varthabharthi


ವೈವಿಧ್ಯ

ಬಹುಮುಖ ಪ್ರತಿಭೆ-ಕೊಡುಗೆಯ ಜಯಚಾಮರಾಜೇಂದ್ರ ಒಡೆಯರ್

ವಾರ್ತಾ ಭಾರತಿ : 19 Feb, 2020
ಡಾ. ಬಿ.ಪಿ.ಮಹೇಶ ಚಂದ್ರ ಗುರು

ಮೈಸೂರಿನ ಯದುವಂಶದ ಪ್ರತಿಭಾವಂತ, ಹೃದಯಸಂಪನ್ನ ಮತ್ತು ಜನಪರ ದೊರೆ 25ನೇ ಮಹಾರಾಜರಾಗಿ (1940-1971) ನಡೆಸಿದ ಆಳ್ವಿಕೆ ಅಮೋಘವಾದುದು. ಅವರು ಅತ್ಯಂತ ಎತ್ತರದ ವ್ಯಕ್ತಿಯಾಗಿ ನಾಡಿನ ಚರಿತ್ರೆಯಲ್ಲಿ ತಮ್ಮ ಅಪ್ರತಿಮ ವಿದ್ವತ್ತು ಮತ್ತು ಅಮೂಲ್ಯ ಕೊಡುಗೆಗಳಿಂದ ರಾರಾಜಿಸುತ್ತಾರೆ. ಅವರು ಶ್ರೇಷ್ಠ ವಿದ್ವಾಂಸರು, ತತ್ವಜ್ಞಾನಿ, ಸಂಗೀತಶಾಸ್ತ್ರಜ್ಞ, ಮುತ್ಸದ್ದಿ, ಲೋಕೋಪಕಾರಿ, ಜನಪರ ಆಡಳಿತಗಾರ ಹೀಗೆ ಬಹುಮುಖ ವ್ಯಕ್ತಿತ್ವವುಳ್ಳ ರಾಜರಾಗಿ ನಾಡಿನ ಜನಮನ್ನಣೆ ಗಳಿಸಿದ್ದಾರೆ. ಅವರು ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿ ಶೈಕ್ಷಣಿಕ ಸಾಧನೆಗಾಗಿ 5 ಚಿನ್ನದ ಪದಕ ಮತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರು ಮೈಸೂರಿನ ಮರೆಯಲಾಗದ ದೊರೆ ಎಂದೇ ಹೆಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಉತ್ತರಾಧಿಕಾರಿಯಾಗಿ ರಾಜಮನೆತನದ ಭವ್ಯ ಪರಂಪರೆಯನ್ನು ತಮ್ಮ ಸಾಮಾಜಿಕ ನ್ಯಾಯಪರ ಹಾಗೂ ಸಂವಿಧಾನ ನಿಷ್ಠ ಆಡಳಿತದಿಂದ ಸುಸ್ಥಿರಗೊಳಿಸಿದರು. ಅವರು ಶ್ರೇಷ್ಠ ಪ್ರಜಾಪ್ರಭುತ್ವವಾದಿಯಾಗಿ ಉತ್ತಮ ಆಡಳಿತ ಮತ್ತು ನ್ಯಾಯೋಚಿತ ಅಭಿವೃದ್ಧಿ ತತ್ವಗಳನ್ನು ಪ್ರಾಮಾಣಿಕವಾಗಿ ಅಳವಡಿಸಿಕೊಂಡು ಮೈಸೂರು ರಾಜ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಅವರು ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಮೈಸೂರು ರಾಜ್ಯವನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸಿ ತಮ್ಮ ಅಪ್ರತಿಮ ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಸಮಗ್ರತೆಗಳನ್ನು ಅಭಿವ್ಯಕ್ತಗೊಳಿಸಿ ದೇಶದ ಗಮನ ಸೆಳೆದರು. ಅವರು ಆಗಸ್ಟ್ 1947ರಲ್ಲಿ ಭಾರತದ ಒಕ್ಕೂಟದೊಂದಿಗೆ ಮೈಸೂರು ರಾಜ್ಯವನ್ನು ವಿಲೀನಗೊಳಿಸಿ ಸಹಿ ಹಾಕುವುದರ ಮೂಲಕ ಇತರ ದೇಶಿ ರಾಜರುಗಳಿಗೆ ಉತ್ತಮ ಸಂಪ್ರದಾಯ ಹಾಕಿಕೊಟ್ಟರು. ರಾಷ್ಟ್ರ ನಾಯಕರಾದ ನೆಹರೂ, ಅಂಬೇಡ್ಕರ್ ಮತ್ತು ಪಟೇಲ್ ಅವರ ಆಕಾಂಕ್ಷೆಗಳಿಗೆ ಅನುಗುಣವಾಗಿ ಮೈಸೂರು ರಾಜ್ಯ ಜನವರಿ 26, 1950ರಂದು ಭಾರತ ಗಣರಾಜ್ಯದೊಂದಿಗೆ ವಿಲೀನಗೊಂಡಿತು. ಇವರ ಅಪ್ರತಿಮ ರಾಷ್ಟ್ರಭಕ್ತಿ ಮತ್ತು ಬಹುಮುಖಿ ಪ್ರತಿಭೆಗಳನ್ನು ಗುರುತಿಸಿದ ಭಾರತ ಸರಕಾರ ಮೈಸೂರು ರಾಜ್ಯದ ರಾಜಪ್ರಮುಖ (ರಾಜ್ಯಪಾಲ) ಹುದ್ದೆಯನ್ನು ನೀಡಿ ಗೌರವಿಸಿತು. 1950ರಿಂದ 1956ರ ತನಕ ಒಡೆಯರ್ ರಾಜ್ಯಪಾಲರಾಗಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದರು. ಇವರು 1964-66ರ ತನಕ ಮದರಾಸು ರಾಜ್ಯದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿ ಸ್ವತಂತ್ರ ಭಾರತದ ಅಪೂವರ್ ಮುತ್ಸದ್ದಿಯಾಗಿ ರೂಪುಗೊಂಡರು.

 ಜಯಚಾಮರಾಜೇಂದ್ರ ಒಡೆಯರ್ ಸಂಗೀತ, ಕಲೆ, ಕ್ರೀಡೆ, ಸಂಸ್ಕೃತಿ ಮೊದಲಾದ ವಿಷಯಗಳಲ್ಲಿ ಉನ್ನತ ಮಟ್ಟದ ತರಬೇತಿ ಪಡೆದರು. ಅವರು ಪಾಶ್ಚಿಮಾತ್ಯ ಮತ್ತು ಕರ್ನಾಟಕ ಸಂಗೀತದ ಸಂಯೋಜಕರಾಗಿ ಹಾಗೂ ಪ್ರವರ್ತಕರಾಗಿ ಹೆಸರು ಗಳಿಸಿದರು. ಅವರು ತಮ್ಮ ಶ್ರೇಷ್ಠ ಕೊಡುಗೆಗಳಿಂದಾಗಿ ಲಂಡನ್‌ನ ಪ್ರತಿಷ್ಠಿತ ಗಿಲ್ಡಾಲ್ ಸ್ಕೂಲ್ ಆಫ್ ಮ್ಯೂಸಿಕ್, ಲಂಡನ್‌ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನ ಗೌರವ ಫೆಲೋಶಿಪ್ ಮೊದಲಾದವುಗಳನ್ನು 1940ರ ದಶಕದಲ್ಲಿ ಗಳಿಸಿ ಮೈಸೂರು ಸಂಸ್ಥಾನದ ಗೌರವವನ್ನು ಹೆಚ್ಚಿಸಿದರು. ಹಲವಾರು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಒಡೆಯರ್ ಕಾರ್ಯನಿರ್ವಹಿಸಿದ್ದರು. ಮೈಸೂರಿನ ವಾಸುದೇವಾಚಾರ್, ವೀಣೆ ವೆಂಕಟಗಿರಿಯಪ್ಪ, ಬಿ.ದೇವೇಂದ್ರಪ್ಪ, ವಿ.ದೊರೆಸ್ವಾಮಿ ಅಯ್ಯಂಗಾರ್, ಟಿ.ಚೌಡಯ್ಯ, ಟೈಗರ್ ವರದಾಚಾರ್, ಚೆನ್ನಕೇಶವಯ್ಯ, ತಿಟ್ಟೆ ಕೃಷ್ಣ ಅಯ್ಯಂಗಾರ್, ಎಸ್.ಎನ್.ಮರಿಯಪ್ಪ, ಚಿಂತಾಲಪಲ್ಲಿ ರಾಮಚಂದ್ರರಾವ್, ಆರ್.ಎನ್.ದೊರೆಸ್ವಾಮಿ, ಎಚ್.ಎಮ್.ವೈದ್ಯಲಿಂಗ ಭಾಗವತರ್ ಮೊದಲಾದ ಸಂಗೀತ ದಿಗ್ಗಜರ ಮಹಾನ್ ಪೋಷಕರಾಗಿ ಒೆಯರ್ ಸಾರ್ಥಕ ಸೇವೆ ಸಲ್ಲಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಸಾಹಿತ್ಯ ಕ್ಷೇತ್ರದೊಂದಿಗೆ ಅಪೂರ್ವ ಒಡನಾಟ ಹೊಂದಿದ್ದರು. ಅವರು ಶ್ರೇಷ್ಠ ಸಾಹಿತಿ, ಚಿಂತಕ ಮತ್ತು ಪೋಷಕರಾಗಿ ಸಲ್ಲಿಸಿದ ಸೇವೆಗೆ ಬಹಳಷ್ಟು ಜನಮನ್ನಣೆ ಗಳಿಸಿದರು. ಅವರ ಮಹತ್ವದ ಕೃತಿಗಳೆಂದರೆ- ದ ಕ್ವೆಸ್ಟ್ ಫಾರ್ ಪೀಸ್: ಆನ್ ಇಂಡಿಯನ್ ಅಪ್ರೋಚ್, ದತ್ತಾತ್ರೇಯ: ದ ವೇ ಆ್ಯಂಡ್ ದ ಗೋಲ್, ದ ಗೀತಾ ಆ್ಯಂಡ್ ಇಂಡಿಯನ್ ಕಲ್ಚರ್, ರೆಲಿಜಿಯನ್ ಆ್ಯಂಡ್ ಮ್ಯಾನ್, ಅವಧೂತ: ರೀಸನ್ ಆ್ಯಂಡ್ ರೆವರೆನ್ಸ್, ಆನ್ ಆಸ್‌ಪೆಕ್ಟ್ ಆಫ್ ಇಂಡಿಯನ್ ಏಸ್ತೆಟಿಕ್ಸ್, ಪುರಾಣಾಸ್ ಆಸ್ ದ ವೆಹಿಕಲ್ಸ್ ಆಫ್ ಇಂಡಿಯಾಸ್ ಫಿಲಾಸಫಿ ಆಫ್ ಹಿಸ್ಟರಿ, ಅದ್ವೈತ ಫಿಲಾಸಫಿ, ಕುಂಡಲಿನಿ ಯೋಗ ಆ್ಯಂಡ್ ದ ವರ್ಚುಯಸ್ ವೇ ಆಫ್ ಲೈಫ್ ಮೊದಲಾದವುಗಳು. ಅವರ ಸಾಹಿತ್ಯ ಕೃಷಿ ಪ್ರಕೃತಿಧರ್ಮ, ತತ್ವಶಾಸ್ತ್ರ ಮತ್ತು ಮಾನವೀಯ ಮೌಲ್ಯಗಳಿಂದ ಪ್ರಭಾವಿತವಾಗಿದ್ದವು. ಅವರು ಮಹತ್ವದ ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಲು ಕಾರಣಕರ್ತರಾಗಿದ್ದರು. ಅವರು ಐತಿಹಾಸಿಕ ಸಂಶೋಧನೆಯ ಉತ್ತೇಜಕರಾಗಿ ಪ್ರಸಿದ್ಧ ಇತಿಹಾಸಕಾರ ಸಿ.ಹಯವದನರಾವ್ ಅವರ ‘ಹಿಸ್ಟರಿ ಆಫ್ ಮೈಸೂರು’ ಎಂಬ ಮೌಲಿಕ ಕೃತಿಯ ಮೂರು ಸಂಪುಟಗಳು ಹೊರಬರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

ಜಯಚಾಮರಾಜೇಂದ್ರ ಒಡೆಯರ್ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಲ್ಲಿಸಿದ ಅಮೋಘ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಗೀತ ನಾಟಕ ಅಕಾಡಮಿ ಅಧ್ಯಕ್ಷರು, ಭಾರತೀಯ ವನ್ಯಜೀವಿ ಮಂಡಳಿ ಅಧ್ಯಕ್ಷರು ಮೊದಲಾದ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ನೈಟ್‌ಗ್ರ್ಯಾಂಡ್ ಕ್ರಾಸ್ ಆಫ್ ದ ಆರ್ಡರ್ ಆಫ್ ಬಾತ್, ನೈಟ್ ಗ್ರ್ಯಾಂಡ್ ಕಮಾಂಡರ್ ಆಫ್ ದ ಸ್ಟಾರ್ ಆಫ್ ಇಂಡಿಯಾ, ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಲಿಟರೇಚರ್, ಅಣ್ಣಾಮಲೈ ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಲಿಟರೇಚರ್, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಲಾ, ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಲಾ, ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಮೊದಲಾದ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಭಾಜನರಾಗಿ ಶ್ರೇಷ್ಠ ವ್ಯಕ್ತಿತ್ವ ಗಳಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಕ್ರೀಡಾ ಕ್ಷೇತ್ರದಲ್ಲಿಯೂ ಕುದುರೆ ಸವಾರಿ ಮತ್ತು ಟೆನಿಸ್ ಆಟಗಳಲ್ಲಿ ವಿಶೇಷ ಆಸಕ್ತಿ ಗಳಿಸಿದ್ದರು. ಪ್ರಸಿದ್ಧ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ಮತ್ತು ಕ್ರಿಕೆಟ್ ದಿಗ್ಗಜ ಇ.ಎ.ಎಸ್. ಪ್ರಸನ್ನ ಮೊದಲಾದವರು ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ನೈತಿಕ ಸ್ಥೈರ್ಯ ಮತ್ತು ಆರ್ಥಿಕ ನೆರವು ನೀಡಿ ಅವರು ತಮ್ಮ ಕ್ರೀಡಾ ಕಾಳಜಿಯನ್ನು ಅಭಿವ್ಯಕ್ತಗೊಳಿಸಿದರು. ತಮ್ಮ ಬಹುಮುಖಿ ಕೊಡುಗೆಗಳಿಂದಾಗಿ ಮಾಧ್ಯಮಗಳು ಮತ್ತು ನಾಗರಿಕ ಸಮಾಜದ ಮನ್ನಣೆ ಗಳಿಸಿದರು. ಅವರು ತಮ್ಮ ಉದಾತ್ತ ಗುಣಗಳು ಮತ್ತು ಕೊಡುಗೆಗಳಿಂದ ಯದುವಂಶ ಮತ್ತು ಮೈಸೂರು ರಾಜ್ಯಗಳ ಘನತೆಯನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಭಾರತದಲ್ಲಿ ವಿಮಾನಗಳ ಉತ್ಪಾದನೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಆ ಕಾಲದ ಪ್ರತಿಷ್ಠಿತ ಉದ್ಯಮಿ ವಾಲ್‌ಚಂದ್ ಹಿರಾಚಂದ್‌ರವರಿಗೆ ಮೈಸೂರು ಸಂಸ್ಥಾನದಲ್ಲಿ ಸುಮಾರು 700 ಎಕರೆಗಳಷ್ಟು ಭೂಮಿಯನ್ನು ನೀಡಿ ವಿಮಾನ ಉತ್ಪಾದನೆಗೆ ಭೂಮಿಕೆ ಸಿದ್ಧಪಡಿಸಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಮೈಸೂರಿನ ಮಂಡಕಳ್ಳಿಯಲ್ಲಿ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ವಾಯುನೆಲೆ ನಿರ್ಮಾಣ ಕಾರ್ಯವನ್ನು ಒಡೆಯರ್ ತುಂಬು ಉತ್ಸಾಹದಿಂದ ಪೂರ್ಣಗೊಳಿಸಿದರು. ರಾಜ ಮನೆತನದ ಅನುಕೂಲಕ್ಕಾಗಿ ಒಂದು ವಿಮಾನವನ್ನೇ ಒಡೆಯರ್ ಖರೀದಿಸಿದ್ದರು. ಆದರೆ ಇದರ ಹೆಚ್ಚಿನ ಉಪಯೋಗವನ್ನು ಭಾರತ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್‌ಪಟೇಲ್ ಪಡೆದರೆಂಬುದು ಹೆಮ್ಮೆಯ ಸಂಗತಿಯಾಗಿದೆ. ಅವರು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಎಂಬ ಪ್ರತಿಷ್ಠಿತ ಸಂಸ್ಥೆ ಬೆಂಗಳೂರು ನಗರದಲ್ಲಿ ಸ್ಥಾಪನೆಾಗಲು ನಿರ್ಣಾಯಕ ಪಾತ್ರ ವಹಿಸಿದರು.

ಇತ್ತೀಚೆಗೆ ಜಯಚಾಮರಾಜೇಂದ್ರ ಒಡೆಯರ್ ಅವರ ಶತಮಾನೋತ್ಸವ ಸಮಾರಂಭದ ಅಂಗವಾಗಿ ನಡೆದ ಸಭೆಯಲ್ಲಿ ಸ್ಥಳೀಯ ಸಂಸದ ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಒಡೆಯರ್‌ರವರ ಹೆಸರನ್ನಿಡುವಂತೆ ಸಲಹೆ ನೀಡಿದ್ದರು. ಇತಿಹಾಸ ಪ್ರಜ್ಞೆ ಮತ್ತು ಮೈಸೂರು ರಾಜಮನೆತನದ ಕೊಡುಗೆಗಳ ಬಗ್ಗೆ ಕೃತಜ್ಞತಾ ಮನೋಭಾವ ಇರುವ ಎಲ್ಲರೂ ಮೈಸೂರು ವಿಮಾನ ನಿಲ್ದಾಣಕ್ಕೆ ನಾಡಿನ ಏಳಿಗೆಗಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿರುವ ಮತ್ತು ಭಾರತದಲ್ಲಿ ವಾಯುಯಾನ ಅಭಿವೃದ್ಧಿಯಲ್ಲಿ ಐತಿಹಾಸಿಕ ಪಾತ್ರವಹಿಸಿರುವ ಜಯಚಾಮರಾಜೇಂದ್ರ ಒಡೆಯರ್‌ರ ಹೆಸರನ್ನಿಡುವಂತೆ ಭಾರತ ಸರಕಾರಕ್ಕೆ ಒಕ್ಕೊರಲಿನಿಂದ ಒತ್ತಾಯಿಸುವುದು ಇಂದು ಅತ್ಯಂತ ಸಮಂಜಸವಾಗಿದೆ.ಮೈಸೂರಿನ ರಾಜಮನೆತನ ಸಹಕಾರಿ ಕ್ಷೇತ್ರದ ಪ್ರವರ್ತಕ ಕಂಠೀರವ ನರಸಿಂಹರಾಜ ಒಡೆಯರ್, ಸಮಗ್ರ ಅಭಿವೃದ್ಧಿಯ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ರಾಜ್ಯದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿರುವ ಜಯಚಾಮರಾಜೇಂದ್ರ ಒಡೆಯರ್ ಮೊದಲಾದವರು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನಿತ್ಯಹರಿದ್ವರ್ಣವಾಗಿ ಉಳಿದಿದ್ದಾರೆಂದು ಹೇಳಲು ಹೆಮ್ಮೆಯೆನಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)