varthabharthiಆರೋಗ್ಯ

ಥೈರಾಯ್ಡ್ ಕ್ಯಾನ್ಸರ್‌ನಿಂದ ದೂರವಿರಲು ಹೀಗೆ ಮಾಡಿ

ವಾರ್ತಾ ಭಾರತಿ : 23 Feb, 2020

ಥೈರಾಯ್ಡ್ ಕ್ಯಾನ್ಸರ್‌ನ್ನುಂಟು ಮಾಡುವ ಅಪಾಯಕಾರಿ ಅಂಶಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲವಾದರೂ ಅದು ಪುರುಷರಿಗಿಂತ ಯುವಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದೆ ಎನ್ನುವುದು ಕಂಡುಬಂದಿದೆ. ಥೈರಾಯ್ಡಾ ಮಾನವ ಶರೀರದಲ್ಲಿ ಅತ್ಯಂತ ಮುಖ್ಯವಾದ ಗ್ರಂಥಿಯಾಗಿದ್ದು, ಶರೀರದ ಚಯಾಪಚಯವನ್ನು ನಿಯಂತ್ರಿಸುವ, ಹೃದಯ, ಜೀರ್ಣಾಂಗದ ಕಾರ್ಯನಿರ್ವಹಣೆಯನ್ನು ಕ್ರಮಬದ್ಧಗೊಳಿಸುವ, ಸ್ನಾಯಗಳ ನಿಯಂತ್ರಣ ಮತ್ತು ಮಿದುಳಿನ ಬೆಳವಣಿಗೆಗೆ ನೆರವಾಗುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ.

ಕ್ಯಾನ್ಸರ್ ಸೇರಿದಂತೆ ಥೈರಾಯ್ಡ್ ಗೆ ಸಂಬಂಧಿಸಿದ ಅನಾರೋಗ್ಯಗಳು ಬಳಲಿಕೆ ಮತ್ತು ಆಯಾಸ,ಸ್ನಾಯುಗಳ ನಿಶ್ಶಕ್ತಿ,ದಿಢೀರ ತೂಕ ಗಳಿಕೆ ಅಥವಾ ಇಳಿಕೆ ಮತ್ತು ಚಳಿಗೆ ಹೆಚ್ಚು ಸಂವೇದನೆಯಂತಹ ಸಾಮಾನ್ಯ ಲಕ್ಷಣಗಳನ್ನು ಪ್ರಕಟಿಸುತ್ತವೆ. ಇಂತಹ ಲಕ್ಷಣಗಳು ಕಂಡು ಬಂದಾಗ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಬಾಲ್ಯದಲ್ಲಿ ವಾತಾವರಣದಲ್ಲಿಯ ವಿಕಿರಣಗಳಿಗೆ ಒಡ್ಡಿಕೊಂಡಿದ್ದರೆ,ಪರಮಾಣು ವಿದ್ಯುತ್ ಸ್ಥಾವರದ ಬಳಿ ವಾಸವಾಗಿದ್ದರೆ,ಹಿಂದೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಎಂಆರ್‌ಐ,ಎಕ್ಸ್‌ರೇ ಮತ್ತು ಸಿಟಿ ಸ್ಕಾನ್‌ನಂತಹ ಪರೀಕ್ಷೆಗಳಿಗೆ ಆಗಾಗ್ಗೆ ಒಳಗಾಗುತ್ತಿದ್ದರೆ ಅಂತಹವರು ಥೈರಾಯ್ಡ್ ಕ್ಯಾನ್ಸರ್‌ಗೆ ತುತ್ತಾಗುವ ಹೆಚ್ಚಿನ ಅಪಾಯವಿರುತ್ತದೆ. ಪರಮಾಣು ಸ್ಥಾವರಗಳ ಬಳಿ ವಾಸವಾಗಿರುವವರು ಥೈರಾಯ್ಡ್ ಕ್ಯಾನ್ಸರ್‌ನ ಅಪಾಯದಿಂದ ದೂರವಿರಲು ಐಯೊಡಿನ್ ಮಾತ್ರೆಗಳು ಅಥವಾ ಪೊಟ್ಯಾಷಿಯಂ ಅಯೊಡೈಡ್ ಪೂರಕಗಳನ್ನು ಸೇವಿಸುತ್ತಿರಬೇಕಾಗುತ್ತದೆ.

 ಥೈರಾಯ್ಡ ಕ್ಯಾನ್ಸರ್ ಆಹಾರದಲ್ಲಿ ಅಯೊಡಿನ್ ಕೊರತೆಯ ಜೊತೆ ಗುರುತಿಸಿಕೊಂಡಿದೆ. ವಯಸ್ಕ ವ್ಯಕ್ತಿಗೆ ಪ್ರತಿದಿನ 150 ಮೈಕ್ರೋಗ್ರಾಂ ಅಯೊಡಿನ್ ಅಗತ್ಯವಿದೆ. ನಮ್ಮ ಶರೀರವು ಅಯೊಡಿನ್ ಅನ್ನು ತಯಾರಿಸುವುದಿಲ್ಲ ಮತ್ತು ಅದು ಆಹಾರದ ಮೂಲಕವೇ ಲಭ್ಯವಾಗಬೇಕು. ಹೀಗಾಗಿ ಅಯೊಡಿನ್ ಮಿಶ್ರಿತ ಉಪ್ಪನ್ನು ಬಳಸುವುದರಿಂದ ಥೈರಾಯ್ಡ್ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ತಗ್ಗಿಸಬಹುದು.

ವರ್ಷಕ್ಕೊವ್ಮೆುಯಾದರೂ ವೈದ್ಯರಿಂದ ಥೈರಾಯ್ಡೊ ತಪಾಸಣೆಯನ್ನು ಅಗತ್ಯ ಮಾಡಿಸಿಕೊಳ್ಳಬೇಕು. ಆಹಾರವನ್ನು ನುಂಗಲು ತೊಂದರೆಯಾಗುತ್ತಿದ್ದರೆ,ಧ್ವನಿಯಲ್ಲಿ ಕರ್ಕಶತೆ ಉಂಟಾಗಿದ್ದರೆ ಕಡೆಗಣಿಸಬಾರದು.

 ಸೇವಿಸುವ ಆಹಾರವು ಆರೋಗ್ಯಕರವಾಗಿರಬೇಕು. ಸಮೃದ್ಧ ನಾರು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳು,ಆರೋಗ್ಯಕರ ಕೊಬ್ಬುಗಳು,ಕಡಿಮೆ ಕೊಬ್ಬು ಇರುವ ಮಾಂಸ,ಒಮೆಗಾ-3 ಫ್ಯಾಟಿ ಆ್ಯಸಿಡ್ ಸಮೃದ್ಧವಾಗಿರುವ ಮೀನುಗಳು,ಅಕ್ರೋಡ್,ಅಗಸೆ ಬೀಜಗಳು ಆಹಾರದಲ್ಲಿ ಒಳಗೊಂಡಿರಬೇಕು ಮತ್ತು ಸಾಕಷ್ಟು ನೀರನ್ನು ಸೇವಿಸುತ್ತಿರಬೇಕು. ತಳಿ ರೂಪಾಂತರಿತ ಆಹಾರ ಉತ್ಪನ್ನಗಳನ್ನು ನಿವಾರಿಸಬೇಕು ಮತ್ತು ಸೋಯಾ ಹಾಗೂ ಬ್ರಾಕೊಲಿ,ಪಾಲಕ್,ಕ್ಯಾಬೇಜ್ ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸಬೇಕು.

ಆರೋಗ್ಯಕರವಾದ ದೇಹತೂಕವನ್ನು ಕಾಯ್ದುಕೊಳ್ಳುವುದು ಥೈರಾಯ್ಡ ಕ್ಯಾನ್ಸರ್‌ನಿಂದ ದೂರವುಳಿಯುವಲ್ಲಿ ಮಹತ್ವದ್ದಾಗಿದೆ. ಧೂಮಪಾನದಂತಹ ಆರೋಗ್ಯಕ್ಕೆ ಹಾನಿಕಾರಕ ಚಟಗಳಿಂದ ದೂರವುಳಿಯುವುದೂ ಅಷ್ಟೇ ಮುಖ್ಯವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಜೊತೆಗೆ ಹೆಚ್ಚು ಪರಿಸರಸ್ನೇಹಿ ಮತ್ತು ರಾಸಾಯನಿಕ ಮುಕ್ತ ಆಹಾರ,ನೀರು ಅಥವಾ ಗೃಹಬಳಕೆ ವಸ್ತುಗಳಿಗೆ ಹೆಚ್ಚಿನ ಆದ್ಯತೆಯಿರಲಿ. ಇದರ ಜೊತೆಗೆ ಶರೀರದಲ್ಲಿ ವಿಟಾಮಿನ್ ಸಿ,ವಿಟಾಮಿನ್ ಡಿ ಮತ್ತು ಬಿ12 ಮಟ್ಟವನ್ನು ಕಾಯ್ದುಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)