varthabharthi

ಸಂಪಾದಕೀಯ

ನಮ್ಮನ್ನಾಳುವವರು ಹರಡುತ್ತಿರುವ ಭೀಕರ ಕೊರೋನ ವೈರಸ್!

ವಾರ್ತಾ ಭಾರತಿ : 4 Mar, 2020

ಈವರೆಗೆ ಎಲ್ಲೋ ದೂರದ ದೇಶಗಳಲ್ಲಷ್ಟೇ ಸುದ್ದಿ ಮಾಡುತ್ತಿದ್ದ ಕೊರೋನ ವೈರಸ್, ನಮ್ಮ ಮನೆಯಂಗಳಕ್ಕೂ ಕಾಲಿಟ್ಟಿದೆ. ಒಂದು ಮೂಲದ ಪ್ರಕಾರ ಭಾರತದಲ್ಲಿ ಕೊರೋನ ಪೀಡಿತರ ಸಂಖ್ಯೆ 28ಕ್ಕೇರಿದೆ. ದಿಲ್ಲಿ , ಹೈದರಾಬಾದ್, ಜೈಪುರ, ಕೇರಳ, ಆಗ್ರಾ ಹೀಗೆ ವಿವಿಧ ಪ್ರದೇಶಗಳಲ್ಲಿ ಸೋಂಕಿತರನ್ನು ಗುರುತಿಸಲಾಗಿದೆ. ಇದೇ ಸಂದರ್ಭದಲ್ಲಿ ದೇಶ ಕೊರೋನ ಕುರಿತಂತೆ ಭಾರೀ ಮುನ್ನೆಚ್ಚರಿಕೆಯನ್ನು ವಹಿಸುತ್ತಿರುವುದು ಅಭಿನಂದನಾರ್ಹ. ಜನರು ಸ್ವಯಂ ಮುನ್ನೆಚ್ಚರಿಕೆಗಳನ್ನು ವಹಿಸದೇ ಕೇವಲ ಸರಕಾರ, ವೈದ್ಯರಿಂದ ಮಾತ್ರ ಇಂತಹ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಿಲ್ಲ. ಆದುದರಿಂದ, ಮೊತ್ತ ಮೊದಲು ಜನರು ಈ ಬಗ್ಗೆ ಜಾಗೃತಿಯನ್ನು ಹೊಂದಬೇಕಾಗಿದೆ. ಇಂತಹ ಸಂದರ್ಭದಲ್ಲಿ ಅನಗತ್ಯ ಪ್ರವಾಸಗಳನ್ನು ಸ್ಥಗಿತಗೊಳಿಸಬೇಕು. ಹಾಗೆಯೇ, ಕೊರೋನ ವೈರಸ್‌ಗಳಿಗೆ ಕಾರಣವಾಗುವ ಅಂಶಗಳನ್ನು ತಿಳಿದುಕೊಂಡು ಅದನ್ನು ಇತರರಿಗೂ ಹಂಚುವುದು ಜನಸಾಮಾನ್ಯರ ಕರ್ತವ್ಯವಾಗಿದೆ. ತನ್ನಲ್ಲಿ ಮಾತ್ರವಲ್ಲ, ಇತರರಲ್ಲೂ ರೋಗಲಕ್ಷಣಗಳು ಕಂಡು ಬಂದರೆ ಅವರಿಗೆ ಸೂಕ್ತ ಮಾರ್ಗದರ್ಶನ, ವೈದ್ಯಕೀಯ ನೆರವು ನೀಡಲು ಮುಂದಾಗಬೇಕಾಗಿದೆ. ಯಾಕೆಂದರೆ, ನೆರೆಯ ವ್ಯಕ್ತಿ ಅನಾರೋಗ್ಯ ಪೀಡಿತನಾಗಿದ್ದರೆ, ಅದು ಅತಿ ಶೀಘ್ರದಲ್ಲಿ ತನ್ನ ಮನೆ ಬಾಗಿಲನ್ನು ತಟ್ಟುತ್ತದೆ ಎನ್ನುವ ಎಚ್ಚರಿಕೆ ಎಲ್ಲರಲ್ಲೂ ಇರಬೇಕಾಗಿದೆ.

ಇದೇ ಸಂದರ್ಭದಲ್ಲಿ ಕೊರೋನ ವೈರಸ್ ಈ ದೇಶದೊಳಗೆ ಬಚ್ಚಿಟ್ಟುಕ್ಕೊಂಡಿರುವ ಅದಕ್ಕಿಂತಲೂ ಭೀಕರವಾದ ಕೆಲವು ವೈರಸ್‌ಗಳನ್ನು ದೇಶಕ್ಕೆ ಪರಿಚಯಿಸಿದೆ. ವೈದ್ಯಕೀಯ ಶಾಸ್ತ್ರದ ಬಗ್ಗೆ ಅನಕ್ಷರಸ್ಥರಾಗಿರುವ ಹಲವರು ಈ ರೋಗಕ್ಕೆ ವಿವಿಧ ಔಷಧಿಗಳನ್ನು ಸೂಚಿಸುತ್ತಾ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇವರಲ್ಲಿ ರಾಜಕಾರಣಿಗಳು, ಸ್ವಾಮೀಜಿಗಳು, ನಕಲಿ ಆಯುರ್ವೇದಿಕ್ ವೈದ್ಯರೂ ಸೇರಿದ್ದಾರೆ. ಗೋವಿನ ಮೂತ್ರ ಸೇವನೆಯಿಂದ ಕೊರೋನ ವೈರಸ್‌ನಿಂದ ಪಾರಾಗಬಹುದು ಎನ್ನುವ ಸಲಹೆಗಳನ್ನು ಸಂಘಪರಿವಾರ ಹಿನ್ನೆಲೆಯಿರುವ ನಾಯಕರು ಪದೇ ಪದೇ ಮಾಧ್ಯಮಗಳಲ್ಲಿ ನೀಡುತ್ತಿದ್ದಾರೆ. ಇದನ್ನು ನಂಬಿದ ಅಮಾಯಕ ಜನರು ಗೋಮೂತ್ರ ಸೇವಿಸಿ ಇತರ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗೋವಿನ ಮೂತ್ರದಲ್ಲಿ ಯಾವುದೇ ಔಷಧೀಯ ಅಂಶಗಳಿಲ್ಲ ಎನ್ನುವುದನ್ನು ಈಗಾಗಲೇ ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರತಿ ದಿನ ಗೋಮೂತ್ರವನ್ನು ಸೇವಿಸುವುದರಿಂದ ಕಿಡ್ನಿಯಂತಹ ಸೂಕ್ಷ್ಮ ಭಾಗಗಳಿಗೆ ಹಾನಿಯಾಗ ಬಹುದು ಎನ್ನುವ ಎಚ್ಚರಿಕೆಯನ್ನು ಕೂಡ ವೈದ್ಯರು ನೀಡಿದ್ದಾರೆ. ಹೀಗಿರುವಾಗ ಕೊರೋನದಿಂದ ರಕ್ಷಣೆಗಾಗಿ ಜನರು ಗೋಮೂತ್ರ ಅಥವಾ ಇನ್ನಿತರ ಹಳ್ಳಿ ಮದ್ದುಗಳಿಗೆ ಮೊರೆ ಹೋಗಿ ರೋಗವನ್ನು ತಾವಾಗಿಯೇ ಆಹ್ವಾನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಆದುದರಿಂದ, ಮೊತ್ತ ಮೊದಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಘದೊಳಗಿರುವ ‘ಗೋಮೂತ್ರ ಔಷಧ ತಜ್ಞ’ರಿಗೆ ಎಚ್ಚರಿಕೆಯನ್ನು ನೀಡಬೇಕು. ಅಥವಾ ಅವರನ್ನು ಗೋಮೂತ್ರದ ಔಷಧಿಗಳ ಜೊತೆಗೆ ಚೀನಾಕ್ಕೆ ರಫ್ತು ಮಾಡಬೇಕು. ಇದೇ ಸಂದರ್ಭದಲ್ಲಿ ‘ಮಾನಸಿಕವಾಗಿ’ ಮಾರಕ ವೈರಸ್‌ಗಳಿಗೆ ಬಲಿಯಾದವರು ಕೂಡ ಬೆಳಕಿಗೆ ಬರುತ್ತಿದ್ದಾರೆ. ನಟ ಅನುಪಮ್ ಖೇರ್ ಕೊರೋನ ಸುರಕ್ಷತೆಯ ಬಗ್ಗೆ ಮಾತನಾಡುತ್ತಾ, ‘ಇಂತಹ ಮಾರಕ ರೋಗದಿಂದ ರಕ್ಷಣೆ ಪಡೆಯುವುದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಹಸ್ತಲಾಘವದ ಬದಲು ಕೈಜೋಡಿಸಿ ನಮಸ್ಕರಿಸುವ ಪದ್ಧತಿಯಿದೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಕೊರೋನ ವೈರಸ್ ಹುಟ್ಟುವುದಕ್ಕಿಂತ ಹಲವು ಶತಮಾನಗಳ ಹಿಂದೆಯೇ ಈ ದೇಶದಲ್ಲಿ ‘ಜಾತೀಯತೆ’ ಎನ್ನುವ ವೈರಸ್ ಹುಟ್ಟಿ, ಅದು ಈಗಲೂ ಈ ದೇಶದ ಜನರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ನಮ್ಮ ಕೈಗೆ ನಮ್ಮದೇ ಕೈಗಳನ್ನು ಜೋಡಿಸಿ ನಮಸ್ಕರಿಸುವುದರ ಹಿಂದೆ ‘ಅಸ್ಪಶ್ಯತೆ’ಯ ಹಿನ್ನೆಲೆಯಿದೆಯೇ ಹೊರತು ಯಾವುದೇ ಆರೋಗ್ಯದ ಕಾರಣಗಳು ಇಲ್ಲ. ಈ ಭಾರತ ತಲೆ ತಲಾಂತರಗಳಿಂದ ಜಾತೀಯ ವೈರಸ್ ಕಾರಣದಿಂದ ಸ್ಪರ್ಶಕ್ಕೆ ಹೆದರುತ್ತಾ ಬಂದಿದೆ. ಇದೀಗ ಆ ಜಾತೀಯ ವೈರಸ್‌ನ್ನು ಸಮರ್ಥಿಸುವುದಕ್ಕೋಸ್ಕರ ಅನುಪಮ್ ಖೇರ್‌ರಂತಹ ಕಲಾವಿದರು ಕೊರೋನ ರೋಗವನ್ನು ಬಳಸುತ್ತಿರುವುದು ಖೇದಕರವಾಗಿದೆ. ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ಹೋಳಿ ಹಬ್ಬದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಾಧ್ಯಮಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೊರೋನ ಈ ದೇಶಕ್ಕೆ ಕಾಲಿಡುವ ಮೊದಲೇ ದಿಲ್ಲಿಯಲ್ಲಿ 40ಕ್ಕೂ ಅಧಿಕ ಮಂದಿ ರಕ್ತದ ಓಕುಳಿಯಲ್ಲಿ ಮೃತಪಟ್ಟಿದ್ದಾರೆ. ಯಾವುದೇ ಕೊರೋನಕ್ಕಿಂತ ಭೀಕರವಾಗಿರುವ ಕೋಮು ವೈರಸ್ ಪೀಡಿತ ಜನರಿಂದ ಈ ಸಾವು ಸಂಭವಿಸಿದೆ. ದಿಲ್ಲಿಯ ಬೀದಿಗಳಲ್ಲಿ ಮಾರಕ ‘ರೆಂಬಿ’ಗಳಾಗಿ ವಿಜೃಂಭಿಸಿ ಅಮಾಯಕರನ್ನು ಇವರು ತಿಂದು ಹಾಕಿದ್ದಾರೆ. ನೂರಾರು ಮನೆ, ಅಂಗಡಿಗಳನ್ನು ಬೆಂಕಿ ಹಚ್ಚಿ ನಾಶಗೊಳಿಸಿದ್ದಾರೆ. ದೇಶಾದ್ಯಂತ ಈ ವೈರಸ್ ಇನ್ನಷ್ಟು ಭೀಕರವಾಗಿ ಹಬ್ಬಿಸುವ ಪ್ರಯತ್ನದಲ್ಲಿದ್ದಾರೆ ಗೃಹ ಸಚಿವರಾಗಿರುವ ಅಮಿತ್ ಶಾ ಮತ್ತು ಅವರ ಹಿಂಬಾಲಕರು. ಕೊರೋನ ವೈರಸ್ ದೇಹವನ್ನಷ್ಟೇ ಬಲಿ ತೆಗೆದುಕೊಳ್ಳುತ್ತದೆ. ಆದರೆ ಸಂಘಪರಿವಾರ ಹಬ್ಬಿಸುತ್ತಿರುವ ವೈರಸ್ ದೇಹ, ಮನಸ್ಸುಗಳ ಜೊತೆ ಜೊತೆಗೇ ದೇಶವನ್ನೇ ನಾಶ ಮಾಡಲು ಮುಂದಾಗಿದೆ. ನರೇಂದ್ರ ಮೋದಿ ಕೊರೋನಕ್ಕೆ ಹೆದರಿ ಹೋಳಿಯಿಂದ ಹಿಂದೆ ಸರಿದಿದ್ದಾರೆ. ಆದರೆ ಅದಾಗಲೇ ಅವರ ದೇಹ ಅಮಾಯಕರ ರಕ್ತದಿಂದ ಕೆಂಪಾಗಿದೆ. ದಿಲ್ಲಿಯಲ್ಲಿ ಅವರ ಸಹೋದ್ಯೋಗಿಗಳು ರಕ್ತದಿಂದಲೇ ಹೋಳಿಯಾಡಿದ್ದಾರೆ. ಅಷ್ಟೇ ಅಲ್ಲ, ದಿಲ್ಲಿಯನ್ನು ಆಹುತಿ ತೆಗೆದ ವೈರಸ್‌ನ್ನು ಇದೀಗ ಸಿಎಎ ಕಾಯ್ದೆಯ ಹೆಸರಲ್ಲಿ ದೇಶಾದ್ಯಂತ ಹರಡುವ ಕೆಲಸ ಸ್ವತಃ ಪ್ರಧಾನಿ ಮತ್ತು ಗೃಹ ಸಚಿವರಿಂದಲೇ ನಡೆಯುತ್ತಿದೆ. ಕೊರೋನದಿಂದ ರಕ್ಷಿಸಲು ಈ ದೇಶದ ತಜ್ಞ ವೈದ್ಯರಿದ್ದಾರೆ. ಆದರೆ ನಮ್ಮನ್ನಾಳುವವರು ಹರಡುತ್ತಿರುವ ಅದಕ್ಕಿಂತಲೂ ಭೀಕರ ವೈರಸ್‌ನಿಂದ ಈ ದೇಶವನ್ನು ರಕ್ಷಿಸುವವರು ಯಾರು? ಎನ್ನುವ ಪ್ರಶ್ನೆಗೆ ತುರ್ತಾಗಿ ಉತ್ತರ ಕಂಡುಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)