varthabharthi


ನಿಮ್ಮ ಅಂಕಣ

ದಿಲ್ಲಿಯ ಗೆಲುವು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧದ ಜಯವೇ?

ವಾರ್ತಾ ಭಾರತಿ : 18 Feb, 2020
ನಂದಕುಮಾರ್ ಕೆ. ಎನ್.

ದೇಶವಿಂದು ಎದುರಿಸುತ್ತಿರುವ ನಿರುದ್ಯೋಗ, ತಲಾದಾಯ ಕುಸಿತ, ಜಿಡಿಪಿ ಕುಸಿತ, ಅಭಿವೃದ್ಧಿ ಕುಸಿತ, ಕರಾಳವಾದ ಕಾನೂನುಗಳ ಹೇರಿಕೆಗಳು, ಕೃಷಿ ಬಿಕ್ಕಟ್ಟು, ಕೈಗಾರಿಕಾ ಬಿಕ್ಕಟ್ಟು, ಮೊದಲಾದ ಜ್ವಲಂತ ಸಮಸ್ಯೆಗಳ ಕುರಿತು ಆಮ್ ಆದ್ಮಿ ಪಕ್ಷದ ನಿಲುವುಗಳೇನು ಎನ್ನುವುದು ಈಗಲೂ ಸ್ಪಷ್ಟವಾಗಿಲ್ಲ. ತನ್ನ ರಾಜಕೀಯ ನಿಲುವುಗಳನ್ನು ಆಪ್ ಇನ್ನೂ ಸ್ಪಷ್ಟಪಡಿಸಿಲ್ಲ. ಕೇವಲ ರಾಜಕೀಯ ನಾಯಕರ ಹಾಗೂ ಅಧಿಕಾರಶಾಹಿಗಳ ಭ್ರಷ್ಟಾಚಾರಗಳ ಬಗ್ಗೆ ಮಾತ್ರ ಹೇಳುತ್ತಾ ಬಂದಿದೆ. ಭ್ರಷ್ಟಾಚಾರದ ಮೂಲ ಜನಕರಾದ ಭಾರೀ ಕಾರ್ಪೊರೇಟ್‌ಗಳ ಪಾತ್ರವನ್ನು ಅವರು ಮಾತನಾಡುವುದಿಲ್ಲ. ಅಲ್ಲದೆ ತನ್ನ ಆಂತರಿಕ ರಚನೆಯಲ್ಲೂ ಪ್ರಜಾತಾಂತ್ರಿಕ ಪದ್ಧ್ದತಿಗಳನ್ನು ಅಳವಡಿಸುವಲ್ಲಿ ಈ ಪಕ್ಷ ಕಾಂಗ್ರೆಸ್, ಜನತಾ ದಳ ಮೊದಲಾದ ಪಕ್ಷಗಳಿಗಿಂತ ಭಿನ್ನವೆಂದು ನಿರೂಪಿಸುವಲ್ಲಿ ಸಫಲವಾಗಿಲ್ಲ.

ದಿಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭಾರೀ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿದಿದೆ. ಮೋದಿ ಹಾಗೂ ಅಮಿತ್ ಶಾ ಬಳಗ ಭಾರಿ ದುಷ್ಪ್ರಚಾರಗಳನ್ನು ನಡೆಸಿ ಜನರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸಿದ್ದರೂ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಕೇವಲ ಎಂಟು ಸ್ಥಾನಗಳಿಗೆ ಸೀಮಿತವಾಗಬೇಕಾಯಿತು. ಲೋಕಸಭೆಯಲ್ಲಿ ಪ್ರಧಾನ ವಿರೋಧ ಪಕ್ಷವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ 63 ಕಡೆಗಳಲ್ಲಿ ಠೇವಣಿಯನ್ನೇ ಕಳೆದುಕೊಳ್ಳಬೇಕಾಯಿತು. ದಿಲ್ಲಿಯ ಒಟ್ಟು 70 ಸ್ಥಾನಗಳಲ್ಲಿ 66 ವಿಧಾನಸಭಾ ಸ್ಥಾನಗಳಿಗೆ ಅದು ಸ್ಪರ್ಧಿಸಿತ್ತು.

ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ, ಹಲವು ಮುಖ್ಯ ಮಂತ್ರಿಗಳು, ಹಲವಾರು ಸಂಸದರು, ಭಾರೀ ಪ್ರಮಾಣದ ಸಂಘಪರಿವಾರದ ಕಾರ್ಯಕರ್ತರನ್ನು ಈ ಚುನಾವಣಾ ಪ್ರಚಾರಕ್ಕೆ ಬಳಸಲಾಗಿತ್ತು. ಹುಸಿ ರಾಷ್ಟ್ರೀಯತೆ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಯೋತ್ಪಾದನೆ, ಹಿಂದೂ ರಾಷ್ಟ್ರ, ಸುಳ್ಳು ಮಾಹಿತಿಗಳು ಇತ್ಯಾದಿಗಳ ಮೂಲಕ ಭಾವ ಪ್ರಕೋಪಗಳಿಗೆ ಜನರನ್ನು ಈಡು ಮಾಡಬಹುದಾದ ಪದಗಳನ್ನು ಯಥೇಚ್ಛವಾಗಿಯೇ ಬಳಸಲಾಗಿತ್ತು. ತನ್ನ ಹಿಡಿತದಲ್ಲಿರುವ ಆಡಳಿತ ಯಂತ್ರಾಂಗಗಳನ್ನು ಹಾಗೆಯೇ ಹಣವನ್ನು ಆಕ್ರಮಣಕಾರಿಯಾಗಿ ಬಳಸಿಕೊಂಡಿದ್ದು ಎದ್ದು ಕಾಣುತ್ತಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಸಂಖ್ಯಾವಾರು ಹಿನ್ನಡೆಯಾಯಿತು. ಇದು ಬಿಜೆಪಿಗೆ ಭಾರೀ ಮುಖಭಂಗದ ವಿಚಾರವೆಂಬಂತೆ ಹಲವು ವಲಯಗಳಲ್ಲಿ ಚರ್ಚಿತವಾಗುತ್ತಿದೆ. ಪ್ರಗತಿಪರ ವಲಯದಲ್ಲೂ ಬಿಜೆಪಿಯ ಈ ಕಳಪೆ ಸಾಧನೆ ಪ್ರಜಾಪ್ರಭುತ್ವದ ಗೆಲುವು ಅತ್ಯುತ್ಸಾಹದಿಂದ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಸೋಲು ಎಂಬಂತೆ ಬಹುತೇಕವಾಗಿ ಪರಿಗಣಿಸಲಾಗುತ್ತಿದೆ.

ವಿಧಾನಸಭೆಯ ಒಟ್ಟು 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಆಪ್ ಗೆದ್ದುಕೊಂಡು ಭಾರೀ ಬಹುಮತ ಪಡೆದ ಪಕ್ಷವಾಗಿ ಅಧಿಕಾರಕ್ಕೆ ಮರಳಿತು. ಬಿಜೆಪಿ ಎರಡನೇ ಸ್ಥಾನ ಗಳಿಸಿತು. ಕಾಂಗ್ರೆಸ್‌ನದು ಶೂನ್ಯ ಸಂಪಾದನೆಯಾಯಿತು. ಆಪ್ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ.53.6 ಮತಗಳನ್ನು ಪಡೆದುಕೊಂಡಿತು. ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ಸೇರಿ ಶೇ. 40ರಷ್ಟು ಮತಗಳನ್ನು ಪಡೆದುಕೊಂಡಿತು. ಇಲ್ಲಿ ಗಮನಾರ್ಹ ಅಂಶ ಏನೆಂದರೆ ಆಪ್ ತನ್ನ ಮತಗಳಿಕೆಯಲ್ಲಿ 2015ರಲ್ಲಿ ಇದ್ದ ಪ್ರಮಾಣವಾದ ಶೇ. 54.5ರಿಂದ ಶೇ. 53.6ಕ್ಕೆ ಇಳಿಕೆ ಕಂಡಿದ್ದು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ತನ್ನ ಮತಗಳಿಕೆಯನ್ನು 2015ರಲ್ಲಿ ಇದ್ದ 32.3ರಿಂದ ಶೇ. 40ಕ್ಕೆ ಏರಿಸಿಕೊಂಡಿದ್ದು. 2019ರ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯ ಒಟ್ಟು 7 ಲೋಕಸಭಾ ಸ್ಥಾನಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿ 2020ರ ವಿಧಾನ ಸಭಾ ಚುನಾವಣೆಯಲ್ಲಿ ಮತಗಳಿಕೆ ಹೆಚ್ಚಿಸಿಕೊಂಡಿದ್ದರೂ ಸ್ಥಾನಗಳನ್ನು ಗಳಿಸಲಿಲ್ಲ ಅಷ್ಟೇ.

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಒಟ್ಟು 104 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯುವ ಮ್ಯಾಜಿಕ್ ಸಂಖ್ಯೆ ಗಳಿಸಲಾಗಲಿಲ್ಲ. ಕಾಂಗ್ರೆಸ್ ಜಾತ್ಯತೀತ ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚನೆಯಾದರೂ ಕೆಲವರ ಪಕ್ಷಾಂತರದ ಕಾರಣದಿಂದ ಅಧಿಕಾರ ಉಳಿಯದೆ ಬಿಜೆಪಿ ಕೈಗೆ ಹೋಯಿತು. ಇದರಲ್ಲಿ ‘ಶಾಸಕರಾಗಿ ಅನರ್ಹರಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರು’ ಎನ್ನುವ ರೀತಿಯ ನ್ಯಾಯಾಂಗದ ತೀರ್ಪು ಪ್ರಧಾನವಾದ ಕೆಲಸ ಮಾಡಿತು.

ಆದರೆ ಲೋಕಸಭಾ ಚುನಾವಣೆಯಲ್ಲಿ ಶೇ. 51.7ರಷ್ಟು ಮತ ಗಳಿಸಿ ಕರ್ನಾಟಕದ ಒಟ್ಟು 28 ಸ್ಥಾನಗಳಲ್ಲಿ 25 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಶೇ. 36.2 ಆಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಶೇ. 38.04ರಷ್ಟು ಮತ ಗಳಿಸಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯ ವೇಳೆಗೆ ಮತಗಳಿಕೆ ಶೇ 32.1ಕ್ಕೆ ಇಳಿದಿತ್ತು.

ಛತ್ತೀಸ್‌ಗಡದಲ್ಲಿ ಡಿಸೆಂಬರ್ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಮಣ್ ಸಿಂಗ್ ಸರಕಾರ ಉರುಳಿ ಒಟ್ಟು 90 ವಿಧಾನ ಸಭಾ ಸ್ಥಾನಗಳಲ್ಲಿ ಕೇವಲ 15 ಸ್ಥಾನಗಳನ್ನು ಪಡೆಯಲು ಮಾತ್ರ ಸಫಲವಾಗಿತ್ತು. ಕಾಂಗ್ರೆಸ್ 68 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರಕ್ಕೇರಿತು. ಇಲ್ಲಿ ಕಾಂಗ್ರೆಸ್ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 43.9ರಷ್ಟು ಬಿಜೆಪಿ ಶೇ. 33.6ಷ್ಟು ಮತಗಳನ್ನು ಪಡೆದಿತ್ತು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 51.4ರಷ್ಟು ಮತಗಳನ್ನು ಪಡೆದು ಒಟ್ಟು 11 ಲೋಕಸಭಾ ಸ್ಥಾನಗಳಲ್ಲಿ 9 ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು. ಕಾಂಗ್ರೆಸ್ ಮತಗಳಿಕೆ ಪ್ರಮಾಣ ವಿಧಾನಸಭಾ ಚುನಾವಣೆಯ ಶೇ. 43.9 ರಿಂದ ಸ್ವಲ್ಪಪ್ರಮಾಣದಲ್ಲಿ ಅಂದರೆ 41.5ಕ್ಕೆ ಕುಸಿಯಿತು. ಆದರೆ ಸಂಖ್ಯಾವಾರು ಗಳಿಕೆಯಲ್ಲಿ ಕಾಂಗ್ರೆಸ್ ಹಿನ್ನ್ನಡೆ ಕಂಡಿತು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 114, ಬಿಜೆಪಿ 109 ವಿಧಾನ ಸಭಾ ಸ್ಥಾನಗಳನ್ನು ಗಳಿಸಿ ಕ್ರಮವಾಗಿ ಶೇ. 40.9 ಹಾಗೂ 41ರಷ್ಟು ಮತಗಳಿಕೆಯನ್ನು ಪಡೆದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಟ್ಟು 29 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಬಿಜೆಪಿ ಪಡೆಯಿತು. ಕ್ರಮವಾಗಿ ಶೇ. 58.5 ಹಾಗೂ ಶೇ. 34.8 ಮತಗಳಿಕೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಡೆದಿತ್ತು.

ರಾಜಸ್ಥಾನದಲ್ಲಿ ಡಿಸೆಂಬರ್ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 100 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿತು. ಬಿಜೆಪಿ 73 ಸ್ಥಾನಗಳನ್ನು ಪಡೆದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಕ್ರಮವಾಗಿ ಶೇ. 39.8 ಹಾಗೂ ಶೇ. 39.3ರಷ್ಟು ಮತಗಳಿಕೆಯನ್ನು ಪಡೆದಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 25 ಸ್ಥಾನಗಳಲ್ಲಿ 24 ಸ್ಥಾನಗಳನ್ನು ತನ್ನದಾಗಿಸಿಕೊಂಡು ಶೇ. 59.07ರಷ್ಟು ಮತಗಳಿಕೆಯನ್ನೂ ಮಾಡಿತು. ಕಾಂಗ್ರೆಸ್‌ನ ಮತಗಳಿಕೆ ಇಲ್ಲಿ ಶೇ. 34.5ಕ್ಕೆ ಕುಸಿಯಿತು. ಅಲ್ಪಸ್ವಲ್ಪವ್ಯತ್ಯಾಸಗಳೊಂದಿಗೆ ಇದೇ ರೀತಿಯ ಲೋಕಸಭಾ ಚುನಾವಣಾ ಫಲಿತಾಂಶ ಹಾಗೂ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಒಡಿಶಾ, ಹರ್ಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ನಾವು ಗಮನಿಸಬಹುದು.

ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡುಗಳಲ್ಲಿ ಫಲಿತಾಂಶಗಳಲ್ಲಿ ಮೇಲಿನ ಧೋರಣೆ ಕಾಣಿಸುವುದಿಲ್ಲ. ಅಲ್ಲಿ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಆಯಾ ರಾಜ್ಯಗಳ ಪಕ್ಷಗಳಿಗೆ ಮತದಾರರ ಸಮ್ಮತಿಯಿದೆ. ಆದರೆ ಆಂಧ್ರದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದರು ಪೌರತ್ವ ತಿದ್ದುಪಡಿ ಕಾಯ್ದೆಗೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದನ್ನು ನಾವಿಲ್ಲಿ ಗಮನಿಸಬೇಕು. ಕೇರಳದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ, ವಿಧಾನ ಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ ಜನರು ಮತ ನೀಡಿ ಆರಿಸಿದ್ದಾರೆ. ಅದಕ್ಕೆ ಪ್ರಧಾನ ಕಾರಣ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಬಾರದೆಂಬ ಜನರ ಬಯಕೆ.

ಈ ಎಲ್ಲಾ ಅಂಶಗಳು ದೇಶದ ಜನರಿಗೆ ತಮ್ಮ ರಾಜಕೀಯ ಪ್ರತಿನಿಧಿಗಳು ಯಾರೆಂದು ತೀರ್ಮಾನಿಸಲು ಇರುವ ಬಿಕ್ಕಟ್ಟುಗಳನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಇರುವ ಗಂಭೀರ ದೋಷಗಳನ್ನು ಹೇಳುತ್ತದೆ. ಜನರ ನಿಜವಾದ ಪ್ರತಿನಿಧಿಗಳಾಗಬಯಸುವವರು ಇಲ್ಲಿ ಆರಿಸಿಬರಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಿದೆ.

ಈ ಬಾರಿಯ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸುಳ್ಳು ಹಾಗೂ ಭಾವಾವೇಶದ ಪ್ರಚಾರಗಳಿಗೆ ಮೊರೆಹೋಗಿದ್ದರೆ ಆಪ್ ರಸ್ತೆ, ಶಾಲೆ, ಆರೋಗ್ಯ, ಆಸ್ಪತ್ರೆ, ಕುಡಿಯುವ ನೀರು ಮೊದಲಾದ ಮೂಲಭೂತ ನಾಗರಿಕ ಅವಶ್ಯಕತೆಗಳನ್ನು ಒದಗಿಸುವ ಭರವಸೆಗಳಿಗೆ ಆ ನಿಟ್ಟಿನಲ್ಲಿ ಅದು ಮಾಡಿದ ಕೆಲಸ ಕಾರ್ಯಗಳ ಪ್ರಚಾರಗಳಿಗೆ ಸೀಮಿತವಾಗಿತ್ತು.

ಆದರೆ ಪೌರತ್ವ ತಿದ್ದುಪಡಿ ಕಾಯ್ದೆಗಳ ಅಪಾಯಗಳ ಬಗ್ಗೆ, ಕೋಮುವಾದಿ ದಾಳಿಗಳು, ಫ್ಯಾಶಿಸಂನ ಅಪಾಯ, ಕೈಗಾರಿಕಾ ಬೆಳವಣಿಗೆ, ನಿರುದ್ಯೋಗ ನಿವಾರಣೆ ಇತ್ಯಾದಿ ಜನರನ್ನು ಜೀವಂತ ದಹಿಸುತ್ತಿರುವ ಸಮಸ್ಯೆಗಳ ಮೇಲೆ ಆಪ್ ತನ್ನ ಗಮನ ನೀಡಿದ್ದು ನಾಮ ಮಾತ್ರದ್ದಾಗಿತ್ತು. ಅದರಲ್ಲೂ ಭಾರೀ ಕಾರ್ಪೊರೇಟ್‌ಗಳ ಕೊಳ್ಳೆ, ದಿವಾಳಿಯತ್ತ ಸಾಗುತ್ತಿರುವ ದೇಶ, ಫ್ಯಾಶಿಸಂ ಅಪಾಯ ಇತ್ಯಾದಿ ಬಗ್ಗೆ ಗಮನಾರ್ಹವಾಗಿ ಪ್ರಸ್ತಾಪಿಸಿದ್ದು ಇಲ್ಲವೆನ್ನುವಷ್ಟು ಕಡಿಮೆಯೆನ್ನಬಹುದು. ಆಪ್ ಮಾಡಿದ ಪ್ರಧಾನ ಚುನಾವಣಾ ತಂತ್ರವೆಂದರೆ ಬಿಜೆಪಿ ಹಾಗೂ ಮೋದಿ ಅಮಿತ್ ಶಾ ಮಾಡುತ್ತಾ ಬಂದ ಸುಳ್ಳು ಹಾಗೂ ಭಾವೋದ್ರೇಕದ ಭಾಷಣಗಳಿಗೆ ಪ್ರತಿಕ್ರಿಯೆಗಳನ್ನು ನೀಡದೆ ಮುಂದೆ ಮಾಡುವ ತನ್ನ ಕೆಲಸ ಕಾರ್ಯಗಳಿಗೆ ತನ್ನ ಪ್ರಚಾರಗಳನ್ನು ಸೀಮಿತಗೊಳಿಸಿದ್ದು. ಪೌರತ್ವ ತಿದ್ದುಪಡಿ ಕಾಯ್ದೆಗಳ ವಿರುದ್ಧ ಜನರ ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದರೂ ತನ್ನ ಚುನಾವಣಾ ಭಾಷಣಗಳಲ್ಲಿ ಆಮ್ ಆದ್ಮಿ ಪಕ್ಷದ ನಿಲುವೇನು ಎನ್ನುವುದನ್ನು ಹೊರಹಾಕಿರಲಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಮಾತ್ರ ಕೇಜ್ರಿವಾಲ್ ಶಾಹೀನ್ ಬಾಗ್‌ಗೆ ಭೇಟಿಕೊಡುವ ಕಾರ್ಯಕ್ರಮ ಹಾಕಿಕೊಂಡರು.

ಅಲ್ಲದೆ ದೇಶವಿಂದು ಎದುರಿಸುತ್ತಿರುವ ನಿರುದ್ಯೋಗ, ತಲಾದಾಯ ಕುಸಿತ, ಜಿಡಿಪಿ ಕುಸಿತ, ಅಭಿವೃದ್ಧಿ ಕುಸಿತ, ಕರಾಳವಾದ ಕಾನೂನುಗಳ ಹೇರಿಕೆಗಳು, ಕೃಷಿ ಬಿಕ್ಕಟ್ಟು, ಕೈಗಾರಿಕಾ ಬಿಕ್ಕಟ್ಟು, ಮೊದಲಾದ ಜ್ವಲಂತ ಸಮಸ್ಯೆಗಳ ಕುರಿತು ಆಮ್ ಆದ್ಮಿ ಪಕ್ಷದ ನಿಲುವುಗಳೇನು ಎನ್ನುವುದು ಈಗಲೂ ಸ್ಪಷ್ಟವಾಗಿಲ್ಲ. ತನ್ನ ರಾಜಕೀಯ ನಿಲುವುಗಳನ್ನು ಆಪ್ ಇನ್ನೂ ಸ್ಪಷ್ಟಪಡಿಸಿಲ್ಲ. ಕೇವಲ ರಾಜಕೀಯ ನಾಯಕರ ಹಾಗೂ ಅಧಿಕಾರಶಾಹಿಗಳ ಭ್ರಷ್ಟಾಚಾರಗಳ ಬಗ್ಗೆ ಮಾತ್ರ ಹೇಳುತ್ತಾ ಬಂದಿದೆ. ಭ್ರಷ್ಟಾಚಾರದ ಮೂಲ ಜನಕರಾದ ಭಾರೀ ಕಾರ್ಪೊರೇಟ್‌ಗಳ ಪಾತ್ರವನ್ನು ಅವರು ಮಾತನಾಡುವುದಿಲ್ಲ. ಅಲ್ಲದೆ ತನ್ನ ಆಂತರಿಕ ರಚನೆಯಲ್ಲೂ ಪ್ರಜಾತಾಂತ್ರಿಕ ಪದ್ಧ್ದತಿಗಳನ್ನು ಅಳವಡಿಸುವಲ್ಲಿ ಈ ಪಕ್ಷ ಕಾಂಗ್ರೆಸ್, ಜನತಾ ದಳ ಮೊದಲಾದ ಪಕ್ಷಗಳಿಗಿಂತ ಭಿನ್ನವೆಂದು ನಿರೂಪಿಸುವಲ್ಲಿ ಸಫಲವಾಗಿಲ್ಲ. ಅದರ ಸಾಧನೆಗಳಲ್ಲಿ ಕುಡಿಯುವ ನೀರು, ಸುಸಜ್ಜಿತ ಶಾಲಾ ವ್ಯವಸ್ಥೆ, ರಸ್ತೆಗಳು, ಮನೆಗಳನ್ನು ಹೇಳಿಕೊಂಡು ಬರಲಾಗುತ್ತಿದೆ. ಇದಿಷ್ಟೇ ಅಭಿವೃದ್ಧಿಯೆಂದು ಹೇಳುವಂತಹ ಮಟ್ಟದಲ್ಲಿ ಇಂದಿಗೂ ದೇಶದ ಸ್ಥಿತಿಯಿದೆ ಎನ್ನುವುದೇ ದುರಂತವಾಗಿದೆ. ಅಲ್ಲದೆ ಈ ಬಾರಿಯ ತಮ್ಮ ಪಕ್ಷದ ಗೆಲುವನ್ನು ಹನುಮನ ಗೆಲುವು, ರಾಮನ ಗೆಲುವು ಎಂದೆಲ್ಲಾ ಖುದ್ದಾಗಿ ಕೇಜ್ರಿವಾಲ್ ಬಹಿರಂಗವಾಗಿ ಹೇಳಿಕೊಂಡಿದ್ದನ್ನು ನಾವಿಲ್ಲಿ ಗಮಿಸಬಹುದು. ತಮ್ಮನ್ನು ಗೆಲ್ಲಿಸಿದ್ದು ದಿಲ್ಲಿಯ ಜನಸಾಮಾನ್ಯರು ಹಾಗಾಗಿ ಅವರ ಗೆಲುವೆಂದು ಪ್ರತಿಪಾದಿಸದೆ ಧರ್ಮ, ದೇವರ ಮೊರೆಹೋಗಿದ್ದಾರೆ. ಇದು ಆಮ್ ಆದ್ಮಿ ಪಕ್ಷದ ಸದ್ಯದ ಪರಿಸ್ಥಿತಿಯನ್ನು ವ್ಯಕ್ತವಾಗಿ ಹೇಳುತ್ತದೆ.

ನಮ್ಮ ದೇಶದ ಚುನಾವಣಾ ವ್ಯವಸ್ಥೆಯಲ್ಲೇ ಮೂಲಭೂತವಾದ ದೋಷಗಳಿವೆ. ಒಂದು ನೈಜ ಪ್ರಜಾತಾಂತ್ರಿಕ ವ್ಯವಸ್ಥೆ ಬೆಳೆದು ಬರಲಾಗದಂತೆ ಇವುಗಳು ತಡೆಯುತ್ತಿವೆ. ಚುನಾವಣೆಗಳು ನ್ಯಾಯ ಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಡೆಯುವುದಿಲ್ಲ. ನಡೆಯುವ ಚುನಾವಣೆಯಲ್ಲೂ ಆಯಾ ಸಮುದಾಯದ ಜನಸಂಖ್ಯಾವಾರು ಪ್ರಾತಿನಿಧ್ಯವಿರುವಂತೆ ಖಾತ್ರಿ ಮಾಡಲಾಗಿಲ್ಲ. ಚುನಾವಣೆಯಲ್ಲಿ ಮತಹಾಕುವವರು ಒಟ್ಟು ಮತದಾರರ ಸರಾಸರಿ ಅರ್ಧಕ್ಕಿಂತಲೂ ಕಡಿಮೆ ಜನ. ಅಂಬೇಡ್ಕರ್ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಖಾತ್ರಿಗೊಳಿಸಲು ತಮ್ಮ ಪ್ರಯತ್ನ ನಡೆಸಿದ್ದರೂ ಅದನ್ನು ವ್ಯವಸ್ಥಿತವಾಗಿ ತಡೆಯಲಾಯಿತು. ಸಂಪತ್ತು ಹಾಗೂ ಸಾಮಾಜಿಕ ಹಿಡಿತ ಇರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಅಪ್ರಜಾತಾಂತ್ರಿಕತೆ ಇದೆ. ಜನಸಾಮಾನ್ಯರು ಅದರಲ್ಲಿ ಮತ ನೀಡುವುದನ್ನು ಬಿಟ್ಟರೆ ಬೇರೆ ಪಾತ್ರ ವಹಿಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯೇ ದೇಶದ ತುಂಬೆಲ್ಲಾ ಇದೆ. ಮೊದಲೆಲ್ಲಾ ಹಳ್ಳಿ ಪ್ರದೇಶಗಳಲ್ಲಿ ಮತಚೀಟಿಗಳನ್ನೇ ರಿಗ್ಗಿಂಗ್ ಮಾಡಲಾಗುತ್ತಿದ್ದರೆ ಈಗ ವಿದ್ಯುನ್ಮಾನ ಮತ ಯಂತ್ರಗಳನ್ನೇ ತಮಗೆ ಬೇಕಾದಂತೆ ತಿರುಚುವ ಆರೋಪಗಳು ಹಾಗೂ ವಾರ್ತೆಗಳು ಬರತೊಡಗಿವೆ. ವಾಸ್ತವ ಹೀಗಿರಬೇಕಾದರೆ ದಿಲ್ಲಿಯ ಗೆಲುವು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧದ ಜಯವೆಂಬಂತೆ ಸಂಭ್ರಮಿಸುವಲ್ಲಿ ಅರ್ಥವಿದೆಯೇ. ಅಲ್ಲದೆ ಫ್ಯಾಶಿಸ್ಟ್ ಶಕ್ತಿಯೆಂದಾಗ ಕೇವಲ ಸಂಘ ಪರಿವಾರ ಮತ್ತು ಬಿಜೆಪಿ ಮಾತ್ರ ಎಂಬಂತೆ ನೋಡುವುದರಿಂದ ಆ ಶಕ್ತಿಗಳಿಗೆ ಮತ್ತೂ ಅನುಕೂಲ ಮಾಡಿದಂತಾಗುವುದಿಲ್ಲವೇ. ಆ ಶಕ್ತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಭ್ರಮೆ ಬಿತ್ತಿದಂತಾಗುವುದಿಲ್ಲವೇ. ಇಂದಿನ ಸಂದರ್ಭದಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳದೆ ಭ್ರಮೆಗಳಿಗೆ ಒಳಗಾದರೆ ಭಾರೀ ಅಪಾಯಗಳಿಗೆ ಜನಸಮೂಹವನ್ನು ದೂಡಿದಂತಾಗುವುದಿಲ್ಲವೇ.

ಮಿಂಚಂಚೆ: nandakumarnandana67gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)