varthabharthi

ಗಲ್ಫ್ ಸುದ್ದಿ

ಜಿಎಂಯು ಕುಲಪತಿ ಪ್ರೊ. ಹೊಸ್ಸಂ ಹಮ್ದಿಗೆ 'ನವೀನ ಕಲಿಕಾ ತಂತ್ರಜ್ಞಾನ' ಪ್ರಶಸ್ತಿ

ವಾರ್ತಾ ಭಾರತಿ : 17 Feb, 2020

ದುಬೈ, ಫೆ.17: ಯುಎಇಯ ಆರೋಗ್ಯ ಮತ್ತು ಪ್ರತಿಬಂಧ ಸಚಿವಾಲಯ ಕೊಡಮಾಡುವ ಪ್ರತಿಷ್ಠಿತ ‘ನವೀನ ಕಲಿಕಾ ತಂತ್ರಜ್ಞಾನ ’ ಪ್ರಶಸ್ತಿಗೆ ಅಜ್ಮಾನ್ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ಯ ಕುಲಪತಿ ಪ್ರೊ. ಹೊಸ್ಸಂ ಹಮ್ದಿ ಆಯ್ಕೆಯಾಗಿದ್ದಾರೆ.

ಅಂತರಾಷ್ಟ್ರೀಯ ಖ್ಯಾತ ವೈದ್ಯಕೀಯ ಶಿಕ್ಷಕ ಹಾಗೂ ಮಕ್ಕಳ ಶಸ್ತ್ರಚಿಕಿತ್ಸಕರಾಗಿರುವ ಪ್ರೊ. ಹಮ್ದಿಯವರು ಜಿಎಂಯುವಿನಲ್ಲಿ ಅಳವಡಿಸಿರುವ ವರ್ಚುವಲ್ ಪೇಷಂಟ್ ಲರ್ನಿಂಗ್ ವ್ಯವಸ್ಥೆಯು ಜೈವಿಕ ವಿಜ್ಞಾನದ ಅತ್ಯಂತ ನವೀನ ತಂತ್ರಜ್ಞಾನದಲ್ಲಿ ಒಂದು ಎಂದು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಾರ್ಜಾದ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಫೆ.13ರಂದು ಆರೋಗ್ಯ ಮತ್ತು ಪ್ರತಿಬಂಧ ಸಚಿವಾಲಯದ ಆಶ್ರಯದಲ್ಲಿ ನಡೆದ ನಾವೀನ್ಯ ಆರೋಗ್ಯ ಸೇವೆ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರಶಸ್ತಿಗೆ ತನ್ನನ್ನು ಗುರುತಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರೊ. ಹಮ್ದಿ, ಜಿಎಂಯುವಿನಲ್ಲಿ ಅಳವಡಿಸಿರುವ ನವೀನ ತರಬೇತಿ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಸಂತಸದ ವಿಷಯವಾಗಿದೆ. ವರ್ಚುವಲ್ ಪೇಷಂಟ್ ಲರ್ನಿಂಗ್(ವಿಪಿಎಲ್) ವಿದ್ಯಾರ್ಥಿಗಳ ಕೌಶಲ್ಯ ಮತ್ತು ಕಲಿಕೆಯ ಅನುಭವವನ್ನು ಹೆಚ್ಚಿಸುತ್ತದೆ. ವಿಪಿಎಲ್ ಎಂಬುದು ವೈದ್ಯಕೀಯ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಸಮಸ್ಯೆ ಆಧಾರಿತ ಕಲಿಕೆಯ ಸಹಿತ ಅತ್ಯಾಧುನಿಕ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ವಿಪಿಎಲ್ ತಂತ್ರಜ್ಞಾನವನ್ನು ಅಳವಡಿಸಿದ ಪ್ರಥಮ ವಿವಿ ಎಂಬ ಹೆಗ್ಗಳಿಕೆಗೆ ಜಿಎಂಯು ಪಾತ್ರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)