varthabharthi

ಕರಾವಳಿ

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸಹಿತ 25 ಜಿಲ್ಲಾ ಸಮಿತಿಗಳು ಮುಂದುವರಿಕೆ

ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ನೇಮಕಾತಿಗೆ ಹೈಕೋರ್ಟ್ ತಡೆ

ವಾರ್ತಾ ಭಾರತಿ : 20 Feb, 2020

ಮಂಗಳೂರು, ಫೆ.20: ರಾಜ್ಯದ 25 ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ನೇಮಕಾತಿ ಆದೇಶವನ್ನು ಅವಧಿಗೆ ಮೊದಲೇ ಹಿಂಪಡೆದು ಹೊಸ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳನ್ನು ನೇಮಿಸಿ ಕರ್ನಾಟಕ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇತ್ತೀಚೆಗೆ ಹೊರಡಿಸಿದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಹಿಂದಿನ ಆಡಳಿತಾಧಿಕಾರಿಯವರ ನಿರ್ದೇಶನದಂತೆ ಕರ್ನಾಟಕ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಜನವರಿ 21ರಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ನೇಮಕಾತಿ ಆದೇಶವನ್ನು ಅವಧಿಗೆ ಮೊದಲೇ ಹಿಂಪಡೆದಿದ್ದರು. ಅಲ್ಲದೆ ಹೊಸ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳನ್ನು ನೇಮಿಸಿ ಆದೇಶಿಸಿದ್ದರು. ಈ ಆದೇಶದ ವಿರುದ್ಧ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರ ನಿರ್ದೇಶನದಂತೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಕೆ.ಎಂ.ಅಬ್ದುಲ್ ಕರೀಂ ಗೇರುಕಟ್ಟೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಫೆ.13ರಂದು ತಡೆಯಾಜ್ಞೆ ವಿಧಿಸಿ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಹಿಂದಿನ ಅಧ್ಯಕ್ಷರಾಗಿದ್ದ ಕಣಚೂರು ಮೋನು ಹಾಜಿ ಗುರುವಾರ ಪಾಂಡೇಶ್ವರದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಶಾಹುಲ್ ಹಮೀದ್ ಹಾಜಿ ಮೆಟ್ರೋ, ಸದಸ್ಯರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಹಸನಬ್ಬ ಚಾರ್ಮಾಡಿ, ಕೆ.ಎಂ.ಅಬ್ದುಲ್ ಕರೀಂ ಗೇರುಕಟ್ಟೆ, ರಶೀದ್ ವಿಟ್ಲ, ಇಸ್ಮಾಯೀಲ್ ಉಳಾಯಿಬೆಟ್ಟು, ಉಮರ್ ಫಜೀರ್ ಉಪಸ್ಥಿತರಿದ್ದರು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)