varthabharthi


ವೈವಿಧ್ಯ

ಎಲ್‌ಐಸಿಯ ಶೇರು ಮಾರಾಟದ ಪ್ರಸ್ತಾಪ ಇದು ಕೇವಲ ಒಂದು ರಾಜಕೀಯ ನಿಲುವಷ್ಟೇ ಆಗಿರಬಹುದೇ?

ವಾರ್ತಾ ಭಾರತಿ : 21 Feb, 2020
ಕೃಪೆ: Economic and Political Weekly

ಎಲ್‌ಐಸಿ ಸಂಸ್ಥೆಯ ರಚನೆಯು ಸಂಕೀರ್ಣವಾಗಿದ್ದು ಹಲವು ಬಗೆಯ ಹೂಡಿಕಾ ಪ್ರಣಾಳಿಯನ್ನು ಹೊಂದಿದೆ. ಹೀಗಾಗಿ ಅದರ ಖಾಸಗೀಕರಣವು ಅಷ್ಟು ಸರಳವಲ್ಲ. ಆದರೂ ಸರಕಾರವೇ ಅದರ ಶೇ.100ರಷ್ಟು ಒಡೆತನವನ್ನು ಹೊಂದಿರುವುದರಿಂದ ಸರಕಾರದ ಇತರ ಸಾರ್ವಜನಿಕ ಕಂಪೆನಿಗಳನ್ನು ನಷ್ಟಗಳಿಂದ ಬಚಾವು ಮಾಡಲು ಸರಕಾರವು ಬೇಕೆಂದಾಗ ಹಾಲು ಕರೆದುಕೊಳ್ಳಬಹುದಾದ ಹಸುವನ್ನಾಗಿ ಎಲ್‌ಐಸಿಯನ್ನು ಬಳಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ಸರಕಾರವು ಬಿಡುಗಡೆ ಮಾಡಿರುವ ಒಂದು ಅಧಿಕೃತ ಹೇಳಿಕೆಯನ್ನು ಬಿಟ್ಟರೆ ಈ ಯೋಜನೆಯು ಈ ಹಿಂದೆ ಸರಕಾರವು ಘೋಷಿಸಿದ್ದ ಇತರ ಸರಕಾರಿ ಶೇರು ಮಾರಾಟಗಳ ಯೋಜನೆಗಿಂತ ಈ ಯೋಜನೆ ಯಾವ ರೀತಿಯಿಂದಲಾದರೂ ಭಿನ್ನವಾಗಿದೆಯೇ?

ಕೇಂದ್ರ ಸರಕಾರವು ತನ್ನ 2020ರ ಬಜೆಟ್‌ನಲ್ಲಿ ಭಾರತದ ಬೃಹತ್ ಜೀವ ವಿಮಾ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಲ್ಲಿ ತನ್ನ ಒಡೆತನದಲ್ಲಿರುವ ಶೇ.10ರಷ್ಟು ಶೇರುಗಳನ್ನು ಖಾಸಗಿಯವರಿಗೆ ಮಾರಲು ನಿರ್ಧರಿಸಿದೆ. ವರದಿಗಳ ಪ್ರಕಾರ ಮುಂದಿನ ವಿತ್ತೀಯ ವರ್ಷದಲ್ಲಿ ಸಾರ್ವಜನಿಕ ಮಾರುಕಟ್ಟೆಗೆ ಪ್ರಾರಂಭಿಕವಾಗಿ ಶೇರುಗಳನ್ನು (ಐಪಿಒ) ಬಿಡುಗಡೆ ಮಾಡುವ ಮೂಲಕ ಅದನ್ನು ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದು ಸರಕಾರದ ಆಕ್ರಮಣಶೀಲವಾದ ಹೂಡಿಕೆ ಹಿಂದೆಗೆತ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ನಗದೀಕರಣ ಯೋಜನೆಯ ಭಾಗವೇ ಆಗಿದೆ. ಮಾಧ್ಯಮಗಳ ವರದಿಯ ಪ್ರಕಾರ ಸರಕಾರವು 2021ರ ಸಾಲಿನಲ್ಲಿ ಅಪಹೂಡಿಕೆಯ ಮೂಲಕ ಸಂಗ್ರಹಿಸಬೇಕೆಂದಿರುವ ರೂ. 2.1 ಲಕ್ಷ ಕೋಟಿಯಲ್ಲಿನ ಮೂರನೇ ಒಂದು ಭಾಗದಷ್ಟನ್ನು ಎಲ್‌ಐಸಿಯಲ್ಲಿನ ಶೇರು ಮಾರಾಟಗಳ ಮೂಲಕ ಪಡೆದುಕೊಳ್ಳಲು ಉದ್ದೇಶಿಸಿದೆ. ಹಾಗೆ ನೋಡಿದಲ್ಲಿ ಎಲ್‌ಐಸಿಯ ಖಾಸಗೀಕರಣದ ಯೋಜನೆ ಈ ಸರಕಾರದ ಕೂಸೇನಲ್ಲ. ಈ ಹಿಂದಿನ ಸರಕಾರಗಳು ಸಹ ಈ ಕುರಿತು ಚಿಂತಿಸಿದ್ದರೂ ಸಹ ಆ ಆಲೋಚನೆಗಳನ್ನು ಜಾರಿಗೆ ತಂದಿರಲಿಲ್ಲ. ಎಲ್‌ಐಸಿ ಸಂಸ್ಥೆಯ ರಚನೆಯು ಸಂಕೀರ್ಣವಾಗಿದ್ದು ಹಲವು ಬಗೆಯ ಹೂಡಿಕಾ ಪ್ರಣಾಳಿಯನ್ನು ಹೊಂದಿದೆ. ಹೀಗಾಗಿ ಅದರ ಖಾಸಗೀಕರಣವು ಅಷ್ಟು ಸರಳವಲ್ಲ. ಆದರೂ ಸರಕಾರವೇ ಅದರ ಶೇ.100ರಷ್ಟು ಒಡೆತನವನ್ನು ಹೊಂದಿರುವುದರಿಂದ ಸರಕಾರದ ಇತರ ಸಾರ್ವಜನಿಕ ಕಂಪೆನಿಗಳನ್ನು ನಷ್ಟಗಳಿಂದ ಬಚಾವು ಮಾಡಲು ಸರಕಾರವು ಬೇಕೆಂದಾಗ ಹಾಲು ಕರೆದುಕೊಳ್ಳಬಹುದಾದ ಹಸುವನ್ನಾಗಿ ಎಲ್‌ಐಸಿಯನ್ನು ಬಳಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ಸರಕಾರವು ಬಿಡುಗಡೆ ಮಾಡಿರುವ ಒಂದು ಅಧಿಕೃತ ಹೇಳಿಕೆಯನ್ನು ಬಿಟ್ಟರೆ ಈ ಯೋಜನೆಯು ಈ ಹಿಂದೆ ಸರಕಾರವು ಘೋಷಿಸಿದ್ದ ಇತರ ಸರಕಾರಿ ಶೇರು ಮಾರಾಟಗಳ ಯೋಜನೆಗಿಂತ ಈ ಯೋಜನೆ ಯಾವ ರೀತಿಯಿಂದಲಾದರೂ ಭಿನ್ನವಾಗಿದೆಯೇ?

 ವಾಸ್ತವವಾಗಿ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ತೀವ್ರ ನಷ್ಟವನ್ನು ಅನುಭವಿಸುತ್ತಿರುವಾಗ ಅದರ ಶೇ.51ರಷ್ಟು ಒಡೆತನವನ್ನು ಎಲ್‌ಐಸಿ ಕೊಂಡುಕೊಳ್ಳುವಂತೆ ಆದೇಶಿಸಲಾಯಿತು. ಇದು ಯಾವುದೇ ರಾಜಕೀಯವುಳ್ಳ ಸರಕಾರಗಳು ಅಧಿಕಾರದಲ್ಲಿದ್ದರೂ ಎಲ್‌ಐಸಿಯನ್ನು ಮಾತ್ರ ತಮ್ಮ ಕೊನೆಯ ಬಚಾವು ಅಸ್ತ್ರವನ್ನಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ಹೀಗಾಗಿ ಎಲ್‌ಐಸಿಯಿಂದ ಸಣ್ಣ ಮೊತ್ತದ ಪಾಲನ್ನು ಹಿಂದೆಗೆದುಕೊಂಡ ಕೂಡಲೇ ಈ ಪ್ರವೃತ್ತಿ ನಿಲ್ಲುತ್ತದೆಂದು ನಿರೀಕ್ಷಿಸಲಾಗದು. ಏಕೆಂದರೆ ಈ ಪ್ರಸ್ತಾವಿತ ಹಿಂದೆಗೆತದ ನಂತರವೂ ಎಲ್‌ಐಸಿಯ ಶೇ.90ರಷ್ಟು ಒಡೆತನವು ಸರಕಾರದ್ದೇ ಆಗಿರುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಗದೀಕರಿಸಿಕೊಳ್ಳುವುದು ಹೊಸದೇನಲ್ಲವಾದರೂ ಈ ಸರಕಾರದಡಿ ಅದು ಹೊಸ ಗುಮಾನಿಗಳಿಗೆ ಕಾರಣವಾಗುತ್ತದೆ. ಏಕೆಂದರೆ ಸರಕಾರವು ಅತ್ಯಂತ ಬಹಿರಂಗವಾಗಿ ಆರ್ಥಿಕತೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಮರೆಮಾಚುತ್ತಿದೆ, ಲಾಭದಾಯಕ ಸರಕಾರಿ ಸಂಸ್ಥೆಗಳ ಲಾಭವನ್ನು ಬೇರೆ ಬಾಬತ್ತುಗಳಿಗೆ ಬಾಚಿಕೊಳ್ಳುತ್ತಿದೆ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸುವ ತರ್ಕರಹಿತ ಗೀಳು ಅಂಟಿಕೊಂಡಿದೆ. ತಾನೇ ಸೃಷ್ಟಿಸಿರುವ ಬೃಹತ್ ಆರ್ಥಿಕ ದುರ್ನಿರ್ವಹಣೆಯನ್ನು ಸರಿಪಡಿಸಿಕೊಳ್ಳಲೆಂದೇ ಸರಕಾರವು ಸಾರ್ವಜನಿಕ ಆಸ್ತಿಪಾಸ್ತಿಗಳ ನಗದೀಕರಣಕ್ಕೆ ಮುಂದಾಗಿದೆಯೇ?

ಈ ಸಂದರ್ಭದಲ್ಲಿ ಎಲ್‌ಐಸಿ ಶೇರುಗಳ ಪ್ರಸ್ತಾವಿತ ಮಾರಾಟವು 1956ರ ಎಲ್‌ಐಸಿ ಕಾಯ್ದೆಗೆ ವಿರುದ್ಧವಾಗಿಲ್ಲದಿದ್ದರೂ ಹಲವಾರು ಕಾರಣಗಳಿಗಾಗಿ ಅದು ಹುಟ್ಟಿಸುವ ಆತಂಕಗಳೇನೂ ಕಡಿಮೆಯಾಗುವುದಿಲ್ಲ. ಮೊದಲನೆಯದಾಗಿ, ಎಲ್‌ಐಸಿಯೆಂಬುದು ಜನಸಾಮಾನ್ಯರ ಉಳಿತಾಯ ಧನದ ರಕ್ಷಕನೆಂಬ ಪರಿಕಲ್ಪನೆಯನ್ನು ಮುಕ್ಕಾಗದಂತೆ ನೋಡಿಕೊಳ್ಳಲಾಗುತ್ತಿದ್ದರೂ, ಅಧಿಕಾರದಲ್ಲಿದ್ದಾಗ ಮಾತ್ರ ಎಲ್ಲಾ ಪಕ್ಷಗಳೂ ವಿತ್ತೀಯ ನಿರ್ವಹಣೆಗಾಗಿ ಅದರ ತಿಜೋರಿಗೆ ಕೈಹಾಕಿವೆೆ. ಆದ್ದರಿಂದ ವಿರೋಧ ಪಕ್ಷಗಳು ಪ್ರಸ್ತಾವಿತ ತಿದ್ದುಪಡಿಗಳನ್ನು ವಿರೋಧಿಸುವಲ್ಲಿ ಎಷ್ಟು ಪ್ರಾಮಾಣಿಕರಾಗಿರುತ್ತಾರೆಂಬುದನ್ನು ಕಾದು ನೋಡಬೇಕು ಹಾಗೂ ರಾಜಕೀಯವಾಗಿ ಸೂಕ್ಷ್ಮವಾಗಿರುವ ಮಸೂದೆಗಳನ್ನು ಜಾರಿ ಮಾಡಿಸಿಕೊಳ್ಳುವಲ್ಲಿ ಹಾಲಿ ಸರಕಾರದ ಪರಿಣಿತಿಯನ್ನು ಗಮನಿಸಿದರೆ ಹಣಕಾಸು ಮಸೂದೆಯ ಸ್ವರೂಪವನ್ನೂ ಹೊಂದಿರದ ಎಲ್‌ಐಸಿ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪಾಸು ಮಾಡಿಸಿಕೊಳ್ಳುವುದು ಕಷ್ಟವಾಗಲಿಕ್ಕಿಲ್ಲ. ಎರಡನೆಯದಾಗಿ ಮತ್ತು ಅತಿ ಮುಖ್ಯವಾಗಿ ಈ ಮಸೂದೆಯು ಜಾರಿಯಾಗಿಯೇ ಬಿಟ್ಟಲ್ಲಿ ಅದು ಜೀವ ವಿಮಾ ನಿಗಮದ ಮೇಲೆ ಮತ್ತು ವಿಮಾದಾರರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು?

ಒಂದು ಸಾಂಸ್ಥಿಕ ದೃಷ್ಟಿಕೋನದಿಂದ ನೋಡುವುದಾದಲ್ಲಿ, ಎಲ್‌ಐಸಿಯ ಶೇರು ಮಾರಾಟವು ಉದ್ದೇಶಿತ ಲಾಭವನ್ನು ತರಬೇಕೆಂದರೆ ಅದರ ಮೂಲ ಬಂಡವಾಳವಾದ 100 ಕೋಟಿಯ ವಿಸ್ತರಣೆ ಹಾಗೂ ಅದರ ಒಟ್ಟಾರೆ ಅಂದಾಜು 32 ಲಕ್ಷದಷ್ಟಿರುವ ಆಸ್ತಿಪಾಸ್ತಿಗಳ ಮೌಲ್ಯಾಂಕನದ ಸಂಗತಿಗಳು ಬಗೆಹರಿಯಬೇಕು. ಒಂದೆಡೆ ಸರಕಾರವು ಈವರೆಗೆ ಮೂಲಬಂಡವಾಳದ ವಿಸ್ತರಣೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮುಂದಿಟ್ಟಿಲ್ಲ. ಎರಡನೆಯದಾಗಿ ಸಾರ್ವಜನಿಕ ಶೇರು ವಿಕ್ರಯ ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿ ಸಾರ್ವಜನಿಕಗೊಳಿಸಲೇ ಬೇಕಿರುವ ಆಸ್ತಿಪಾಸ್ತಿಗಳ ಸ್ವರೂಪ, ಹೂಡಿಕೆಗಳ ಲಾಭದಾಯಕತೆ ಇತ್ಯಾದಿಗಳ ಬಗ್ಗೆ ಏನು ಮತ್ತು ಎಷ್ಟನ್ನು ಬಹಿರಂಗಗೊಳಿಸಲಿದೆ ಎಂಬುದನ್ನು ನೋಡಬೇಕಿದೆ. ಮತ್ತೊಂದು ಕಡೆ ಸಾರ್ವಜನಿಕ ಪ್ರಾಥಮಿಕ ಶೇರು ವಿಕ್ರಯ ಪ್ರಕ್ರಿಯೆಯು ಒಂದು ಸಂಸ್ಥೆಯಾಗಿ ಎಲ್‌ಐಸಿಯಲ್ಲಿ ಸಾಂಸ್ಥಿಕ ಬದಲಾವಣೆಯಾಗುವುದನ್ನು ನಿರೀಕ್ಷಿಸುತ್ತದೆ ಮತ್ತು ಅದರ ಭಾಗವಾಗಿ ನಿಗಮದ ವಿಶ್ವಾಸಾರ್ಹತೆಯನ್ನು ನಿರ್ಧರಿಸುವ ಲಾಭಾಂಶ ವಿತರಣೆ ಮತ್ತು ಸರಕಾರಿ ಖಾತರಿಗಳಂತಹ ವಿಷಯದಲ್ಲೂ ಬದಲಾವಣೆಗಳನ್ನು ನಿರೀಕ್ಷಿಸುತ್ತದೆ.

 ಕಳೆದ ಹಲವಾರು ದಶಕಗಳಿಂದಲೂ ಪಾಲುದಾರಿಕೆ ವ್ಯವಹಾರೋದ್ಯಮಕ್ಕೆ ಎಲ್‌ಐಸಿ ಒಂದು ಮಾದರಿಯಾಗಿ ನಿಂತಿದೆ. ವಿಮಾ ನಿಗಮದ ಕಾಯ್ದೆಗೆ ತರಲಾದ 2011ರ ತಿದ್ದುಪಡಿಯು ನಿಗಮದ ಶೇರುದಾರರಿಗೆ ಹಂಚುವ ಲಾಭಾಂಶವು ಶೇ.10ನ್ನು ಮೀರಬಾರದೆಂದು ನಿಗದಿ ಮಾಡುತ್ತದೆ. ಆದರೆ 2013 ರಿಂದ ಸರಕಾರವು ಎಲ್‌ಐಸಿಯು ತನ್ನ ಲಾಭಾಂಶದ ಶೇ.10ರಷ್ಟನ್ನು ಸರಕಾರದ ಜೊತೆ ಹಂಚಿಕೊಳ್ಳಬೇಕೆಂದು ಒತ್ತಾಯಿಸುತ್ತಿದೆ. ಆದರೂ ನಿಗಮವು ತನ್ನ ಶೇರುದಾರರಿಗೆ ಅರ್ಥಾತ್ ಸರಕಾರಕ್ಕೆ ಶೇ.5ರಷ್ಟು ಲಾಭಾಂಶವನ್ನು ಮತ್ತು ಉಳಿದ ಶೇ.95ರಷ್ಟು ಲಾಭಾಂಶವನ್ನು ವಿಮಾ ಪಾಲಿಸಿದಾರರಿಗೆ ಬೋನಸ್ ರೂಪದಲ್ಲೂ ಹಂಚುತ್ತಾ ಬಂದಿದೆ. ಈಗ ಶೇರು ವಿಕ್ರಯಗಳ ಮೂಲಕ ಶೇರುದಾರರ ಸಂಖ್ಯೆ ಹೆಚ್ಚಾಗುವುದರಿಂದ ಅವರಿಗೆ ಕೊಡಬೇಕಾದ ಲಾಭದ ಪಾಲೂ ಹೆಚ್ಚುತ್ತದೆ. ಅದರಿಂದ ಪಾಲಿಸಿದಾರರ ಬೋನಸ್ ಕಡಿಮೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಎಲ್ಲಕ್ಕಿಂತ ಮಿಗಿಲಾಗಿ ಎಲ್‌ಐಸಿಗಿರುವ ಸರಕಾರಿ ಖಾತರಿಯ ಅಂಶವು ಸ್ವಲ್ಪಮಟ್ಟಿಗೆ ಅಲುಗಾಡಿದರೂ ಎಲ್‌ಐಸಿಯ ಮೇಲೆ ಪಾಲಿಸಿದಾರರು ಇಟ್ಟಿರುವ ವಿಶ್ವಾಸ ಅಲುಗಾಡುವುದು ಖಚಿತ.

ಕಳೆದ ಐದು ವರ್ಷಗಳ ಎಲ್‌ಐಸಿಯ ಆದಾಯದ ಲೆಕ್ಕಾಚಾರಗಳನ್ನು ನೋಡಿದರೆ ಅದರ ಒಟ್ಟಾರೆ ಆದಾಯದ ಶೇ.60 ಭಾಗದಷ್ಟು ಆದಾಯವು ಪಾಲಿಸಿದಾರರು ಕಟ್ಟುವ ಪ್ರೀಮಿಯಂ ಮೂಲದಿಂದ ಬರುತ್ತದೆ ಹಾಗೂ ಅದರ ಆದಾಯದ ಶೇ.90ರಷ್ಟು ಭಾಗವು ವಿಮೆಯ ಕ್ಲೈಮುಗಳನ್ನು ಪಾವತಿಸಲು ವೆಚ್ಚವಾಗುತ್ತದೆ. ಹೀಗಾಗಿ ಒಟ್ಟಾರೆಯಾಗಿ ಸಂಸ್ಥೆಯ ಲಾಭದ ದರ ಅತ್ಯಂತ ಕಡಿಮೆ ಇದೆ. ಪರಿಸ್ಥಿತಿ ಹೀಗಿರುವಾಗ ಸಂಸ್ಥೆಯನ್ನು ದೂರದೃಷ್ಟಿಯಿಂದ ನಿರ್ವಹಿಸದಿದ್ದರೆ ಪಾಲಿಸಿದಾರರು ಸಂಕಷ್ಟಕ್ಕೆ ಸಿಲುಕುವುದು ಖಂಡಿತಾ. ಪ್ರೀಮಿಯಂನ ಪ್ರಮಾಣದಲ್ಲಿ ಹೆಚ್ಚಳವಾಗದೆ ಎಲ್‌ಐಸಿಯ ಪ್ರೀಮಿಯಂ ಆದಾಯವೂ ಹೆಚ್ಚುವುದಿಲ್ಲ. ಇಂತಹ ಸಂದರ್ಭದಲ್ಲಿ ಕಳೆದ ಐದು ವರ್ಷಗಳಿಂದ ಎಲ್‌ಐಸಿಯು ಅತ್ಯಂತ ಕಳಪೆ ಲಾಭದಾಯಕತೆ ಹೊಂದಿರುವ ಶೇರುಗಳಲ್ಲಿ ಹೂಡಿಕೆ ಮಾಡುವಂತೆ ಮಾಡಲಾಗಿದೆ. ಇದು ಈಗಾಗಲೇ ಎಲ್‌ಐಸಿಯ ಹೂಡಿಕೆಯ ಯೋಜನೆಗಳ ಮೇಲಿರುವ ರಾಜಕೀಯ ಒತ್ತಡಗಳ ಪರಿಣಾಮಗಳ ಭಾಗವೇ ಆಗಿದ್ದಲ್ಲಿ ಈ ಪ್ರಸ್ತಾವಿತ ಶೇರು ವಿಕ್ರಯಗಳ ಬಗ್ಗೆಯೂ ಅತ್ಯಂತ ಜಾಗರೂಕವಾಗಿರಬೇಕಿರುವುದು ಅತ್ಯಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)