varthabharthi

ಸಂಪಾದಕೀಯ

ದಿಲ್ಲಿ: ಸಿಎಎ ಬೆಂಬಲಿಗರ ವೇಷದಲ್ಲಿ ಸಂಘಪರಿವಾರ ಗೂಂಡಾಗಳ ಹಿಂಸಾಚಾರ

ವಾರ್ತಾ ಭಾರತಿ : 25 Feb, 2020

ಸಿಎಎ ಕಾಯ್ದೆಯನ್ನು ಜಾರಿಗೊಳಿಸಿದ್ದೇ ಇಡೀ ದೇಶವನ್ನು ಸ್ಪಷ್ಟವಾಗಿ ಧರ್ಮದ ಆಧಾರದಲ್ಲಿ ಇಬ್ಭಾಗಿಸುವುದಕ್ಕಾಗಿ. ಸಿಎಎ ವಿರುದ್ಧದ ಪ್ರತಿಭಟನಾಕಾರರನ್ನು ‘ಬಟ್ಟೆಯ ಆಧಾರದಲ್ಲಿ ಗುರುತಿಸಬಹುದು’ ಎಂದು ನರೇಂದ್ರ ಮೋದಿ ಹೇಳಿರುವುದು ಇದೇ ಧೈರ್ಯದಿಂದ. ಆದರೆ ಈ ಪ್ರತಿಭಟನೆ ಮೋದಿ ಮತ್ತು ಅಮಿತ್ ಶಾ ಅವರು ಎಣಿಸಿದಂತೆ ನಿರ್ದಿಷ್ಟ ಬಟ್ಟೆಗಳಿಗೆ ಸೀಮಿತವಾಗಿ ಉಳಿಯಲಿಲ್ಲ. ಇಡೀ ದೇಶ ಈ ಕಾಯ್ದೆಯ ವಿರುದ್ಧ ಜಾತಿ ಭೇದಗಳನ್ನು ಮರೆತು ಒಂದಾಯಿತು. ದೇಶದ ಮೂಲೆ ಮೂಲೆಯಿಂದ ಸಿಎಎ ವಿರುದ್ಧ ಧ್ವನಿ ಮೊಳಗತೊಡಗಿತು. ಜೆಎನ್‌ಯು ಮತ್ತು ಜಾಮಿಯಾ ವಿವಿಗಳ ಹೋರಾಟವನ್ನು ಪೊಲೀಸರ ಲಾಠಿಯಿಂದ ದಮನಿಸಬಹುದು ಎಂದು ಸರಕಾರ ತಪ್ಪು ಭಾವಿಸಿತು. ಆದರೆ ವಿದ್ಯಾರ್ಥಿಗಳ ಮೇಲೆ ಸರಕಾರ ನಡೆಸಿದ ದೌರ್ಜನ್ಯ ಪ್ರತಿಭಟನೆಯ ಕಾವನ್ನು ಇನ್ನಷ್ಟು ಏರಿಸಿತು. ಜಾಮಿಯಾ ಲೈಬ್ರರಿಗೆ ನುಗ್ಗಿ ಪೊಲೀಸರು ನಡೆಸಿದ ದೌರ್ಜನ್ಯಗಳು, ಜೆಎನ್‌ಯು ಒಳಗೆ ಎಬಿವಿಪಿ ಗೂಂಡಾಗಳು ನುಗ್ಗಿ ನಡೆಸಿದ ದೌರ್ಜನ್ಯಗಳು ಮತ್ತೆ ಮತ್ತೆ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿತು. ನಿಧಾನಕ್ಕೆ ಎಲ್ಲೆಡೆ ರಾಷ್ಟ್ರಧ್ವಜ, ಗಾಂಧಿ, ನೆಹರೂ, ಅಬುಲ್ ಕಲಾಂ ರಾರಾಜಿಸತೊಡಗಿದರು. ಇದೀಗ ಶಾಹೀನ್‌ಬಾಗ್ ತನ್ನ ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯ ಮೂಲಕ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದೆ. ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ದೇಶದ ಮೂಲೆ ಮೂಲೆಯಿಂದ ಕಲಾವಿದರು, ಚಿಂತಕರು, ಬರಹಗಾರರು, ರೈತರು, ಕಾರ್ಮಿಕರು ಒಂದಾಗುತ್ತಿದ್ದಾರೆ. ಈ ದೇಶದ ಬಹುತ್ವ ಶಾಹೀನ್‌ಬಾಗ್‌ನಲ್ಲಿ ಪ್ರತಿಫಲಿಸುತ್ತಿದೆ. ‘ಶಾಹೀನ್ ಬಾಗ್‌ನಲ್ಲಿ ಭಯೋತ್ಪಾದಕರಿದ್ದಾರೆ, ಆತ್ಮಹತ್ಯಾದಾಳಿಕೋರರಿದ್ದಾರೆ’ ಎಂದೆಲ್ಲ ಹೇಳಿ ಸರಕಾರ ಆ ಪ್ರತಿಭಟನೆಗೆ ಋಣಾತ್ಮಕವಾದ ಬಣ್ಣ ನೀಡಲು ಹವಣಿಸಿತಾದರೂ, ಪ್ರತಿಭಟನೆಯೊಳಗಿಂದ ಮೊಳಗುತ್ತಿರುವ ಭಾರತೀಯತೆ ಆ ಎಲ್ಲ್ಲಾ ಹೇಳಿಕೆಗಳನ್ನು ನಿವಾಳಿಸಿ ಹಾಕಿತು.

‘ಸಿಎಎ ವಿರುದ್ಧ ಪ್ರತಿಭಟನೆ ನಡೆದಾಗ ಅದಕ್ಕೆ ಪ್ರತಿಯಾಗಿ ದೇಶದ ಜನರು ಸಿಎಎ ಪರ ಪ್ರತಿಭಟನೆ ನಡೆಸಿ ಅರಾಜಕತೆಯನ್ನ ಸೃಷ್ಟಿಸಬೇಕು’ ಎನ್ನುವುದು ಬಿಜೆಪಿಯ ಉದ್ದೇಶವಾಗಿತ್ತು. ಶಾಹೀನ್ ಬಾಗ್ ಮತ್ತು ಜಾಮಿಯಾ ವಿದ್ಯಾರ್ಥಿಗಳ ಶಾಂತಿಯುತವಾದ ಪ್ರತಿಭಟನೆಯಂತೂ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ. ದುಷ್ಕರ್ಮಿಗಳನ್ನು ಛೂಬಿಟ್ಟು ಪ್ರತಿಭಟನೆಯನ್ನು ಕೆಡಿಸುವ ಪ್ರಯತ್ನವನ್ನು ಹಲವು ಬಾರಿ ನಡೆಸಿತು. ಎರಡು ಬಾರಿ ಸಂಘಪರಿವಾರ ಯುವಕರಿಂದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಯಿತಾದರೂ, ಪ್ರತಿಭಟನಾಕಾರರು ಪ್ರಚೋದನೆಗೆ ಒಳಗಾಗಲಿಲ್ಲ. ದುಷ್ಕರ್ಮಿ ಪಿಸ್ತೂಲ್ ಹಿಡಿದು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುತ್ತಿರುವಾಗ ಪೊಲೀಸರು ಅದಕ್ಕೆ ಮೂಕ ಪ್ರೇಕ್ಷಕರಾಗಿದ್ದರು. ಅಂದರೆ ಅಲ್ಲಿ ಹಿಂಸೆ ನಡೆಯಬೇಕು ಎನ್ನುವುದೇ ಅವರ ಉದ್ದೇಶವಾಗಿತ್ತು. ಸುಪ್ರೀಂಕೋರ್ಟ್‌ನ ಮೂಲಕವೂ ಬೆದರಿಸುವ ಪ್ರಯತ್ನ ನಡೆಸಿತು. ಆದರೆ ಶಾಹೀನ್‌ಬಾಗ್ ಅದಕ್ಕೂ ಬಗ್ಗಲಿಲ್ಲ. ಇದೀಗ ದಿಲ್ಲಿಯಲ್ಲಿ, ಬಿಜೆಪಿಯ ನಾಯಕ ಕಪಿಲ್ ಮಿಶ್ರಾ, ತನ್ನ ಗೂಂಡಾ ಪಡೆಗಳ ಜೊತೆಗೆ ನೇರವಾಗಿ ಸಿಎಎ ಪ್ರತಿಭಟನಾಕಾರರ ವಿರುದ್ಧ ದಾಳಿಗೆ ಮುಂದಾಗಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಕಪಿಲ್ ಮಿಶ್ರಾ ಹಿಂಸಾಚಾರದ ಸೂಚನೆಯನ್ನು ನೀಡಿದ್ದ. ‘‘ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಹೋಗುವವರೆಗೆ ಕಾಯುತ್ತೇವೆ. ಆ ಬಳಿಕವೂ ಪ್ರತಿಭಟನೆ ನಡೆಸಿದರೆ, ನಡೆಯುವ ಅನಾಹುತಕ್ಕೆ ನಾವು ಹೊಣೆಯಲ್ಲ’’ ಎಂದು ಸ್ಪಷ್ಟವಾಗಿ ಈತ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದ. ರವಿವಾರ ಮತ್ತು ಸೋಮವಾರ ಸಿಎಎ ಬೆಂಬಲಿಗರ ವೇಷದಲ್ಲಿ ಕಪಿಲ್ ಮಿಶ್ರಾ ಅವರ ಗೂಂಡಾಗಳು ಮಾರಕಾಸ್ತ್ರಗಳೊಂದಿಗೆ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಮುಗಿ ಬಿದ್ದಿದ್ದಾರೆ. ಮಿಶ್ರಾ ಅವರ ಗೂಂಡಾಗಳಲ್ಲಿ ಒಬ್ಬ ಬಹಿರಂಗವಾಗಿಯೇ ಪಿಸ್ತೂಲ್ ಹಿಡಿದು ಗುಂಡು ಹಾರಿಸುತ್ತಿರುವುದು ವೀಡಿಯೊಗಳಲ್ಲಿ ದಾಖಲಾಗಿವೆ. ಈ ಒಟ್ಟು ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಹಲವು ಮಹಿಳೆಯರು, ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಈ ಹಿಂಸಾಚಾರವನ್ನು ಕೋಮುಗಲಭೆಯಾಗಿ ಪರಿವರ್ತಿಸುವ ಪ್ರಯತ್ನವನ್ನು ಆರೆಸ್ಸೆಸ್ ಮತ್ತು ಸಂಘಪರಿವಾರ ನಡೆಸುತ್ತಿದೆ.

ಇಡೀ ಪ್ರಕರಣವನ್ನು ಸಿಎಎ ಪರವಾಗಿರುವ ಮತ್ತು ವಿರುದ್ಧವಾಗಿರುವ ಜನರ ನಡುವಿನ ಸಂಘರ್ಷ ಎಂದು ಬಿಂಬಿಸಲು ಬಿಜೆಪಿ ವಿಫಲ ಪ್ರಯತ್ನ ಮಾಡುತ್ತಿದೆ. ಸಿಎಎ ವಿರೋಧಿ ಪ್ರತಿಭಟನಾಕಾರರು ಮತ್ತು ಸಿಎಎ ಬೆಂಬಲಿಗರ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ವೀಡಿಯೊಗಳೇ ದೇಶದ ಮುಂದೆ ಬಹಿರಂಗಪಡಿಸಿವೆ. ಸಿಎಎ ಪ್ರತಿಭಟನಾಕಾರರು ನಿರಾಯುಧರಾಗಿದ್ದರು. ಅವರ ಕೈಯಲ್ಲಿ ರಾಷ್ಟ್ರಧ್ವಜಗಳಿದ್ದವು ಮತ್ತು ದೇಶಭಕ್ತಿಯ ಘೋಷಣೆಗಳನ್ನು ಅವರು ಕೂಗುತ್ತಿದ್ದರು. ಆದರೆ ಕಪಿಲ್ ಮಿಶ್ರಾ ಸಂಘಟಿಸಿದ್ದ ಸಿಎಎ ಬೆಂಬಲಿಗರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದರು. ಅವರ ಕೈಯಲ್ಲಿ ಕೇಸರಿ ಬಾವುಟಗಳಿದ್ದವು. ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಿದ್ದರು. ಓರ್ವನ ಕೈಯಲ್ಲಿ ಪಿಸ್ತೂಲ್ ಕಾಣಿಸಿಕೊಂಡಿದ್ದು, ಆತ ಗುಂಡು ಹಾರಿಸುತ್ತಿರುವುದೂ ವೀಡಿಯೊಗಳಲ್ಲಿ ದಾಖಲಾಗಿವೆ. ಹಿಂಸಾಚಾರ ನಡೆಸುವುದೇ ಸಿಎಎ ಬೆಂಬಲಿಗರ ಉದ್ದೇಶವಾಗಿತ್ತು. ಒಂದು ಅಂಶವನ್ನು ನಾವು ಗಮನಿಸಬೇಕು. ಈವರೆಗೆ ಜಾಮಿಯಾ ವಿದ್ಯಾರ್ಥಿಗಳೂ ಸೇರಿದಂತೆ ಸಿಎಎ ಪ್ರತಿಭಟನಾಕಾರರ ಮೇಲೆ ಪೊಲೀಸರು ಬರ್ಬರ ದೌರ್ಜನ್ಯಗಳನ್ನು ಎಸಗಿದ್ದಾರೆ. ಜಾಮಿಯಾ ವಿವಿಯೊಳಗಿನ ಲೈಬ್ರರಿಯೊಳಗೆ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಆದರೆ ಯಾರೂ ಪ್ರತಿಹಿಂಸೆಗೆ ಇಳಿದಿರಲಿಲ್ಲ. ಸಹಸ್ರಾರು ಪ್ರತಿಭಟನಾಕಾರರ ಮೇಲೆ ಲಾಠಿದೌರ್ಜನ್ಯ ಎಸಗಿದಾಗಲೂ, ಪ್ರತಿಭಟನಾಕಾರರು ಗರಿಷ್ಠ ಸಂಯಮವನ್ನು ಕಾಪಾಡಿಕೊಂಡಿದ್ದರು. ಈ ‘ಸಂಯಮ’ವೇ ಸರಕಾರಕ್ಕೆ ತಲೆನೋವಾಗಿತ್ತು. ಪ್ರತಿಭಟನಾಕಾರರು ಬೀದಿಗಿಳಿದು ಹಿಂಸಾಚಾರ ನಡೆಸಿ ಅರಾಜಕತೆಯನ್ನು ಸೃಷ್ಟಿಸಬೇಕು, ಅದನ್ನೇ ನೆಪವಾಗಿಸಿಕೊಂಡು ಪ್ರತಿಭಟನಾಕಾರರನ್ನು ದಮನಿಸುವುದು ಸರಕಾರದ ಉದ್ದೇಶವಾಗಿದೆ. ಅದು ನಡೆಯದೇ ಇದ್ದಾಗ, ತನ್ನದೇ ಜನರನ್ನು ಬೀದಿಗಿಳಿಸಿ ಅವರಿಂದ ಹಿಂಸಾಚಾರವನ್ನು ನಡೆಸುತ್ತಿದೆ.

ಈ ಘಟನೆಯ ಮೂಲಕ ಭಾರತದಲ್ಲಿ ಸಿಎಎ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ ಎನ್ನುವುದನ್ನು ಬಿಂಬಿಸುವ ವಿಫಲ ಪ್ರಯತ್ನವೊಂದನ್ನು ಸರಕಾರ ಮಾಡುತ್ತಿದೆ. ಅಷ್ಟೇ ಅಲ್ಲ, ಸಿಎಎ ಬೆಂಬಲಿಗರು ಎಂದು ಕರೆಸಿಕೊಂಡವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಮಾಯಕರ ಮೇಲೆ ಬರ್ಬರ ಹಲ್ಲೆಗಳನ್ನು ನಡೆಸಿದ್ದಾರೆ. ಅವರ ಮನೆ, ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಎಲ್ಲ ಘಟನೆಯ ಹಿಂದೆ, ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಕೈವಾಡ ಎದ್ದು ಕಾಣುತ್ತಿದೆ. ಸಿಎಎ ಕಾಯ್ದೆಯ ಮೂಲಕ ಸರಕಾರ ಗುಜರಾತ್‌ನಲ್ಲಿ ನಡೆಸಿದಂತೆ ಇಡೀ ದೇಶದಲ್ಲಿ ಬೃಹತ್ ಕೋಮುಗಲಭೆಯೊಂದನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆಯೆ ಎಂಬ ಪ್ರಶ್ನೆ ಈ ಘಟನೆಯಿಂದ ಎದ್ದಿದೆ. ಸಿಎಎ ಕಾಯ್ದೆಯ ವಿರುದ್ಧದ ಹೋರಾಟವನ್ನು ತನ್ನ ಸಂಘಪರಿವಾರ ಗೂಂಡಾಗಳ ಮೂಲಕ ದಮನಿಸಲು ಹೊರಟಿರುವುದು ಸರಕಾರ ಅದೆಷ್ಟು ಹತಾಶೆಗೊಂಡಿದೆ ಎನ್ನುವುದನ್ನು ಎತ್ತಿ ತೋರಿಸಿದೆ. ಇನ್ನಾದರೂ ಸವೋಚ್ಛ ನ್ಯಾಯಾಲಯ ಮಧ್ಯ ಪ್ರವೇಶಿಸದೇ ಇದ್ದರೆ, ಮೋದಿ, ಅಮಿತ್ ಶಾ ಇಡೀ ದೇಶವನ್ನು 2002ರ ಗುಜರಾತ್ ಆಗಿ ಪರಿವರ್ತಿಸಲಿದ್ದಾರೆ. ಭಾರತೀಯರೆಲ್ಲರೂ ಒಂದಾಗಿ ಸಂವಿಧಾನದ ಬೆನ್ನಿಗೆ ನಿಂತು ಸರಕಾರದ ಸಂಚನ್ನು ವಿಫಲಗೊಳಿಸಿ ಭಾರತವನ್ನು ಉಳಿಸಲು ಮುಂದಾಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದು ಸಿಎಎ ವಿರುದ್ಧ-ಪರವಾಗಿರುವವರ ನಡುವಿನ ಸಂಘರ್ಷವಲ್ಲ, ಭಾರತದ ಸಂವಿಧಾನ ಪರ ಮತ್ತು ವಿರೋಧಿಗಳ ನಡುವಿನ ಸಂಘರ್ಷವೆನ್ನುವುದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)