varthabharthi


ವೈವಿಧ್ಯ

ಎಸೆಸೆಲ್ಸಿ ಪರೀಕ್ಷೆ ಬರೆಯುವ ಮುನ್ನ...

ವಾರ್ತಾ ಭಾರತಿ : 4 Mar, 2020
ಕೆ. ಎಸ್. ವಿಜಯಕುಮಾರ್, ನಿವೃತ್ತ ಶಿಕ್ಷಕರು, ಬೆಂಗಳೂರು.

2020ನೇ ಸಾಲಿನ ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷೆಯನ್ನೆದುರಿಸುವ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗಾಗಿ ಕೆಲವೊಂದು ಮಾಹಿತಿಗಳು ಇಲ್ಲಿವೆ.

ಪರೀಕ್ಷೆಗೆ ಸಂಬಂಧಿಸಿದಂತೆ ವಿವರಗಳು:

♦ ಇಡೀ ರಾಜ್ಯಕ್ಕೆ ಒಂದೇ ಪ್ರಶ್ನೆ ಪತ್ರಿಕೆ, ಒಂದೇ ವೇಳಾಪಟ್ಟಿ ಇರುತ್ತದೆ.

♦ ಪರೀಕ್ಷೆಯ ಫಲಿತಾಂಶವು ಇಡೀ ರಾಜ್ಯದಲ್ಲಿ ಒಂದೇ ಸಲ ಪ್ರಕಟವಾಗುತ್ತದೆ.

♦ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆಸನದ ವ್ಯವಸ್ಥೆ ಒಂದು ಕೊಠಡಿಗೆ 24ರಂತೆ ಇರುತ್ತದೆ.

♦ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಅವರ ಬಳಿ ಪ್ರವೇಶಪತ್ರ, ಲೇಖನ ಸಾಮಗ್ರಿ ಹೊರತುಪಡಿಸಿ ಮತ್ಯಾವುದೇ ವಸ್ತುಗಳನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗದಂತೆ ನಿರ್ಬಂಧವಿದೆ.

♦ ಕೊಠಡಿ ಮೇಲ್ವಿಚಾರಕರು ಮಂಡಳಿಯಿಂದ ನೀಡಿರುವ ನಾಮಯಾದಿ ಪಟ್ಟಿ ಹಾಗೂ ಪ್ರವೇಶ ಪತ್ರದಲ್ಲಿರುವ ಫೋಟೊ ಮತ್ತು ಸಹಿ ಹಾಗೂ ಅಭ್ಯರ್ಥಿಗಳು ಒಂದೇ ಎಂಬುದನ್ನು ತಾಳೆ ನೋಡಿ ಖಾತ್ರಿ ಮಾಡಿಕೊಳ್ಳುವಂತೆ ಸೂಚಿಸಬೇಕು.

♦ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಪತ್ರಿಕೆಯನ್ನು ಹಂಚುವ ಸಂದರ್ಭದಲ್ಲಿ ಮಾತ್ರ ಮೇಲ್ವಿಚಾರಕರು ಪ್ರಶ್ನೋತ್ತರ ಪತ್ರಿಕೆಗೆ ಸಹಿ ಮಾಡುವುದು. ಪ್ರಶ್ನೋತ್ತರ ಪತ್ರಿಕೆಗಳನ್ನು ಹಂಚುವ ಮೊದಲೇ ಸಹಿ ಮಾಡುವುದನ್ನು ನಿರ್ಬಂಧಿಸಲಾಗಿದೆ.

♦ ಪರೀಕ್ಷಾ ಸಿಬ್ಬಂದಿಯು ಪರೀಕ್ಷಾ ಕೊಠಡಿಯೊಳಗೆ ಅನವಶ್ಯಕವಾಗಿ ಓಡಾಡುವುದು, ಮಾತನಾಡುವುದು ಮತ್ತು ಮಕ್ಕಳನ್ನು ಹೆದರಿಸಬಾರದು.

♦  ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ಆವರಣವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುತ್ತಾರೆ. ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ಸಿಬ್ಬಂದಿಗೆ ಮೊದಲೇ ಗುರುತಿನ ಚೀಟಿ ವಿತರಿಸಲಾಗುತ್ತದೆ.

♦ ನಮೂನೆಯಲ್ಲಿ ಪ್ರಶ್ನೋತ್ತರ ಪತ್ರಿಕೆಯ ಮುದ್ರಿತ ಕ್ರಮಾಂಕವನ್ನು ನಿಗದಿತ ಅಂಕಣದಲ್ಲಿ ಬರೆಯಬೇಕು. ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆ ಕೊಡುವಾಗ ಮತ್ತು ವಾಪಸ್ ಪಡೆಯುವಾಗ ನಿಗದಿತ ಅಂಕಣದಲ್ಲಿ ಸಹಿ ಪಡೆಯಬೇಕು.

♦ ಯಾವುದೇ ಕಾರಣಕ್ಕೂ ಅಭ್ಯರ್ಥಿಯು ಪ್ರಶ್ನೋತ್ತರ ಪತ್ರಿಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕೊಂಡೊಯ್ಯುವಂತಿಲ್ಲ.

♦ ಅಭ್ಯರ್ಥಿಗಳು ಓದುತ್ತಿರುವ ಶಾಲೆಯಿಂದ ಕೆಲವೇ ಕಿ.ಮೀ. ವ್ಯಾಪ್ತಿಯೊಳಗಿನ ಶಾಲೆಗಳ ವ್ಯಾಪ್ತಿಗೆ ಬರುವಂತೆ ಕನಿಷ್ಠ 250ರಿಂದ 500 ಅಭ್ಯರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರವನ್ನು ರಚಿಸಲಾಗುತ್ತದೆ.

♦ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ದಿನಾಂಕದಂದು ನಡೆಯುವ ಪರೀಕ್ಷೆಯ ವಿಷಯವನ್ನು ಬೋಧಿಸುವ ಶಿಕ್ಷಕರು ಕೊಠಡಿ ಮೇಲ್ವಿಚಾರಣೆ ಮಾಡತಕ್ಕದ್ದಲ್ಲ. ಇತರ ಶಿಕ್ಷಕರನ್ನು ಮಾತ್ರ ಈ ಕಾರ್ಯಕ್ಕೆ ಬಳಸಿಕೊಳ್ಳಬೇಕು.

♦ ವಿಕಲಚೇತನ ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತೆ ಸಮೀಪದ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗುತ್ತದೆ.

♦  ಪ್ರತಿ ಕೊಠಡಿಯಲ್ಲಿ ಕನಿಷ್ಠ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ಅಡಚಣೆಯಾಗದಂತೆ ಆಸನ ವ್ಯವಸ್ಥೆ ಮಾಡಬೇಕು.

♦ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವ ಪಟ್ಟಿಯಲ್ಲಿನ ಶಿಕ್ಷಕರನ್ನೇ ನೇಮಿಸಿಕೊಳ್ಳಬೇಕು.

♦ ಪ್ರತಿ ದಿನವೂ ಕೊಠಡಿ ಮೇಲ್ವಿಚಾರಕರು ಬದಲಾಗುವಂತೆ ನೋಡಿಕೊಳ್ಳಬೇಕು.

♦ ವಿದ್ಯಾರ್ಥಿಗಳು, ಪೋಷಕರು ಪರೀಕ್ಷಾ ಸಂದರ್ಭದಲ್ಲಿ ಅಭ್ಯಾಸಕ್ಕಾಗಿ ರಜೆ ನೀಡುತ್ತಾರಾ? ಎಷ್ಟು ದಿನ ಎಂದು ಪ್ರಶ್ನಿಸುತ್ತಾರೆ. ಪರೀಕ್ಷೆ ಮುಗಿಯುವ ತನಕ ವಿದ್ಯಾರ್ಥಿಗಳ ಹಾಜರಾತಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವರ್ಗಾವಣೆ ಪತ್ರ ನೀಡುವಾಗ ಒಟ್ಟು ದಿನಗಳನ್ನು ನಮೂದಿಸುತ್ತಾರೆ. ಆದ್ದರಿಂದ ಯಾವುದೇ ಸ್ಟಡಿ ಹಾಲಿಡೇಸ್ ಶಾಲೆ ನೀಡುವುದಿಲ್ಲ.

♦ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾದರೆ ವಿವಿಧ ಕಾರಣಗಳಿಂದ ಅಥವಾ ಅನುತ್ತೀರ್ಣರಾದರೆ ಭಯ ಪಡಬೇಕಾಗಿಲ್ಲ. ಜೂನ್ ತಿಂಗಳ 2ನೇ ವಾರದಲ್ಲಿ ಪೂರಕ ಪರೀಕ್ಷೆ (ಸಪ್ಲಿಮೆಂಟರಿ ಪರೀಕ್ಷೆ)ಯನ್ನು ಮಾಡಲಾಗುತ್ತದೆ.

♦ ಫಲಿತಾಂಶ ಪ್ರಕಟವಾದ ಮೇಲೂ ಕೂಡ ವಿದ್ಯಾರ್ಥಿಗಳ ಅಂಕಪಟ್ಟಿ, ಫಲಿತಾಂಶಗಳಲ್ಲಿ ವ್ಯತ್ಯಾಸಗಳು ಇದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು. ಮರುಎಣಿಕೆ ಮತ್ತು ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದು ಸರಿಪಡಿಸಿಕೊಳ್ಳಬಹುದು.

♦ ಶಾಲೆಗೆ 100 ಕ್ಕೆ 100 ಫಲಿತಾಂಶ ಬಂದಾಗ ಸರಕಾರವು ಆಯಾ ಶಾಲೆಗೆ ಪ್ರಶಸ್ತಿಪತ್ರ, ನೆನಪಿನ ಕಾಣಿಕೆ ನೀಡಿ ಪುರಸ್ಕರಿಸುತ್ತದೆ.

♦ ಶಾಲೆಗೆ ಶೂನ್ಯ ಫಲಿತಾಂಶ ಅಥವಾ ಕಡಿಮೆ ಫಲಿತಾಂಶ ಬಂದಾಗ ಶಾಲೆಯ ಶಿಕ್ಷಕರಿಗೆ ಶಾಲೆಯ ಆಡಳಿತ ಮಂಡಳಿಗಳಿಗೆ ಕಾರಣ ಕೇಳಿ ಮೆಮೋ ನೀಡುತ್ತಾರೆ. ವಾರ್ಷಿಕ ಭಡ್ತಿಯನ್ನು ಸಹ ತಡೆಯಲು ಅವಕಾಶವಿದೆ.

♦ ಪರೀಕ್ಷಾ ಕಾರ್ಯದಲ್ಲಿ ಯಾವುದೇ ರೀತಿ ಅಕ್ರಮ, ಅವ್ಯವಹಾರ ನಡೆಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಹ ದಂಡನೆ, ಕಾರಾಗೃಹವಾಸ ಶಿಕ್ಷಣ ಕಾಯ್ದೆಯಲ್ಲಿ ಇದೆ.

♦ ಪರೀಕ್ಷಾ ಅವಧಿಯು ಮೂರು ಗಂಟೆಯಾಗಿರುತ್ತದೆ. ದ್ವಿತೀಯ ಭಾಷೆ, ತೃತೀಯ ಭಾಷೆಗೆ ಮಾತ್ರ ಎರಡೂವರೆ ಗಂಟೆ ಇರುತ್ತದೆ.

♦ ಪರೀಕ್ಷಾ ಸಂದರ್ಭದಲ್ಲಿ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೇಡಿಯೊ ಮೂಲಕ ಪ್ರಶ್ನೆಪತ್ರಿಕೆಗಳ ಸ್ವರೂಪ, ಬರೆಯುವ ಶೈಲಿ ಮುಂತಾದ ವಿವರಗಳನ್ನು ಪ್ರತಿದಿನ ಮಧ್ಯಾಹ್ನ 2:30 ಗಂಟೆಗೆ ಬಿತ್ತರಿಸುತ್ತದೆ ಮತ್ತು ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ನೆರವಿಗೆ ಒಂದು ತಿಂಗಳ ಕಾಲ ಸಹಾಯವಾಣಿಯನ್ನು ಬೆಳಗ್ಗೆ 8:00ರಿಂದ ರಾತ್ರಿ 8:00 ರವರೆಗೆ ಕಾರ್ಯ ನಿರ್ವಹಿಸುತ್ತದೆ. ಈ ಕೆಳಕಂಡ ದೂರವಾಣಿಗಳನ್ನು ಸಂಪರ್ಕಿಸಬಹುದು. 080-23310075, 080-23310076

♦ ಪ್ರಶ್ನೆಪತ್ರಿಕೆಗಳ ಅಂಕ ಈ ಕೆಳಕಂಡಂತಿರುತ್ತದೆ.

ಪ್ರಥಮ ಭಾಷೆ- 100, ಉಳಿದ ಎಲ್ಲಾ ಭಾಷೆಗಳು 80, ಒಟ್ಟು- 500. ಆಂತರಿಕ ಚಟುವಟಿಕೆ ಅಂಕಗಳು ಕನ್ನಡ ಭಾಷೆಗೆ- 25 ಉಳಿದ ಎಲ್ಲಾ ಭಾಷೆಗಳಿಗೆ 20 ಒಟ್ಟು- 125 ಎಲ್ಲಾ ವಿಷಯಗಳ ಒಟ್ಟು ಅಂಕಗಳು-625

♦  ಪ್ರಥಮ ಭಾಷೆಯಲ್ಲಿ ಕನಿಷ್ಠ 35 ಅಂಕಗಳು, ಇತರ ಭಾಷೆಗಳಲ್ಲಿ 28 ಅಂಕಗಳನ್ನು ಪಡೆಯಲೇಬೇಕು ಉತ್ತೀರ್ಣರಾಗಲು. ಬಾಹ್ಯ ಪರೀಕ್ಷೆಯ 500 ಅಂಕಗಳಿಗೆ 175 ಕನಿಷ್ಠ ಅಂಕಗಳನ್ನು ಪಡೆದಿರಲೇಬೇಕು. ಶೇ.35 ಅಂಕಗಳನ್ನು ಪಡೆದಿರಬೇಕು.

♦ ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಅವಧಿಯ ನಂತರವೂ ಒಂದು ಗಂಟೆ ಹೆಚ್ಚಿನ ಸಮಯವನ್ನು ನೀಡುತ್ತಾರೆ.

♦ ಪರೀಕ್ಷೆ ತೆಗೆದುಕೊಳ್ಳಲು ಮಕ್ಕಳ ಹಾಜರಾತಿ ಶೇ. 75ರಷ್ಟು ಕಡ್ಡಾಯವಾಗಿರುತ್ತದೆ.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)