varthabharthi

ರಾಷ್ಟ್ರೀಯ

ಇವಿಯಂ ವಿಶ್ವಾಸಾರ್ಹತೆ ಬಗ್ಗೆ ಮತ್ತೆ ಪ್ರಶ್ನೆ

ದಿಲ್ಲಿ ಚುನಾವಣೆ: 70 ರಲ್ಲಿ 68 ಕ್ಷೇತ್ರಗಳಲ್ಲಿ ಮತಚಲಾವಣೆ; ಎಣಿಕೆಯಲ್ಲಿ ವ್ಯತ್ಯಾಸ!

ವಾರ್ತಾ ಭಾರತಿ : 21 Feb, 2020

ಹೊಸದಿಲ್ಲಿ, ಫೆ.21: ಇತ್ತೀಚೆಗೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗೂ, ಎಣಿಕೆಯಾದ ಮತಗಳಿಗೂ ಪರಸ್ಪರ ಸಾಮ್ಯತೆಯಿರಲಿಲ್ಲವೆಂಬುದನ್ನು ಸುದ್ದಿಜಾಲತಾಣ thequint.com  ನ ವರದಿಯೊಂದು ಬಹಿರಂಗಪಡಿಸಿದೆ. ಅದರಲ್ಲೂ 47 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳ ಮತ್ತು, ಎಣಿಕೆಯಾದ ಮತಗಳ ಸಂಖ್ಯೆಯಲ್ಲಿ 50ಕ್ಕೂ ಅಧಿಕ ಅಂತರವಿದ್ದುದ್ದಾಗಿ ಅದು ಹೇಳಿದೆ.

ಕರೋಬ್‌ಬಾಗ್ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಹೆಚ್ಚುವರಿ ಇವಿಎಂ ಮತಗಳು ದಾಖಲಾಗಿವೆ. ಈ ಕ್ಷೇತ್ರದಲ್ಲಿ 1,07,228 ಇವಿಎಂ ಮತಗಳು ಚಲಾವಣೆಯಾಗಿದ್ದರೆ, ಎಣಿಕೆಯಾದ ಮತಗಳ ಸಂಖ್ಯೆ 1,08,339 ಆಗಿತ್ತು. ಆದರೆ 1,111 ಹೆಚ್ಚುವರಿ ಇವಿಎಂ ಮತಗಳು ಎಣಿಕೆಯಾಗಿದ್ದವು. ಈ ಬಗ್ಗೆ thequint.com ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿಯವರನ್ನು ಸಂಪರ್ಕಿಸಿದಾಗ, ಅವರು ಮೂರು ಅಂಶಗಳನ್ನು ಬೆಟ್ಟು ಮಾಡಿದರು. ಮತಎಣಿಕೆಯ ದಿನಾಂಕದಂದು ಮತದಾನದ ದತ್ತಾಂಶಕ್ಕೂ, ಎಣಿಕೆಯಾದ ಮತಗಳಿಗೂ ನಡುವೆ ಇರುವ ಅಂತರ ಅತ್ಯಲ್ಪವಾದುದಾಗಿದೆ. ದತ್ತಾಂಶವನ್ನು ದಾಖಲಿಸುವಾಗ ಮಾನವನ ಅಥವಾ ಬರವಣಿಗೆಯ ತಪ್ಪಿನಿಂದ ಆಗಿರುವ ಪ್ರಮಾದದಿಂದಾಗಿ ಈ ವ್ಯತ್ಯಾಸ ವುಂಟಾಗಿದೆಯೆಂದು ಅದು ಹೇಳಿದೆ. ಮತ ವ್ಯತ್ಯಾಸವಿರುವ ಬಗ್ಗೆ ಯಾವುದೇ ಅಭ್ಯರ್ಥಿಯಿಂದ ದೂರು ಅಥವಾ ಆಕ್ಷೇಪಗಳು ಬಂದಿಲ್ಲವೆಂದು ಅವರು ಹೇಳಿದ್ದಾರೆ.

ಗೆಲುವಿನ ಅಂತರ 1 ಸಾವಿರಕ್ಕೂ ಕಡಿಮೆ ಇರುವ ಕ್ಷೇತ್ರಗಳಾದ ಬಿಜ್ವಾಸನ್ ಹಾಗೂ ಲಕ್ಷ್ಮಿ ನಗರ ಕ್ಷೇತ್ರಗಳಲ್ಲಿಯೂ ಚಲಾವಣೆಯಾದ ಮತಗಳಿಗೂ ಎಣಿಕೆಯಾದ ಮತಗಳ ನಡುವೆ ಗಣನೀಯ ಅಂತರದ ವ್ಯತ್ಯಾಸ ಕಂಡುಬಂದಿದೆ.

ಬಿಜ್ವಾಸನ್ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಪ್ರಮುಖ ಎದುರಾಳಿಯಾದ ಬಿಜೆಪಿ ಅಭ್ಯರ್ಥಿ ವಿರುದ್ಧ 753 ಮತಗಳಿಂದ ಜಯಗಳಿಸಿದ್ದರು. ಇಲ್ಲಿಯೂ 239 ಮತಗಳ ವ್ಯತ್ಯಾಸ ಕಂಡುಬಂದಿದೆ. ಲಕ್ಷ್ಮಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು, ಆಪ್ ಅಭ್ಯರ್ಥಿಯ ಎದುರು 880 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇಲ್ಲಿಯೂ ಎಣಿಕೆಯಲ್ಲಿ 86 ಮತಗಳ ಕೊರತೆ ಕಂಡುಬಂದಿದೆ.

 ಪ್ರತಿಯೊಂದು ಮತಗಟ್ಟೆಯಲ್ಲಿಯೂ ಮತದಾನ ನಿರ್ವಹಣಾ ಅಧಿಕಾರಿ ಸೇರಿದಂತೆ ನಾಲ್ವರು ಚುನಾವಣಾಧಿಕಾರಿಗಳಿರುತ್ತಾರೆ ಹಾಗೂ ಮೂರು ಮತಗಟ್ಟೆ ಅಧಿಕಾರಿಗಳೂ ಇರುತ್ತಾರೆ. ಸರಾಸರಿ ಒಂದು ಮತಗಟ್ಟೆಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಮತಗಳು ನೋಂದಾಯಿತವಾಗಿರುವುದಿಲ್ಲ. ಯಾಕೆಂದರೆ ವಿವಿಪ್ಯಾಟ್ ಯಂತ್ರಕ್ಕೆ 1200ಕ್ಕಿಂತ ಅಧಿಕ ಮತಗಳನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ.

ಮತದಾನದ ಪ್ರಮಾಣದ ವಿವರಗಳನ್ನು ನೀಡುವ ಚುನಾವಣಾ ಆಯೋಗದ ಫಾರಂ 20 ದತ್ತಾಂಶಗಳನ್ನು ಪರಿಶೀಲಿಸಿದಾಗ ಶೇ.95ರಷ್ಟು ಮತಗಟ್ಟೆಗಳಲ್ಲಿ 500ಕ್ಕೂ ಕಡಿಮೆ ಮತಗಳು ಚಲಾವಣೆಯಾಗಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಚಲಾವಣೆ ಯಾದ ಮತಗಳಿಗೂ ಎಣಿಕೆಯಾದ ಮತಗಳಿಗೂ ಸಾಮ್ಯತೆ ಇಲ್ಲದಿರುವುದನ್ನು ಪ್ರಶ್ನಿಸಿ

thequint ಸುಪ್ರೀಂಕೋರ್ಟ್‌ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಿವರಣೆ ಕೇಳಿ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಈ ವಿಷಯ ಈಗಲೂ ವಿಚಾರಣೆಗೆ ಬಾಕಿಯುಳಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)