varthabharthi


ಸಿನಿಮಾ

ಪಾಪ್‌ಕಾರ್ನ್ ಮಂಕಿ ಟೈಗರ್: ಮನದೊಳಗೆ ದಾಳಿ ಇಡುವ ದೃಶ್ಯಾವಳಿ

ವಾರ್ತಾ ಭಾರತಿ : 23 Feb, 2020
ಶಶಿಕರ ಪಾತೂರು

ಪಾಪ್‌ಕಾರ್ನ್ ಮಂಕಿ ಟೈಗರ್ ಎನ್ನುವ ಹೆಸರೇ ವಿಚಿತ್ರ. ಆದರೆ ಅದು ಎರಡು ಪಾತ್ರದ ಹೆಸರುಗಳು. ಪಾಪ್‌ಕಾರ್ನ್ ಎನ್ನುವುದು ಚಿತ್ರದ ನಾಯಕಿಯರಲ್ಲಿ ಒಬ್ಬಳು. ಈ ಹಿಂದೆ ಆಕೆ ಪಾಪ್‌ಕಾರ್ನ್ ಮಾರುತ್ತಿದ್ದ ಕಾರಣ ಆಕೆಗೆ ಆ ಹೆಸರು ಬಂದಿರುತ್ತದೆ. ಇನ್ನು ಮಂಕಿ ಮತ್ತು ಟೈಗರ್ ಎನ್ನುವುದು ಚಿತ್ರದ ನಾಯಕನಿಗೆ ಇರುವ ಹೆಸರು. ಹೆಸರು, ಘಟನೆಗಳನ್ನು ಬಿಟ್ಟರೆ ಕತೆಯಾಗಿ ಹೇಳುವಂತಹದ್ದೇನೂ ಚಿತ್ರದಲ್ಲಿ ಇಲ್ಲ ಅಥವಾ ಯಾವುದನ್ನು ಕೂಡ ಒಂದು ಕತೆಯಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಬೇಕೆಂದೇ ಮಾಡಿಲ್ಲ. ಆತನ ಹೆಸರು ಸೀನ. ಆದರೆ ತನ್ನನ್ನು ಆತ ಟೈಗರ್ ಸೀನ ಎಂದು ಕರೆದುಕೊಳ್ಳುತ್ತಾನೆ. ಕೈ ಬಲವನ್ನು ನಂಬಿಕೊಂಡು ಬದುಕುವಂತಹವನು. ಅದಕ್ಕೇ ಇರಬೇಕು ಆತನಿಗೆ ಇಷ್ಟವಾಗದವರು ಸಿಕ್ಕರೆ ಒಂದೇ ಕೈನಲ್ಲಿ ಮುಖಕ್ಕೆ ಗುದ್ದಿ, ಗುದ್ದಿ ತನಗೆ ಸುಸ್ತಾಗುವ ತನಕ ಹೊಡೆದು ರಕ್ತ ಚಿಮ್ಮಿಸುತ್ತಾನೆ.

ಎಲ್ಲ ಕತೆಗಳಂತೆ ಈ ರೌಡಿಗೂ ಒಬ್ಬ ಪ್ರೇಯಸಿ. ರೌಡಿಸಂ ಬಿಡಲು ಹೇಳುವವಳು. ಆಕೆ ಕೈ ಕೊಟ್ಟ ಬಳಿಕ ಗಿರಿಜಾ ಜತೆಗೆ ಮದುವೆ. ಅವರಿಗೊಂದು ಮಗು. ಇದರ ನಡುವೆ ಮಗು ಕಳೆದುಕೊಂಡಿರುವ ದೇವಿಕಾ ಎನ್ನುವ ಯುವತಿ ಜತೆಗೆ ಸೀನನ ಪ್ರೀತಿ ಮತ್ತು ಕಾಮದ ನೀತಿ. ಆದರೆ ಗಿರಿಜಾಗೆ ತಿಳಿದಾಗ ಹೊಸದೊಂದು ಫಜೀತಿ. ಪರಿಸ್ಥಿತಿ ಹೇಗಿರುತ್ತದೋ ಮನಸ್ಥಿತಿ ಹಾಗಿರುತ್ತದೆ ಎನ್ನುವುದು ಸೀನನ ಪಾಲಿಸಿ. ಕೊನೆಗೆ ಸೀನನ ಸ್ಥಿತಿಗತಿ ಹೇಗಾಗುತ್ತದೆ ಎನ್ನುವುದಕ್ಕಾಗಿ ಚಿತ್ರವನ್ನೊಮ್ಮೆ ನೀವೇ ವೀಕ್ಷಿಸಬೇಕು. ಸಾಮಾನ್ಯವಾಗಿ ನಮ್ಮ ಸಿನೆಮಾಗಳಲ್ಲಿ ಸಂಸಾರ ಅಥವಾ ವೃತ್ತಿ ಬದುಕಿನ ಕತೆ ಇರಿಸಿಕೊಂಡು ದ್ವೇಷ, ಪ್ರೀತಿ, ಹೊಡೆದಾಟ, ಸಂಸಾರ, ಅಸಹನೆ, ಕೊಲೆ ಮತ್ತು ಅತ್ಯಾಚಾರಗಳನ್ನು ತೋರಿಸಲಾಗುತ್ತದೆ. ಆದರೆ ಇಲ್ಲಿ ಅತ್ಯಾಚಾರವೊಂದನ್ನು ಬಿಟ್ಟು ಬೇರೆಲ್ಲ ಅಪರಾಧಗಳನ್ನು ವಿಜೃಂಭಿಸಿ ಅದರ ಹಿನ್ನೆಲೆಯಲ್ಲಿ ಒಬ್ಬ ಯುವಕನ ರೌಡಿಸಂ ಪ್ರವೇಶ ಮತ್ತು ಅದರಲ್ಲಿ ಆತ ಇತಿಹಾಸವಾಗುವುದನ್ನು ತೋರಿಸಲಾಗಿದೆ. ಸೀನನ ತಾಯಿಯ ಮೂಲಕ ಬದುಕು ಹೇಗೆ ಕಷ್ಟದಲ್ಲಿತ್ತು ಎನ್ನುವುದನ್ನು, ಸೀನನ ಅಕ್ಕ ಪದ್ಮಾಳ ಮೂಲಕ ರೌಡಿಸಂ ಅವರ ಬದುಕಿಗೆ ಎಷ್ಟು ಸಹಜವಾಗಿತ್ತು ಎನ್ನುವುದನ್ನು ಮತ್ತು ಅಲ್ಲಿ ಯಾರು ಕೂಡ ನಿಜವಾದ ಬದುಕನ್ನು ಕಾಣಲೇ ಇಲ್ಲ ಎನ್ನುವುದನ್ನು ಸೀನನ ಪಾತ್ರದ ಮೂಲಕ ನಿರ್ದೇಶಕರು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಜನ ಈ ಸಂದೇಶಕ್ಕಿಂತ ಹೆಚ್ಚಾಗಿ ಬೇರೆ ಕಾರಣಕ್ಕಾಗಿಯೇ ಸಿನೆಮಾ ನೋಡುತ್ತಿದ್ದಾರೆ. ಅವರನ್ನು ಚಿತ್ರ ನೋಡುವಂತೆ ಮಾಡಿರುವುದು ಎರಡು ಮುಖ್ಯ ಅಂಶಗಳು. ಒಂದು ‘ಟಗರು’ ಬಳಿಕ ‘ಡಾಲಿ’, ಧನಂಜಯ ಇಲ್ಲಿ ಹೇಗಿದ್ದಾರೆ ಎನ್ನುವ ಅಭಿಮಾನ. ಎರಡನೆಯದು ಹೊಡೆದಾಟದ ಚಿತ್ರ ಎನ್ನುವ ಕಾರಣ!

ಇಲ್ಲಿ ಹೊಡೆದಾಟಗಳಲ್ಲಿ ರೌಡಿಗಳು ಆಕಾಶದೆತ್ತರ ಹಾರಾಡುವುದಿಲ್ಲ. ಆದರೆ ನೈಜವಾಗಿ ಎನ್ನುವಂತೆ ಏಟು ಮಾಡಿಕೊಳ್ಳುತ್ತಾರೆ. ಪುಟ್ಟಣ್ಣನ ಚಿತ್ರಗಳಂತೆ ಇಲ್ಲಿ ನಾಯಕಿಯರಿಗೆ ಪ್ರಾಧಾನ್ಯತೆ ಇದೆ. ಆದರೆ ಹಲವೆಡೆಗಳಲ್ಲಿ ಅದು ಅವರು ಬೈಯ್ದು ಹೊಡೆದಾಡುವುದಕ್ಕಷ್ಟೇ ಸೀಮಿತವಾಗಿರುವುದು ವಿಪರ್ಯಾಸ. ಈ ಎಲ್ಲ ಕಾರಣಕ್ಕಾಗಿಯೇ ಇದೊಂದು ವಯಸ್ಕರ ಚಿತ್ರವಾಗಿ ಹೊರಗೆ ಬಂದಿದೆ. ಮಂಕಿ, ಟೈಗರ್ ಸೀನನಾಗಿ ಧನಂಜಯ್ ನಟನೆ ಅಪ್ರತಿಮ. ಪಾಪ್ ಕಾರ್ನ್ ಪಾತ್ರದ ಮೂಲಕ ನಿವೇದಿತಾ ಮತ್ತೊಮ್ಮೆ ತಮ್ಮ ಅಭಿನಯದ ಶಕ್ತಿ ತೋರಿಸಿಕೊಟ್ಟಿದ್ದಾರೆ. ಗಿರಿಜಾ ಪಾತ್ರದಲ್ಲಿ ಸಪ್ತಮಿ ಗೌಡ ಅವರಿಂದ ಅದ್ಭುತ ನಟನೆ ತೆಗೆಸಿದ್ದಾರೆ ನಿರ್ದೇಶಕರು. ಅಮೃತಾ ಅಯ್ಯಂಗಾರ್ ಪಾತ್ರ ‘ಲವ್ ಮಾಕ್ಟೇಲ್’ ಚಿತ್ರದ ಛಾಯೆಯಲ್ಲೇ ಮುಂದುವರಿದಂತಿದೆ. ನಾಯಕನ ಅಕ್ಕ ಪದ್ಮಳಾಗಿ ರೇಖಾ ಜೀವಿಸಿದ್ದಾರೆ. ಆಕೆಯ ಪತಿಯಾಗಿ ಸೋಮ್ ಸಿಂಗ್ ಅಭಿನಯಿಸಿದ್ದಾರೆ. ಕಾಕ್ರೋಚ್ ಸುಧೀರ್ ಇಲ್ಲಿ ಕೊತ್ತುಮ್ರಿಯಾಗಿದ್ದಾರೆ. ಉಳಿದಂತೆ ಮೂಗನ ಪಾತ್ರವನ್ನೂ ಸೇರಿಸಿ ಹಿಂದಿನ ಸೂರಿ ಚಿತ್ರಗಳ ಹಾಗೆ ಪ್ರತಿಯೊಂದು ಪಾತ್ರಗಳು ಕಾಡುತ್ತಲೇ ಇರುತ್ತವೆ. ಸಂಭಾಷಣೆಗಳು ಚಿತ್ರದ ಆಕರ್ಷಕ ಅಂಶ.

ಇದನ್ನು ಒಂದು ಸಿನೆಮಾ ಕತೆ ಎನ್ನುವುದಕ್ಕಿಂತ ಸಮಾಜದ ಒಂದು ವರ್ಗದವರ ಪರಿಸ್ಥಿತಿ ಎನ್ನಬಹುದು. ಅದು ನಮ್ಮ ಮನಸ್ಥಿತಿಯೊಳಗೆ ನೇರ ಪರಿಣಾಮ ಬೀರುವಂತೆ ಮಾಡುವ ಚಿತ್ರ. ಎಲ್ಲರೂ ಒಂದು ಕತೆಯನ್ನು ಅರ್ಥಮಾಡಿಸಲು ಪ್ರಯತ್ನ ಪಟ್ಟರೆ ಸೂರಿಯವರು ಎಂದಿನಂತೆ ಸುಲಭದ ಕತೆಯನ್ನು ಎಷ್ಟು ಗೋಜಲು ಮಾಡಿ, ಜನರನ್ನು ಗೊಂದಲ ಮಾಡಬಹುದು ಎಂದು ಪ್ರಯತ್ನಿಸಿದ ಹಾಗಿದೆ. ಆದರೆ ಪ್ರೇಕ್ಷಕ ಗೊಂದಲಗೊಂಡರೂ ಚಿತ್ರವನ್ನು ವಿರೋಧಿಸುವುದಿಲ್ಲ.

ತಾರಾಗಣ: ಧನಂಜಯ್, ನಿವೇದಿತಾ, ಅಮೃತಾ ಅಯ್ಯಂಗಾರ್, ಸಪ್ತಮಿ ಗೌಡ
ನಿರ್ದೇಶನ: ದುನಿಯಾ ಸೂರಿ
ನಿರ್ಮಾಣ: ಸುಧೀರ್ ಕೆ.ಎಂ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)