varthabharthi

ವಿಶೇಷ-ವರದಿಗಳು

ಅಲೊವೆರಾದ ಆರೋಗ್ಯಲಾಭಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಾರ್ತಾ ಭಾರತಿ : 21 Feb, 2020

ಜನಪ್ರಿಯ ಔಷಧೀಯ ಸಸ್ಯವಾಗಿರುವ ಅಲೊವೆರಾ ಅಥವಾ ಲೋಳೆಸರವು ತನ್ನ ವೈರಾಣು, ಉರಿಯೂತ ಮತ್ತು ಬ್ಯಾಕ್ಟೀರಿಯಾಗಳಿಗೆ ನಿರೋಧಕ ಗುಣಗಳಿಗಾಗಿ ಹೆಸರಾಗಿದೆ. ತನ್ನ ವಿಶಿಷ್ಟ ಗುಣಗಳಿಂದಾಗಿ ಔಷಧಿ, ಸೌಂದರ್ಯ ಸಾಧನ ಮತ್ತು ಆಹಾರ ತಯಾರಿಕೆ ಕೈಗಾರಿಕೆಗಳಲ್ಲಿ ಬಳಕೆಯಾಗುವ ಅಲೊವೆರಾದಲ್ಲಿ ವಿಟಾಮಿನ್‌ಗಳು, ಖನಿಜಗಳು, ಕಿಣ್ವಗಳು, ಸಕ್ಕರೆ, ಲಿಗ್ನಿನ್, ಸ್ಯಾಪೊನಿನ್, ಅಮಿನೊ ಆಮ್ಲಗಳು ಮತ್ತು ಸ್ಯಾಲಿಸಿಲಿಕ್ ಆಮ್ಲಗಳು ಸೇರಿದಂತೆ 75 ಕ್ರಿಯಾಶೀಲ ಸಂಯುಕ್ತಗಳಿವೆ.

ಅಲೊವೆರಾ ಎಲೆಗಳಲ್ಲಿರುವ ಅರೆಪಾರದರ್ಶಕ ಜೆಲ್ ಶೇ.99ರಷ್ಟು ನೀರನ್ನು ಹೊಂದಿದ್ದು,ವಿಟಾಮಿನ್‌ಗಳು,ಖನಿಜಗಳು ಮತ್ತು ಅಮಿನೊ ಆಮ್ಲಗಳನ್ನು ಸಮೃದ್ಧವಾಗಿ ಹೊಂದಿದೆ. ಈ ಜೆಲ್ ಅನ್ನು ಚರ್ಮಕ್ಕೆ ಲೇಪಿಸಿಕೊಳ್ಳಬಹುದು ಅಥವಾ ರಸದ ರೂಪದಲ್ಲಿ ಸೇವಿಸಬಹುದು.

ಅಲೊವೆರಾದ ಆರೋಗ್ಯಲಾಭಗಳು

► ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ

ಅಲೊವೆರಾ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿ ಸಕ್ಕರೆ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಮಧುಮೇಹಿಗಳು ದಿನಕ್ಕೆರಡು ಬಾರಿ ಒಂದು ಚಮಚ ಅಲೊವೆರಾ ರಸವನ್ನು ಸೇವಿಸುವ ಮೂಲಕ ಉತ್ತಮ ಪರಿಣಾಮವನ್ನು ಕಂಡುಕೊಳ್ಳಬಹುದು.

► ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ

ಅಲೊವೆರಾದಲ್ಲಿರುವ ಉರಿಯೂತ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ದಂತಸಮಸ್ಯೆಗಳ ತೀವ್ರತೆಯನ್ನು ತಗ್ಗಿಸಲು ನೆರವಾಗುತ್ತವೆ. ವಸಡಿನ ಉರಿಯೂತ ಮತ್ತು ಪರಿದಂತ ಸಮಸ್ಯೆಗಳ ವಿರುದ್ಧವೂ ಅಲೊವೆರಾ ಜೆಲ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

► ಮಲಬದ್ಧತೆಯನ್ನು ನಿವಾರಿಸುತ್ತದೆ

ಸಾಂಪ್ರದಾಯಿಕ ಚೀನಿ ವೈದ್ಯಪದ್ಧತಿಯಲ್ಲಿ ಅಲೊವೆರಾವನ್ನು ಮಲಬದ್ಧತೆಯ ಚಿಕಿತ್ಸೆಗೆ ಬಳಸಲಾಗುತ್ತದೆ. ಅದರಲ್ಲಿರುವ ಬಾರ್ಬಲೊಯಿನ್ ಎಂಬ ಸಂಯುಕ್ತವು ವಿರೇಚಕ ಗುಣಗಳನ್ನು ಹೊಂದಿದ್ದು,ಮಲಬದ್ಧತೆಯನ್ನು ನಿವಾರಿಸಲು ನೆರವಾಗುತ್ತದೆ.

► ಗಾಯಗಳನ್ನು ಗುಣಪಡಿಸುತ್ತದೆ

ಅಲೊವೆರಾದಲ್ಲಿ ಗಾಯಗಳನ್ನು ಗುಣಪಡಿಸುವ ಗುಣಗಳಿದ್ದು,ಚರ್ಮದಲ್ಲಿ ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸುಟ್ಟಗಾಯಗಳು ಸೇರಿದಂತೆ ಗಾಯಗಳಿಗೆ ಅಲೊವೆರಾ ಜೆಲ್ ಹಚ್ಚುವುದರಿಂದ ಅವು ಬೇಗನೆ ಮಾಯುತ್ತವೆ.

► ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅಲೊವೆರಾದಲ್ಲಿರುವ ವೈರಾಣು ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ರೋಗಕಾರಕಗಳ ವಿರುದ್ಧ ಹೋರಾಟಕ್ಕೆ ನೆರವಾಗುತ್ತವೆ ಮತ್ತು ವಿವಿಧ ಕಾಯಿಲೆಗಳಿಂದ ರಕ್ಷಣೆಯನ್ನು ನೀಡುತ್ತವೆ.

► ಎದೆಉರಿಯನ್ನು ಶಮನಿಸುತ್ತದೆ

ಜಠರಾಮ್ಲವು ಅನ್ನನಾಳದಲ್ಲಿ ಹಿಮ್ಮುಖವಾಗಿ ಹರಿದಾಗ ಆ್ಯಸಿಡಿಟಿ ಉಂಟಾಗುತ್ತದೆ. ಅಲೊವೆರಾ ಆ್ಯಸಿಡಿಟಿಯ ಲಕ್ಷಣಗಳಾದ ಎದೆಯುರಿ,ವಾಂತಿ ಮತ್ತು ತೇಗುವಿಕೆಗಳನ್ನು ಕಡಿಮೆ ಮಾಡುತ್ತದೆ.

► ಬಿಸಿಲಿನಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ

ಅಲೊವೆರಾ ಸುಡುಬಿಸಲಿನಿಂದ ಚರ್ಮಕ್ಕೆ ಉಂಟಾದ ಹಾನಿಯನ್ನು ನಿವಾರಿಸಲು ನೆರವಾಗುತ್ತದೆ. ಅಲೊವೆರಾದಲ್ಲಿರುವ ತಂಪುಗೊಳಿಸುವ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಸನ್‌ಬರ್ನ್‌ನಿಂದ ಮುಕ್ತಿ ನೀಡುತ್ತವೆ. ಅಲ್ಲದೆ ಅದು ಸೂರ್ಯನ ಅಪಾಯಕಾರಿ ಕಿರಣಗಳಿಂದ ಚರ್ಮಕ್ಕೆ ರಕ್ಷಣೆಯನ್ನೂ ಒದಗಿಸುತ್ತದೆ.

► ತಲೆಗೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ

ಕೂದಲಿನ ಬೆಳವಣಿಗೆಯನ್ನು ನೈಸರ್ಗಿವಾಗಿ ಹೆಚ್ಚಿಸಲು ಮತ್ತು ಕೂದಲುದುರುವುದನ್ನು ತಡೆಯಲು ಅಲೊವೆರಾ ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲಿರುವ ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ತಲೆಯಲ್ಲಿನ ಹೊಟ್ಟು,ಅಕಾಲ ಕೂದಲುದುರುವಿಕೆ ಮತ್ತು ನೆತ್ತಿಯ ಉರಿಯೂತದಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತವೆ.

► ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ

ಅಲೊವೆರಾ ಕೊಲಾಜೆನ್ ಮತ್ತು ಇಲಾಸ್ಟಿನ್ ಫೈಬರ್‌ನ ಉತ್ಪಾದನೆಗೆ ನೆರವಾಗುತ್ತದೆ ಮತ್ತು ಇವು ಚರ್ಮವನ್ನು ಬಿಗಿಯಾಗಿರಿಸುತ್ತವೆ ಹಾಗೂ ನಿರಿಗೆ ಬೀಳುವುದನ್ನು ತಡೆಯುತ್ತವೆ. ಅದರಲ್ಲಿರುವ ಅಮಿನೊ ಆಮ್ಲಗಳು ಮತ್ತು ಇತರ ಪೋಷಕಾಂಶಗಳು ಗಟ್ಟಿಯಾದ ಚರ್ಮಕೋಶಗಳನ್ನು ಮೃದುಗೊಳಿಸುತ್ತವೆ ಮತ್ತು ಚರ್ಮದಲ್ಲಿಯ ರಂಧ್ರಗಳನ್ನು ಕಿರಿದಾಗಿಸಲು ಸಂಕೋಚಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನಿರಿಗೆಗಳು ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

► ಅಲೊವೆರಾದ ಅಡ್ಡಪರಿಣಾಮಗಳು

ಅಲೊವೆರಾದ ಅತಿಯಾದ ಸೇವನೆ ಅಥವಾ ದೀರ್ಘಕಾಲಿಕ ಬಳಕೆಯು ಅತಿಸಾರ, ಮೂತ್ರದಲ್ಲಿ ರಕ್ತಸ್ರಾವ,ಯಕೃತ್ತಿನ ಉರಿಯೂತ,ಹೊಟ್ಟೆ ಸೆಳೆತ,ಹೆಚ್ಚಿನ ಮಲಬದ್ಧತೆ ಇತ್ಯಾದಿ ಅಡ್ಡಪರಿಣಾಮಗಳಿಗೆ ಕಾರಣವಾಗಬಲ್ಲದು. ಚರ್ಮಕ್ಕೆ ಲೇಪಿಸಿಕೊಂಡಾಗ, ವಿಶೇಷವಾಗಿ ಸೂಕ್ಷ್ಮ ಚರ್ಮವನ್ನು ಹೊಂದಿರುವವರಲ್ಲಿ ಆ ಜಾಗದಲ್ಲಿ ಕೆಂಪಗಾಗುವಿಕೆ, ಉರಿ ಅಥವಾ ಕುಟುಕಿದಂತಹ ಅನುಭವವನ್ನು ಉಂಟು ಮಾಡಬಹುದು. ಅಲೊವೆರಾ ಸೇವನೆಯು ಗರ್ಭಿಣಿಯರಲ್ಲಿ ಗರ್ಭಾಶಯದ ಸಂಕುಚನಗಳನ್ನು ಪ್ರಚೋದಿಸುತ್ತದೆ ಮತ್ತು ಹಾಲೂಡಿಸುತ್ತಿರುವ ಮಹಿಳೆಯರಲ್ಲಿ ಜಠರಗರುಳುನಾಳ ಸಮಸ್ಯೆಗಳಿಗೆ ಕಾರಣವಾಗು ತ್ತದೆ. ಹೀಗಾಗಿ ಈ ವರ್ಗದ ಮಹಿಳೆಯರು ಅಲೊವೆರಾ ಬಳಕೆಯಿಂದ ದೂರವಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)