varthabharthi

ಸಂಪಾದಕೀಯ

ಬೇಟೆಯಾಡಿದ ತೋಳಗಳಿಂದಲೇ ನ್ಯಾಯದ ನಿರೀಕ್ಷೆಯಲ್ಲಿರುವ ದಿಲ್ಲಿ

ವಾರ್ತಾ ಭಾರತಿ : 2 Mar, 2020

ಇಂದು ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಜನರಿಗೆ ಮಾಹಿತಿ ನೀಡಲು ನೇರವಾಗಿ ಸೇನಾಧಿಕಾರಿಯೇ ಪತ್ರಿಕಾಗೋಷ್ಠಿ ಕರೆಯುತ್ತಾರೆ. ಕೋಮುಗಲಭೆ ಸಂಭವಿಸಿದರೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪತ್ರಿಕೆಗಳ ಜೊತೆಗೆ ಮಾತನಾಡುತ್ತಾರೆ. ಹಾಗಾದರೆ ಈ ದೇಶದ ರಕ್ಷಣಾ ಸಚಿವ, ಗೃಹ ಸಚಿವರ ಕೆಲಸವೇನು? ಈ ದೇಶದಲ್ಲಿ ರಕ್ಷಣಾ ಸಚಿವರು, ಗೃಹ ಸಚಿವರು ಅಸ್ತಿತ್ವದಲ್ಲಿದ್ದಾರೆಯೇ? ಎಂಬ ಪ್ರಶ್ನೆಯನ್ನು ಜನರು ಕೇಳುವಂತಾಗಿದೆ. ಸೇನಾಧಿಕಾರಿಗಳಾಗಲಿ, ಭದ್ರತಾ ಸಲಹೆಗಾರರಾಗಲಿ ನೇರವಾಗಿ ಜನರಿಗೆ ಉತ್ತರಿಸಲು ಬಾಧ್ಯಸ್ಥರಾಗುವುದಿಲ್ಲ. ಅವರು ಸಂಬಂಧ ಪಟ್ಟ ಸಚಿವಾಲಯಗಳ ಜೊತೆಗೆ ಸಂಪರ್ಕವಿಟ್ಟುಕೊಳ್ಳಬೇಕು. ಜನರು ಸ್ಪಷ್ಟನೆಯನ್ನು, ಪರಿಹಾರಗಳನ್ನು ನಿರೀಕ್ಷಿಸುವುದು ತಾವು ಆರಿಸಿದ ಜನಪ್ರತಿನಿಧಿಗಳಿಂದ. ಸರಕಾರದೊಳಗೆ ಸೇನಾಧಿಕಾರಿಗಳು, ಭದ್ರತಾ ಅಧಿಕಾರಿಗಳು ನೇರವಾಗಿ ಮೂಗು ತೂರಿಸುವುದು ಅತ್ಯಂತ ಅಪಾಯಕಾರಿ. ಇಂದು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಈ ದೇಶವನ್ನು ಜನಪ್ರತಿನಿಧಿಗಳು ಆಳುತ್ತಿದ್ದಾರೆಯೋ ಅಥವಾ ಅಧಿಕಾರಿಗಳೋ ಎನ್ನುವ ಅನುಮಾನವೆದ್ದಿದೆ.

ಕಳೆದ ಕೆಲವು ದಿನಗಳಿಂದ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಉತ್ತರಿಸಬೇಕಾದ ಜನಪ್ರತಿನಿಧಿಗಳೆಲ್ಲ ನಾಪತ್ತೆಯಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಹೊಣೆ ಹೊತ್ತು, ಜನರಿಗೆ ಭರವಸೆಗಳನ್ನು ನೀಡಬೇಕಾದವರು ಈ ದೇಶದ ಗೃಹ ಸಚಿವರು. ದುರದೃಷ್ಟವಶಾತ್ ಭೀಕರ ಹತ್ಯಾಕಾಂಡಗಳು ನಡೆದು ನಾಲ್ಕೈದು ದಿನಗಳು ಕಳೆದಿವೆಯಾದರೂ, ಗೃಹ ಸಚಿವರು ಹಿಂಸಾಪೀಡಿತ ಸ್ಥಳಗಳಿಗೆ ಭೇಟಿ ನೀಡಿಲ್ಲ ಅಥವಾ ಹಿಂಸೆಗೆ ಸಂಬಂಧಿಸಿಯಾಗಲಿ, ಭದ್ರತೆಗೆ ಸಂಬಂಧಿಸಿಯಾಗಲಿ ಗೃಹ ಸಚಿವರು ಯಾವುದೇ ಹೇಳಿಕೆಗಳನ್ನು ಮಾಧ್ಯಮಗಳಿಗೆ ಕೊಟ್ಟಿಲ್ಲ. ಗೃಹ ಸಚಿವರ ಬದಲಿಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಹಿಂಸಾಚಾರದ ಸ್ಥಳಕ್ಕೆ ಭೇಟಿ ನೀಡಿದರು. ಈ ಭೇಟಿ ನಾಟಕೀಯವಾಗಿತ್ತು. ಬರೇ ಬಾಯಿ ಮಾತುಗಳಿಂದ ಸಂತ್ರಸ್ತರನ್ನು ಓಲೈಸಲು ಬಂದವರು ತೀವ್ರ ತರಾಟೆಗೊಳಗಾದರು. ಸಂತ್ರಸ್ತ ಮಹಿಳೆಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ, ಬಂದ ದಾರಿಯಲ್ಲೇ ವಾಪಸಾದರು. ದಿಲ್ಲಿಯಲ್ಲಿ ಪೊಲೀಸರಿಗೆ ಮಾರ್ಗದರ್ಶನಗಳನ್ನು ನೀಡಿ ಶಾಂತಿ ಸ್ಥಾಪಿಸಬೇಕಾಗಿದ್ದ ಗೃಹ ಸಚಿವರು, ದಿಲ್ಲಿಯ ಹಿಂಸಾ ವೈರಸ್‌ಗಳ ಜೊತೆಗೆ ಪಶ್ಚಿಮಬಂಗಾಳಕ್ಕೆ ತೆರಳಿದ್ದಾರೆ. ಅಂದರೆ ದಿಲ್ಲಿಯ ಬೆಂಕಿ ಕಿಡಿಗಳನ್ನು ಈಶಾನ್ಯ ಭಾರತಕ್ಕೆ ಹರಡಲು ಮುಂದಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಮಾಡಿದ ಭಾಷಣ, ಪರೋಕ್ಷವಾಗಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಕಾರಣಕರ್ತರು ಯಾರು ಎನ್ನುವುದನ್ನು ದೇಶಕ್ಕೆ ಕೂಗಿ ಹೇಳಿದೆ. ದಿಲ್ಲಿಯ ಹಿಂಸೆಗೆ ಕಾರಣವಾದ ‘ಗೋಲಿ ಮಾರೋ ಸಾಲೋಂಕೋ’ ಘೋಷಣೆ ಅಮಿತ್ ಶಾ ಅವರ ಸಮಾವೇಶದಲ್ಲೂ ಮೊಳಗಿದೆ. ಮುಂದಿನ ದಿನಗಳಲ್ಲಿ ದಿಲ್ಲಿಯಲ್ಲಿ ನಡೆದಿರುವುದು ಈಶಾನ್ಯ ಭಾರತದಲ್ಲೂ ನಡೆಯಲಿದೆ ಎನ್ನುವುದರ ಸೂಚನೆಯಿದು. ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ, ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಹಿಂಸೆಯನ್ನೇ ನೆಚ್ಚಿಕೊಂಡಿರುವುದನ್ನು ಇದು ಹೇಳುತ್ತಿದೆ. ಎನ್‌ಆರ್‌ಸಿ, ಸಿಎಎ ಕಾಯ್ದೆಯ ಮೂಲಕ ಜನಸಾಮಾನ್ಯರನ್ನು ಪ್ರಚೋದಿಸಲು ವಿಫಲವಾಗಿರುವ ಸರಕಾರ, ಸ್ವಯಂ ತನ್ನ ಗೂಂಡಾಗಳನ್ನೇ ಬೀದಿಗಿಳಿಸಿ ಹಿಂಸಾಚಾರ ನಡೆಸುವ ಹತಾಶ ಪ್ರಯತ್ನಕ್ಕಿಳಿದಿರುವುದು ಕಾಣುತ್ತಿದೆ. ದಿಲ್ಲಿಯಲ್ಲಿ ಗಲಭೆ ನಡೆಸಿದವರು ಸ್ಥಳೀಯರಲ್ಲ, ಬೇರೆ ಪ್ರದೇಶಗಳಿಂದ ಈ ದುಷ್ಕರ್ಮಿಗಳನ್ನು ಕರೆತರಲಾಗಿದೆ ಎನ್ನುವ ಅಂಶ ಈಗಾಗಲೇ ಬಹಿರಂಗವಾಗಿದೆ. ಹಾಗೆ, ಕರೆತಂದವರು ಯಾರು ಎನ್ನುವುದೂ ಸ್ಪಷ್ಟವಾಗುತ್ತಿದೆ. ಹಿಂಸೆಯ ಹಿನ್ನೆಲೆಯಿಂದ ನಾಯಕರಾಗಿ ರೂಪುಗೊಂಡವರ ಕೈಗೆ ಈ ದೇಶವನ್ನು ಕೊಟ್ಟರೆ ಏನಾಗಬಹುದು ಎನ್ನುವುದು ಇದೀಗ ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ಹಿಂಸಾಚಾರಕ್ಕೆ ಹೊರತಾದ ಯಾವ ವೌಲ್ಯಗಳ ಅರಿವೂ ಇಲ್ಲದ ಅಮಿತ್ ಶಾರಂತಹ ನಾಯಕ, ಇಡೀ ದೇಶವನ್ನು ರಣರಂಗ ಮಾಡಿಯೇ ಸಿದ್ಧ ಎನ್ನುವ ಹಂತಕ್ಕೆ ಬಂದು ನಿಂತಿದ್ದಾರೆ. ಭಾರತದ ಕುರಿತಂತೆ ನೆರೆಯ ದೇಶಗಳೆಲ್ಲ, ತಮ್ಮ ತಮ್ಮ ಪ್ರಜೆಗಳಿಗೆ ಎಚ್ಚರಿಕೆಗಳನ್ನು ನೀಡುತ್ತಿವೆ. ಇದರ ಅರ್ಥ, ಭವಿಷ್ಯದಲ್ಲಿ ಭಾರತ ಇನ್ನಷ್ಟು ಅಪಾಯಕಾರಿ ದೇಶವಾಗಲಿದೆ ಎನ್ನುವುದೇ ಆಗಿದೆ.

ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಕುರಿತಂತೆ ಒಂದಿಷ್ಟು ಪಾಪಪ್ರಜ್ಞೆಯಿಲ್ಲದೆ ಗೃಹ ಸಚಿವರು ಕೋಲ್ಕತಾದಲ್ಲಿ ಜನರ ನಡುವೆ ಪ್ರಚೋದನಾಕಾರಿ ಮಾತುಗಳನ್ನಾಡುತ್ತಾರೆ ಮತ್ತು ಹಿಂಸೆಯನ್ನು ಈಶಾನ್ಯ ಭಾರತಕ್ಕೆ ಹಬ್ಬಿಸುವ ಪ್ರಯತ್ನ ಮಾಡುತ್ತಾರೆ ಎಂದ ಮೇಲೆ, ದಿಲ್ಲಿಯ ಸಂತ್ರಸ್ತರಿಗೆ ನ್ಯಾಯ ಸಿಗುವ ಬಗೆಯಾದರೂ ಹೇಗೆ? ದಿಲ್ಲಿಯಲ್ಲಿ 40ಕ್ಕೂ ಅಧಿಕ ಮಂದಿ ಹಿಂಸೆಯಿಂದ ಮೃತಪಟ್ಟಿದ್ದಾರೆ. ಬಾಡಿಗೆ ದುಷ್ಕರ್ಮಿಗಳನ್ನು ಬಳಸಿಕೊಂಡು ಸಂಘಪರಿವಾರ ಮತ್ತು ಬಿಜೆಪಿ ಜಂಟಿಯಾಗಿ ಸಂಘಟಿಸಿದ ಹಿಂಸೆಯಿದು. ಇಲ್ಲಿ ನಡೆದಿರುವುದು ಏಕ ಮುಖ ದಾಳಿ. ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಮೃತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ. ಇದಕ್ಕೆ ಹೊರತು ಪಡಿಸಿದಂತೆ ಸಂತ್ರಸ್ತರ ಪಾಲಿಗೆ ಭವಿಷ್ಯದ ಕುರಿತಂತೆ ಯಾವ ಭರವಸೆಯೂ ಸರಕಾರದಿಂದ ಈವರೆಗೆ ಸಿಕ್ಕಿಲ್ಲ. ಸತ್ತವರೇನೋ ಸತ್ತು ಈ ದುಷ್ಟ ಸಮಾಜದಿಂದ ಮುಕ್ತಿ ಪಡೆದರು. ಆದರೆ ಬದುಕಿ ಉಳಿದವರ ಕತೆಯೇನು? ಕುಟುಂಬಗಳ ಆಸರೆಯಾಗಿದ್ದ ಜನರೇ ಹಿಂಸೆಯಲ್ಲಿ ಮೃತಪಟ್ಟಿದ್ದಾರೆ. ಹತ್ತು ಲಕ್ಷ ರೂಪಾಯಿಯಿಂದ ಸಂತ್ರಸ್ತರು ಧ್ವಂಸಗೊಂಡ ತಮ್ಮ ಬದುಕನ್ನು ಪುನರ್‌ನಿರ್ಮಿಸುವುದು ಹೇಗೆ? ನೂರಾರು ಮನೆಗಳು ಸಂಪೂರ್ಣ ಭಸ್ಮವಾಗಿವೆ. ಅವರ ಅಂಗಡಿ, ವಾಹನಗಳು ನಾಶವಾಗಿವೆ. ಹಲವು ದಶಕಗಳ ಬೆವರಿನಿಂದ ಕಟ್ಟಿದ ಬದುಕು ಒಂದೇ ದಿನದಲ್ಲಿ ಬೂದಿಯಾಗಿದೆ. ಈಗ ಅದನ್ನು ಪುನರ್ ನಿರ್ಮಿಸಲು ಸರಕಾರ ಯಾವ ರೀತಿಯಲ್ಲಿ ನೆರವು ನೀಡುತ್ತದೆ ಎನ್ನುವುದು ಇನ್ನೂ ಹೊರಬಿದ್ದಿಲ್ಲ.

ಸಂತ್ರಸ್ತರಿಗೆ ಪರಿಹಾರಕ್ಕಿಂತಲೂ ಮುಖ್ಯವಾಗಿ ನ್ಯಾಯ ಸಿಗಬೇಕಾಗಿದೆ. ನ್ಯಾಯ ಸಿಗಬೇಕಾದರೆ ಅವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು. ವಿವಿಧ ವೀಡಿಯೊಗಳಲ್ಲಿ ದಾಳಿ ನಡೆಸಿದವರ ಮುಖಗಳು ಬಹಿರಂಗವಾಗಿವೆ. ಬಹುತೇಕ ಜನರು ಜೋಪಡಪಟ್ಟಿಗಳಂತಹ ಪ್ರದೇಶಗಳಿಂದ ಬಂದವರು. ಶ್ರೀರಾಮ, ದೇಶ, ಸಿಎಎ ಇತ್ಯಾದಿಗಳ ಕುರಿತಂತೆ ಪ್ರಾಥಮಿಕ ಮಾಹಿತಿಗಳೂ ಇಲ್ಲದವರು. ದರೋಡೆಯ ಜೊತೆಗೆ ಹಿಂಸೆಯ ಮೂಲಕ ಸಿಗುವ ವಿಕೃತ ರಂಜನೆಯೇ ಇವರ ಗುರಿ. ಇವರಿಗೆ ಶಿಕ್ಷೆಯಾಗುವುದರಿಂದಷ್ಟೇ ಸಂತ್ರಸ್ತರಿಗೆ ನ್ಯಾಯ ದೊರಕಲಾರದು ಅಥವಾ ಇವರಿಗಷ್ಟೇ ಶಿಕ್ಷೆ ನೀಡುವುದರಿಂದ ಮುಂದೆ ಇಂತಹ ಗಲಭೆ ನಡೆಯದಂತೆ ತಡೆಯುವುದು ಸಾಧ್ಯವಾಗದು. ಇವರನ್ನು ಅಲ್ಲಿಗೆ ಕರೆತಂದ ಪ್ರಾಯೋಜಕರನ್ನು ಗುರುತಿಸಿ ಅವರನ್ನು ಜೈಲಿಗೆ ಅಟ್ಟದೆ ಇದ್ದರೆ ಇಂತಹ ಗಲಭೆ ಮುಂದೆಯೂ ಪದೇ ಪದೇ ನಡೆಯಲಿದೆ. ಆದುದರಿಂದ ಗಲಭೆ ಸಂಘಟಿಸಿದವರನ್ನು ಗುರುತಿಸುವ ಕೆಲಸ ನಡೆಯಬೇಕು.

ಆದರೆ ಪೊಲೀಸರೇ ಗಲಭೆಯಲ್ಲಿ ನೇರವಾಗಿ ಪಾತ್ರವಹಿಸಿರುವಾಗ ಪೊಲೀಸರು ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವುದು ಅಸಾಧ್ಯದ ಮಾತು. ಸಿಎಎ ಪ್ರತಿಭಟನೆಗಳನ್ನು ದಮನಿಸುವ ಪ್ರಮುಖ ಗುರಿಯೊಂದಿಗೆ ಈ ದಾಳಿ ನಡೆದಿದೆ. ಸಿಎಎ ಪ್ರತಿಭಟನೆ ದಮನವಾಗುವ ಅಗತ್ಯವಿರುವುದು ಈ ದೇಶದ ಗೃಹ ಸಚಿವರಿಗೆ. ಎಲ್ಲಿಯವರೆಗೆ ಅಮಿತ್ ಶಾ ಈ ದೇಶದ ಗೃಹ ಸಚಿವರಾಗಿ ಮುಂದುವರಿಯುತ್ತಾರೆಯೋ ಅಲ್ಲಿಯವರೆಗೆ ದಿಲ್ಲಿಯ ಸಂತ್ರಸ್ತರಿಗೆ ನ್ಯಾಯ ದೊರಕಲು ಸಾಧ್ಯವಿಲ್ಲ ಮಾತ್ರವಲ್ಲ, ಈ ಗಲಭೆಗಳು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವುದನ್ನು ತಡೆಯುವುದಕ್ಕೂ ಸಾಧ್ಯವಿಲ್ಲ. ದೇಶ ಮುಖ್ಯವೋ, ಅಮಿತ್ ಶಾ ಮುಖ್ಯವೋ ಎನ್ನುವುದನ್ನು ಬಿಜೆಪಿಯೊಳಗಿರುವ ಹಿರಿಯ ಮುತ್ಸದ್ದಿಗಳು ನಿರ್ಧರಿಸಬೇಕು. ಈಗಾಗಲೇ ಆರ್ಥಿಕವಾಗಿ ಜರ್ಜರಿತವಾಗಿ ಕೂತಿರುವ ಭಾರತದ ಮೇಲೆ ಹಿಂಸಾಚಾರದ ಇನ್ನೊಂದು ನೆತ್ತರ ಸುನಾಮಿಯನ್ನು ಸುರಿಸಲು ಸಿದ್ಧವಾಗಿರುವ ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ತಡೆಯದೇ ಇದ್ದರೆ ಭಾರತದ ಸರ್ವನಾಶ ಖಚಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)