varthabharthi


ವೈವಿಧ್ಯ

ಗಾಂಧಿ ಹಾಗೂ ಮಾಧ್ಯಮ

ವಾರ್ತಾ ಭಾರತಿ : 19 Feb, 2020
ಹೃಷಿಕೇಶ್ ಬಹದ್ದೂರ್ ದೇಸಾಯಿ

ಭಾಗ-2

ಗಾಂಧಿ ಅವರ ಗುಜರಾತಿ ಹಾಗೂ ಹಿಂದಿ ಬರಹಗಳನ್ನು ಅವರ ಆಪ್ತ ಸಹಾಯಕರು ಹಾಗೂ ಸಿಬ್ಬಂದಿಯಾಗಿದ್ದ ಮಹದೇವ ದೇಸಾಯಿ, ಪ್ಯಾರೆಲಾಲ ನಾಯರ್ ಹಾಗೂ ಜೆ. ಕಲ್ಯಾಣಂ ಅವರು ಭಾಷಾಂತರಿಸಿದ್ದರು. ಇವರ ಲೇಖನಗಳು ಸರಳ ಇಂಗ್ಲಿಷ್‌ನಲ್ಲಿ ಬರೆದರು ಅಂತ ಕೆಲವರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು ಅಂತ ನಾನು ಅಂದುಕೊಂಡಿದ್ದೆ. ಆದರೆ ಗಾಂಧಿ ಅವರ ಮೂಲ ಇಂಗ್ಲಿಷ್ ಹಾಗೂ ಹಿಂದಿ ಬರಹಗಳನ್ನು ನೋಡಿದರೆ ಅವರು ತಮ್ಮ ಭಾಷಾಂತರಕಾರರಿಂದಲೂ ಸರಳವಾಗಿದ್ದ ಭಾಷೆ ಬಳಸುತ್ತಿದ್ದರು ಅನ್ನೋದು ಗೊತ್ತಾಗುತ್ತದೆ.

ಸಾಂತ್ವನ

ಬೇರೆಯವರ ವಿಷಯ ಹಾಗಿರಲಿ, ನಮ್ಮವರೇ ನಮ್ಮ ಪರವಾಗಿ ಮಾತಾಡುತ್ತಿಲ್ಲ. ದೇಶಾದ್ಯಂತ ಪತ್ರಕರ್ತರ ಕೊಲೆ, ಅಪಹರಣ, ಕೊಲೆ ಬೆದರಿಕೆ, ಅವರ ಮೇಲೆ ಸುಳ್ಳು ಕೇಸು, ರಾಜದ್ರೋಹದ ಪ್ರಕರಣ ದಾಖಲಾಗುತ್ತಿದ್ದರೂ ಸಹ ನಮ್ಮಲ್ಲಿ ಅನೇಕರು ಸುಮ್ಮನಿದ್ದೇವೆ. ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಅನೇಕ ಪತ್ರಕರ್ತರ ಸಂಘಟನೆಗಳು ಇವೆ. ತಮ್ಮ ಪಾಡಿಗೆ ತಮ್ಮ ಕೆಲಸ ತಾವು ಮಾಡಿದ ರಾಜ್ಯದ ಮೂರು ಪತ್ರಕರ್ತರ ವಿರುದ್ಧ ಗಂಭೀರ ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ದಾಖಲಾಗಿವೆ. ಆದರೆ ಇಂತಹ ಚಾಳಿಗೆ ನಾವು ಎಷ್ಟು ವಿರೋಧ ಮಾಡಬೇಕಿತ್ತೋ ಅಷ್ಟು ಮಾಡಿಲ್ಲ.

ಅದಕ್ಕೆ ಕಾರಣ ಅಂದರೆ ‘‘ಸದ್ಯ ನಮ್ಮ ತನಕ ಬಂದಿಲ್ಲವಲ್ಲ’’ ಅನ್ನುವ ಮನೋಭಾವ. ‘‘ಮನುಷ್ಯ ಜಾತಿ ತಾನೊಂದೇ ವಲಂ’’ ಅಂದರೆ ‘‘ಅಲ್ಲವೇ ಅಲ್ಲಂ’’ ಅನ್ನುವ ಮನಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾಲದಲ್ಲಿ ಲಿಯೋ ಟಾಲಸ್ಟಾಯ್ ಅವರ ‘ಕಡೆಗಣಿಸಿದ ಕಿಡಿ ಮನೆಯನ್ನೇ ಸುಟ್ಟೀತು’ ಎನ್ನುವ ಮಾತನ್ನು ಮರೆಯುತ್ತೇವೆ.

ಸರಳ ಭಾಷೆ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೊಮ್ಮೆ ಪೂರ್ಣ ಚಂದ್ರ ತೇಜಸ್ವಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಬಂದಿದ್ದರು. ಅವರಿಗೆ ಒಬ್ಬರು ಹೀಗೊಂದು ಪ್ರಶ್ನೆ ಕೇಳಿದರು. ‘‘ಸಮಕಾಲೀನ ಜಾಗತಿಕ ಸನ್ನಿವೇಶದಲ್ಲಿ, ನವ್ಯೋತ್ತರ ವಸಾಹತು ಶಾಹಿಯ ಪ್ರಭಾವದಿಂದ ಹಿರಿ ಸಂಸ್ಕೃತಿ ಕಿರಿ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿರುವುದರಿಂದ ಸಮ ಸಂಸ್ಕೃತಿಯ ಅಸ್ತಿತ್ವಕ್ಕೆ ಸಾಧ್ಯತೆ ಇದೆಯೇ?’’ ಅಂತ. ಅವರು ಪ್ರಶ್ನೆ ಅರ್ಥ ಆಗಲಿಲ್ಲ. ನೀವು ಕನ್ನಡದಲ್ಲಿ ಕೇಳಿದರೆ ಹೇಳಬಹುದು ಅಂತ ಅಂದರು. ಇದನ್ನು ಯಾಕೆ ಹೇಳುತ್ತೇನೆ ಎಂದರೆ ನಾವೆಲ್ಲ ಹೆಚ್ಚು ಶಿಕ್ಷಣ, ಅನುಭವ ದೊರೆಯುತ್ತಿದ್ದಂತೆಯೇ ಸರಳ ಭಾಷೆಯಿಂದ ದೂರ ಸರಿಯುತ್ತಿದ್ದೇವೆ. ಸಂಕೀರ್ಣ ಭಾಷೆ ಬಳಸಿದರೆ ನಾವು ಬುದ್ಧಿವಂತರು ಅಂತ ಅಂದುಕೊಂಡಿದ್ದೇವೆ.

ಕೇವಲ ವಿಶ್ವವಿದ್ಯಾನಿಲಯಗಳು ಅಥವಾ ಸಂಶೋಧನಾ ಕೇಂದ್ರಗಳಿಗೆ ಸೀಮಿತವಾಗಿರುತ್ತಿದ್ದ ಈ ಕ್ಲಿಷ್ಟ ಭಾಷೆ ಬಳಕೆಯ ಚಾಳಿ ಈಗೀಗ ಮಾಧ್ಯಮಕ್ಕೆ ಅಂಟಿಕೊಳ್ಳುತ್ತಿದೆ. ಉದಾಹರಣೆಗೆ ವಾರ್ಷಿಕ ಆಯವ್ಯಯದ ಮರುದಿನ ಪತ್ರಿಕೆಯನ್ನು ಎಷ್ಟು ಜನ ಓದಿ ಅರ್ಥಮಾಡಿಕೊಳ್ಳುತ್ತಾರೆ? ಅವರಿಗೆ ಅರ್ಥವಾಗುವಂತೆ ನಾವು ಬರೆಯುತ್ತಿದ್ದೇವೆಯೇ? ಸಚಿವರು ಬಳಸಿದ ಕಠಿಣ ಪದಗಳನ್ನೇ ನಾವು ಬಳಸುವುದಾದರೆ ಪತ್ರಿಕೆ ಎನ್ನುವ ಸಂವಹನದ ಮಾಧ್ಯಮದ ಅವಶ್ಯಕತೆ ಏನು? ಇಸ್ರೋದವರು ಉಪಗ್ರಹ ಉಡಾಯಿಸಿದಾಗ, ಕೊರೋನ ವೈರಸ್‌ನಂತಹ ಮಾರಕ ರೋಗ ಬಂದಾಗ, ರಾಜಕೀಯ ಬಿಕ್ಕಟ್ಟು ಉಂಟಾದಾಗ, ನಾವು ಹೊಸದಾಗಿ ಓದಲು ಕಲಿತವನೊಬ್ಬನಿಗೆ ಅರ್ಥವಾಗುವಂತೆ ಅಥವಾ ನಮ್ಮ ಸಮಾಜದ ಪರಿಚಯವಿಲ್ಲದ ಮನುಷ್ಯನೊಬ್ಬನಿಗೆ ತಿಳಿಯುವಂತೆ ಹೇಳಬಲ್ಲೆವೇ? ಇದು ನಾವೆಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದಂತಹ ಗಂಭೀರ ವಿಷಯ.

‘‘ಸೆಮಿನಾರಿನ ಭಾಷಣಗಳು ಹಾಗೂ ಫ್ಯಾಶನ್ ಶೋದ ಬಟ್ಟೆಗಳು ಎರಡೂ ಒಂದೇ. ಅವನ್ನು ಯಾರೂ ನಿಜ ಜೀವನದಲ್ಲಿ ಬಳಸೋದಿಲ್ಲ’’ ಅನ್ನುವ ಮಾತೊಂದಿದೆ. ಇದೇ ವರ್ಗಕ್ಕೆ ಪತ್ರಿಕೆಗಳು ಸೇರಿದರೆ ಏನು ಗತಿ? ನಮ್ಮ ಯುವ ಜನರು ಇಂದಿನ ದಿನಮಾನದಲ್ಲಿ ತೊಡುವ ಬಟ್ಟೆಗಳಿಗಾಗಿ ಇಷ್ಟೊಂದು ಟೀಕೆಗಳನ್ನು ಎದುರಿಸುತ್ತಿರುವಾಗ ಫ್ಯಾಶನ್ ಶೋಗಾಗಿ ರಚಿಸಿದ (ಅವಕ್ಕೆ ಕ್ರಿಯೇಷನ್‌ಅಂತಾರೆ) ಅವತಾರಗಳನ್ನು ಬಳಸತೊಡಗಿದರೆ ಏನಾದೀತು ಅಂತ ಕಲ್ಪನೆ ಮಾಡಿಕೊಳ್ಳಿ! ಅಷ್ಟು ಅಪಹಾಸ್ಯಕ್ಕೆ ನಾವು ಬಳಸುವ ಭಾಷೆ ಈಡಾಗುತ್ತಿದೆ. ನಮ್ಮ ಓದುಗರು ಸಜ್ಜನರಾದ್ದರಿಂದ ಅದನ್ನು ನಮ್ಮ ಹತ್ತಿರ ಹೇಳುತ್ತಿಲ್ಲ. ಪತ್ರಿಕೆ ಓದಿ, ಮುಚ್ಚಿಟ್ಟು, ಏನೋ ಇರಬೇಕು ಬಿಡು ಅಂತ ಸುಮ್ಮನೆ ಇರುತ್ತಾರೆ.

ಇಂಗ್ಲೆಂಡ್‌ನಲ್ಲಿ ಸರಳ ಭಾಷೆಯ ಪರವಾಗಿ ಒಂದು ಜನಾಂದೋಲನವೇ ನಡೆದು ಹೋಯಿತು. ಅಲ್ಲಿ ಸರಕಾರಿ ಆದೇಶಗಳೆಲ್ಲ ಸರಳ ಭಾಷೆಯಲ್ಲಿ ಇರಬೇಕು ಎನ್ನುವ ಕಾಯ್ದೆ ಈಗ ಬಂದಿದೆ. ಅದನ್ನು ದೃಢೀಕರಿಸಲು ಸರಳ ಭಾಷಾ ಆಯೋಗ ಅಲ್ಲಿದೆ.

ಗಾಂಧಿ ಅವರ ಗುಜರಾತಿ ಹಾಗೂ ಹಿಂದಿ ಬರಹಗಳನ್ನು ಅವರ ಆಪ್ತ ಸಹಾಯಕರು ಹಾಗೂ ಸಿಬ್ಬಂದಿಯಾಗಿದ್ದ ಮಹದೇವ ದೇಸಾಯಿ, ಪ್ಯಾರೆಲಾಲ ನಾಯರ್ ಹಾಗೂ ಜೆ. ಕಲ್ಯಾಣಂ ಅವರು ಭಾಷಾಂತರಿಸಿದ್ದರು. ಇವರ ಲೇಖನಗಳು ಸರಳ ಇಂಗ್ಲಿಷ್‌ನಲ್ಲಿ ಬರೆದರು ಅಂತ ಕೆಲವರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು ಅಂತ ನಾನು ಅಂದುಕೊಂಡಿದ್ದೆ. ಆದರೆ ಗಾಂಧಿ ಅವರ ಮೂಲ ಇಂಗ್ಲಿಷ್ ಹಾಗೂ ಹಿಂದಿ ಬರಹಗಳನ್ನು ನೋಡಿದರೆ ಅವರು ತಮ್ಮ ಭಾಷಾಂತರಕಾರರಿಂದಲೂ ಸರಳವಾಗಿದ್ದ ಭಾಷೆ ಬಳಸುತ್ತಿದ್ದರು ಅನ್ನೋದು ಗೊತ್ತಾಗುತ್ತದೆ.

ಮಾಡಿ ತೋರಿಸುವುದು

ಜೀವನಕ್ಕೂ ಮಾಧ್ಯಮದಲ್ಲಿನ ಪಾತ್ರಗಳಿಗೂ ಸಂಬಂಧ ಇದೆ. ಒಬ್ಬ ಒಳ್ಳೆಯ ಮನುಷ್ಯನಾಗಿರದಿದ್ದರೆ ಒಳ್ಳೆಯ ಪತ್ರಕರ್ತ ನಾಗಿರಲಿಕ್ಕೆ ಸಾಧ್ಯ ಇಲ್ಲ ಅಂತ ಒಂದು ಅಭಿಪ್ರಾಯ ಇದೆ. ಈ ಹಿನ್ನೆಲೆಯ ಗಾಂಧಿಯ ಜೀವನದ ಕೇವಲ ಒಂದೇ ಮಜಲನ್ನು ನೋಡಬಹುದು. ಅದು ಅವರ ಉದಾಹರಣಾರ್ಥಕ ಜೀವನ ಅಥವಾ ಆದರ್ಶಗಳ ಬಗ್ಗೆ ಮಾತಾಡುವ ಮುನ್ನ ಅವನ್ನು ಜೀವಿಸಿ ತೋರಿಸುವುದು.

 ಕರಾಟೆಯ ಸಿನೆಮಾಗಳ ಯಶಸ್ಸಿನ ಬಗ್ಗೆ ಹಾಂಕಾಂಗ್‌ನ ನಿರ್ದೇಶಕ ಸಾಮೋ ಹಂಗ್ ಒಂದು ಕಾರಣ ಕೊಡುತ್ತಾರೆ. ‘‘ನೀವು ಹೀಗೆ ಸ್ಟಂಟು ಮಾಡಿ, ಹಾಗೆ ಮಾಡಿ ಎಂದು ಹೇಳೋ ಬದಲು ನಾವೇ ಮಾಡಿ ತೋರಿಸಿದರೆ ಸರಳವಾಗಿ ಮಾಡುತ್ತಾರೆ. ಅದಕ್ಕೇ ಜಗತ್ತಿನಲ್ಲಿ ಇಷ್ಟೊಂದು ಕರಾಟೆ ಸಿನೆಮಾಗಳು ತಯಾರು ಆಗುತ್ತಾವೆ’’ ಅಂತ. ಈ ಕರಾಟೆ ಸಿನೆಮಾಗಳಿಗೂ ಗಾಂಧಿ ಜೀವನಕ್ಕೂ ಎತ್ತಣಿಂದೆತ್ತಣ ಸಂಬಂಧ ಅಂತ ವಿಚಾರ ಮಾಡಿದರೆ ಇದು ಸ್ಪಷ್ಟವಾಗುತ್ತದೆ.

ಬರಹ ಹಾಗೂ ಪ್ರತಿಭಟನೆ, ಮೆರವಣಿಗೆ, ಸಭೆಗಳು ಇತ್ಯಾದಿ. ಅವರು ರೇಡಿಯೊ, ಟಿವಿ ಉಪಯೋಗಿಸಿಕೊಂಡಿದ್ದು ಕಮ್ಮಿ. ಬಿಬಿಸಿ ತಂಡವೊಂದು ಅವರ ವೀಡಿಯೊ ಸಂದರ್ಶನ ಮಾಡಲು ಬಂದಾಗ ದಿಲ್ಲಿಯ ಬಿಳಿಯ ಪತ್ರಕರ್ತರೊಬ್ಬರು ಗಾಂಧಿಗೆ ಕ್ಯಾಮರಾ ಕಂಡರೆ ಆಗಲ್ಲ. ಅದರಿಂದ ಅವರು ದೂರ ಇರಲು ಪ್ರಯತ್ನ ಪಡುತ್ತಾರೆ ಅಂತ ಕಿವಿಮಾತು ಹೇಳುತ್ತಾರೆ. ಆದರೆ ಆ ಸಂದರ್ಶನ ನಡೆಯುತ್ತದೆ. ಅದರಲ್ಲಿ ‘‘ನೀವು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರೇ?’’ ಅಂತ ವರದಿಗಾರ ಕೇಳುತ್ತಾನೆ. ಇವರು ‘‘ಇದು ಮೂರ್ಖತನದ ಪ್ರಶ್ನೆ’’ ಅಂತ ಹೇಳಿ ಮಾತು ಮುಗಿಸುತ್ತಾರೆ. ಬಿಬಿಸಿಯ ಅಂತರ್ಜಾಲ ತಾಣದಲ್ಲಿ ಈ ಸಂದರ್ಶನ ಲಭ್ಯವಿದೆ.

ಕೊನೆಯ ಮಾತು

ಗಾಂಧಿ ಹತ್ಯೆಯ ನಂತರ ಬರ್ನಾಡ್ ಷಾ ಅವರು ಮಾಡಿದ ಮಾತನ್ನು ಇಲ್ಲಿ ನೆನಪಿಸಿಕೊಳ್ಳೋಣ. ‘‘ಒಳ್ಳೆಯವರಾಗಿರುವುದು ಎಷ್ಟು ಅಪಾಯಕಾರಿ ಅಂತ ಇದರಿಂದ ಗೊತ್ತಾಗುತ್ತದೆ’’ ಅನ್ನುವ ಮಾತು ಅದು. ಈ ಮಾತು ತಮಾಷೆಯ ಮಾತಾಗಿ ಕಂಡರೂ ಬಹಳ ಗಂಭೀರವಾದದ್ದು. ಇಂದಿನ ಜಗತ್ತಿನಲ್ಲಿನ ಅನೇಕ ಸಮಸ್ಯೆಗಳಿಗೆ ಇದೇ ಕಾರಣ ಅಂತ ನನಗೆ ಅನ್ನಿಸುತ್ತದೆ.

ಯಾರಾದರೂ ಇಷ್ಟೊಂದು ಒಳ್ಳೆಯವರಾಗಿರುವುದು ಸಾಧ್ಯವೇ ಇಲ್ಲ ಅಂತ ನಾವು ಭಾವಿಸಿಕೊಂಡು ಬಿಟ್ಟಿರುತ್ತೇವೆ. ಇವರು ಹಿಂದೂಗಳು. ಇವರಿಗೆ ಇತರ ಧರ್ಮದವರ ಮೇಲೆ ಇಷ್ಟು ಕರುಣೆ ಇರಲು ಸಾಧ್ಯವಿಲ್ಲ. ಅವರು ಬೇರೆಯವರಿಗೆ ಸಹಾಯ ಮಾಡಿದರೆ, ಮಮಕಾರ ತೋರಿಸಿದರೆ, ಅದು ರಾಜಕೀಯ ಕಾರಣಗಳಿಗಾಗಿ ಮಾತ್ರ ಅಂತ ಅಂದುಕೊಳ್ಳುತ್ತೇವೆ.

ನಮ್ಮ ಮನೆಯ ಹತ್ತಿರದಲ್ಲಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಇದ್ದರು. ನನ್ನ ಮಕ್ಕಳನ್ನು ಅವರು ತುಂಬ ಹಚ್ಚಿಕೊಂಡಿದ್ದರು. ಅವರು ಅಪಘಾತದಲ್ಲಿ ತೀರಿಕೊಂಡರು. ಅವರ ದೇಹ ಆಸ್ಪತ್ರೆಯಲ್ಲಿ ಇದ್ದಾಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಹೋದೆ. ಅದನ್ನು ದೂರದಿಂದ ನೋಡಿದ ನನ್ನ ಮಕ್ಕಳು ಅಳಲಿಕ್ಕೆ ಶುರು ಮಾಡಿದರು. ಆಸ್ಪತ್ರೆಯಲ್ಲಿ ಏನೋ ತೊಂದರೆ ಆಗಿದ್ದಕ್ಕೆ ನಾವು ತುಂಬ ಹೊತ್ತು ಅಲ್ಲಿ ಇರಬೇಕಾಯಿತು. ಅಲ್ಲಿಗೆ ಬಂದಿದ್ದ ಅವರ ಸಂಬಂಧಿಕರೊಬ್ಬರು. ಅಲ್ಲಾ ನೀವು ಅವರ ಜಾತಿಯವರಲ್ಲ, ಊರವರಲ್ಲಾ, ಸಂಬಂಧಿಕರು ಆಗಿರಲಿಕ್ಕೆ ಸಾಧ್ಯ ಇಲ್ಲ. ನಿಮ್ಮ ಮಕ್ಕಳು ಯಾಕೆ ಇಷ್ಟೊಂದು ಅಳ್ತಾ ಇದ್ದಾರೆ? ಅಂತ ಆಶ್ಚರ್ಯದಿಂದ ಕೇಳಿದರು. ಅದೆಲ್ಲಾ ಮೀರಿದ್ದು ನಮ್ಮ ಸಂಬಂಧ ಅಂತ ಅಂದು ನಾನು ಮಾತು ಮುಗಿಸಿದೆ.

ಶಿಶುನಾಳದ ಊರ ಜಾತ್ರೆಯಲ್ಲಿ ‘‘ಸವಾಲೊಂದು ನಿನ್ನ ಮ್ಯಾಲೆ ಶಾಹೀರಕೆ’’ ಅಂತ ಹಾಡಿಕೊಂಡು ಇದ್ದ ಶರೀಫರನ್ನು ಮನೆಯಲ್ಲಿ ಇಟ್ಟುಕೊಂಡು, ಮಗನಂತೆ ಪ್ರೀತಿಸಿ, ವೇದಾಧ್ಯಯನ ಮಾಡಿಸಿ ರಾಷ್ಟ್ರದ ಅತಿ ಪ್ರಮುಖ ಸೌಹಾರ್ದ ಕವಿಯನ್ನಾಗಿ ಮಾಡಿದ ಗೋವಿಂದ ಭಟ್ಟರು ನಮ್ಮ ನಡುವೆಯೇ ಇದ್ದರು ಅನ್ನುವುದನ್ನು ಮರೆಯುತ್ತೇವೆ. ‘‘ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದುವೆಯ ಮಾಡಿ ಕೊಟ್ಟಾರವ್ವ ಜಮದಗ್ನಿಗೆ’’ ಎಂದು ಹಾಡಿದ ಸವದತ್ತಿಯ ಯಲ್ಲಮ್ಮನ ಪರಮ ಭಕ್ತ ಹಲಸಂಗಿ ಖಾಜಾ ಸಾಹೇಬರನ್ನು ನಾವು ನೆನಪು ಮಾಡಿಕೊಳ್ಳುತ್ತಿಲ್ಲ.

ನಮಗೆ ಈಗ ಗಾಂಧಿ ಮುಖ್ಯವಾಗುವುದು ಈ ಕಾರಣಗಳಿಂದಾಗಿ ಅಂತ ನನಗೆ ಅನಿಸುತ್ತದೆ. ಬರಬರುತ್ತಾ ‘ನಾವು’ ‘ಅವರು’ ಅನ್ನುವ ಮಾತುಗಳು ಹೆಚ್ಚಾಗುತ್ತಿವೆ. ಅವರ ಬಗ್ಗೆ ನಾವೇಕೆ ಬರೆಯಬೇಕು ಅನ್ನೋ ಧೋರಣೆ ಬೆಳೆಯುತ್ತಿದೆ. ಇದು ಸರಿಯಾದ ದಾರಿಯಲ್ಲ. ಜಗತ್ತಿನಲ್ಲಿ ಎಲ್ಲಿ ಅನ್ಯಾಯ ನಡೆದರೂ ಅದಕ್ಕೆ ನಾವು ಸ್ಪಂದಿಸಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಇರುವಿಕೆಗೇ ಅರ್ಥ ವಿಲ್ಲದಂತಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)