varthabharthi

ಸಂಪಾದಕೀಯ

ಅಪೌಷ್ಟಿಕತೆಯನ್ನು ನಿರ್ಲಕ್ಷಿಸುತ್ತಿರುವ ಸರಕಾರ

ವಾರ್ತಾ ಭಾರತಿ : 24 Feb, 2020

ಭಾರತ ಅಪೌಷ್ಟಿಕತೆಗಾಗಿ ಸುದ್ದಿಯಾಗುತ್ತಿದೆ. 2019ನೇ ಜಾಗತಿಕ ಹಸಿವು ಸೂಚ್ಯಂಕ ಬಹಿರಂಗ ಪಡಿಸಿದ ಸತ್ಯ ಭಾರತದ ಪಾಲಿಗೆ ಅತ್ಯಂತ ಅವಮಾನಕಾರಿ ಸಂಗತಿಯಾಗಿದೆ. 117 ರಾಷ್ಟ್ರಗಳ ಪೈಕಿ ಭಾರತ ಹಸಿವಿನಲ್ಲಿ 102ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 88ನೆ ಸ್ಥಾನದಲ್ಲಿದ್ದರೆ ಪಾಕಿಸ್ತಾನ 94ನೇ ಸ್ಥಾನದಲ್ಲಿದೆ. ಭಾರತ ಹಸಿವಿಗೆ ಸಂಬಂಧಿಸಿ ಪಾಕಿಸ್ತಾನಕ್ಕಿಂತಲೂ ಹೀನಾಯ ಸ್ಥಿತಿಯಲ್ಲಿದೆ ಎನ್ನುವುದನ್ನು ಈ ಸೂಚ್ಯಂಕ ವಿವರಿಸಿದೆ. ಭಾರತದಲ್ಲಿ 5 ವರ್ಷಕ್ಕಿಂತ ಕೆಳಗಿನ ಶೇಕಡಾ 69ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿದ್ದಾರೆ. ಅಂದರೆ ನಾವು ಹಸಿವೆಯನ್ನೇ ಒಂದು ರೋಗವಾಗಿ ಪರಿವರ್ತಿಸಿಕೊಂಡಿದ್ದೇವೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುತ್ತೇವೆ. ಅಪೌಷ್ಟಿಕತೆಯ ಜೊತೆಗೆ ಬೆಳೆಯುವ ಮಕ್ಕಳು ಈ ದೇಶದ ಸಂಪನ್ಮೂಲಗಳಾಗಿ ಪರಿವರ್ತನೆಯಾಗಲಾರರು ಎನ್ನುವ ಎಚ್ಚರಿಕೆ ದೇಶಕ್ಕೆ ಬೇಕು.

 ಅಪೌಷ್ಟಿಕತೆಯ ಕುರಿತಂತೆ ಮೋದಿ ಸರಕಾರ ವಿಶೇಷ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಯಾಕೆಂದರೆ, ಗೋಮಾಂಸ ನಿಷೇಧ ಈ ದೇಶದ ಬಹುಸಂಖ್ಯಾತ ಬಡವರ ಪೌಷ್ಟಿಕಾಂಶಯುತ ಆಹಾರವನ್ನು ಕಿತ್ತುಕೊಂಡಿದೆ. ಗೋಮಾಂಸ ರಫ್ತಿಗೆ ಸರಕಾರ ಪ್ರೋತ್ಸಾಹ ನೀಡುತ್ತದೆಯಾದರೂ, ಬಡವರು ಆ ಮಾಂಸವನ್ನು ಬಳಸದಂತೆ ತಡೆಯುತ್ತಿದೆ. ಅಪೌಷ್ಟಿಕತೆಗೆ ಇದು ಅತಿ ದೊಡ್ಡ ಕೊಡುಗೆಯನ್ನು ನೀಡಿದೆ. ನೋಟು ನಿಷೇಧದ ಬಳಿಕ ಹೆಚ್ಚಳವಾದ ನಿರುದ್ಯೋಗ, ಬಡತನ, ಅಪೌಷ್ಟಿಕತೆಗೆ ಇನ್ನಷ್ಟು ಕೊಡುಗೆಗಳನ್ನು ನೀಡುತ್ತಾ ಹೋಯಿತು. ಆದುದರಿಂದ ಬಜೆಟ್‌ನಲ್ಲಿ ಅಪೌಷ್ಟಿಕತೆಗೆ ಆದ್ಯತೆ ನೀಡಲಾಗುವುದೆಂದರೆ, ತನ್ನಿಂದ ಸಂಭವಿಸಿದ ಅನಾಹುತಗಳನ್ನು ಸರಿಪಡಿಸುವುದೆಂದರ್ಥ.

ದುರಂತವೆಂದರೆ, 2020ರ ಬಜೆಟ್‌ನಲ್ಲಿ ಪೌಷ್ಟಿಕ ಆಹಾರ ಯೋಜನೆಗಳಿಗೆ ಹಣ ಮಂಜೂರಾತಿಯಲ್ಲಿ ಶೇ.19ರಷ್ಟು ಕಡಿತ ಮಾಡಲಾಗಿದೆ ಎನ್ನುವುದು ಬಜೆಟ್ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಪ್ರಮುಖ ಪೌಷ್ಟಿಕ ಆಹಾರ ಯೋಜನೆಗಳಿಗೆ ಬಜೆಟ್‌ನಲ್ಲಿ 27,057 ಕೋಟಿ ರೂ. ಮಂಜೂರಾಗಿದೆಯಾದರೂ, ಇದು ಯೋಜನೆಗಳ ಅನುಷ್ಠಾನಕ್ಕೆ ಸಾಕಾಗುವಷ್ಟು ಮೊತ್ತವಲ್ಲ. ಪೌಷ್ಟಿಕಾಹಾರಕ್ಕೆ ಸಂಬಂಧಿಸಿದ ಐದು ಪ್ರಮುಖ ಯೋಜನೆಗಳು ಮಹಿಳಾ ಮತ್ತು ಶಿಶು ಅಭಿವೃದ್ಧಿ ಸಚಿವಾಲಯದ (ಎಮ್‌ಡಬ್ಲೂಸಿಡಿ) ಸುಪರ್ದಿಯಲ್ಲಿ ಐಸಿಡಿಎಸ್ ಅಂದರೆ ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್ ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿವೆ. ಇದರಲ್ಲಿ ಪೋಷಣ್ ಅಭಿಯಾನ್, ರಾಜೀವ್‌ಗಾಂಧಿ ನ್ಯಾಶನಲ್ ಕ್ರೀಶ್ ಸ್ಕೀಮ್, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಮತ್ತು ಹದಿಹರೆಯದ ಬಾಲಕಿಯರಿಗಾಗಿ ಯೋಜನೆ ಸೇರಿವೆ. ಈ ಯೋಜನೆಗಳು 0-6ರ ವಯೋಮಾನದ ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗಾಗಿ ರೂಪಿತವಾಗಿವೆ.

ಈ ವರ್ಷ ಯೋಜನೆಗಳಿಗೆ ಮಂಜೂರಾದ ಮೊತ್ತದಲ್ಲಿ ಕಳೆದ ವರ್ಷಕ್ಕಿಂತ ಕೇವಲ ಶೇ.3.7 ರಷ್ಟು ಏರಿಕೆಯಾಗಿದೆ. ಈ ಮೊತ್ತವು ‘ಪೌಷ್ಟಿಕಾಹಾರ ಸೂಕ್ಷ್ಮ’ ಎನ್ನಬಹುದಾದ ಮಧ್ಯಾಹ್ನದ ಊಟ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆಹಾರ ಸಬ್ಸಿಡಿ ಯೋಜನೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಯೋಜನೆ, ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಅಭಿಯಾನ ಮತ್ತು ಇತರ ಯೋಜನೆಗಳಿಗೆ ವ್ಯಯವಾಗಲಿದೆ. ಆದರೆ ಮಂಜೂರಾಗಿರುವ ಮೊತ್ತ ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ಶೇ.19ರಷ್ಟು ಇಳಿಕೆಯಾದ ಮೊತ್ತವಾಗಿದೆ.

ಈ ಯೋಜನೆಗಳನ್ನು ಅನುಷ್ಠಾನಗೊಳಿಸುವವರಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ನೌಕರರಿಗೆ ನೀಡುವ ಮಾಸಿಕ ಗೌರವಧನದಲ್ಲಿ ಕೇಂದ್ರ ಸರಕಾರದ ಪಾಲಿನ ಕೊಡುಗೆ ಹೀಗಿದೆ: ಅಂಗನವಾಡಿ ನೌಕರರಿಗೆ ರೂ. 4,500 ಹಾಗೂ ಆಶಾ ಕಾರ್ಯಕರ್ತೆಯರಿಗೆ ರೂ. 2,250. ಈ ವರ್ಷ ಸರಕಾರ ಮಂಜೂರು ಮಾಡಿರುವ ಮೊತ್ತ ರೂ. 20,532 ಕೋಟಿ ದೇಶಾದ್ಯಂತ ಸೇವೆ ಸಲ್ಲಿಸುತ್ತಿರುವ ಈ ನೌಕರರಿಗೆ ಗೌರವಧನ ನೀಡಲು ಸಾಕಾಗುವುದಿಲ್ಲ.

 2019-20ರಲ್ಲಿ ಪಾವತಿಗೆ ಎಷ್ಟು ಮೊತ್ತ ಬೇಕಾಗಬಹುದೆಂದು ಸರಕಾರ ಮುಂಗಡ ಅಂದಾಜುಗಳನ್ನು ಮಾಡಿದಾಗ, ಅದು ಅಂಗನವಾಡಿ ಸೇವೆಗಳಿಗೆ ನೀಡಲಾಗುವ ಮೊತ್ತವನ್ನು ಶೇ.18ರಷ್ಟು ಏರಿಸಿತು. ಆದರೆ 6 ತಿಂಗಳ ಬಳಿಕ ಸರಕಾರ ತನ್ನ ಅಂದಾಜನ್ನು ಪರಿಷ್ಕರಿಸಿದಾಗ ಈ ಮೊತ್ತವನ್ನು ಸುಮಾರು ಶೇ.11 ರಷ್ಟು (ರೂ. 17,705 ಕೋಟಿ) ಇಳಿಸಲಾಯಿತು. ಈಗಾಗಲೇ ಪೌಷ್ಟಿಕಾಹಾರ ಪೂರೈಕೆಗೆ ಬೇಕಾಗುವ ಸಿಬ್ಬಂದಿಯ ಕೊರತೆ ಇದೆ. ಅಂಗನವಾಡಿ ನೌಕರರ ಹುದ್ದೆಗಳಿಗೆ ಮಂಜೂರಾಗಿರುವ ಹುದ್ದೆಗಳ ಶೇ.5.63 ಹುದ್ದೆಗಳು ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳಲ್ಲಿ ಶೇ.7.85 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಅಂಗನವಾಡಿ ನೌಕರರ ಖಾಲಿ ಹುದ್ದೆಗಳು ಗರಿಷ್ಠ ಸಂಖ್ಯೆಯಲ್ಲಿ ಬಿಹಾರ (ಶೇ.14.3), ದಿಲ್ಲಿ (ಶೇ.13.8), ಪಶ್ಚಿಮ ಬಂಗಾಳ (ಶೇ.10), ಉತ್ತರ ಪ್ರದೇಶ (ಶೇ.9.6) ಹಾಗೂ ತಮಿಳುನಾಡು (ಶೇ.8.8) ರಾಜ್ಯಗಳಲ್ಲಿವೆ.

ಅಂಗನವಾಡಿ ಸಹಾಯಕರ ವರ್ಗದಲ್ಲಿ ಖಾಲಿ ಹುದ್ದೆಗಳ ನಿಟ್ಟಿನಲ್ಲಿ ರಾಜ್ಯವಾರು ಪ್ರತಿಶತ ಹೀಗಿದೆ: ಬಿಹಾರ (ಶೇ.17.5), ಪಶ್ಚಿಮ ಬಂಗಾಳ (ಶೇ.15.7), ಉತ್ತರ ಪ್ರದೇಶ (ಶೇ.13.4), ತಮಿಳುನಾಡು (ಶೇ.11) ಮತ್ತು ಪಂಜಾಬ್ (ಶೇ.8.8). ಅತ್ಯಂತ ಕಡಿಮೆ ಹುದ್ದೆಗಳು ಖಾಲಿ ಇರುವ ರಾಜ್ಯಗಳಲ್ಲಿ ಕೇರಳ ಮತ್ತು ಹಿಮಾಚಲ ಪ್ರದೇಶ ಮೊದಲ ಎರಡು ಸ್ಥಾನಗಳಲ್ಲಿವೆ.

ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ವರ್ಗದಲ್ಲಿ ಖಾಲಿ ಹುದ್ದೆಗಳ ಪ್ರಮಾಣ ಹಾಗೂ ಮಹಿಳಾ ಸೂಪರ್‌ವೈಸರ್‌ಗಳ ಪ್ರಮಾಣ ಹೆಚ್ಚು ಇದೆ. 2019ರ ಮಾರ್ಚ್ ವೇಳೆಗೆ ಶೇ.30ರಷ್ಟು ಸಿಡಿಪಿಒ ಹುದ್ದೆಗಳು ಹಾಗೂ ಶೇ.28ರಷ್ಟು ಮಹಿಳಾ ಸಹಾಯಕಿಯರ ಹುದ್ದೆಗಳು ಭರ್ತಿಯಾಗದೆ/ನೇಮಕವಾಗದೆ ಉಳಿದಿದ್ದವು. ರಾಜಸ್ಥಾನದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಿಡಿಪಿಒ ಹುದ್ದೆಗಳು ಖಾಲಿ ಇದ್ದರೆ (ಶೇ.64.5), ಮಹಾರಾಷ್ಟ್ರದಲ್ಲಿ ಶೇ.55.2, ಪಶ್ಚಿಮ ಬಂಗಾಳದಲ್ಲಿ ಶೇ.51.9, ಕರ್ನಾಟಕ ಮತ್ತು ಉತ್ತರ ಪ್ರದೇಶ ಎರಡರಲ್ಲೂ ಶೇ.49.5 ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಮಹಿಳಾ ಸಹಾಯಕಿಯರ ಹುದ್ದೆಗಳು ಖಾಲಿ ಇರುವ ರಾಜ್ಯಗಳಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ (ಶೇ.67), ಬಿಹಾರ (ಶೇ.48.2), ತಮಿಳುನಾಡು (ಶೇ.44), ಉತ್ತರ ಪ್ರದೇಶ (ಶೇ.43) ಮತ್ತು ತ್ರಿಪುರಾ (ಶೇ.42.4).

ಐಸಿಡಿಎಸ್ ಯೋಜನೆಯ ಅಡಿಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುವ ವೇತನದ ಮೊತ್ತದಲ್ಲಿ ಬದಲಾವಣೆಯಾದಾಗ ಮಾನವ ಸಂಪನ್ಮೂಲಗಳ ಕೊರತೆಯುಂಟಾಗಿ ಅದು ಕೇಂದ್ರ ಮತ್ತು ರಾಜ್ಯ ಸರಕಾರಗಳ ವೇತನಾ ವೆಚ್ಚದ ಪಾಲು ನೀಡಿಕೆಯ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುತ್ತದೆ. ಹೀಗಾದಾಗ ಹಣಕಾಸಿನ ವಿಷಯದಲ್ಲಿ ಹೆಚ್ಚು ದುರ್ಬಲವಾಗಿರುವ ರಾಜ್ಯಗಳು ಐಸಿಡಿಎಸ್ ಯೋಜನೆಯ ಅಡಿಯಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ಸಾಕಷ್ಟು ಸಂಖ್ಯೆಯ ಹುದ್ದೆಗಳಿಗೆ ನೇಮಕಾತಿ ಮಾಡಲು ಬೇಕಾಗುವಷ್ಟು ಸಂಪನ್ಮೂಲವಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ.

ಅಲ್ಲದೆ, ಹೊಸ ವೇತನ/ಗೌರವಧನ ಪಾವತಿ ದರಗಳು ಕೂಡ ಕಡಿಮೆಯಾಗಿರುವುದರಿಂದ ರಾಜ್ಯಗಳು ತಮ್ಮ ಖಜಾನೆಯಿಂದ ಹೆಚ್ಚುವರಿ ಗೌರವಧನವನ್ನು ನೀಡುತ್ತಿವೆ. ಅಂಗನವಾಡಿ ನೌಕರರಿಗೆ ನೀಡಬೇಕಾದ್ದಕ್ಕಿಂತ ಕಡಿಮೆ ವೇತನ/ಗೌರವಧನ ನೀಡುತ್ತಿರುವುದರಿಂದ ಅವರ ಸೇವಾಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮವಾಗುತ್ತದೆ. ಆದ್ದರಿಂದ ರಾಜ್ಯಗಳಿಗೆ ನೀಡುವ ಹಣಕಾಸು ಬೆಂಬಲದಲ್ಲಿ ಗಣನೀಯ ಏರಿಕೆಯಾಗಬೇಕಾದ ಅವಶ್ಯಕತೆ ಇದೆ. ಒಟ್ಟಿನಲ್ಲಿ ಸಾಮಾಜಿಕ ವಲಯದ ಕುರಿತಂತೆ ಬಜೆಟ್‌ನ ನಿರ್ಲಕ್ಷ, ಈ ದೇಶದ ಭವಿಷ್ಯದ ಕುರಿತಂತೆ ಆತಂಕವನ್ನು ಸೃಷ್ಟಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)