varthabharthi

ವಿಶೇಷ-ವರದಿಗಳು

ಸಾವರ್ಕರ್ ಮತ್ತು ಬಿಜೆಪಿ

ವಾರ್ತಾ ಭಾರತಿ : 16 Feb, 2020
ಎ. ಜಿ. ನೂರಾನಿ

ಭಾಗ-3

ನಾಲ್ಕು ಹತ್ಯೆಗಳು

ಸಾವರ್ಕರ್ ಎಂದೂ ಕೋವಿ ಹಿಡಿಯಲಿಲ್ಲ ತನ್ನ ಅನುಯಾಯಿಯೊಬ್ಬ ಕೋವಿ ಹಿಡಿಯುವಂತೆ ಮಾಡುತ್ತಿದ್ದರು.

1. 1909ರ ಜುಲೈ 1ರಂದು ಲಂಡನ್‌ನ ಇಂಡಿಯಾ ಆಫೀಸ್‌ನಲ್ಲಿ ರಾಜಕೀಯ ಸಲಹೆಗಾರರಾಗಿದ್ದ ಕರ್ನಲ್ ಸರ್ ವಿಲಿಯಂ ಕರ್ಜನ್ ವೈಲಿಯವರನ್ನು ಮದನ್ ಲಾಲ್ ದಿಂಗ್ರಾ ಹತ್ಯೆಗೈದ. ಅವರನ್ನು ಉಳಿಸಲು ಪ್ರಯತ್ನಿಸಿದ ಡಾಕ್ಟರ್ ಕಾವಸ್ ಲಾಲ್‌ಕಲಾ ಕೂಡ ಕೊಲ್ಲಲ್ಪಟ್ಟರು. ಸಾವರ್ಕರ್ ನಿಧನಾನಂತರ ‘ದಿ ಲೈಫ್ ಆ್ಯಂಡ್ ಡೆತ್ ಆಫ್ ಮಹಾತ್ಮಾ ಗಾಂಧಿ’ ಪುಸ್ತಕದ ಲೇಖಕ ರಾಬರ್ಟ್ ಪೇಯ್ನಾರವರೊಡನೆ ಧನಂಜಯ ಕೀರ್ ಈ ರೀತಿಯಾಗಿ ಒಪ್ಪಿಕೊಂಡರು: 1909ರಂದು ಅವರು (ಸಾವರ್ಕರ್) ಸರ್ ಕರ್ಜನ್ ವೈಲಿ ಅವರನ್ನು ಕೊಲೆ ಮಾಡುವಂತೆ ಒಬ್ಬ ಯುವಕನಿಗೆ ಆಜ್ಞೆ ಮಾಡಲು ತಾನು ಸಂಪೂರ್ಣವಾಗಿ ಸಮರ್ಥನೆಂದು ತೋರಿಸಿಕೊಟ್ಟಿದ್ದರು... ಅವರು ಮದನ್‌ಲಾಲ್ ದಿಂಗ್ರಾನಿಗೆ ಒಂದು ನಿಕಲ್ ಪ್ಲೇಟೆಡ್ ರಿವಾಲ್ವರ್ ಕೊಟ್ಟಿದ್ದರು. ಅದನ್ನು ಕೊಡುತ್ತಾ ‘ಈ ಬಾರಿ ನೀನು ವಿಫಲನಾದಲ್ಲಿ ನನಗೆ ನಿನ್ನ ಮುಖ ತೋರಿಸಬೇಡ’ ಎಂದು ಹೇಳಿದ್ದರು. ದಿಂಗ್ರಾ ಒಂದು ಸ್ವಯಂಚಾಲಿತ ಯಂತ್ರ (ಆಟೋಮೇಟನ್)ನಂತೆ ವರ್ತಿಸಿದ್ದ....(ದಿ ಬೋಡ್ಲಿ ಹೆಡ್ 1969, ಪುಟ 206-207)

2. ಅದೇ ವರ್ಷ 1909ರ ಡಿಸೆಂಬರ್ 20ರಂದು ನಾಸಿಕ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಎ.ಎಂ.ಜಿ. ಜಾಕ್ಸನ್ ಅವರನ್ನು ಥಿಯೇಟರ್ ಒಂದರಲ್ಲಿ ಗುಂಡು ಹಾರಿಸಿ ಹತ್ಯೆಗೈಯ್ಯಲಾಯಿತು. ಕೊಲೆಗಾರ ಅನಂತ್ ಕನ್ಹೆರೆಯನ್ನು ಬಂಧಿಸಲಾಯಿತು. ಅದೇನಿದ್ದರೂ ಜಾಕ್ಸನ್ ಗಣೇಶ್ ಸಾವರ್ಕರ್ (ವಿ.ಡಿ. ಸಾವರ್ಕರ್ ಅವರ ಹಿರಿಯ ಸಹೋದರ) ಅವರ ವಿಚಾರಣೆ ನಡೆಸಿರಲಿಲ್ಲ. ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುವಂತಷ್ಟೇ ಅವರು ಮಾಡಿದ್ದರು.

3. ಪ್ರಭಾರ ಗವರ್ನರ್ ಅರ್ನೆಸ್ಟ್ ಹಾಟ್ಸನ್ 1931ರ ಜುಲೈ 22ರಂದು ಪೂನಾದ ಫರ್ಗ್ಯೂಸನ್ ಕಾಲೇಜಿಗೆ ಖಾಸಗಿ ಭೇಟಿ ನೀಡಿದ್ದರು. ಆಗ ವಾಸುದೇವ್ ಬಲವಂತ್ ಗೋಗಟೆ ಎಂಬ ವಿದ್ಯಾರ್ಥಿ ಏಕಾಏಕಿಯಾಗಿ ಒಂದು ರಿವಾಲ್ವರ್ ಹೊರತೆಗೆದು ಅವರೆಡೆಗೆ ಎರಡು ಗುಂಡು ಹಾರಿಸಿದ. ಅವರ ಜೇಬಲ್ಲಿದ್ದ ನೋಟ್ ಬುಕ್ಕಿಗೆ ಒಂದು ಗುಂಡು ತಾಗಿ ಇನ್ನೊಂದು ಗುಂಡು ಗುರಿಯಿಂದ ಆಚೆ ಬಿತ್ತು. ಸರ್ ಅರ್ನೆಸ್ಟ್‌ಗೆ ಏನೂ ಆಗಲಿಲ್ಲ. ತನ್ನ ಸಹಾಯಕನ ನೆರವಿನಿಂದ ಅವರು ಗೋಗಟೆಯನ್ನು ಹಿಡಿದರು. ಗೋಗಟೆ ಬಳಿ ಮತ್ತೊಂದು ರಿವಾಲ್ವರ್ ಇರುವುದನ್ನು ಸಹಾಯಕ ಪತ್ತೆ ಹಚ್ಚಿದ.

1966ರ ತನ್ನ ಪುಸ್ತಕದ ಎರಡನೇ ಆವೃತ್ತಿಯಲ್ಲಿ ‘‘ಗೋಗಟೆ ಓರ್ವ ಕಟ್ಟಾ ಸಾವರ್ಕರ್‌ವಾದಿಯಾಗಿದ್ದ ಮತ್ತು ಹಾಟ್ಸನ್‌ರ ಮೇಲೆ ಗುಂಡು ಹಾರಿಸುವ ಕೆಲವು ದಿನಗಳ ಮೊದಲು ಆತ ರತ್ನಗಿರಿಯಲ್ಲಿ ಸಾವರ್ಕರ್ ಅವರನ್ನು ಭೇಟಿಯಾಗಿದ್ದ’’ ಎನ್ನುವುದನ್ನು ಕೀರ್ ಒಪ್ಪಿಕೊಂಡರು...

4. 1948ರಲ್ಲಿ ಗಾಂಧೀಜಿಯವರ ಹತ್ಯೆ ಮೊಕದ್ದಮೆಯ ತನ್ನ ನೆನಪುಗಳ ‘ದಿ ಸ್ಟೋರಿ ಆಫ್ ದಿ ರೆಡ್ ಫೋರ್ಟ್ ಟ್ರಯಲ್ 1948-49’ನಲ್ಲಿ (ಪಾಪ್ಯುಲರ್ ಪ್ರಕಾಶನ 1979) ಹಿಂದೂ ಮಹಾಸಭಾದ ಓರ್ವ ಸದಸ್ಯ ಪಿ.ಎಲ್. ಇನಾಂದಾರ್, ಸಾವರ್ಕರ್ ಬಗ್ಗೆ ಈ ಮಾತುಗಳನ್ನು ಬರೆದಿದ್ದಾರೆ: ‘‘ವಿಚಾರಣೆಯ ಸಂಪೂರ್ಣ ಅವಧಿಯುದ್ದಕ್ಕೂ ಸಾವರ್ಕರ್ ತನ್ನ ಪಕ್ಕದಲ್ಲಿ ಕುಳಿತಿದ್ದ ನಾಥೂರಾಮ್ ಕಡೆಗೆ ತಿರುಗಿ ನೋಡಿದ್ದನ್ನು ಕೂಡ ನಾನು ಕಂಡಿಲ್ಲ. ವಿಚಾರಣೆಯ ಅವಧಿಯಲ್ಲಿ ಒಂದು ಬಾರಿ ಹೊರತುಪಡಿಸಿ ಅವರು ನನ್ನ ಬಳಿ ಮಾತಾಡಲಿಲ್ಲ....’’

‘‘ಸಾವರ್ಕರ್ ತುಂಬಾ ನರ್ವಸ್ ಆಗಿದ್ದರು.... 1948ರ ಸೆಪ್ಟಂಬರ್ ದ್ವಿತೀಯ ವಾರದಲ್ಲಿ ಸಾವರ್ಕರ್ ನನ್ನನ್ನು ಭೇಟಿ ಮಾಡಲು ಬಯಸಿದ್ದಾರೆಂದು ನಮ್ಮ ಹಿರಿಯ ಬೋಪಟ್‌ಕರ್ ಹೇಳಿ ಕಳುಹಿಸಿದರು...’’

‘‘ನಾನು ಹೋಗಿ ಬಾಗಿ ನಮಸ್ಕರಿಸಿ ಅವರ ಪಾದಗಳನ್ನು ಮುಟ್ಟಿದೆ. ನನ್ನನ್ನು ಯಾಕೆ ಕರೆದದ್ದೆಂದು ಕೆಲ ಮಾತುಗಳಲ್ಲಿ ವಿವರಿಸಿದ ಬಳಿಕ ಅವರು ಹೇಳಿದರು. ‘ಸಾಕ್ಷಿದಾರರ ನಿಮ್ಮ ಪಾಟಿಸವಾಲು ಎಲ್ಲಾ ಪಾಟಿ ಸವಾಲುಗಳಲ್ಲೇ ಅತ್ಯುತ್ತಮ’. ಮೊಕದ್ದಮೆಯ ವಿವರಗಳನ್ನು ಅವರು ಚೆನ್ನಾಗಿ ತಿಳಿದುಕೊಂಡಿದ್ದರು ಎನ್ನುವುದನ್ನು ನಾನು ಗಮನಿಸಿದೆ. ನನ್ನ ಕಕ್ಷಿದಾರರ ವಿರುದ್ಧವಿರುವ ಮೊಕದ್ದಮೆಯ ಬಗ್ಗೆ ಅವರು ನನ್ನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಡಾ. ಪರ್ಚುರೆ ಹಾಗೂ ಗೋಪಾಲ್ ಗೋಡ್ಸೆ ಅಥವಾ ನಾಥೂರಾಮ್ ಸೇರಿದಂತೆ ಇತರ ಯಾವ ಒಬ್ಬ ಆಪಾದಿತನ ಬಗ್ಗೆಯೂ ಅವರು ಒಂದೇ ಒಂದು ಪ್ರಶ್ನೆ ಕೇಳಲಿಲ್ಲ...’’

1949ರ ಜನವರಿ 10ರಂದು ತೀರ್ಪು ನೀಡಲಾಯಿತು. ನಾಥೂರಾಮ್ ಮತ್ತು ಆಪ್ಟೆಗೆ ನೇಣು ಹಾಕಿ ಮರಣದಂಡನೆ, ಕರ್ಕರೆ, ಮದನಲಾಲ್ ಶಂಕರ್ ಕಿಸ್ತಯ್ಯ, ಗೋಪಾಲ್ ಗೋಡ್ಸೆ ಮತ್ತು ಡಾ. ಪರ್ಚುರೆಗೆ ಜೀವಾವಧಿ ಜೈಲು ಶಿಕ್ಷೆ! ಆಶ್ಚರ್ಯದ ಸಂಗತಿಯೆಂದರೆ ಆಜ್ಞೆಯಲ್ಲಿ ಆತ್ಮಚರಣ್ ಯಾವಾಗ ಮತ್ತು ಹೇಗೆ ಸಾವರ್ಕರ್ ಅವರ ಬಿಡುಗಡೆಯ ಭಾಗವನ್ನು ಓದಿದ್ದರೆನ್ನುವುದು ಇವತ್ತಿಗೂ ನನಗೆ ನೆನಪಿಲ್ಲ...’’

ಇನಾಂದರ್ ಅವರ ದೃಷ್ಟಿಯಲ್ಲಿ ಸಾವರ್ಕರ್ ದೋಷಮುಕ್ತರಾಗಿದ್ದು ತಪ್ಪು.2019 ಮೇ 31ರ ಸಂಜೆ ಲೋಕಸಭಾ ಚುನಾವಣೆಗಳಲ್ಲಿ ತನ್ನ ಭಾರೀ ಗೆಲುವಿನ ಫಲಿತಾಂಶ ಪ್ರಕಟವಾದ ಸ್ವಲ್ಪಸಮಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ‘‘ಕಳೆದ ಐದು ವರ್ಷಗಳಲ್ಲಿ ಯಾರೊಬ್ಬರೂ ಕೂಡ ಸೆಕ್ಯೂಲರಿಸಂ ಎಂಬ ಶಬ್ದವನ್ನೇ ಉಚ್ಛರಿಸಲಿಲ್ಲ’’ ಎಂದು ಬೀಗುತ್ತಾ ಹೇಳಿದ್ದರು. (2019 ಜುಲೈ 19, ಇಂಡಿಯಾಸ್ ಫ್ಯಾಶಿಸ್ಟ್ ಚಾಲೆಂಜ್ ಎಂಬ ಈ ಲೇಖಕನ ಲೇಖನ ನೋಡಿ.)

ದೇಶದ ರಾಜಕಾರಣಿಗಳಲ್ಲ, ದೇಶದ ಯುವಜನತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಅವರ ಸಹವರ್ತಿಗಳಿಗೆ ಹಾಗೂ ಇಡೀ ದೇಶಕ್ಕೆ ಕಳೆದ ಎರಡು ವಾರಗಳ ವಿದ್ಯಮಾನ ಸರಿಯಾದ ಪಾಠ ಕಲಿಸಿದೆ. ಸೆಕ್ಯೂಲರಿಸಂ ಇನ್ನೂ ಬದುಕಿದೆ ಮತ್ತು ಗಾಂಧೀಜಿಯ ಸಾವು ವ್ಯರ್ಥವಾಗಲಿಲ್ಲ ಎನ್ನುವುದೇ ಆ ಪಾಠ. ನೆಹರೂ ಅವರ ಸಾವು ಕೂಡ ವ್ಯರ್ಥವಾಗಲಿಲ್ಲ. ಅವರು ಪ್ರತಿಪಾದಿಸಿದ್ದ ಸೆಕ್ಯೂಲರಿಸಂ ದೇಶದ ಮನದಾಳದಲ್ಲಿ ದೃಢವಾಗಿ ಕುಳಿತಿದೆ.

ಆರೆಸ್ಸೆಸ್ ಮತ್ತು ಬಿಜೆಪಿ ಬಹಳ ತಡವಾಗಿ ಗಾಂಧೀಜಿಯನ್ನು ಆತುಕೊಂಡರು. ಗಾಂಧೀಜಿ ಅವರನ್ನು ಹತ್ಯೆ ಮಾಡಲು ಯಾವ ಸಾವರ್ಕರ್ ಒಳಸಂಚು ನಡೆಸಿದ್ದರೂ, ಆ ಸಾವರ್ಕರ್ ಅವರ ಚಿತ್ರವನ್ನು ಗಾಂಧೀಜಿಯ ಚಿತ್ರದ ಎದುರು ಅಡ್ವಾಣಿ ಅನಾವರಣಗೊಳಿಸಿದರು ಹಿಂದುತ್ವ ಈಗ ಅದರ ಮರಣಶಯ್ಯೆಯ ಮೇಲೆ ಮಲಗಿದೆ. ರಾಷ್ಟ್ರವ್ಯಾಪಿಯಾದ ಸಮಗ್ರ ಚಳವಳಿಯನ್ನು ದೇಶದ ಯುವಜನತೆ ಮುನ್ನಡೆಸುತ್ತಿದೆ, ರಾಜಕಾರಣಿಗಳಲ್ಲ. ಸೆಕ್ಯೂಲರಿಸಂನ ಜ್ಯೋತಿಯನ್ನು ದೇಶದ ಯುವಕ, ಯುವತಿಯರು ಹಿಡಿದುಕೊಂಡು ಮುಂದೆ ಸಾಗುತ್ತಿದ್ದಾರೆ.

(ಮುಗಿಯಿತು)

ಕೃಪೆ: frontline

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)