varthabharthi

ಸಂಪಾದಕೀಯ

ದಲಿತರ ಹಕ್ಕುಗಳ ರಕ್ಷಣೆಗೆ ಹೋರಾಟ ಅನಿವಾರ್ಯ

ವಾರ್ತಾ ಭಾರತಿ : 3 Mar, 2020

ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿರುವ ಈ ದಿನಗಳಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರದ ಅಧಿಕಾರ ಸೂತ್ರ ಹಿಡಿದಿರುವ ಕೋಮುವಾದಿ ಕೂಟ ಹಿಂದುತ್ವದ ಉನ್ಮಾದ ಕೆರಳಿಸಿ ತನ್ನ ವೈಫಲ್ಯವನ್ನು ಮರೆಮಾಚುತ್ತಿದೆ. ಹಿಂದೂಗಳೆಲ್ಲ ಒಂದೇ ಎಂದು ಹೇಳುತ್ತಲೇ ತನ್ನ ಫ್ಯಾಶಿಸ್ಟ್ ರಾಜಕಾರಣಕ್ಕೆ ದಲಿತ ಸಮುದಾಯದ ಜನರನ್ನು ಬಳಸಿಕೊಳ್ಳಲು ಮಸಲತ್ತು ನಡೆಸುತ್ತಲೇ ಇದೆ. ದಲಿತರೂ ಹಿಂದೂಗಳೆಂದು ಕರೆದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಬಲಪಡಿಸಲು ಯತ್ನಿಸುತ್ತಿದೆ. ಆದರೆ ವಾಸ್ತವವಾಗಿ ದೇಶದ ದಲಿತರ ಮತ್ತು ಅಲ್ಪಸಂಖ್ಯಾತರ ಪರಿಸ್ಥಿತಿ ಶೋಚನೀಯವಾಗಿದೆ.ಸಮಾನ ನೋವು, ಸಂಕಟ ಅನುಭವಿಸುತ್ತಿರುವ ಈ ಎರಡು ಸಮುದಾಯಗಳನ್ನು ಪ್ರತ್ಯೇಕಿಸಿ ಪರಸ್ಪರ ಕಾದಾಟಕ್ಕೆ ಹಚ್ಚಲು ಯತ್ನಿಸುತ್ತಿದೆ.

ದಲಿತರ ರಕ್ಷಣೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾನೂನಿದೆ. ಆದರೆ ಈ ಕಾನೂನು ಕಾಗದದ ಹುಲಿಯಾಗಿದೆ. ಇದರ ಸಮರ್ಪಕ ಅನುಷ್ಠಾನಕ್ಕೆ ಸಮಾಜದಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗಿವೆ. ಅಂತಲೇ ಈ ಕಾನೂನು ಇದ್ದರೂ ಕೂಡ ದಲಿತ ಯುವಕರು ಕುದುರೆ ಸವಾರಿ ಮಾಡಿದರೆ, ಬೈಕ್ ಓಡಿಸಿದರೆ, ಹುರಿಮೀಸೆ ಬಿಟ್ಟರೆ ಅವರ ಮೇಲೆ ಹಲ್ಲೆಗಳು ನಡೆಯುತ್ತವೆ. ಗುಜರಾತ್ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ದಲಿತರ ಮೇಲೆ ಹೆಚ್ಚು ಹಲ್ಲೆಗಳು ನಡೆಯುತ್ತವೆ ಎಂದು ಅಂಕಿಅಂಶಗಳಿಂದ ತಿಳಿದುಬರುತ್ತದೆ.

ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಪ್ರತಿದಿನ 4ರಿಂದ 5 ಪ್ರಕರಣಗಳು ವರದಿಯಾಗುತ್ತವೆ. ಇಂತಹ ಪ್ರಕರಣಗಳಲ್ಲಿ ಖಟ್ಲೆ ಹಾಕಲಾಗುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಾರೆ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ. 2018ರ ವಾರ್ಷಿಕ ವರದಿಯ ಪ್ರಕಾರ ರಾಜ್ಯದಲ್ಲಿ ಆ ವರ್ಷ ದಲಿತರ ಮೇಲಿನ ದೌರ್ಜನ್ಯದ 1,751 ಪ್ರಕರಣಗಳು ವರದಿಯಾಗಿವೆ. ಇದೇ ವರ್ಷದಲ್ಲಿ ಪರಿಶಿಷ್ಟ ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಆರೋಪದಡಿಯಲ್ಲಿ 165 ಪ್ರಕರಣಗಳು ದಾಖಲಾಗಿವೆ.

ಆದರೆ ನ್ಯಾಯಾಲಯಕ್ಕೆ ಹೋದ ಒಟ್ಟು 1,087 ಪ್ರಕರಣಗಳಲ್ಲಿ ಕೇವಲ 46 ಪ್ರಕರಣಗಳಲ್ಲಷ್ಟೆ ಶಿಕ್ಷೆಯಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಸಮಿತಿ ಸಿದ್ಧಪಡಿಸಿದ ವರದಿಯಲ್ಲಿ ಹೇಳಲಾಗಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ದಲಿತರ ಮೇಲಿನ ಕ್ರೂರ ದೌರ್ಜನ್ಯವನ್ನು ತಡೆಯಲು ಶಾಸನಸಭೆ ಹಲವಾರು ಕಾಯ್ದೆಗಳನ್ನು ಮಾಡಿದರೂ ಅವುಗಳ ಜಾರಿಯಲ್ಲಿ ನ್ಯೂನತೆ ಉಂಟಾದರೆ ಕಾನೂನುಗಳನ್ನು ಮಾಡಿ ಏನು ಪ್ರಯೋಜನ?

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಲು ನಿಜವಾದ ಕಾರಣವೆಂದರೆ ಪೊಲೀಸರು ಮತ್ತು ಸರಕಾರಿ ವಕೀಲರ ಕಾರ್ಯನಿರ್ವಹಣೆಯ ಲೋಪ ಮತ್ತು ವೈಫಲ್ಯ ಎಂದರೆ ಅತಿಶಯೋಕ್ತಿಯಲ್ಲ.ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪೊಲೀಸರು ಹಾಗೂ ಸರಕಾರಿ ವಕೀಲರು ಎಚ್ಚರದಿಂದ ಕಾರ್ಯನಿರ್ವಹಿಸಿದರೆ ಆರೋಪಿಗಳು ತಪ್ಪಿಸಿಕೊಳ್ಳುವುದು ಸುಲಭವಲ್ಲ.

ದಲಿತರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ಮಾಡಿದ ತಕ್ಷಣ ಸಮಾಜದಲ್ಲಿ, ದಲಿತರ ಬದುಕಿನಲ್ಲಿ ಒಮ್ಮಿಂದೊಮ್ಮೆಲೇ ದೊಡ್ಡ ಬದಲಾವಣೆಯಾಗುವುದಿಲ್ಲ. ಈ ನೆಲದಲ್ಲಿ ಆಳವಾಗಿ ಬೇರು ಬಿಟ್ಟಿರುವ ಶ್ರೇಣೀಕೃತ ಜಾತಿ ವ್ಯವಸ್ಥೆ ಅಷ್ಟು ಸುಲಭಕ್ಕೆ ಅಳಿದು ಹೋಗುವುದಿಲ್ಲ. ಅದರ ಪ್ರಭಾವ ಸರಕಾರದ ವಿವಿಧ ಅಂಗಗಳ ಮೇಲೆ ಇದ್ದೇ ಇರುತ್ತದೆ. ತನಿಖಾ ಕಾರ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಹೀಗಾಗಿ ದೌರ್ಜನ್ಯ ಎಸಗಿದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇಲ್ಲವೇ ಅವರ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ.

ಯಾವುದೇ ಕಾನೂನು ಬರೀ ಸಾಂಕೇತಿಕವಾಗಿದ್ದರೆ ಸಾಲದು. ಅದರ ಪರಿಣಾಮಕಾರಿ ಅನುಷ್ಠಾನ ಅಗತ್ಯವಾಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಾಗುತ್ತದೆ.ಜೊತೆಗೆ ದಲಿತ ಜನಪರ ಹಾಗೂ ಪ್ರಗತಿಪರ ಸಂಘಟನೆಗಳ ನಿರಂತರ ಎಚ್ಚರ ಅಗತ್ಯವಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ನೇತೃತ್ವದ ಕಣ್ಗಾವಲು ಹಾಗೂ ಮೇಲ್ವಿಚಾರಣಾ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕಾಗುತ್ತದೆ. ಆದರೆ ಬಹುತೇಕ ಜಿಲ್ಲೆಗಳಲ್ಲಿ ಇಂತಹ ಸಭೆಗಳೇ ನಡೆಯುತ್ತಿಲ್ಲ.ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಣ್ಗಾವಲು ಮತ್ತು ಮೇಲ್ವಿಚಾರಣಾ ಸಮಿತಿ ಇದೆ. ಅದೂ ಸರಿಯಾಗಿ ಸಭೆ ಸೇರುತ್ತಿಲ್ಲ. ಇದರ ಪರಿಣಾಮವಾಗಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ.ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆ ವ್ಯವಸ್ಥೆಯ ವೈಫಲ್ಯ ಕಾರಣವಾಗಿದೆ. ಯಾವುದೇ ಕಾನೂನು ತನ್ನಷ್ಟಕ್ಕೆ ತಾನೇ ಜಾರಿಯಾಗುವುದಿಲ್ಲ. ಅದಕ್ಕೆ ಅಧಿಕಾರದಲ್ಲಿ ಇದ್ದವರ ಆಸಕ್ತಿ ಮಾತ್ರವಲ್ಲ ಪ್ರಬಲ ಜನಾಂದೋಲನವೂ ಬೇಕಾಗುತ್ತದೆ. ಈಗಂತೂ ದೇಶದಲ್ಲಿ ಮನುವಾದದ ಪರ ಒಲವು ಇದ್ದವರ ಸರಕಾರವಿದೆ. ಆದರೂ ಈ ಸರಕಾರ ಕೂಡ ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನಿನ ಮೂಲ ಅಂಶಗಳನ್ನು ಉಳಿಸಿಕೊಳ್ಳುವುದಕ್ಕಾಗಿ ತಿದ್ದುಪಡಿ ಮಸೂದೆಗೆ ಸಮ್ಮತಿ ನೀಡಿದೆ. ಇನ್ನು ಮುಂದೆ ಇದರ ಪರಿಣಾಮಕಾರಿ ಜಾರಿಗೆ ಕ್ರಮ ಅಗತ್ಯವಾಗಿದೆ.

ಆದರೆ ದಲಿತರ ಬಗೆಗಿನ ನಮ್ಮ ಸಮಾಜದ ಮೇಲ್ವರ್ಗದ, ಮೇಲ್ಜಾತಿಯ ಜನಗಳ ಮನಸ್ಸು ಇನ್ನೂ ಬದಲಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೇರವಾಗಿ ಹಲ್ಲೆ ಮಾಡುತ್ತಿದ್ದರೆ, ನಗರ ಪ್ರದೇಶದಲ್ಲಿ ಅತ್ಯಂತ ನಯವಾಗಿ ದಲಿತರ ಬಗ್ಗೆ ಅಸಹನೆ ವ್ಯಕ್ತವಾಗುತ್ತಿದೆ. ದಲಿತ, ಅಲ್ಪ ಸಂಖ್ಯಾತ ಸಮುದಾಯದ ಜನರಿಗೆ ಮನೆ ಬಾಡಿಗೆಯೂ ಸಿಗುವುದಿಲ್ಲ, ಸಂವಿಧಾನದತ್ತವಾದ ಮೀಸಲಾತಿ ಹಕ್ಕನ್ನು ಅಪಹರಿಸುವ ಮಸಲತ್ತುಗಳು ನಡೆದಿವೆ.ಈಗಿರುವ ಮೀಸಲಾತಿ ಕೂಡ ಸರಿಯಾಗಿ ಜಾರಿಯಾಗುತ್ತಿಲ್ಲ. ಸರಕಾರದಿಂದ ಕಾನೂನಿನ ಬಲದಿಂದ ತನ್ನಿಂದ ತಾನೇ ನ್ಯಾಯ ಸಿಗುತ್ತದೆ ಎಂಬ ಭ್ರಮೆ ಬೇಡ, ಇದು ಹೋರಾಟ ಮಾಡಿ ಹಕ್ಕು ಉಳಿಸಿಕೊಳ್ಳಬೇಕಾದ ಕಾಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)