varthabharthi

ವಿಶೇಷ-ವರದಿಗಳು

ನೀವು ಯುಪಿಐ ಬಳಸುತ್ತೀರಾ?: ಹಾಗಿದ್ದರೆ ವಂಚನೆಯಿಂದ ರಕ್ಷಿಸಿಕೊಳ್ಳಲು ಟಿಪ್ಸ್ ಇಲ್ಲಿವೆ

ವಾರ್ತಾ ಭಾರತಿ : 29 Feb, 2020

ಪ್ರತಿದಿನ ಹಲವಾರು ಜನರು ಆನ್‌ಲೈನ್ ವಂಚನೆಗಳಿಗೆ ಬಲಿಪಶುಗಳಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಜನರ ಅನುಕೂಲಕ್ಕಾಗಿ ಇರುವ ಹಣ ಪಾವತಿ/ಸ್ವೀಕೃತಿ ಪ್ಲಾಟ್‌ಫಾರ್ಮ್‌ಗಳ ಕುರಿತು ಗ್ರಾಹಕರಲ್ಲಿಯ ಅಜ್ಞಾನದ ಲಾಭವನ್ನು ಈ ವಂಚಕರು ಪಡೆಯುತ್ತಿದ್ದಾರೆ.

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ವ್ಯಾಪ್ತಿ ಅಗಾಧವಾಗಿ ಬೆಳೆದಿದೆ ಮತ್ತು ದಿನೇ ದಿನೇ ಹೊಸ ಎತ್ತರವನ್ನು ತಲುಪುತ್ತಿದೆ. ಆರ್‌ಟಿಜಿಎಸ್,ನೆಫ್ಟ್ ಮತ್ತು ಇಸಿಎಸ್‌ನಂತಹ ಸಾಂಪ್ರದಾಯಿಕ ಆನ್‌ಲೈನ್ ಹಣಪಾವತಿ ವ್ಯವಸ್ಥೆಗಳು ಮಾತ್ರವಲ್ಲ, ಇಮ್ಮೀಡಿಯೇಟ್ ಪೇಮೆಂಟ್ ಸರ್ವಿಸ್(ಐಎಂಪಿಎಸ್),ವ್ಯಾಲೆಟ್ ಸೇವೆಗಳು ಮತ್ತು ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ)ನಂತಹ ಹೊಸ ಸೇವೆಗಳು ಆನ್‌ಲೈನ್ ಜಗತ್ತನ್ನು ಆಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ಅತ್ಯಂತ ಜನಪ್ರಿಯ ಹಣಪಾವತಿ ವಿಧಾನವಾಗಿದೆ.

ಪೇಮೆಂಟ್ ಇಕೋಸಿಸ್ಟಮ್ ರೂಪುಗೊಳ್ಳುವುದರೊಂದಿಗೆ 2020, ಜನವರಿಯಲ್ಲಿ ಯುಪಿಐ ಮೂಲಕ 1.3 ಶತಕೋಟಿ ವಹಿವಾಟುಗಳು ನಡೆದಿವೆ, ಹೀಗಾಗಿ ಸೇವಾ ಪೂರೈಕೆದಾರರು ಬಳಕೆದಾರರ ಅನುಭವನ್ನು ಉತ್ತಮಗೊಳಿಸುವ ಜೊತೆಗೆ ಸುಲಭ ಹಣಪಾವತಿ ಆಯ್ಕೆಗಳನ್ನು ಅವರಿಗೆ ಒದಗಿಸುವುದು ಅಗತ್ಯವಾಗಿದೆ.

ಪೇಮೆಂಟ್ ಇಂಟರ್‌ಫೇಸ್ ಬಳಕೆಯನ್ನು ಸುಲಭಗೊಳಿಸಿರುವುದರಿಂದ ಡಿಜಿಟಲ್ ಹಣಪಾವತಿಯನ್ನು ಇನ್ನಷ್ಟು ಸರಳಗೊಳಿಸಿರುವುದು ಯುಪಿಐ ಬೃಹತ್ ಸಂಖ್ಯೆಯ ಗ್ರಾಹಕರನ್ನು ಹೊಂದಲು ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಒಂದೆಡೆ ಯುಪಿಐ ಜಪ್ರಿಯತೆ ಪಡೆದುಕೊಂಡಿದ್ದರೆ,ಬಳಕೆದಾರರನ್ನು ವಂಚಿಸಲು ಅದನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಮಾಹಿತಿಗಳ ಕೊರತೆಯ ಕಾರಣದಿಂದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪೇಮೆಂಟ್ ಇಂಟರ್‌ಫೇಸ್ ಅನ್ನು ಬಳಸುವಾಗ ಅಪರಿಚಿತ ವ್ಯಕ್ತಿಗಳೊಂದಿಗೆ ಸಂವಾದದ ವೇಳೆ ಅಥವಾ ಅನಪೇಕ್ಷಿತ ಕರೆಗಳಿಗೆ ಉತ್ತರಿಸುವಾಗ ಯಾವುದೇ ಬ್ಯಾಂಕಿಂಗ್ ಮತ್ತು ಹಣಕಾಸು ಕುರಿತು ವಿವರಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಂಚಕರ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಬ್ಯಾಂಕಿಂಗ್ ಟಿಪ್ಸ್‌ಗಳು:

► ದೃಢೀಕೃತವಲ್ಲದ ಆ್ಯಪ್‌ಗಳು

ದೃಢೀಕೃತವಲ್ಲದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದರಿಂದ ದೂರವಿರಿ. ಇಂದು ಅಂತರ್ಜಾಲ ಸಂಪರ್ಕ ಮತ್ತು ಸ್ಮಾರ್ಟ್‌ಪೋನ್‌ಗಳ ಸುಲಭ ಲಭ್ಯತೆಯಿಂದಾಗಿ ಜನರು ಕಣ್ಣಿಗೆ ಬಿದ್ದ ಆ್ಯಪ್‌ಗಳನ್ನೆಲ್ಲ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಆ್ಯಪ್‌ಗಳ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳದೆ ಜನರು ಅವುಗಳನ್ನು ಡೌನ್‌ಲೋಡ್ ಮಾಡುತ್ತಲೇ ಇರುತ್ತಾರೆ. ಇಂತಹ ಆ್ಯಪ್‌ಗಳು ಮೊಬೈಲ್ ಫೋನ್‌ಗಳಲ್ಲಿ ಇನ್‌ಸ್ಟಾಲ್ ಆದ ಬಳಿಕ ಅವು ಮೊಬೈಲ್ ಮೇಲೆ ನಿಯಂತ್ರಣವನ್ನು ಹೊಂದುತ್ತವೆ. ಎನಿ ಡೆಸ್ಕ್,ಟೀಮ್ ವ್ಯೂವರ್‌ನಂತಹ ಜನಪ್ರಿಯ ವಂಚನೆ ಆ್ಯಪ್‌ಗಳು ಇವುಗಳಲ್ಲಿ ಸೇರಿವೆ.

► ಯಾವುದೇ ಪಾವತಿಯನ್ನು ಮಾಡಲು ಲಿಂಕ್

ಹಣ ಪಾವತಿಸುವಾಗ ಅಲ್ಲಿ ತೋರಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ಕಿಸಬೇಡಿ. ಇದು ಜನರಿಗೆ ವಂಚನೆಯ ಇನ್ನೊಂದು ರೂಪವಾಗಿದೆ. ಉದಾಹರಣೆಗೆ ನೀವು ಏನಾದರನ್ನು ಒಎಲ್‌ಎಕ್ಸ್ ಅಥವಾ ಕ್ವಿಕರ್ ನಂತಹ ವೆಬ್‌ಸೈಟ್‌ಗಳ ಮೂಲಕ ಮಾರುವಾಗ ಲಿಂಕ್‌ನ್ನು ಕ್ಲಿಕ್ಕಿಸುವ ಮೂಲಕ ಹಣಪಾವತಿಯನ್ನು ಸ್ವೀಕರಿಸಲು ಒಪ್ಪಿಕೊಳ್ಳಬೇಡಿ. ನಿಮ್ಮ ಜಾಹೀರಾತನ್ನು ನೋಡುವ ಖರೀದಿದಾರರ ಸೋಗಿನಲ್ಲಿರುವ ವಂಚಕರು ನಿಮ್ಮನ್ನು ಸಂಪರ್ಕಿಸಿ ತಾವು ಕಳುಹಿಸಿರುವ ಲಿಂಕ್‌ನ್ನು ಕ್ಲಿಕ್ಕಿಸಿ ತಮ್ಮ ಹಣಪಾವತಿಯನ್ನು ಸ್ವೀಕರಿಸುವಂತೆ ಸೂಚಿಸುತ್ತಾರೆ. ಒಂದು ವೇಳೆ ನೀವು ಹಾಗೆ ಮಾಡಿದರೆ ಕ್ಷಣಾರ್ಧದಲ್ಲೇ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳುತ್ತದೆ ಮತ್ತು ಹಣವೆಲ್ಲ ಖಾಲಿಯಾಗುತ್ತದೆ.

► ಒಟಿಪಿಯ ಶೇರಿಂಗ್

ಹೆಚ್ಚಿನ ವಂಚನೆಗಳು ಒಂದು ಬಾರಿಯ ಪಾಸ್‌ವರ್ಲ್ಡ್ ಅಥವಾ ಒಟಿಪಿಯನ್ನು ಹಂಚಿಕೊಳ್ಳುವುದರಿಂದ ನಡೆಯುತ್ತವೆ. ತಾವು ತಮ್ಮ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಈಗ ಹೆಚ್ಚಿನವರಿಗೆ ಅರ್ಥವಾಗಿದೆಯಾದರೂ,ತಮ್ಮ ಬಲಿಪಶುಗಳು ಒಟಿಪಿಯನ್ನು ಶೇರ್ ಮಾಡಿಕೊಳ್ಳುವಂತೆ ವಂಚಕರು ಮಾಡುತ್ತಾರೆ. ಒಟಿಪಿಯನ್ನು ಹಂಚಿಕೊಂಡರೆ ವಂಚಕರು ಬ್ಯಾಂಕ್ ಖಾತೆಯಿಂದ ಹಣವನ್ನು ದೋಚಿ ಪಂಗನಾಮ ಹಾಕುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)