varthabharthi


ವೈವಿಧ್ಯ

ಭಾರತ-ಅಮೆರಿಕ ಸಾಮರಸ್ಯ: ಸಂಭ್ರಮಕ್ಕೆ ಇದು ಕಾರಣವೇ?

ವಾರ್ತಾ ಭಾರತಿ : 21 Feb, 2020
ಅಬೂಸಾಲೆಹ್ ಶರೀಫ್, ಯುಎಸ್-ಇಂಡಿಯಾ ಪಾಲಿಸಿ ಇನ್‌ಸ್ಟಿಟ್ಯೂಟ್, ವಾಶಿಂಗ್ಟನ್ ಡಿ.ಸಿ. ಮತ್ತು ಸೆಂಟರ್ ಫಾರ್ ರೀಸರ್ಚ್ ಆ್ಯಂಡ್ ಡಿಬೇಟ್ಸ್ ಇನ್ ಡೆವಲಪ್‌ಮೆಂಟ್ ಪಾಲಿಸಿ, ಹೊಸದಿಲ್ಲಿ

ಫೆ.24ರಂದು ಅಹ್ಮದಾಬಾದ್‌ನಲ್ಲಿ ಟ್ರಂಪ್ ಅವರ ರೋಡ್ ಶೋ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೊಂಡಿದೆ. ಸರಕಾರವೂ ಟ್ರಂಪ್ ಅವರಿಂದ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಆದರೆ ಸುಸಂಬದ್ಧತೆ, ಪಾರದರ್ಶಕತೆ, ಸ್ಥಿರತೆ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನ ಆಡಳಿತಕ್ಕೆ ಗೌರವದ ಕೊರತೆಯಿರುವ ಹಾಲಿ ಅಮೆರಿಕದ ನೀತಿಗಳನ್ನು ನಂಬಿಕೊಂಡು ತನ್ನ ಆರ್ಥಿಕತೆಯನ್ನು ರೂಪಿಸುವುದು ಭಾರತದ ಪಾಲಿಗೆ ಗಂಡಾಂತರಕಾರಿಯಾಗುತ್ತದೆ.

ಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಸನ್ನಿಹಿತವಾಗಿದೆ. ಫೆ.24ರಂದು ಆಗಮಿಸಲಿರುವ ಟ್ರಂಪ್ ತನ್ನೊಂದಿಗೆ ಅಮೆರಿಕದ ಉದ್ಯಮಿಗಳ ನಿಯೋಗವನ್ನು ಕರೆತರುತ್ತಿಲ್ಲ. ಅವರು ರಕ್ಷಣಾ ಉಪಕರಣಗಳು, ಪೇಟೆಂಟ್ ರಕ್ಷಣೆ ಹೊಂದಿರುವ ಔಷಧಿಗಳು ಮತ್ತು ಅಗ್ಗದ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಮಾರಾಟ ಮಾಡಲು ಹೆಚ್ಚಿನ ಒತ್ತು ನೀಡಲಿದ್ದಾರೆ. ಭಾರತವು ಅಮೆರಿಕದಿಂದ ಹಾಲು, ಖಾದ್ಯತೈಲ, ಧಾನ್ಯಗಳು ಮತ್ತು ಕೋಳಿಮಾಂಸವನ್ನು ಆಮದು ಮಾಡಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ನಮ್ಮ ಹಿಂದಿನ ಪಿಎಲ್ 480 ದಿನಗಳು ಮರಳಿ ಬರುತ್ತಿವೆಯೇ? ಭಾರತದ ತೈಲ ಆಮದು ವ್ಯವಸ್ಥೆಯೂ ಅಮೆರಿಕದ ಪ್ರಭಾವಕ್ಕೊಳಗಾಗಿದೆ. ಅಮೆರಿಕದ ಒತ್ತಡಕ್ಕೆ ಮಣಿದ ಭಾರತವು ಆ ದೇಶದಿಂದ ಜುಜುಬಿ ಆಮದಿಗಾಗಿ ತನ್ನ ವಿಶ್ವಾಸಾರ್ಹ ತೈಲ ಪೂರೈಕೆ ರಾಷ್ಟ್ರಗಳನ್ನು ದೂರವಿಟ್ಟಿದೆ. ಒಟ್ಟಾರೆಯಾಗಿ, ಭಾರತವು ಅಮೆರಿಕದ ವ್ಯಾಪಾರದಲ್ಲಿ ಕೇವಲ ಶೇ.3ರಷ್ಟು ಪಾಲನ್ನು ಹೊಂದಿದೆ. ದ್ವಿಪಕ್ಷೀಯ ವ್ಯಾಪಾರವು ಭಾರತಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಅದು ಅಮೆರಿಕಕ್ಕೆ ರಫ್ತು ಮಾಡುವ ಪ್ರಮಾಣ ಶೇ.16ರಷ್ಟಿದ್ದರೆ ಆಮದು ಪ್ರಮಾಣ ಶೇ.6ರಷ್ಟಿದೆ.

ಎಲ್ಲ ವೈರುಧ್ಯಗಳು ಮತ್ತು ತನ್ನ ಸ್ವಂತ ನಿರೀಕ್ಷೆಯನ್ನೂ ಮೀರಿ ಟ್ರಂಪ್ ಡೆಮಾಕ್ರಟಿಕ್ ಪಾರ್ಟಿಯ ಪ್ರಹಾರದಿಂದ ಪಾರಾಗಿದ್ದಾರೆ. ಟ್ರಂಪ್ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದು ಹೇಗೆ ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಿ. ಜನಾಂಗೀಯ ವಾದ ಮತ್ತು ಅಮೆರಿಕದಲ್ಲಿ ತಥಾಕಥಿತ ಎಂಟು ವರ್ಷಗಳ ‘ಕಪ್ಪು ಆಡಳಿತ’ಕ್ಕೆ ಪ್ರತೀಕಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಬಲವಾಗಿರುವ ಬಿಳಿಯರ ಮತಗಳು ಟ್ರಂಪ್ ಅವರನ್ನು ಅಧ್ಯಕ್ಷ ಗಾದಿಯಲ್ಲಿ ಪ್ರತಿಷ್ಠಾಪಿಸಿವೆ. ಇತ್ತೀಚೆಗಷ್ಟೇ ಸೆನೆಟ್ ಕೃಪೆಯಿಂದ ಸಂಸತ್‌ನಲ್ಲಿ ವಾಗ್ದಂಡನೆಗೆ ಗುರಿಯಾಗುವ ಅಪಾಯದಿಂದ ಪಾರಾಗಿರುವುದು ಟ್ರಂಪ್ ಅವರಿಗೆ ಇನ್ನಷ್ಟು ಬಲವನ್ನು ನೀಡಿದ್ದು, ತನ್ನ ಇಚ್ಛೆಯಂತೆ ಯುದ್ಧವನ್ನು ಸಾರಲು ಅಥವಾ ಜಾಗತಿಕ ವ್ಯಾಪಾರ ಸ್ವರೂಪವನ್ನೇ ಅಸ್ಥಿರಗೊಳಿಸಲು ಶಕ್ತರಾಗಿದ್ದಾರೆ. ರಾಜಕೀಯವಾಗಿ ಹೇಳಬೇಕೆಂದರೆ ಅಮೆರಿಕವು ಇಂದು ಗ್ರಾಮೀಣ (ರಿಪಬ್ಲಿಕನ್ ಪ್ರಾಬಲ್ಯ) ಮತ್ತು ನಗರ (ಡೆಮಾಕ್ರಟಿಕ್ ಪ್ರಾಬಲ್ಯ) ಇವುಗಳ ನಡುವೆ ವಿಭಜನೆಗೊಂಡಿದೆ.

ಶ್ವೇತಭವನಕ್ಕೆ ಮತ್ತೆ ಸ್ಪರ್ಧೆ ಈಗಾಗಲೇ ಆರಂಭಗೊಂಡಿದೆ ಮತ್ತು 2020ರ ಅಮೆರಿಕ ಸಾರ್ವತ್ರಿಕ ಚುನಾವಣೆಯು ವಿಶ್ವಾದ್ಯಂತ, ವಿಶೇಷವಾಗಿ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮವನ್ನುಂಟು ಮಾಡಲಿದೆ. ಇವೆಲ್ಲದರ ಮಧ್ಯೆ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವಂತೆ ಕಂಡುಬರುತ್ತಿದೆ. ಇದರೊಂದಿಗೆ 2020ರಲ್ಲಿ ಮತ್ತು ಅದರಾಚೆಗೆ ಭಾರತದ ಕುರಿತು ಅಮೆರಿಕದ ನೀತಿಗಳು ಪೂರಕವಾಗಿರಲಿವೆ.

2019, ಜೂನ್ 5ರಂದು ಟ್ರಂಪ್ ಅವರು ವಿವಿಧ ಉತ್ಪನ್ನಗಳ ಮೇಲಿನ ಸುಂಕ ಇಳಿಕೆಗೆ ಅವಕಾಶ ಕಲ್ಪಿಸುವ ‘ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್‌ಸ್(ಜಿಎಸ್‌ಪಿ)’ಗೆ ಭಾರತದ ಅರ್ಹತೆಗೆ ಮಂಗಳ ಹಾಡುವ ಮೂಲಕ ಭಾರತದ ಆದ್ಯತೆಯ ಮಾರುಕಟ್ಟೆ ಪ್ರವೇಶಗಳ ಬುನಾದಿಗೇ ಖಾಯಂ ಹಾನಿಯನ್ನುಂಟು ಮಾಡಿದ್ದರು. ‘ಕನಿಷ್ಠ ಅಭಿವೃದ್ಧ್ದಿಗೊಂಡ ದೇಶದ ಸುಂಕ’ ಮತ್ತು ನೂತನ ‘ವಿದೇಶಿ ವ್ಯಾಪಾರ ಒಪ್ಪಂದ’ಗಳ ಕುರಿತು ಸನ್ನಿಹಿತವಾಗಿರುವ ಮಾತುಕತೆಗಳು ಶೀಘ್ರ ಅಥವಾ ನಂತರವಾದರೂ ಭಾರತವನ್ನು ಭಾರೀ ನಷ್ಟಕ್ಕೆ ಒಡ್ಡಲಿವೆ.

ಫೆ.24ರಂದು ಅಹ್ಮದಾಬಾದ್‌ನಲ್ಲಿ ಟ್ರಂಪ್ ಅವರ ರೋಡ್ ಶೋ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೊಂಡಿದೆ. ಸರಕಾರವೂ ಟ್ರಂಪ್ ಅವರಿಂದ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಆದರೆ ಸುಸಂಬದ್ಧತೆ, ಪಾರದರ್ಶಕತೆ, ಸ್ಥಿರತೆ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನ ಆಡಳಿತಕ್ಕೆ ಗೌರವದ ಕೊರತೆಯಿರುವ ಹಾಲಿ ಅಮೆರಿಕದ ನೀತಿಗಳನ್ನು ನಂಬಿಕೊಂಡು ತನ್ನ ಆರ್ಥಿಕತೆಯನ್ನು ರೂಪಿಸುವುದು ಭಾರತದ ಪಾಲಿಗೆ ಗಂಡಾಂತರಕಾರಿಯಾಗುತ್ತದೆ.

ಅಮೆರಿಕದ ವಿವೇಚನೆಯಿಲ್ಲದ ವಲಸೆ ಮತ್ತು ವೀಸಾ ನೀತಿಗಳು ಭಾರತೀಯ ತಂತ್ರಜ್ಞಾನ ಪರಿಣಿತರನ್ನು ಘಾಸಿಗೊಳಿಸಿವೆ. ಅಮೆರಿಕದ ವಿವಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆಯಾದರೂ ಶಿಕ್ಷಣ ವೆಚ್ಚಕ್ಕಾಗಿ ಭಾರೀ ಮೊತ್ತವನ್ನು ವ್ಯಯಿಸಿದ ಬಳಿಕವೂ ಅಮೆರಿಕದಲ್ಲಿ ಸ್ಥಿರವಾದ ಬದುಕನ್ನು ರೂಪಿಸಿಕೊಳ್ಳುವ ಆಸೆ ಅವರಿಗುಳಿದಿಲ್ಲ.

ಭಾರತದ ಆರ್ಥಿಕ, ಅಂತಿಮವಾಗಿ ರಾಜಕೀಯ ಮತ್ತು ರಕ್ಷಣಾ ದೌರ್ಬಲ್ಯಗಳು ಇಂದು ನಾವು ಈ ಹಿಂದೆಂದೂ ಕಂಡಿರದ ಮಟ್ಟಕ್ಕೆ ತಲುಪಿವೆ. ದೇಶದಲ್ಲಿಯ ತಜ್ಞರೊಂದಿಗೆ ಚರ್ಚೆಗಳು ಮತ್ತು ಸಮಾಲೋಚನೆಗಳಿಗೆ ಗೌರವದ ಕೊರತೆಯೊಂದೇ ಕಾರಣವಾಗಿದೆ. ಬುಲೆಟ್ ರೈಲು, ಉಕ್ಕಿನ ಬೃಹತ್ ಪ್ರತಿಮೆ, ರಾಜಪಥದ ಅಗಲೀಕರಣ ಮತ್ತು ‘ಸೂರ್ಯ’ನಲ್ಲಿಗೆ ಆರಂಭಿಕ ಯಾನ ಇವುಗಳಷ್ಟನ್ನೇ 21ನೇ ಶತಮಾನದ ಭಾರತಕ್ಕೆ ಸಾಕ್ಷಾಧಾರಗಳಾಗಿ ನಾವು ನೋಡುತ್ತಿದ್ದೇವೆ.

ಅಮೆರಿಕದ ಸ್ನೇಹದಿಂದ ಭಾರತ ಏನನ್ನಾದರೂ ಗಳಿಸಬಹುದೇ? ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರದ ಸ್ವರೂಪ ಬೇರೆಯದನ್ನೇ ಸೂಚಿಸುತ್ತಿದೆ. 2018ರಲ್ಲಿ ಒಟ್ಟು ದ್ವಿಪಕ್ಷೀಯ ವ್ಯಾಪಾರದ ಪ್ರಮಾಣ ಸುಮಾರು 85 ಶತಕೋಟಿ ಡಾಲರ್ ಆಗಿದ್ದು, ಇದನ್ನು ಅಮೆರಿಕ-ಚೀನಾ ನಡುವಿನ 660 ಶತಕೋಟಿ ಡಾಲರ್‌ಗೆ ಹೋಲಿಸಿ. ಅಮೆರಿಕಕ್ಕೆ ಭಾರತದ ರಫ್ತುಗಳ ಸ್ವರೂಪ ಉಭಯ ರಾಷ್ಟ್ರಗಳಿಗೂ ಹೆಚ್ಚು ಪ್ರಗತಿದಾಯಕವೇನಲ್ಲ.

ಇಷ್ಟೊಂದು ದುರ್ಬಲ ದ್ವಿಪಕ್ಷೆಯ ವ್ಯಾಪಾರ ಸಂಬಂಧವಿದ್ದರೂ ಭಾರತಕ್ಕೆ ಟ್ರಂಪ್ ಭೇಟಿಗೇಕೆ ಅಷ್ಟೊಂದು ಪ್ರಚಾರವನ್ನು ನೀಡಲಾಗುತ್ತಿದೆ? ಅದು ವ್ಯಾಪಾರವಲ್ಲ, ಅದು ರಾಜಕೀಯ, ರಕ್ಷಣಾ ಖರೀದಿಗಳ ರಾಜಕೀಯವಾಗಿದೆ. ಕನಿಷ್ಠ ಭಾರತವು ದೇಶಕ್ಕೆ ತಂತ್ರಜ್ಞಾನ ವರ್ಗಾವಣೆಯೊಂದಿಗೆ ವೈವಿಧ್ಯಮಯ ತೈಲ ಆಮದುಗಳು ಮತ್ತು ಹೆಚ್ಚಿನ ಎಫ್‌ಡಿಐ ಹಾಗೂ ಎಫ್‌ಐಐ ಹೂಡಿಕೆಗಳಿಗೆ ಒತ್ತು ನೀಡಬೇಕಿದೆ. ವಿದೇಶಿ ಹೂಡಿಕೆಗಳನ್ನು ಹೆಚ್ಚಿಸುವ ಸರಕಾರದ ಪ್ರಯತ್ನಗಳ ಹೊರತಾಗಿಯೂ ಎಫ್‌ಡಿಐ ಹರಿವು ನಿಧಾನಗೊಂಡಿದೆ ಎನ್ನುವುದನ್ನು ದತ್ತಾಂಶಗಳು ತೋರಿಸುತ್ತಿವೆ. ಕಳೆದ ಒಂಬತ್ತು ತಿಂಗಳುಗಳಲ್ಲಿ ಕೇವಲ ಎಂಟು ಶತಕೋಟಿ ಡಾಲರ್ ಹೂಡಿಕೆ ದೇಶಕ್ಕೆ ಹರಿದು ಬಂದಿದ್ದು, ಇದು 2015ರಿಂದ ಇದೇ ಅವಧಿಗಳಿಗೆ ಹೋಲಿಸಿದರೆ ಕನಿಷ್ಠ ಎಫ್‌ಡಿಐ ಪ್ರಮಾಣವಾಗಿದೆ. ಅಲ್ಲದೆ ಸುಗಮ ವ್ಯವಹಾರ ನಿರ್ವಹಣೆಯ ಭರವಸೆಯ ಹೊರತಾಗಿಯೂ ಪ್ರಮುಖವಾಗಿ ಸಾಂಸ್ಥಿಕ ವೈಫಲ್ಯಗಳಿಂದಾಗಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಭಾರತವು ವಿಫಲಗೊಂಡಿದೆ.

ವಿಶ್ವದಲ್ಲಿಯ ಶ್ರೀಮಂತ ಮತ್ತು ರಾಜಕೀಯವಾಗಿ ಪಕ್ವಗೊಂಡ ದೇಶಗಳ ಸಾಲಿನಲ್ಲಿ ಸೇರಲು ಐದು ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕತೆಯ ಕನಸನ್ನು ಭಾರತವು ಕಾಣುತ್ತಿದೆ. ಆದರೆ ಇದು ಅವಸರದ್ದಾಗಿರುವಂತೆ ಕಂಡುಬರುತ್ತಿದೆ. 2018ರ ಆರಂಭದಿಂದಲೂ ಭಾರತದ ಆರ್ಥಿಕತೆಯು ಮಂದಗತಿಯಲ್ಲಿದೆ. ಇತ್ತೀಚಿನ ಭೂ-ರಾಜಕೀಯ, ವಿಶೇಷವಾಗಿ ಮಧ್ಯ ಪೂರ್ವದಲ್ಲಿನ ಬೆಳವಣಿಗೆಗಳಿಂದಾಗಿ 2020ರಲ್ಲಿಯೂ ಆರ್ಥಿಕ ಚೇತರಿಕೆ ಕಠಿಣವಾಗಿರುವಂತಿದೆ.

ಭಾರತಕ್ಕೆ ತನ್ನ ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಮತ್ತು ತನ್ನ ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಕನಸಿಗೆ ಮರಳಲು ಮೂರು ಮಾರ್ಗಗಳಿವೆ. ಬ್ಯಾಂಕಿಂಗ್, ಜಾಗತಿಕ ಹಣದ ಹರಿವು, ಉದ್ಯಮ ಒಪ್ಪಂದಗಳ ಕಾನೂನುಬದ್ಧತೆಗಳು, ಭೂಮಿ ಮತ್ತು ಆಸ್ತಿ ಖರೀದಿ ವಿಷಯಗಳಲ್ಲಿ ಅಸ್ಥಿರ ನೀತಿಗಳು ಮತ್ತು ರಾಜಕೀಯ ಪಕ್ಷಪಾತದ ನ್ಯಾಯಾಂಗ ತೀರ್ಪುಗಳ ಬಗ್ಗೆ ಜಾಗತಿಕ ಹೂಡಿಕೆದಾರರಲ್ಲಿಯ ಕಳವಳಗಳನ್ನು ನಿವಾರಿಸುವ ಮೂಲಕ ಎಫ್‌ಡಿಐ ಮತ್ತು ಎಫ್‌ಐಐಗಳಿಗೆ ಹೆಚ್ಚಿನ ಉತ್ತೇಜನ ನೀಡುವುದು, ತನ್ನ ಭಾರೀ ಸಂಪನ್ಮೂಲವಾಗಿರುವ ಯುವಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು, ಸಾಮಾಜಿಕ ಸುಸಂಬದ್ಧತೆ ಮತ್ತು ಸಾಮಾಜಿಕ ಶಾಂತಿಯನ್ನು ಪ್ರದರ್ಶಿಸುವ ಮೂಲಕ ವಿದೇಶ ಹೂಡಿಕೆದಾರರಲ್ಲಿ ವಿಶ್ವಾಸ ನಿರ್ಮಾಣ ಮತ್ತು ಹೂಡಿಕೆಗಳು ಹಾಗೂ ತಂತ್ರಜ್ಞಾನದ ಹರಿವಿಗೆ ದೇಶವನ್ನು ಪ್ರಶಸ್ತ ತಾಣವನ್ನಾಗಿಸುವುದು ತನ್ನ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸಲು ಭಾರತದ ಮುಂದಿರುವ ದಾರಿಗಳಾಗಿವೆ.

ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್‌ನ ಕೆಲವು ಮೂರ್ಖ ಮತ್ತು ತಾರತಮ್ಯದ ಹಣಕಾಸು ನೀತಿಗಳೂ ಎಫ್‌ಡಿಐನ ಪ್ರಮುಖ ಭಾಗವಾಗಿರುವ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳು ಮತ್ತು ಪಶ್ಚಿಮ ಏಶ್ಯದ ದೇಶಗಳಲ್ಲಿ ದುಡಿಯುತ್ತಿರುವ ಮುಸ್ಲಿಮರಿಂದ ಸ್ವದೇಶಕ್ಕೆ ಹಣದ ರವಾನೆಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಾಲಿ ಬೆಳವಣಿಗೆಗಳಿಂದಾಗಿ ವಾರ್ಷಿಕವಾಗಿ ದೇಶಕ್ಕೆ ಹರಿದುಬರುವ ಮೊತ್ತದ ಶೇ.20ರಷ್ಟು ಹಣ ಒತ್ತಡಕ್ಕೆ ಸಿಲುಕಲಿದೆ ಎಂದು ಅಂದಾಜಿಸಲಾಗಿದೆ. ವಿಶ್ವಾದ್ಯಂತ ಸುಮಾರು 45ರಿಂದ 50ಲಕ್ಷ ಎನ್ನಾರೈಗಳು ಹಿಂದೂಯೇತರ (ಹೆಚ್ಚಾಗಿ ಮುಸ್ಲಿಮರು)ರಾಗಿದ್ದು, ಅವರಲ್ಲಿ ಈಗ ಭಾರತದಲ್ಲಿ ಹೂಡಿಕೆಯ ನೀತಿ ಮತ್ತು ಅಧಿಕಾರ ಶಾಹಿ ಅಪಾಯಗಳ ಬಗ್ಗೆ ಚಿಂತೆ ಆರಂಭವಾಗಿದೆ.

ರಾಜಕೀಯವಾಗಿ ಭಾರತದಲ್ಲ್ಲಿ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಅಸ್ತಿತ್ವಕ್ಕೆ ಹೆಚ್ಚಿನ ಮಹತ್ವವಿಲ್ಲ. ಹೆಚ್ಚಿನವರು ಅವರನ್ನು ತಮ್ಮ ಸಹದೇಶವಾಸಿಗಳು ಎಂದೂ ಪರಿಗಣಿಸುತ್ತಿಲ್ಲ. ಆದರೆ ಮುಸ್ಲಿಮರು ಹಲವಾರು ಸಾಂಪ್ರದಾಯಿಕ ತಯಾರಿಕೆ ಕ್ಷೇತ್ರಗಳ ಬೆನ್ನೆಲುಬು ಆಗಿದ್ದಾರೆ. ಜವಳಿ, ನಿರ್ಮಾಣ, ಚರ್ಮ, ಗಾರ್ಮೆಂಟ್, ಚಿನ್ನಾಭರಣಗಳು ಮತ್ತು ಹರಳುಗಳು, ಕಬ್ಬಿಣ ಮತ್ತು ಉಕ್ಕು ಇತ್ಯಾದಿ ಕ್ಷೇತ್ರಗಳು ಇಂದಿಗೂ ಮುಸ್ಲಿಮ್ ಕುಶಲಕರ್ಮಿಗಳ ಕೌಶಲ್ಯವನ್ನು ಅವಲಂಬಿಸಿವೆ. ಮುಸ್ಲಿಮರು ಸೇರಿದಂತೆ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯು ಭಾರತದ ಭವಿಷ್ಯದ ಆರ್ಥಿಕ ಪ್ರಗತಿಗೆ ನೆರವಾಗಬಲ್ಲದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)