varthabharthiಅನುಗಾಲ

ದಿಲ್ಲಿಯಲ್ಲಿ...

ವಾರ್ತಾ ಭಾರತಿ : 26 Feb, 2020
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕನ್ನಡದವರೇ ಆದ ಮತ್ತು ದಿಲ್ಲಿಯಲ್ಲಿ ಕೆಲ ಕಾಲವಿದ್ದ ಮತ್ತು ದಿಲ್ಲಿಯಲ್ಲಿ ಹುಟ್ಟಿ ದೇಶಾದ್ಯಂತ ತನ್ನ ಜ್ವಾಲೆಯನ್ನು ವ್ಯಾಪಿಸಿದ 1975ರ ತುರ್ತುಸ್ಥಿತಿಯ ನೋವನ್ನು ಮನಸಾರೆ ಪರಿತಪಿಸಿದ ಗೊಪಾಲಕೃಷ್ಣ ಅಡಿಗರ ಕವನ ‘ದಿಲ್ಲಿಯಲ್ಲಿ’. 8 ಭಾಗಗಳಲ್ಲಿ ಹಬ್ಬಿದ 340 ಸಾಲುಗಳ ಈ ಸ್ವಚ್ಛಂದ ಕವಿತೆಯನ್ನು ಬರೆದ ದಿನಾಂಕ 10.10.1972 ಎಂದು ನಮೂದಾಗಿದ್ದರೂ ಇದನ್ನು ಓದಿದರೆ ಇದು 1975ರ ತುರ್ತುಸ್ಥಿತಿಯನ್ನೂ ಇಂದಿನ ದಿಲ್ಲಿಯನ್ನೂ ಗುರಿಯಾಗಿಟ್ಟುಕೊಂಡು ಬರೆದಂತಿದೆ. ಅಡಿಗರಿಗೆ ಈ ಭಯಾನಕ ಸ್ಥಿತಿ-ಗತಿಗಳ ಪೂರ್ವಸೂಚನೆಯಿತ್ತೇ? ರವಿ ಕಾಣದ್ದನ್ನು ಕವಿ ಕಂಡನೇ?


ಜಗದೀಶ್ವರ ಡೊನಾಲ್ಡ್ ಟ್ರಂಪ್ ತಮ್ಮ 36 ಘಂಟೆಗಳ ಭಾರತ ಭೇಟಿಯನ್ನು ಮುಗಿಸಿ ಮರಳಿದ್ದಾರೆ. ‘ತೇಜೋಮಹಾಲಯ’ವನ್ನು ಟ್ರಂಪ್ ದಂಪತಿ ನೋಡಿದ್ದಾರೆ. ಅವರ ಪಾದಧೂಳಿಯನ್ನು ಶಿರಕ್ಕೆ ಹಚ್ಚಿಕೊಂಡು ದಿಳ್ಳೀಶ್ವರರು ಧನ್ಯರಾದರು. ಉಭಯ ದೇಶಗಳ ನಡುವಣ ಅಮೆರಿಕಸ್ನೇಹಿ ವ್ಯಾಪಾರವೃದ್ಧಿಯಿಂದಾಗಿ ಸಂಬಂಧವೂ ವೃದ್ಧಿಯಾಯಿತು. ಏನು ಧನ್ಯಳೋ ಲಕುಮಿ ಎಂಬುದನ್ನು ತಾಯಿ ಭಾರತಿ ಎಂದು ಬದಲಾಯಿಸಿಕೊಂಡರೆ ಎಲ್ಲ ಸರಿಯಾಗುತ್ತದೆ.

ಕಳೆಯಿತಾ ಟ್ರಂಪ್ ರಾತ್ರಿ. ಆದರೆ ಅದರ ಮರಣೋತ್ತರ ಪರೀಕ್ಷೆ ಮಾಡುವುದಾದರೆ ಬೇಕಷ್ಟಿದೆ. ಈ ದೇಶದಲ್ಲಿ ಅಷ್ಟೊಂದು ರಾಜ್ಯಗಳಿದ್ದು, ಗುಜರಾತ್‌ಗಿಂತ ಮೊದಲೇ ವಿಶ್ವದ ಭೂಪಟದಲ್ಲಿ ಗುರುತಾಗಿದ್ದ ಪಟ್ಟಣ, ನಗರಗಳನ್ನು ಬಿಟ್ಟು ಗುಜರಾತನ್ನೇ ಆಯ್ಕೆ ಮಾಡಿದ್ದರ ಕಾರಣ ಇವುಗಳೆಲ್ಲ ಒಂದು ಚಿದಂಬರ ರಹಸ್ಯವಾಗುಳಿಯಲಿದೆ. ಇರಲಿ; ಗಾಂಧಿಯ ಗುಜರಾತ್‌ಗೆ ವಿದೇಶಿಯರು ಬಂದರಲ್ಲ, ಭಾರತ ಧನ್ಯ. ಆದರೆ ಸಬರಮತಿಗೆ ಬಂದೂ ಟ್ರಂಪ್‌ಗೆ ಮತಿ ಜಾಗೃತವಾಗಲಿಲ್ಲ. ಅಲ್ಲಿನ ಸಂದರ್ಶನ ಪುಸ್ತಕದಲ್ಲಿ ಅವರು ಗಾಂಧಿಯನ್ನು ಸ್ಮರಿಸದೆ ಮೋದಿಯನ್ನು ಸ್ಮರಿಸಿದರು. ಇದಕ್ಕೆ ವ್ಯಥೆ ಪಡಬೇಕಾದ್ದಿಲ್ಲ. ಟ್ರಂಪ್‌ಗೆ ಗಾಂಧಿಯ ಕುರಿತು ತಿಳಿವಳಿಕೆಯಿರಲಿಕ್ಕಿಲ್ಲ; ಇರಬೇಕಾದ್ದಿಲ್ಲ. ಆತ ವ್ಯಾಪಾರಸ್ಥ. ಗುಜರಾತ್ ಹೇಳೀಕೇಳೀ ವ್ಯಾಪಾರಸ್ಥರ ಪ್ರದೇಶ. ಮಾರವಾಡಿ ರಾಜ್ಯ. ಆದ್ದರಿಂದ ವ್ಯಾಪಾರ ವೃದ್ಧಿಗೆ ಎಷ್ಟುಬೇಕೋ ಅಷ್ಟನ್ನು ಮಾತ್ರ ಗುರುತು ಹಾಕಿಕೊಂಡಿದ್ದಾರೆ. ನಮ್ಮ ಪ್ರಧಾನಿಯವರಿಗೆ ಗುಜರಾತೇ ಭಾರತ. ತನ್ನ ಮುಖ್ಯಮಂತ್ರಿತ್ವದ ಕರ್ಮಭೂಮಿಯೂ ರಣಭೂಮಿಯೂ ಆಗಿರುವ ಗುಜರಾತ್‌ನ ಮಣ್ಣಲ್ಲಿ ವಿದೇಶಿಯರು ನಡೆದರೆ ತಾವೂ ಧನ್ಯರೆಂದೇ ತರ್ಕ.

ಅಲ್ಲಿನ ಏಕತಾ ಪ್ರತಿಮೆಯನ್ನು ಅಮೆರಿಕದ ಸ್ವಾತಂತ್ರ್ಯ ಪ್ರತಿಮೆಯೊಂದಿಗೆ ಸಮೀಕರಿಸಿ ಪ್ರಧಾನಿ ಭಾಷಣ ಮಾಡಿದರು. ಆದರೆ ಟ್ರಂಪ್ ಯಾಕೋ ನಮ್ಮ ಏಕತೆಯನ್ನು ಸಂದರ್ಶಿಸುವ ಮನಸ್ಸು ಮಾಡಲಿಲ್ಲ. ತನ್ನ ವ್ಯಾಪಾರ ಕುದುರಿಸಲು ಎಷ್ಟು ಬೇಕೋ ಅಷ್ಟು ಹೊಗಳಿಕೆಯ ಜಾಹೀರಾತನ್ನು ಮಾಡಿದರು. ಒಟ್ಟಿನಲ್ಲಿ ಉಭಯತರರೂ ಮಾಡಿದ್ದೆಂದರೆ ತಮ್ಮ ತಮ್ಮ ದೇಶದಲ್ಲಿ ತಮ್ಮ ತಮ್ಮ ಜನಪ್ರಿಯತೆಯನ್ನು, ವರ್ಚಸ್ಸನ್ನು ಹೆಚ್ಚಿಸುವ ಯತ್ನ. ಇದರಲ್ಲಿ ಅಂತರ್‌ರಾಷ್ಟ್ರೀಯತೆಯಿರಲಿಲ್ಲ. ಉಭಯತರರ ರಾಷ್ಟ್ರೀಯತೆಯಿತ್ತು. ಟ್ರಂಪ್ ಅವರ ಕಾರಿನ ಧೂಳು, ವಿಮಾನದ ಹೊಗೆ, ಇನ್ನೂ ಮರೆಯಾಗಿಲ್ಲ. ಸಿರಿವಂತರ ಭೇಟಿ ಮುಗಿದರೂ ಗುಜರಾತ್‌ನ ಮುಖ್ಯರಸ್ತೆಗಳ ಬದಿಗಳಲ್ಲಿನ ಭಾರತದ ಬಡತನದ ಗೋಡೆ ಬೀಳದು. ಈ ಬಾರಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಗೆದ್ದರೆ ಅದರಲ್ಲಿ ಭಾರತದ ಪಾತ್ರವು ಅನನ್ಯ. ಅಮೆರಿಕದಲ್ಲಿ ಪ್ರಧಾನ ಮಂತ್ರಿಯೆಂಬ ಹುದ್ದೆಯಿಲ್ಲ. ಇದ್ದಿದ್ದರೆ ನಮ್ಮ ಪ್ರಧಾನಿಗೆ ಅಲ್ಲಿಯ ಅಧ್ಯಕ್ಷರು ಆ ಹುದ್ದೆಯನ್ನು ನೀಡುತ್ತಿದ್ದರೇನೋ? ಪುರಾಣದ ಶೈಲಿಯಲ್ಲಿ ‘‘ಕೇಳು ಜನಮೇಜಯ’’ ಎಂದೋ, ‘‘ಲವನೆ ಕೇಳ್’’ ಎಂದೋ ನಾವು ಮತ್ತೆ ಭಾರತವನ್ನು ನೆನಪಿಸಿದರೆ ಟ್ರಂಪ್ ಭೇಟಿಯ ಉತ್ತರಾರ್ಧದಲ್ಲಿ ದಿಲ್ಲಿಯ ಭೇಟಿ. ಗುಜರಾತ್‌ನ ಹಾಗೆ ದಿಲ್ಲಿಯ ಕೆಂಪುಕೋಟೆಯಲ್ಲಿ ಕೇಸರಿಕೋಟೆ ಸೃಷ್ಟಿಯಾಗಲಿಲ್ಲ.

ಕುತುಬ್‌ಮಿನಾರ್ ಸಹಿತ ಎಲ್ಲ ಐತಿಹಾಸಿಕ ಸ್ಮಾರಕಗಳು ಉಳಿದು ಹಕ್ಕಿ ಹಾರುತಿದೆ ನೋಡಿದಿರಾ ಎಂದು ಪ್ರಶ್ನಿಸಿದವು. ಆದರೆ ಇದೇ ಸಮಯದಲ್ಲಿ ಭೀಕರ, ಭಯಾನಕ ಹಿಂಸೆ ದಿಲ್ಲಿಯಲ್ಲಿ ನಡೆಯುತ್ತಿದ್ದರೂ ಅದರ ಸುಳಿವು ಟ್ರಂಪ್ ಅವರಿಗೆ ಅರಿವಾಗದಂತೆ ಅಭೇದ್ಯ ಮಾಧ್ಯಮಕೋಟೆ ಸೃಷ್ಟಿಯಾಗಿತ್ತು. ಒಂದು ವೇಳೆ ಟ್ರಂಪ್‌ಗೆ ಇದರ ಅರಿವಾಗಿದ್ದರೂ ಅವರ ವ್ಯಾಪಾರೀ ಬುದ್ಧಿ ಇದನ್ನು ಅಭಿವ್ಯಕ್ತಿಗೊಳಿಸಲಿಲ್ಲ. ಅಲ್ಲಿಗೆ ಎಲ್ಲವೂ ಶಾಂತಸಾಗರವಾಯಿತು. ಬೆಂಕಿಯಿಲ್ಲದೆಯೂ ಉರಿಯುವ ಉಷ್ಣತೆಯನ್ನು ಹೊಂದಿರುವ ದಿಲ್ಲಿ ಈಗ ವಸ್ತುಶಃ ಧಗಧಗ ಉರಿಯುತ್ತಿದೆ. ದಿಲ್ಲಿಯನ್ನು ವರ್ಣಿಸುವ, ವೈಭವೀಕರಿಸುವ, ಹೊಗಳುವ, ಹಳಿಯುವ ಅನೇಕ ಕೃತಿಗಳಿವೆ. ಇವೆಲ್ಲದರ ಇತಿಹಾಸವೇ ಒಂದು ಅಧ್ಯಯನಕ್ಕೆ ವಸ್ತುವಾಗಬಹುದು. ಸದ್ಯಕ್ಕೆ ನನ್ನ ಮುಂದೆ ದಿಲ್ಲಿಯನ್ನು ನೆನಪಿಸುವ ಮೂರು ಕೃತಿಗಳಿವೆ: ಸಾದತ್ ಹಸನ್ ಮಾಂಟೋ ಅವರ ಉರ್ದು ಮೂಲದ ಮತ್ತು ನಾನು ಇಂಗ್ಲಿಷ್‌ನಲ್ಲಿ ಓದಿದ "A Girl from Delhi’(ದಿಲ್ಲಿಯ ಹುಡುಗಿ) ಎಂಬ ಕತೆ; ಕನ್ನಡ ಕವಿ ಗೋಪಾಲಕೃಷ್ಣ ಅಡಿಗರ ದಿಲ್ಲಿಯಲ್ಲಿ ಕವನ ಮತ್ತು ಖುಶ್ವಂತ್ ಸಿಂಗ್ ಅವರ ‘ದಿಲ್ಲಿ’ (Delhi) ಎಂಬ ಇಂಗ್ಲಿಷ್ ಕಾದಂಬರಿ. ಮಾಂಟೋ ಭಾರತ-ಪಾಕಿಸ್ತಾನ ವಿಭಜನೆಯ ಕುರಿತು ಬರೆದ ಕತೆಗಳು ಸತ್ಯದ ಕಾಣ್ಕೆಯಂತಿವೆ. ಅವು ಸತ್ಯವೊಂದನ್ನೇ ದರ್ಶಿಸುವ ವಾಸ್ತವದಂತಿರುವ ಕತೆಗಳು ಇಲ್ಲವೇ ಕತೆಗಳಂತಿರುವ ವಾಸ್ತವಗಳು.

ಬೆಚ್ಚಿ ಬೀಳಿಸುವ ದುರ್ಘಟನೆಗಳನ್ನು ಅವರು ನಿರೂಪಿಸಿದ ರೀತಿ ಅಪ್ರತಿಮ. ನಾನು ಉಲ್ಲೇಖಿಸಿದ ಅವರ ಕತೆಯಲ್ಲಿ ದಿಲ್ಲಿಯ ಕೆಂಪುದೀಪದಡಿಯ ಒಬ್ಬಳು ಹುಡುಗಿ ವಿಭಜನೆಯ ಆನಂತರ ದಿಲ್ಲಿಯಲ್ಲಿ ನಡೆದ ಮತೀಯ ಹಿಂಸೆ ಮತ್ತು ಅದರಿಂದ ಭೀತಮನಳಾದ ಆಕೆ ಹಠ ಹಿಡಿದು (ಮತ್ತು ಸಕಾರಣವಾಗಿ) ತನ್ನ ಸಂಸಾರದೊಂದಿಗೆ ಪಾಕಿಸ್ತಾನದ ಲಾಹೋರ್‌ಗೆ ವಲಸೆಹೋಗುವ ಮತ್ತು ವ್ಯಂಗ್ಯವೆಂಬಂತೆ ಅಲ್ಲಿ ಎಲ್ಲರಂತೆ ಬದುಕುವ ಆಸೆ ಹೊತ್ತ ಈ ಹುಡುಗಿ ಮಧ್ಯವರ್ತಿಯೊಬ್ಬಳ ತಂತ್ರಕ್ಕೆ ಬಲಿಯಾಗಿ ಮತ್ತೆ ವೇಶ್ಯಾವಾಟಿಕೆಗೆ ಮಾರಲ್ಪಡುವ ದುರ್ಭರ ಸ್ಥಿತಿಯನ್ನು ಅನುಭವಿಸುವ ರೀತಿ ಮತ್ತು ಕೊನೆಯ ಹಂತದಲ್ಲಿ ಅದರಿಂದ ಪಾರಾಗುವ ಸಂಗತಿಯಿದೆ. ಸದ್ಯಕ್ಕೆ ಇದರಲ್ಲಿ ಮೊದಲ ಭಾಗ ಮಾತ್ರ ಪ್ರಸ್ತುತ: ದಿಲ್ಲಿಯಲ್ಲಿ ಈಗ ಮತ್ತು 1947 ಹಾಗೂ 1984ರಲ್ಲಿ ನಡೆದಿರಬಹುದಾದ ದೌರ್ಜನ್ಯ, ಹತ್ಯಾಕಂಡ, ರಕ್ತದ ಮಡುಗಳ ಸೃಷ್ಟಿ ಇವು ದೀರ್ಘ ಅಂತರವಿಲ್ಲದೆ ಪದೇಪದೇ ಇತಿಹಾಸ ಮರುಕಳಿಸುವುದನ್ನು ವಿವರಿಸುತ್ತದೆ. ಮತೀಯ ಹತ್ಯೆಗಳು ನಿಲ್ಲುವ ಕುರುಹೇ ಕಾಣದು; ದಿಲ್ಲಿಯಲ್ಲಿ ತಾವು ಸುರಕ್ಷಿತರಲ್ಲವೆಂಬ ಭಾವ ಮುಸ್ಲಿಮರಿಗೆ ಬಂದಿದೆ; ಇದು ಹಿಂದೂ ದೇಶವಾಗಲಿದೆ; ಅವರು ಮುಸ್ಲಿಮರ ಅಸ್ತಿತ್ವವನ್ನು ಇಷ್ಟಪಡುವುದಿಲ್ಲ; ಆದರೆ ಇನ್ನೂ ಕೆಲವಾದರೂ ಒಳ್ಳೆಯ ಹಿಂದೂಗಳಿದ್ದಾರೆ; ಮುಸ್ಲಿಮರ ಬದುಕು ಹಿಂದೂ ಗಿರಾಕಿಗಳ ಮೇಲೆ ಅವಲಂಬಿಸಿದೆ; ಪಾಕಿಸ್ತಾನಕ್ಕೆ ಹೋದರೂ ಅಲ್ಲಿ ಕ್ಷೇಮವನ್ನು ಚಿಂತಿಸುವವರಿಲ್ಲ; ಪೊಲೀಸು ರಕ್ಷಣೆ ಪಡೆಯಬಹುದು; ಆದರೂ ದುಷ್ಟರು ಇದನ್ನು ಲೆಕ್ಕಿಸದೆ ತಾವೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ; -ಹೀಗೆ ಪರ-ವಿರೋಧ ನಿಲುವುಗಳ, ವಾದಗಳ ವಿವರಣೆ ಸಾಗುತ್ತದೆ. ಯಾರೋ ಒಬ್ಬ ಮುಸ್ಲಿಮ್ ಅವಳ ಮನೆಯ ಎದುರೇ ಕೊಲೆಯಾಗುತ್ತಾನೆ. ಅದಕ್ಕೆ ಇತರರು ನೀಡುವ ಸಮಾಧಾನ: ಇದೇನೋ ಮೊದಲ ಅಥವಾ ಕೊನೆಯ ಸಾವಲ್ಲವಲ್ಲ! ಇವು ನಡೆಯುತ್ತಲೇ ಇರುತ್ತವೆ!

ಕನ್ನಡದವರೇ ಆದ ಮತ್ತು ದಿಲ್ಲಿಯಲ್ಲಿ ಕೆಲ ಕಾಲವಿದ್ದ ಮತ್ತು ದಿಲ್ಲಿಯಲ್ಲಿ ಹುಟ್ಟಿ ದೇಶಾದ್ಯಂತ ತನ್ನ ಜ್ವಾಲೆಯನ್ನು ವ್ಯಾಪಿಸಿದ 1975ರ ತುರ್ತುಸ್ಥಿತಿಯ ನೋವನ್ನು ಮನಸಾರೆ ಪರಿತಪಿಸಿದ ಗೊಪಾಲಕೃಷ್ಣ ಅಡಿಗರ ಕವನ ‘ದಿಲ್ಲಿಯಲ್ಲಿ’. 8 ಭಾಗಗಳಲ್ಲಿ ಹಬ್ಬಿದ 340 ಸಾಲುಗಳ ಈ ಸ್ವಚ್ಛಂದ ಕವಿತೆಯನ್ನು ಬರೆದ ದಿನಾಂಕ 10.10.1972 ಎಂದು ನಮೂದಾಗಿದ್ದರೂ ಇದನ್ನು ಓದಿದರೆ ಇದು 1975ರ ತುರ್ತುಸ್ಥಿತಿಯನ್ನೂ ಇಂದಿನ ದಿಲ್ಲಿಯನ್ನೂ ಗುರಿಯಾಗಿಟ್ಟುಕೊಂಡು ಬರೆದಂತಿದೆ. ಅಡಿಗರಿಗೆ ಈ ಭಯಾನಕ ಸ್ಥಿತಿ-ಗತಿಗಳ ಪೂರ್ವಸೂಚನೆಯಿತ್ತೇ? ರವಿ ಕಾಣದ್ದನ್ನು ಕವಿ ಕಂಡನೇ?

ದಿಲ್ಲಿಯ ಒಳಹೊರಗನ್ನು ಕವಿ ಚಿತ್ರಿಸುತ್ತಾರೆ: ಒಳಹೊರಗುಗಳೆಂಬ ವ್ಯತ್ಯಾಸವೇ ತುಂಡು ಎಂದು ಹೊಸ್ತಿಲಿನ ರೂಪಕದೊಂದಿಗೆ ವ್ಯಂಗ್ಯವಾಗಿ ಕಾಣುತ್ತಾರೆ. ಅಲ್ಲಿ ಇಡೀ ದೇಶದ ಜನರು ಮಿಳಿತವಾಗಿದ್ದಾರೆ. ಆದ್ದರಿಂದ ಇದನ್ನು ದಿಲ್ಲಿಯೆಂದರೂ ಒಂದೆ; ಕಲ್ಕತ್ತ, ಮದರಾಸು, ಬೆಂಗಳೂರೆಂದರೂ ಒಂದೆ. ಭಾವೈಕ್ಯಕ್ಕೆ ಒಳ್ಳೆಯ ಉದಾಹರಣೆ ಎನ್ನುತ್ತಾರೆ ಕವಿ. ಇಲ್ಲಿನ ಜನರ ಮನಸ್ಥಿತಿ ಹೇಗಿದೆ? ‘‘ಮನಸ್ಸು ಸಾಯುತ್ತಿದ್ದು ಬರಿತೊಗಲ ತೆವಲು, ಕೊಂಬಿನ ತುರಿಕೆ ಇದ್ದಾಗ್ಗೆ ಭಾಷೆಯ ತೊಡಕು ಲೆಕ್ಕಕ್ಕಿಲ್ಲ.’’ ಮುಂದೆ ಕವಿ ದಿಲ್ಲಿಯೆಂಬ ನಾಟಕಶಾಲೆಯ ಚಿತ್ರವನ್ನು ವಿನೋದ-ವ್ಯಂಗ್ಯದೊಂದಿಗೆ ಕಾಣಿಸುತ್ತಾರೆ. ದಿಲ್ಲಿಯಲ್ಲಿ ವಿಶ್ವದ ಮೂಲೆಮೂಲೆಯಿಂದ ಬರುವವರು ಮತ್ತು ದೇಶದ ಮೂಲೆಗಳಿಂದ ಬರುವವರು ಹೀಗೆ ಎಲ್ಲವೂ ಅಯೋಮಯದಂತಿರುವುದನ್ನು ಕವಿ ಕಾಣಿಸುತ್ತಾರೆ. ದೇಶದ ಅಧಿಕಾರ ಕೇಂದ್ರವು ಕೇಂದ್ರಾಧಿಕಾರದ ತಾಣವೂ ಹೌದು. ಮನುಷ್ಯನ ಪರಮ ಅಹಂಕಾರವನ್ನು ಬಿಂಬಿಸುವಂತೆ ‘‘ಅಗಗೊ ಹೋಹೊ ಬಂತು ಬಂತು ನವೇಂದ್ರ ನಹುಷನ ದಂಡಿಗೆ;’’ ಎಂಬ ಸಾಲುಗಳಿವೆ. ಅಧಿಕಾರದ ದರ್ಪವನ್ನು ‘‘ತೊಡೆ ಇನ್ನು ಮುರಿದಿಲ್ಲ ಏಕೆ ತಕರಾರು?’’ ಎನ್ನುತ್ತಾರೆ.

ರಾಜಕೀಯದ ಅನೈತಿಕತೆಯ ಹೊಲಸನ್ನು ‘‘ನೋಡಲಿಕ್ಕೊಳ್ಳೊಳ್ಳೆ ಹಗಲು ವೇಷಕ್ಕೇನು ಯಾವಾಗಲೂ ನಮಗೆ ಕೊರತೆಯಿಲ್ಲ; ಬುದ್ಧ ಬೇಕೇ ಬುದ್ಧ, ಗಾಂಧಿ ಬೇಕೇ ಗಾಂಧಿ, ಧರ್ಮರಾಯನೆ, ಕೃಷ್ಣ ಪರಮಾತ್ಮನೇ? ಬೇಗಡೆಯಲಂಕಾರ, ಗಡ್ಡ ಮೀಸೆ, ಬಿಲ್ಲು, ಬಾಣ, ರಾಕ್ಷಸಪಗಡೆ, ದಿಳ್ಳಿಯೇ ಮಾರುವೇಷಗಳೊಂದು ಮಳಿಗೆ, ಸಾರಿಗೆ ನಿರಾತಂಕ ಹಳ್ಳಿಗಳ ವರೆಗೆ, ಪಕ್ಷ ಪಕ್ಷಾಂತರದ ಗೋಸುಂಬೆಗಳಿಗೆ.’’ ಹಸ್ತಿನಾಪುರದ ಉದಾಹರಣೆಯೊಂದಿಗೆ (ಅಡಿಗರ ಬಹುತೇಕ ಎಲ್ಲ ಕವಿತೆಗಳಲ್ಲೂ ಪೌರಾಣಿಕ ಪ್ರತಿಮೆಗಳು ಸಮೃದ್ಧವಾಗಿ ಬರುತ್ತವೆ!) ‘‘ಶಕುನಿ ಮಾಮನ ಕಿವಿಗೆ ಬಡಾಭಾಯಿ ತುಟಿ’’ , ಅಥವಾ ‘‘ಯಾರ ಕಣ್ಣಿಗೂ ಬೀಳದಂತೆ ಎಲ್ಲೋ ಕುಳಿತು ಸೂತ್ರವಾಡಿಸಿದನು ಬಡಾಭಾಯಿ. ನೆಣಮೊಗದ ಕಿವಿಯಿಂದ ಕಿವಿವರೆಗೆ ಹೆಣನಗೆಯ ಹಿಗ್ಗಲಿಸಿ ಮಗ್ಗುಲಾದನು ಬೇರೆ ಸುತ್ರಕ್ಕೆ ಕೈಚಾಚಿ.’’ ಎನ್ನುವ ಮಾತುಗಳು ಅಧಿಕಾರ ಕೇಂದ್ರವನ್ನು ನಿಯಂತ್ರಿಸುವ ಅಧಿಕಾರೇತರ ಶಕ್ತಿಗಳ ನಿಗೂಢ ಜಾಲವನ್ನು ಹೇಳುತ್ತವೆ.

ದಿಲ್ಲಿಯೊಳಗಿರುವ ಕುರುಕ್ಷೇತ್ರವು ಮತ, ಧರ್ಮ, ವರ್ಗ, ಪಕ್ಷರಾಜಕೀಯ ಹೀಗೆ ಹತ್ತು ಹಲವು ಹಂತಗಳಲ್ಲಿ ಕಾರ್ಯವೆಸಗುತ್ತದೆ. ಕೊನೆಗೂ ಇವುಗಳ ಗುರಿ ವರ್ತಮಾನದ ನಿರ್ನಾಮ. ಇಲ್ಲಿ ರಕ್ಷೆ, ರಕ್ಷಣೆಯಿಲ್ಲ. ‘‘ಪಾಂಡವಗ್ರಹಣಕ್ಕೆ ಮುಕ್ತಿಯಿಲ್ಲ.’’ ಎಲ್ಲವನ್ನು ಎಲ್ಲರನ್ನೂ ಸಲಹುವ ಕೃಷ್ಣನ ಕತೆಯೂ ಇದೇ: ‘‘ತನ್ನ ಪಂಚಪ್ರಾಣ ಹುಡುಕಿ ಹೊರಟನೆ ಕೃಷ್ಣ? ಶೋಕ ಗದ್ಗದ ಮೂಕ ಪಾಂಚಜನ್ಯ:’’ ಅಷ್ಟೇ ಅಲ್ಲ, ಮುಗ್ಧ ಜನರ ಗತಿಗೆ ಕವಿ ಶೋಕಿಸುತ್ತಾರೆ: ‘‘ಒಂದು ಇನ್ನೊಂದನ್ನು ಕುಕ್ಕಿ ಸೊಕ್ಕಿ ಇಕ್ಕಿ ಮುಕ್ಕುತ್ತಿರುವ ಹೆಣದ ಬಣವೆಯ ಕೆಳಗೆ ಬಿದ್ದ ಮಗುವೇ, ದಟ್ಟ ಕತ್ತಲಿನಲ್ಲಿ ಪುಟ್ಟಡಿಗೆ ಎಲ್ಲಿದೆ ಅಭಯ? ಸಣ್ಣ ದೀಪಕ್ಕಾವ ರಕ್ಷೆ, ನಿಗಮ?’’ ಒಳ್ಳೆಯದಕ್ಕೆ ಬಹುಕಾಲ ಕಾಯಬೇಕೆನ್ನುತ್ತಾರೆ ಕವಿ. ಹಿರಣ್ಯಕಶಿಪು, ಶಿಶುಪಾಲ ವಧೆ, ಮ್ಯಾಕ್‌ಬೆತ್‌ನ ಕೊನೆ, ಮುಂತಾದ ಹಲವು ಪ್ರತಿಮೆಗಳ ಮೂಲಕ ಸರಿಯಾಗಬಹುದೆಂಬ ಆಶಯವನ್ನೂ ತೋರುತ್ತಾರೆ. ಕವಿಗೆ ದಿಲ್ಲಿ ಇಂದ್ರಪ್ರಸ್ಥದಂತೆ ಕಂಡಿಲ್ಲ.

ಈ ಕವಿತೆ ಅಡಿಗರ ಅತ್ಯುತ್ತಮ ಕವಿತೆಯೆಂದು ಪ್ರಸಿದ್ಧವಾಗದಿದ್ದರೂ ಅವರ ಸಮಕಾಲೀನ ತಲ್ಲಣಗಳ ಬಹುವ್ಯಾಪಕ ಶೋಧ ಇಲ್ಲಿದೆ. ಖುಶ್ವಂತ್ ಸಿಂಗ್ ತಮ್ಮ ದಿಲ್ಲಿ ((Delhi)) ಎಂಬ ಹೆಸರಿನ ಆಂಗ್ಲ ಕಾದಂಬರಿಯಲ್ಲಿ ದಿಲ್ಲಿಯ ಚರಿತ್ರೆಯನ್ನು ಸಂಶೋಧಿಸುತ್ತಾರೆ. ಕಾದಂಬರಿ ಪ್ರಥಮ ವಿಭಕ್ತಿಯಲ್ಲಿದ್ದು ದಿಲ್ಲಿಯನ್ನು ಆಳದಿಂದ ಅಗೆದು ವರ್ತಮಾನದ ವರೆಗೆ ಎಳೆತಂದಿದ್ದಾರೆ. ಕೃತಿಯ ಮೊದಲಿಗೆ ಮಿರ್ಝಾ ಘಾಲಿಬ್‌ನ ಒಂದು ಪದ್ಯದ ತುಣುಕುಗಳು ದಿಲ್ಲಿಯ ಕುರಿತ ಲಾಗಾಯ್ತಿನ ನಂಬಿಕೆಯನ್ನು ಹೇಳುತ್ತವೆ: ‘‘ನಾನು ಕೇಳಿದೆ ನನ್ನಾತ್ಮವನು: ದಿಲ್ಲಿಯೆಂದರೇನು? ಅವಳು ಉತ್ತರಿಸಿದಳು: ವಿಶ್ವವು ದೇಹ. ಮತ್ತು ದಿಲ್ಲಿ ಅದರ ಜೀವಾಳ.’’ ಕಾಲ, ದೇಶ ಮತ್ತು ಚರಿತ್ರೆಯ ಈ ಪಯಣವು ರೋಚಕ; ಕೆಲವೆಡೆ ಖುಶ್ವಂತ್ ಸಿಂಗ್ ಅವರಿಗೆ ಸಹಜವಾಗಿರುವ ಶೃಂಗಾರ ಇಣುಕುತ್ತವೆ. ಇಲ್ಲೂ ಸಾಮ್ರಾಜ್ಯಗಳಳಿದು ದೊರೆಗಳು ಮಣಿದು ಮನುಷ್ಯರಷ್ಟೇ ಉಳಿಯುವ ಕಾಲಚಕ್ರದ ಅನಿಯಂತ್ರಿತ ರಥಯಾತ್ರೆಯಿದೆ. ಇದನ್ನೋದಿ ಮುಗಿಸಿದಾಗ ದಿಲ್ಲಿಯೆಂದರೆ ಒಂದು ನಗರವಷ್ಟೇ ಅಲ್ಲ, ರಾಜಧಾನಿಯಷ್ಟೇ ಅಲ್ಲ, ಚರಿತ್ರೆಯ ಕುದುರೆಗಳ ಖುರಪುಟಗಳ ಪುಟಬಂಗಾರವೆನಿಸಿದರೆ ಅಚ್ಚರಿಯಿಲ್ಲ. ಕಾದಂಬರಿಯಾಗಿ ಅತ್ಯುತ್ತಮವೆನಿಸದಿದ್ದರೂ ದಿಲ್ಲಿಯ ವಿವಿಧ ಅಧ್ಯಾಯಗಳನ್ನು ರಸಿಕತೆಯಿಂದ ವರ್ಣಿಸುವ ಒಂದು ಸಾರ್ಥವೆನ್ನುವುದಕ್ಕೆ ಅಡ್ಡಿಯಿಲ್ಲ.
ರಾಜಕೀಯದ ಹೊರತಾಗಿ ಬದುಕಲು ಸಾಧ್ಯವಿಲ್ಲದ ಮತ್ತು ದಿಲ್ಲಿಯ ಹಿಂಸಾಚಾರಕ್ಕೆ ಬಲಿಯಾದವರ ಕುರಿತು ಮನಸ್ಸು ಕುದಿಯುವ ಈ ಹೊತ್ತಿನಲ್ಲಿ ಕವಿಹೃದಯದ ಆತಂಕ-ಆಶಯಗಳಷ್ಟೇ ನಮಗೆ ಸಮಾಧಾನ ನೀಡಬಲ್ಲವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)