರಿಕೆಟ್ ಬುಕ್ಕಿಗಳ ಮಧ್ಯವರ್ತಿಯಾಗಿ ಅಭಿನಯಿಸಿರುವ ಚಕ್ರವರ್ತಿ ಚಂದ್ರಚೂಡ್ ಖಳನ ಛಾಯೆಯನ್ನು ವಾಸ್ತವಕ್ಕೆ ಹೊಂದಿಕೊಂಡಂತೆ ಅಭಿನಯಿಸಿದ್ದಾರೆ. ರಾಕ್ಲೈನ್ ಸುಧಾಕರ್ ಅವರು ಕೂಡ ದೃಶ್ಯವೊಂದರಲ್ಲಿ ಬಂದು ಹೋಗುತ್ತಾರೆ. ಉಳಿದಂತೆ ಹೆಚ್ಚಿನ ಪಾತ್ರಧಾರಿಗಳು ಬೆಳ್ಳಿತೆರೆಗೆ ಅಪರೂಪದ ಮುಖಗಳು. ಸಂಭಾಷಣೆಗಳಲ್ಲಿ ತೂಕ ಕಳೆದುಕೊಂಡವುಗಳೇ ಹೆಚ್ಚು. ಯುವಕನ ಪಾತ್ರವನ್ನು ತೃತೀಯ ಲಿಂಗಿಯಂತೆ ಚಿತ್ರಿಸಿ ಹಾಸ್ಯದ ಹೆಸರಲ್ಲಿ ವ್ಯಂಗ್ಯ, ಅಶ್ಲೀಲತೆ ತುರುಕಿರುವುದು ಅಕ್ಷಮ್ಯ. ಆದರೆ ಹಾಡುಗಳು ಆಕರ್ಷಕ. ಅದರಲ್ಲಿ ಕೂಡ ರಾಜೇಶ್ ಕೃಷ್ಣನ್ ಕಂಠದಲ್ಲಿರುವ ಮೆಲೊಡಿ ಗೀತೆ ಕಾಡುವಂತಿದೆ. ಹಿನ್ನೆಲೆ ಸಂಗೀತವೂ ದೃಶ್ಯಗಳಿಗೆ ಜೀವಂತಿಕೆ ತಂದಿದೆ.

 ಚಿತ್ರದ ಸಂದೇಶ ಚೆನ್ನಾಗಿದೆ. ಆದರೆ ಅದು ತಲುಪಬೇಕಾದ ಯುವಕರು ಥಿಯೇಟರ್‌ಗೆ ಬರಬೇಕು. ಉಳಿದಂತೆ ಕುಟುಂಬ ಪ್ರೇಕ್ಷಕರು ಕೂಡ ನೋಡಬಹುದಾದ ಸಿನೆಮಾ ಇದು.

ತಾರಾಗಣ: ಭರತ್ ಬೋಪಣ್ಣ, ಸೊನಾಲ್ ಮೊಂತೆರೋ
ನಿರ್ದೇಶನ: ವಿವೇಕ್ ಗೌಡ
ನಿರ್ಮಾಣ: ಸ್ಪರ್ಷ ರೇಖಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)