varthabharthi

ರಾಷ್ಟ್ರೀಯ

ಪಣಜಿ: ದೇಶದ ಪ್ರಪ್ರಥಮ ತೇಲುವ ಜೆಟ್ಟಿ ಉದ್ಘಾಟನೆ

ವಾರ್ತಾ ಭಾರತಿ : 21 Feb, 2020

ಹೊಸದಿಲ್ಲಿ,ಫೆ.21: ದೇಶದ ಪ್ರಪ್ರಥಮ ತೇಲುವ ಜೆಟ್ಟಿಯನ್ನು ಕೇಂದ್ರ ಹಡಗು ಉದ್ಯಮ ಸಚಿವ ಮನ್ಸುಖ್ ಮಾಂಡವೀಯ ಶುಕ್ರವಾರ ಪಣಜಿಯಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ವಾಸ್ಕೊದಲ್ಲಿ ಕ್ರೂಸ್ ಟರ್ಮಿನಲ್ ವಲಸೆ ಕೇಂದ್ರವನ್ನು ಕೂಡಾ ಉದ್ಘಾಟಿಸಿದರು.

  ಮಾಂಡೊವಿ ನದಿಯ ದಂಡೆಯಲ್ಲಿ ರಾಜ್ಯ ಬಂದರು ಇಲಾಖೆಯ ಆವರಣದ ಸಮೀಪ ನಿರ್ಮಿಸಲಾಗಿರುವ ತೇಲುವ ಜೆಟ್ಟಿಯ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕಿ ಹಾಗೂ ರಾಜ್ಯಸಭಾ ಸಂಸದ ವಿನಯ್ ತೆಂಡುಲ್ಕರ್ ಉಪಸ್ಥಿತರಿದ್ದರು.

‘‘ ದೇಶದ ಪ್ರಪ್ರಥಮ ತೇಲುವ ಜೆಟ್ಟಿ ಇದಾಗಿದ್ದು, ಸಿಮೆಂಟ್ ಕಾಂಕ್ರೀಟ್‌ನಿಂದ ನಿರ್ಮಿತವಾಗಿದೆ. ಇದರಿಂದಾಗಿ ಒಳನಾಡಿನ ಜಲಮಾರ್ಗಗಳಿಗೆ ಉತ್ತೇಜನ ದೊರೆಯಲಿದೆ. ಇವು ಪರಿಸರ ಸ್ನೇಹಿಯಾಗಿದ್ದು, ಅಲ್ಪಸಮಯದಲ್ಲೇ ನಿರ್ಮಿಸಬಹುದಾಗಿದೆ. ಇಂತಹ ಮೂರು ತೇಲುವ ಜೆಟ್ಟಿಗಳನ್ನು ಗೋವಾದಲ್ಲಿ ನಿರ್ಮಿಸಲಾಗುವುದು’’ ಎಂದು ಮಾಂಡವೀಯ ತಿಳಿಸಿದ್ದಾರೆ.

   ಮರ್ಮಗೋವಾ ಬಂದರಿನ ಕ್ರೂಸ್ ಟರ್ಮಿನಲ್ ಸ್ಥಾಪಿಸಲಾಗಿರುವ ವಲಸೆ (ಇಮಿಗ್ರೇಶನ್) ಕೌಂಟರ್‌ನಿಂದಾಗಿ ಪ್ರವಾಸಿ ಹಡಗುಗಳಲ್ಲಿ ಬರುವ ವಿದೇಶಿಯರಿಗೆ ಪ್ರಯೋಜನಕಾರಿಯಾಗಲಿದೆಯೆಂದು ಕೇಂದ್ರ ಸಚಿವರು ತಿಳಿಸಿದರು.

  ಗೋವಾದಲ್ಲಿ ದೇಶೀಯ ಪ್ರವಾಸಿ ನೌಕೆಗಳ ಜೊತೆಗೆ ವಾರ್ಷಿಕವಾಗಿ ಸರಾಸರಿ 45 ವಿದೇಶಿ ಪ್ರವಾಸಿ ಹಡಗುಗಳು ಕೂಡಾ ಆಗಮಿಸುತ್ತಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)