ವಿಟ್ಲ: ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿದ ಕಾರು
ಬಂಟ್ವಾಳ, ಫೆ.23: ಪಾದಚಾರಿ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದ ಕಾರು ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ರವಿವಾರ ರಾತ್ರಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ಸಂಭವಿಸಿದೆ.
ಕಾರು ಢಿಕ್ಕಿಯಾದ ಪರಿಣಾಮ ವೀರಕಂಭ ನಿವಾಸಿ ಐತ್ತಪ್ಪ ಗೌಡ ಎಂಬವರ ಪತ್ನಿ ಧರ್ಮಾವತಿ ಗೌಡ ಎಂಬವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿ.ಸಿ.ರೋಡಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಧರ್ಮಾವತಿ ಅವರು ಕೆಲಸ ಬಿಟ್ಟು ಬಸ್ ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವ ವೇಳೆ ಅತೀ ವೇಗವಾಗಿ ಬಂದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಯ ಕಂದಕಕ್ಕೆ ಉರುಳಿದೆ.
ಕಾರು ನಜ್ಜುಗುಜ್ಜಾಗಿದ್ದು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಎಸ್ಸೈ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story