varthabharthi

ಸಂಪಾದಕೀಯ

ಅನುದಾನ ಹಂಚಿಕೆಯಲ್ಲಿ ಅನ್ಯಾಯ

ವಾರ್ತಾ ಭಾರತಿ : 26 Feb, 2020

ಕೇಂದ್ರದ ಬಿಜೆಪಿ ಸರಕಾರ ಆಗಾಗ ಒಂದೇ ಭಾರತ, ಒಂದೇ ಕಾನೂನು, ಒಂದೇ ಭಾಷೆ ಎಂದು ಏನೇನೋ ಹೇಳುತ್ತದೆ. ಆದರೆ ವಾಸ್ತವವಾಗಿ ಈ ಒಂದೇ ಎಂಬುದು ಎಷ್ಟು ಅಪ್ರಾಮಾಣಿಕವಾಗಿದೆ ಎಂಬುದು ಬಯಲಿಗೆ ಬರುತ್ತಲೇ ಇದೆ. ಒಂದೇ ಹೆಸರಿನಲ್ಲಿ ಸಂಪದ್ಭರಿತವಾದ ರಾಷ್ಟ್ರದ ಬೊಕ್ಕಸಕ್ಕೆ ಹೆಚ್ಚು ಆದಾಯವನ್ನು ನೀಡುವ ದಕ್ಷಿಣ ಭಾರತದ ರಾಜ್ಯಗಳನ್ನು ಸೊರಗಿಸಿ ಅವುಗಳ ಪಾಲಿನ ಅನುದಾನವನ್ನು ಲಪಟಾಯಿಸಿ ಉತ್ತರದ ರಾಜ್ಯಗಳಿಗೆ ಹಂಚುವುದು ಇದರ ಹಿಂದಿರುವ ಕುತಂತ್ರವಾಗಿದೆ. ಇದಕ್ಕೆ ಕರ್ನಾಟಕವೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಕಳೆದ ವರ್ಷ ನೆರೆ ಹಾವಳಿಯ ಹೊಡೆತಕ್ಕೆ ಸಿಕ್ಕಿ ತತ್ತರಿಸಿದ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರದ ಬಿಜೆಪಿ ಸರಕಾರ ಅನ್ಯಾಯ ಮಾಡಿದೆ. ಮುಂಗಡ ಪತ್ರ ಮಂಡಿಸುವ ಮುಂಚೆ ನೀಡಿದ ಭರವಸೆಯಂತೆ ಕೊಡಬೇಕಾದ ಅನುದಾನ ನೀಡುವಲ್ಲೂ ತಾರತಮ್ಯ ಮಾಡಿದೆ ಎಂಬುದು ರಾಜ್ಯ ಸರಕಾರದ ಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ವರದಿಯಿಂದ ತಿಳಿದುಬಂದಿದೆ.

ದಕ್ಷಿಣ ರಾಜ್ಯಗಳ ಬಗ್ಗೆ ಬಿಜೆಪಿಯ ದಿಲ್ಲಿ ನಾಯಕರಿಗಿರುವ ತಾತ್ಸಾರ ಮನೋಭಾವ ಕರ್ನಾಟಕದ ಬಗೆಗೂ ಇದೆ. ಪ್ರವಾಹದಿಂದ 30,000 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದ್ದರೂ ಕೇಂದ್ರ ಸರಕಾರ ಸೂಕ್ತ ಪರಿಹಾರವನ್ನು ನೀಡಲೇ ಇಲ್ಲ.ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಹಣ 14,000 ಕೋಟಿ ರೂಪಾಯಿ ಬಾಕಿ ಉಳಿದಿದೆ. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಬರಬೇಕಾದ ರೂ. 5,335 ಕೋಟಿ ಮೊತ್ತದಲ್ಲಿ ಅಲ್ಪಪ್ರಮಾಣದ ಮೊತ್ತವನ್ನು ಮಾತ್ರ ಕೇಂದ್ರ ಸರಕಾರ ನೀಡಿದೆ. ಕೊಳಗೇರಿ ನಿವಾಸಿಗಳ ಪುನರ್ವಸತಿ ಸೇರಿದಂತೆ ಕೇಂದ್ರ ಪ್ರಾಯೋಜಿತ ವಸತಿ ಯೋಜನೆಗಳಿಗೆ 1,000 ಕೋಟಿ ರೂಪಾಯಿ ಬರಬೇಕಾಗಿದ್ದು ಕೇಂದ್ರ ಸರಕಾರ 10 ಕೋಟಿ ರೂಪಾಯಿ ಮಾತ್ರ ನೀಡಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಎಳೆ ಕಂದಮ್ಮಗಳ ಸಾವಿನ ಪ್ರಮಾಣ ಏರುತ್ತಿದೆ. ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಶಿಶು ಅಭಿವೃದ್ಧಿ ಯೋಜನೆಗೆ ನೀಡಬೇಕಾದ ರೂ. 1,547 ಕೋಟಿ ಮೊತ್ತದಲ್ಲಿ 80 ಕೋಟಿ ರೂಪಾಯಿ ಮಾತ್ರ ನೀಡಿದೆ. ಹೀಗೆ ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ತಾರತಮ್ಯ ನೀತಿಯನ್ನು ಅನುಸರಿಸುತ್ತಲೇ ಬಂದಿದೆ.

ಕರ್ನಾಟಕದ ಜನರು ಒಂದು ರೂಪಾಯಿ ತೆರಿಗೆ ಕಟ್ಟಿದರೆ ಅದರಲ್ಲಿ ಕೇಂದ್ರದಿಂದ ಅವರಿಗೆ ಬರುವುದು ನಲವತ್ತು ಪೈಸೆ ಮಾತ್ರ. ಆದರೆ ಅನುದಾನದಲ್ಲಿ ಗುಜರಾತ್‌ಗೆ ಸಿಂಹಪಾಲು ಇದೆ. ಅವರು ಕಟ್ಟಿದ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ರೂ. 2. 35ನ್ನು ಪಡೆಯುತ್ತಾರೆ. ಪ್ರಧಾನಿಯವರು ಹೆಮ್ಮೆಯಿಂದ ಹೇಳಿಕೊಳ್ಳುವ ಅಭಿವೃದ್ಧಿ ಹೊಂದಿದ ಮುಂದುವರಿದ ರಾಜ್ಯ ಅನುದಾನದ ಗರಿಷ್ಠ ಮೊತ್ತವನ್ನು ಪಡೆಯುತ್ತದೆ. ಅದರಂತೆ ಉತ್ತರ ಪ್ರದೇಶ ರೂ. 2.36, ಬಿಹಾರ ರೂ. 2.98ನ್ನು ಪಡೆಯುತ್ತವೆ. ಒಂದೇ ಭಾರತದ ಹೆಸರಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಾಕುವುದು ಅನ್ಯಾಯದ ಪರಮಾವಧಿಯಾಗಿದೆ.

ಕೇಂದ್ರ ಸರಕಾರ ನೀಡುವ ಅನುದಾನದ ಮೊತ್ತ ನಿಗದಿಯಾಗುವುದು ವರ್ಷದ ಮಧ್ಯದಲ್ಲಿ, ಇಲ್ಲವೆ ಕೊನೆಯಲ್ಲಿ ಅಲ್ಲ. ಪ್ರತಿ ವರ್ಷ ಕೇಂದ್ರ ಮುಂಗಡ ಪತ್ರ ಮಂಡನೆಯಾಗುವ ಮುನ್ನ ರಾಜ್ಯದ ಹಣಕಾಸು ಇಲಾಖೆಯಿಂದ ವಿವರಣೆ ಪಡೆದು ಯಾವ್ಯಾವ ಯೋಜನೆಗಳಿಗೆ ಎಷ್ಟು ಮೊತ್ತ ಬೇಕಾಗಬಹುದೆಂದು ಲೆಕ್ಕ ಹಾಕಿ ಸಂಸತ್ತಿನ ಉಭಯ ಸದನಗಳ ಸಮ್ಮತಿ ಪಡೆಯಲಾಗುತ್ತದೆ. ಅದರ ಆಧಾರದಲ್ಲಿ ರಾಜ್ಯ ಸರಕಾರ ತನ್ನ ಆಯವ್ಯಯ ಪತ್ರವನ್ನು ರೂಪಿಸುತ್ತದೆ. ಹೀಗಿರುವಾಗ ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ನೀಡುವಲ್ಲಿ ಹಿಂದೆ ಮುಂದೆ ನೋಡುವುದು ಸರಿಯಲ್ಲ.

ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇರಬೇಕೆಂದು ಪ್ರಧಾನಿ ಮೋದಿಯವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದ್ದರು. ಆದರೆ ಈಗ ರಾಜ್ಯದಲ್ಲೂ ಬಿಜೆಪಿ ಸರಕಾರವಿದೆ, ಕೇಂದ್ರದಲ್ಲೂ ಅದೇ ಪಕ್ಷದ ಸರಕಾರವಿದೆ. ಆದರೂ ಈ ತಾರತಮ್ಯವೇಕೆ? ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ, ಬೇರೆ ಪಕ್ಷಗಳ ಸರಕಾರವಿದ್ದರೆ ರಾಜ್ಯಕ್ಕೆ ಅನ್ಯಾಯವಾದರೆ ಪ್ರತಿಭಟಿಸುವ ಅವಕಾಶವಾದರೂ ಇರುತ್ತದೆ. ಈಗ ಅದೂ ಇಲ್ಲ. ಪ್ರಧಾನಿ ಮೋದಿ ಹೋಗಲಿ, ಅಮಿತ್ ಶಾ ಮುಂದೆಯೂ ನಿಂತು ಮಾತಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಿಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪಅವರು ಪ್ರಧಾನಿ ತುಮಕೂರಿಗೆ ಬಂದಾಗ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆದರೆ ಈಗ ಅವರೂ ಮೆತ್ತಗಾಗಿದ್ದಾರೆ. ಅವರನ್ನು ಮೂಲೆಗುಂಪು ಮಾಡಲು ಸಂಘಪರಿವಾರದ ಗರ್ಭಗುಡಿಯ ಮೂಲಗಳು ಮಸಲತ್ತು ನಡೆಸುತ್ತಿವೆ. ಹೀಗಾಗಿ ಅವರೂ ಮಾತಾಡುತ್ತಿಲ್ಲ. ಹೀಗಾಗಿ ಕರ್ನಾಟಕ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಿದೆ.

ಅನುದಾನ ನೀಡಿಕೆಯಲ್ಲಿ ಕೇಂದ್ರ ಸರಕಾರ ಮಾಡುತ್ತಿರುವ ಪಕ್ಷಪಾತದ ವಿರುದ್ಧ ರಾಜ್ಯದ ಸಂಸದರು ಕೂಡ ಧ್ವನಿಯೆತ್ತಬೇಕಾಗಿದೆ.
ಆದರೆ ನಮ್ಮ ರಾಜ್ಯದಿಂದ ಚುನಾಯಿತರಾಗಿ ಸಂಸತ್ತಿಗೆ ಹೋಗುವ ಸಂಸದರು ಎಂದೂ ಸದನದಲ್ಲಿ ಬಾಯಿ ಬಿಚ್ಚುವುದಿಲ್ಲ. ಮುಂಚೆ ದೇವೇಗೌಡರು, ಬಂಗಾರಪ್ಪ ಮುಂತಾದವರು ಇದ್ದಾಗ ಒಂದಿಷ್ಟು ಮಾತನಾಡುತ್ತಿದ್ದರು. ಈಗಂತೂ ನಮ್ಮ ಸಂಸದರು ಅಲ್ಲಿ ತೆಪ್ಪಗಿದ್ದು, ಕರ್ನಾಟಕಕ್ಕೆ ಬಂದು ಸಂವಿಧಾನ ಬದಲಾವಣೆ ಬಗ್ಗೆ ಮಾತಾಡುತ್ತಾರೆ. ಗಾಂಧೀಜಿಯ ಹೋರಾಟದಿಂದ ಸ್ವಾತಂತ್ರ್ಯ ಬಂದಿಲ್ಲ ಎನ್ನುತ್ತಾರೆ. ಬುದ್ಧಿಜೀವಿಗಳಿಗೆ ಗುಂಡು ಹಾಕಬೇಕೆಂದು ಕೆಲವರು ಹಾರಾಡುತ್ತಾರೆ. ರಾಜ್ಯದ ಜನ ಇಂತಹವರನ್ನು ಸಂಸತ್ತಿಗೆ ಕಳಿಸಿ ಅಭಿವೃದ್ಧಿ ಆಗಬೇಕೆಂದರೆ ಹೇಗೆ ಸಾಧ್ಯವಾಗುತ್ತದೆ.?

ರಾಜ್ಯದ ಸಂಸದರಲ್ಲಿ ಬಹುತೇಕ ಎಲ್ಲರೂ ಬಿಜೆಪಿಗೆ ಸೇರಿದವರಿದ್ದಾರೆ. ಅವರು ಒಟ್ಟಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದರೆ ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿ ನ್ಯಾಯವಾದ ಪಾಲನ್ನು ಪಡೆಯಬಹುದು.ಆದರೆ ನಮ್ಮ ಸಂಸದರು ಕೆಲಸ ಮಾಡದಿದ್ದರೂ ಜನರು ಅವರನ್ನು ಚುನಾಯಿಸುವುದರಿಂದ ಅವರಿಗೆ ಯಾರ ಹೆದರಿಕೆಯೂ ಇಲ್ಲ. ಹೀಗಾಗಿ ರಾಜ್ಯದ ಪಾಲನ್ನು ಪಡೆಯಲು ಜನರೇ ಹೋರಾಟಕ್ಕೆ ಇಳಿಯಬೇಕಾಗಿದೆ.

ರಾಜ್ಯದ ಮತ್ತು ಕೇಂದ್ರದ ಬಿಜೆಪಿ ನಾಯಕರ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ ನಾಯಕರನ್ನು ಪ್ರಧಾನಿ ಮತ್ತು ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಅದೇನೇ ಇರಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಿವಾರಣೆಯಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)