varthabharthi

ವಿಶೇಷ-ವರದಿಗಳು

ಮುಂದುವರಿದಿರುವ ಪ್ರಜಾತಾಂತ್ರಿಕ ನಾಯಕರ ಬಂಧನಗಳು ಜನರ ಒಳಗೊಳ್ಳುವಿಕೆಯ ಮತ್ತು ಮರುಸಂಧಾನದ ಅವಕಾಶಗಳನ್ನು ಕುಗ್ಗಿಸುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಬಂಧನಗಳ ರಾಜಕಾರಣ

ವಾರ್ತಾ ಭಾರತಿ : 28 Feb, 2020

ಈ ನಾಯಕರು ಸಾರ್ವಜನಿಕ ಭದ್ರತೆಗಾಗಲೀ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗಾಗಲೀ ಆತಂಕವುಂಟು ಮಾಡಲಿದ್ದಾರೆಂದು ಸಾಬೀತು ಪಡಿಸುವಂತಹ ಕನಿಷ್ಠ ಪುರಾವೆಗಳನ್ನೂ ಒದಗಿಸಿಲ್ಲ. ವಾಸ್ತವದಲ್ಲಿ ಎನ್‌ಸಿ ಮತ್ತು ಪಿಡಿಪಿ ನಾಯಕರ ಮೇಲೆ ಹೊರಿಸಿರುವ ಕೆಲವು ಆರೋಪಗಳು ಅತಿ ಅಸಂಬದ್ಧವಾಗಿದ್ದರೆ ಇನ್ನು ಕೆಲವು ಉದ್ದೇಶಪೂರ್ವಕ ಹಾಗೂ ಅನುಕೂಲಸಿಂಧು ಆಪಾದನೆಗಳಾಗಿವೆ. ಡೊಸಿಯರ್‌ಗಳ ಪ್ರಕಾರ ಈ ನಾಯಕರು ಕಾನೂನು ಮತ್ತು ಸುವ್ಯವಸ್ಥೆಗೆ ಅಷ್ಟೊಂದು ಆತಂಕವನ್ನು ಹುಟ್ಟುಹಾಕುವವರಾಗಿದ್ದಲ್ಲಿ ಈ ಮುಂಚೆಯೇ ಅವರನ್ನು ಪಿಎಸ್‌ಎ ಅಡಿ ಏಕೆ ಬಂಧಿಸಲಿಲ್ಲ?

ಜಮ್ಮು-ಕಾಶ್ಮೀರದ ರಾಜಕೀಯ ನಾಯಕರುಗಳ ಮೇಲೆ ಪಬ್ಲಿಕ್ ಸೇಫ್ಟಿ ಆ್ಯಕ್ಟ್ (ಪಿಎಸ್‌ಎ) ಅನ್ನು ಹೇರುವುದರ ಮೂಲಕ ಕೇಂದ್ರ ಸರಕಾರವು ಕಾಶ್ಮೀರದ ವಿಷಯದಲ್ಲಿ ಒಂದು ಪ್ರಜಾತಾಂತ್ರಿಕ ಹಾಗೂ ಅನುಸಂಧಾನದ ಧೋರಣೆಯನ್ನು ಅನುಸರಿಸುವ ಬಗ್ಗೆ ತನಗೆ ಕಿಂಚಿತ್ತೂ ಆಸಕ್ತಿಯಿಲ್ಲವೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಕಾಶ್ಮೀರದ ಹಲವಾರು ರಾಜಕೀಯ ನಾಯಕರು ಅದರಲ್ಲೂ ನಿರ್ದಿಷ್ಟವಾಗಿ ನ್ಯಾಷನಲ್ ಕಾನ್ಫರೆನ್ಸ್ಸ್‌ನ ಉಮರ್ ಅಬ್ದುಲ್ಲಾ ಹಾಗೂ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೆಹಬೂಬ ಮುಫ್ತಿಯವರನ್ನಂತೂ 2019ರ ಆಗಸ್ಟ್ಟ್‌ನಲ್ಲಿ ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದು ಮಾಡಿದಾಗಿನಿಂದಲೂ ಬಂಧನ/ಗೃಹಬಂಧನದಲ್ಲಿರಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ)ನ ಸೆಕ್ಷನ್ 107ರ ಪ್ರಕಾರ ಈ ರೀತಿ ಬಂಧನವನ್ನು ಮುಂದುವರಿಸುವುದು ಸಾಧ್ಯವಿಲ್ಲ. ಏಕೆಂದರೆ ಆ ವಿಧಿಯಡಿ ಬಂಧಿತ ವ್ಯಕ್ತಿಯನ್ನು ಕೋರ್ಟ್‌ನ ಮುಂದೆ ಹಾಜರುಪಡಿಸಬೇಕಿರುತ್ತದೆ. ಅಪರಾಧ ನೀತಿ ಸಂಹಿತೆಯು ನಿರ್ದೇಶಿಸುವ ಪ್ರಕ್ರಿಯೆಯನ್ನು ಅನುಸರಿಸಬಾರದೆಂಬ ಉದ್ದೇಶದಿಂದಲೇ ಸರಕಾರವು ಪಿಎಸ್‌ಎ ಕಾಯ್ದೆಯನ್ನು ಬಳಸಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರೂ ಮತ್ತು ಸಂಸತ್ ಸದಸ್ಯರೂ ಆದ ಫಾರೂಕ್ ಅಬ್ದುಲ್ಲಾ ಅವರನ್ನೂ ಸಹ 2019ರ ಸೆಪ್ಟೆಂಬರ್‌ನಿಂದ ಪಿಎಸ್‌ಎ ಅಡಿ ಬಂಧಿಸಿಡಲಾಗಿದೆ. ಸಂವಿಧಾನವು ವಿಧಿಸಿರುವ ಕಾನೂನಾಳ್ವಿಕೆಯನ್ನು ಪಾಲಿಸುತ್ತಾ ನಿರಂತರವಾಗಿ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಲೇ ಬಂದಿರುವ ಮುಖ್ಯಧಾರೆ ಪ್ರಜಾತಾಂತ್ರಿಕ ನಾಯಕರ ವಿರುದ್ಧ ಹರಿಬಿಟ್ಟಿರುವ ಈ ದಮನವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಈ ನಾಯಕರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕ್ರೋಡೀಕರಿಸಿರುವ ಡೊಸಿಯರ್ (ಬೇಹುಮಾಹಿತಿ ವರದಿ) ಈ ನಾಯಕರು ಸಾರ್ವಜನಿಕ ಭದ್ರತೆಗಾಗಲೀ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗಾಗಲೀ ಆತಂಕವುಂಟು ಮಾಡಲಿದ್ದಾರೆಂದು ಸಾಬೀತು ಪಡಿಸುವಂತಹ ಕನಿಷ್ಠ ಪುರಾವೆಗಳನ್ನೂ ಒದಗಿಸಿಲ್ಲ. ವಾಸ್ತವದಲ್ಲಿ ಎನ್‌ಸಿ ಮತ್ತು ಪಿಡಿಪಿ ನಾಯಕರ ಮೇಲೆ ಹೊರಿಸಿರುವ ಕೆಲವು ಆರೋಪಗಳು ಅತಿ ಅಸಂಬದ್ಧವಾಗಿದ್ದರೆ ಇನ್ನು ಕೆಲವು ಉದ್ದೇಶಪೂರ್ವಕ ಹಾಗೂ ಅನುಕೂಲಸಿಂಧು ಆಪಾದನೆಗಳಾಗಿವೆ. ಡೊಸಿಯರ್‌ಗಳ ಪ್ರಕಾರ ಈ ನಾಯಕರು ಕಾನೂನು ಮತ್ತು ಸುವ್ಯವಸ್ಥೆಗೆ ಅಷ್ಟೊಂದು ಆತಂಕವನ್ನು ಹುಟ್ಟುಹಾಕುವವರಾಗಿದ್ದಲ್ಲಿ ಈ ಮುಂಚೆಯೇ ಅವರನ್ನು ಪಿಎಸ್‌ಎ ಅಡಿ ಏಕೆ ಬಂಧಿಸಲಿಲ್ಲ? ತಮ್ಮ ಆರೋಪಕ್ಕೆ ಈ ನಾಯಕರ ಈ ಹಿಂದಿನ ಕೆಲವು ನಡೆಗಳನ್ನು ಪುರಾವೆಯಾಗಿ ಒದಗಿಸಲಾಗಿದೆ. ಹಾಗಿದ್ದಲ್ಲಿ ಇವೆಲ್ಲವೂ ಗೊತ್ತಿದ್ದರೂ ಸಹ ಕೇಂದ್ರದಲ್ಲಿರುವ ಆಡಳಿತ ಪಕ್ಷ ಆ ಸಮಯದಲ್ಲಿ ಇದೇ ನಾಯಕರೊಂದಿಗೆ ಏಕೆ ಮಾತುಕತೆಲ್ಲಿ ತೊಡಗಿತ್ತು ಅಥವಾ ಅಂತಹವರ ಜೊತೆ ಸೇರಿ ಏಕೆ ಸರಕಾರ ರಚಿಸಿತ್ತು? ಈ ತಾರ್ಕಿಕ ಪ್ರಶ್ನೆಗಳಿಗೆ ಸರಕಾರವು ಯಾವುದೇ ರೀತಿಯ ಉತ್ತರವನ್ನು ಕೊಡಲು ಸಾಧ್ಯವಿಲ್ಲವಾದ್ದರಿಂದ ಸರಕಾರದ ಈ ನಡೆಗಳು ಯಾವುದೇ ಗಂಭೀರವಾದ ತನಿಖೆಯನ್ನು ಆಧರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದಲಿಗೆ ಕಾಶ್ಮೀರದ ಪ್ರಧಾನಧಾರೆ ಪ್ರಜಾತಾಂತ್ರಿಕ ಧ್ವನಿಗಳ ಅನಿರ್ಬಂಧಿತ ಅಭಿವ್ಯಕ್ತಿಗಳು ಕೇಂದ್ರ ಸರಕಾರಕ್ಕೆ ಅನನುಕೂಲಕರವಾಗಿದ್ದರಿಂದಲೇ ಅವನ್ನು ಹತ್ತಿಕ್ಕುವ ಕ್ರಮವನ್ನು ಸರಕಾರ ತೆಗೆದುಕೊಂಡಿದೆ. ಈ ಕೆಲವು ನಾಯಕರ ಕೆಲವು ಹೇಳಿಕೆಗಳು ಅನಪೇಕ್ಷಣೀಯವಾಗಿತ್ತೆಂದು ಹೇಳುತ್ತಾ ಖುದ್ದು ಪ್ರಧಾನ ಮಂತ್ರಿಗಳೇ ಈ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಒಂದೆಡೆ ಈ ಆರೋಪಗಳ ಸತ್ಯಾಸತ್ಯತೆಗಳಿಗೆ ಗಟ್ಟಿಯಾದ ಆಧಾರವಿಲ್ಲ. ಮತ್ತೊಂದೆಡೆ ಯಾವುದು ಅಪೇಕ್ಷಣೀಯ ಎಂಬುದರ ನಿರ್ವಚನವನ್ನು ಬೇಕಾಬಿಟ್ಟಿಯಾಗಿ ಮತ್ತು ತಮಗಿಷ್ಟಬಂದಂತೆ ಮಾಡಲು ಅವಕಾಶ ಕೊಡುವುದೇ ಈ ವಾದ ಸರಣಿಯ ಅತಿದೊಡ್ಡ ಆಪಾಯವಾಗಿದೆ. ಸರಕಾರಿ ಪ್ರಾಯೋಜಿತ ಸಂಕಥನಗಳ ಮುಂದುವರಿಕೆಯು ಮಾತ್ರ ಅಪೇಕ್ಷಣಿಯ ಎಂಬುದೇ ಮಾನದಂಡವಾದಲ್ಲಿ, ಒಂದು ವಿರೋಧ ಪಕ್ಷದ ಅಸ್ತಿತ್ವವೇ ಅನಗತ್ಯವಾಗಿಬಿಡುತ್ತದೆ. ಇಂತಹ ಕ್ರಮಗಳು ಕಾಶ್ಮೀರದ ಅನುದಿನದ ಸಾರ್ವಜನಿಕ ಜೀವನದಿಂದ ಸ್ಥಾಪಿತ ಪ್ರಜಾತಾಂತ್ರಿಕ ಶಕ್ತಿಗಳನ್ನು ಹೊರದೂಡುತ್ತದೆ ಅಥವಾ ಅವರಿಗಿರುವ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ. ಅವರ ಅಭಿವ್ಯಕ್ತಿಗೆ ಅವಕಾಶ ಕೊಡುವ ರಾಜಕೀಯ ಸಾಧನವನ್ನು ಕಿತ್ತುಕೊಳ್ಳುವ ಮೂಲಕ ಕಾಶ್ಮೀರದ ಜನತೆಯನ್ನು ಒಳಗೊಳ್ಳುವ ಅವಕಾಶವನ್ನು ಮುಚ್ಚಲಾಗುತ್ತಿದೆ. ಈ ರೀತಿ ಆ ರಾಜ್ಯದಲ್ಲಿ ಒಂದು ರಾಜಕೀಯ ನಿರ್ವಾತವನ್ನೇ ಸೃಷ್ಟಿಸುವ ಮೂಲಕ ಮುಂದೆ ಆ ಜಾಗವನ್ನು ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಒಪ್ಪದ ಶಕ್ತಿಗಳು ಆವರಿಸಿಕೊಳ್ಳುವಂತೆ ಮಾಡುವುದರ ಹಿಂದಿನ ತರ್ಕವೇನು? ಇದು ಒಂದು ವಿಶಾಲವಾದ ಮಾನವೀಯ ಅಥವಾ ಹಕ್ಕುಗಳು ಮತ್ತು ನ್ಯಾಯದ ಬಗೆಗಿನ ಸರ್ವ ಸಹಜ ಮಾನದಂಡಗಳಲ್ಲಿ ಮಾತ್ರವಲ್ಲದೆ ಒಂದು ಸಂಕುಚಿತವಾದ ಕಾನೂನು-ಸುವ್ಯವಸ್ಥೆಯ ದೃಷ್ಟಿಕೋನದಿಂದಲೂ ಸಹ ಅನಪೇಕ್ಷಣೀಯವಾದ ಕ್ರಮವಾಗಿದೆ. ಎನ್‌ಸಿ ಮತ್ತು ಪಿಡಿಪಿಯಂತಹ ಪಕ್ಷಗಳು ಭಾರತದ ಸಾಂವಿಧಾನಿಕ ರಾಜಕೀಯಕ್ಕೂ ಮತ್ತು ಕಾಶ್ಮೀರದ ಜನತೆಯ ನಡುವೆ ಒಂದು ಪರಿಣಾಮಕಾರಿ ಪ್ರಜಾತಾಂತ್ರಿಕ ಕೊಂಡಿಗಳಾಗಿವೆ. ಇಂತಹ ಕೊಂಡಿಯನ್ನು ಕಿತ್ತುಹಾಕುವುದು ಒಂದು ಭವಿಷ್ಯಗಾಮಿ ನಡೆಯಲ್ಲವೇ ಅಲ್ಲ. ಅದರಲ್ಲೂ, ಆರ್ಟಿಕಲ್ 370 ಮತ್ತು 35-ಎಗಳ ರದ್ದು ಮತ್ತು ಕಾಶ್ಮೀರದ ವಿಭಜನೆ ಹಾಗೂ ರಾಜ್ಯದ ಸ್ಥಾನಮಾನದಿಂದ ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳಸ್ಥರೀಕರಿಸಿದ ಕ್ರಮಗಳು ರಾಜ್ಯಾದ್ಯಂತ ತೀವ್ರವಾದ ಅವಿಶ್ವಾಸವನ್ನು ಹುಟ್ಟಿಹಾಕಿರುವುದರ ಹಿನ್ನೆಲೆಯಲ್ಲೂ ಈ ಕ್ರಮಗಳು ಅತ್ಯಂತ ಅನಪೇಕ್ಷಣೀಯವಾಗಿವೆ. ಈ ಅವಿಶ್ವಾಸವನ್ನು ತೊಡೆದುಹಾಕಬೇಕೆಂದರೂ ಸಹ ಜನರ ಪ್ರಜಾತಾಂತ್ರಿಕ ಆಶೋತ್ತರಗಳ ಅಭಿವ್ಯಕ್ತಿಯೂ ಮತ್ತು ಜನರೊಳಗಿನ ಮರುಸಂಧಾನಕಾರಿ ಪ್ರಯತ್ನಗಳ ಬಿಂದುಗಳೂ ಆಗಿರುವ ಈ ಪ್ರಧಾನಧಾರೆ ರಾಜಕೀಯ ಪಕ್ಷಗಳನ್ನು ಒಳಗೊಳ್ಳುವುದು ಅತ್ಯಗತ್ಯವಾಗಿದೆ. ಆದರೆ ಆ ಬಗೆಯ ಪ್ರಜಾತಾಂತ್ರಿಕ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟರೆ ಕಾಶ್ಮೀರದಲ್ಲಿ ಎಲ್ಲವೂ ಸರ್ವೇ ಸಾಮಾನ್ಯವಾಗಿದೆ ಎಂದು ಕೊಚ್ಚಿಕೊಳ್ಳುವ ಆಡಳಿತರೂಢ ಪಕ್ಷದ ಪ್ರಚಾರವು ಸುಳ್ಳೆಂದು ಬಯಲಾಗುತ್ತದೆ. ಕೃತಕವಾಗಿ ಸೃಷ್ಟಿಸಲ್ಪಟ್ಟಿರುವ ಈ ಕೃತ್ರಿಮ ಸಹಜತೆಯನ್ನು ಜಗತ್ತಿನೆದುರು ಪ್ರದರ್ಶಿಸಿ ಅದನ್ನೇ ಉಳಿಸಿಕೊಂಡು ಹೋಗುವುದು ಸರಕಾರದ ಪ್ರಾಥಮಿಕ ಉದ್ದೇಶವಾಗಿದೆ. ಆದರೆ ಅದರ ಬದಲಿಗೆ ತನ್ನ ಅವಸರದ ಹಾಗೂ ಅತಿಕ್ರಮದ ನಡೆಗಳು ಸೃಷ್ಟಿಸಿರುವ ಸಮಸ್ಯೆಗಳನ್ನು ಪಾರದರ್ಶಕವಾಗಿ ಬಗೆಹರಿಸುವತ್ತ ಸರಕಾರವು ಗಮನಹರಿಸಬೇಕಿದೆ.

ಒಂದು ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯು ಅಷ್ಟೊಂದು ಸಹಜವಾಗಿದ್ದಲ್ಲಿ ಮತ್ತು ರಾಜ್ಯ ಸ್ಥಾನಮಾನ ಹಾಗೂ ಆರ್ಟಿಕಲ್ 370ರ ರದ್ದಿನಿಂದ ಜನರು ಅಷ್ಟೊಂದು ಸಂತೋಷವಾಗಿದ್ದಲ್ಲಿ ಸರಕಾರವು ವಿರೋಧ ಪಕ್ಷಗಳು ಕಾರ್ಯನಿರ್ವಹಿಸಲು ಏಕೆ ಅವಕಾಶ ಮಾಡಿಕೊಡುತ್ತಿಲ್ಲ? ಸರಕಾರದ ಹೇಳಿಕೆಗಳಲ್ಲಿ ಸತ್ಯವಿದ್ದರೆ ಸಹಜವಾಗಿಯೇ ಜನರು ವಿರೋಧಪಕ್ಷಗಳತ್ತ ಆಕರ್ಷಿತರಾಗದೆ ಕೇಂದ್ರದಲ್ಲಿರುವ ಆಡಳಿತರೂಢ ಪಕ್ಷದತ್ತಲೇ ಸೆಳೆಯಲ್ಪಡುತ್ತಾರೆ. ಸರಕಾರವು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವುದು ನಿಜವೇ ಆದಲ್ಲಿ ಜನರು ದೊಡ್ಡ ಮಟ್ಟದಲ್ಲಿ ವೋಟು ನೀಡುವುದು ನವ ಕಾಶ್ಮೀರ ಮತ್ತು ನವ ಭಾರತದ ನಿರ್ಮಾತ್ರರಿಗೆ ವಿನಃ ವಿರೋಧ ಪಕ್ಷಗಳಿಗಲ್ಲವಲ್ಲ?

ಆದರೆ ಸರಕಾರವು ಸಾರ್ವಜನಿಕರಿಗೆ ಏನೇ ಕಥನಗಳನ್ನು ಉಣಬಡಿಸುತ್ತಿದ್ದರೂ ಸತ್ಯ ಸಂಗತಿಯೇನೆಂಬುದು ಅವರಿಗೆ ಗೊತ್ತಿದೆ. ತನ್ನ ಎಂದಿನ ವೀರಧೀರ ನಿಲುವಿಗೆ ಅಂಟಿಕೊಂಡಿರುವ ಸರಕಾರ ಸತ್ಯವನ್ನು ಒಪ್ಪಿಕೊಳ್ಳಲು ಅಥವಾ ತನ್ನ ತಪ್ಪನ್ನು ಸರಿತಿದ್ದುಕೊಳ್ಳಲೂ ತಯಾರಿಲ್ಲ. ಒಂದಿಂಚೂ ಹಿಂದೆ ಸರಿಯುವುದಿಲ್ಲವೆಂಬ ಹೇಳಿಕೆಗಳು ಸರಕಾರದ ಅದರಲ್ಲೂ ನಿರ್ದಿಷ್ಟವಾಗಿ ದೊರೆದ್ವಯರ ವರ್ತನೆಗಳ ಖಾಯಂ ಸ್ವರೂಪವಾಗಿಬಿಟ್ಟಿದೆ. ಆದ್ದರಿಂದಲೇ ಅಸಾಧಾರಣ ಕ್ರಮಗಳನ್ನು ಹಾಗೂ ಅಸಾಧಾರಣ ಕಾನೂನುಗಳನ್ನು ಹೇರುವುದು ಬಿಟ್ಟು ಬೇರೆ ದಾರಿಯನ್ನು ಅನುಸರಿಸಲು ಅವರು ತಯಾರಿಲ್ಲ. ಅದರೊಂದಿಗೆ ಈಗ ಯಾವ ಪರಿಸ್ಥಿತಿ ಕಾಶ್ಮೀರದಲ್ಲಿದೆಯೋ ಅದೇ ಕಾಶ್ಮೀರದಲ್ಲಿ ಇರಬೇಕಾದ ಸಹಜ ಸ್ಥಿತಿ ಎಂಬ ತಿಳವಳಿಕೆಯೂ ಸಹ ಆಳುವ ಪಕ್ಷದ ಪರಿಕಲ್ಪನೆಯಲ್ಲಿರಬಹುದು. ಹಾಗಿದ್ದಲ್ಲಿ ಇಡೀ ಕಾಶ್ಮೀರವನ್ನು ಸೆರೆಮನೆಯೆಂದು ಘೋಷಿಸಿ ಎಂದು ಹೇಳಿದ ಕಾಶ್ಮೀರದ ನಾಯಕರೊಬ್ಬರ ಉದ್ವಿಘ್ನ ಹೇಳಿಕೆ ಉತ್ಪ್ರೇಕ್ಷೆಯ ಹೇಳಿಕೆಯೇನೂ ಆಗುವುದಿಲ್ಲ.

 ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)