varthabharthi

ವಿಶೇಷ-ವರದಿಗಳು

ವೈರಲ್ ಆಗುತ್ತಿರುವ ವಿಡಿಯೋದ ಹಿಂದಿನ ಸತ್ಯಾಂಶವೇನು?

ಅಹಿಂಸೆಗೆ ಕರೆ ನೀಡಿದ್ದ ಹರ್ಷ ಮಂದರ್ ಮಾತುಗಳನ್ನು 'ಹಿಂಸೆಗೆ ಪ್ರೇರೇಪಣೆ' ಎಂದು ತಿರುಚಿದ ಬಿಜೆಪಿ ಐಟಿ ಸೆಲ್!

ವಾರ್ತಾ ಭಾರತಿ : 5 Mar, 2020
ಪೂಜಾ ಚೌಧುರಿ, AltNews.in

ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರು ನ್ಯಾಯಾಂಗವನ್ನು ನಿಂದಿಸಿ ಭಾಷಣ ಮಾಡಿದ್ದಾರೆ ಎನ್ನುವ  ಪ್ರಕರಣ ಇತ್ಯರ್ಥಗೊಳಿಸದ ಹೊರತು ಬಿಜೆಪಿ ನಾಯಕರ ದ್ವೇಷ ಭಾಷಣಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅವರು ಸಲ್ಲಿಸಿರುವ  ಅಪೀಲನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಹರ್ಷ ಮಂದರ್ ಅವರು ನ್ಯಾಯಾಂಗದ ವಿರುದ್ಧ ನೀಡಿದ್ದಾರೆನ್ನಲಾದ ಹೇಳಿಕೆಗಳನ್ನು ಬಿಜೆಪಿ ಸರಕಾರದ MyGov Indiaದ ಮಾಜಿ ನಿರ್ದೇಶಕ ಅಖಿಲೇಶ್ ಮಿಶ್ರಾ ಕೂಡ ತಮ್ಮ ಟ್ವೀಟ್ ಒಂದರಲ್ಲಿ ಉಲ್ಲೇಖಿಸಿದ್ದರು. ಹರ್ಷ ಮಂದರ್ ವಿರುದ್ಧ ದಿಲ್ಲಿ ಪೊಲೀಸರ ಕಾನೂನು ಘಟಕದ ಡಿಸಿಪಿ ಸಲ್ಲಿಸಿದ್ದ ಅಫಿಡವಿಟ್ ಅನ್ನೂ ಅವರು ಶೇರ್ ಮಾಡಿದ್ದರು.

ಹರ್ಷ ಮಂದರ್ ಅವರು ಸುಪ್ರೀಂ ಕೋರ್ಟನ್ನು ನಿಂದಿಸಿದ್ದೇ ಅಲ್ಲದೆ ಹಿಂಸೆಯನ್ನು ಪ್ರಚೋದಿಸಿದ್ದಾರೆಂದು ಅದರಲ್ಲಿ ಆರೋಪಿಸಲಾಗಿತ್ತು. "ನ್ಯಾಯದ ಚಕ್ರ ತಿರುಗಲು ಆರಂಭಿಸಿದೆ. ರಸ್ತೆಗಳಲ್ಲಿ ಹಿಂಸೆಯನ್ನು ಸೃಷ್ಟಿಸಲು ಹಾಗೂ ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸಲು ಸಂಚು ಹೂಡುವವರೆಲ್ಲರೂ ಕಾನೂನನ್ನು ಎದುರಿಸಬೇಕು" ಎಂದು ಮಿಶ್ರಾ ತಮ್ಮ ಟ್ವೀಟ್ ನಲ್ಲಿ ಬರೆದಿದ್ದರು.

ವೆಬ್ ತಾಣ OpIndiaದಲ್ಲಿ ಪ್ರಕಟಗೊಂಡ ಲೇಖನದಿಂದ ಈ ವಿವಾದ ಹುಟ್ಟಿಕೊಂಡಿದೆ:  "ವೀಕ್ಷಿಸಿ: 'ಅಯ್ಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ಜಾತ್ಯತೀತತೆಯನ್ನು ಕಾಪಾಡಿಲ್ಲ, ಆದುದರಿಂದ ಬೀದಿಗಿಳಿಯುವ ಜಾಲ ಬಂದಿದೆ: ಹರ್ಷ ಮಂದರ್‍ರಿಂದ ಹಿಂಸೆಗೆ ಪ್ರಚೋದನೆ'' ಎಂದು ಲೇಖನದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಹರ್ಷ ಮಂದರ್ ಅವರ ಭಾಷಣದ ತುಣುಕೊಂದನ್ನು ಶೇರ್ ಮಾಡಿರುವ, ತನ್ನನ್ನು `ಸ್ವಯಂಸೇವಕ್' ಎಂದು ಗುರುತಿಸಿಕೊಳ್ಳುವ ಟ್ವಿಟ್ಟರಿಗ ರಾಹುಲ್ ಕೌಶಿಕ್ ಎಂಬಾತ, "ದೇಶದಲ್ಲಿನ ವಾತಾವರಣ ಹಾಳು ಮಾಡುತ್ತಿರುವವರು ಯಾರೆಂಬ ವಿಚಾರದಲ್ಲಿ ಸಂಶಯವಿದೆಯೇ?" ಎಂದು ಪ್ರಶ್ನಿಸಿದ್ದಾನೆ.

"ಈ ಹೋರಾಟ ಸುಪ್ರೀಂ ಕೋರ್ಟಿನಲ್ಲಿ ಗೆಲ್ಲುವುದಿಲ್ಲ. ಎನ್‍ಆರ್‍ ಸಿ, ಅಯ್ಯೋಧ್ಯೆ, ಕಾಶ್ಮೀರ ಕುರಿತಾದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟನ್ನು ಗಮನಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ಮಾನವೀಯತೆ, ಸಮಾನತೆ ಹಾಗೂ ಜಾತ್ಯತೀತತೆ ಎತ್ತಿ ಹಿಡಿಯಲು ವಿಫಲವಾಗಿದೆ. ನಾವು ಸುಪ್ರೀಂ ಕೋರ್ಟಿನಲ್ಲಿ ಪ್ರಯತ್ನಿಸುವುದನ್ನು ಮುಂದುವರಿಸುತ್ತೇವೆ. ಅದು ನಮ್ಮ ಸುಪ್ರೀಂ ಕೋರ್ಟ್,  ಆದರೆ ನಿರ್ಧಾರ ಸಂಸತ್ತಿನಲ್ಲಿ ಅಥವಾ ಸುಪ್ರೀಂ ಕೋರ್ಟಿನಲ್ಲಾಗುವುದಿಲ್ಲ. ನಮ್ಮ ದೇಶದ ಭವಿಷ್ಯವೇನು. ನೀವೆಲ್ಲರೂ ಯುವಕರು. ಯಾವ ರೀತಿಯ ದೇಶವನ್ನು ನಿಮ್ಮ ಮಕ್ಕಳಿಗೆ  ಉಳಿಸುತ್ತೀರಿ-- ಈ ನಿರ್ಧಾರ ಎಲ್ಲಾಗುವುದು ?, ಅದು ರಸ್ತೆಗಳಲ್ಲಾಗುವುದು, ನಾವು  ಬೀದಿಗಿಳಿದಿದ್ದೇವೆ...'' ಎಂದು ಮಂದರ್ ವಿಡಿಯೋದಲ್ಲಿ ಹೇಳುತ್ತಿರುವುದು ಕೇಳಿಸುತ್ತದೆ. ಇಲ್ಲಿಗೆ ವಿಡಿಯೋ ನಿಲ್ಲುತ್ತದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಕೂಡ ಇದೇ ವೀಡಿಯೋ ಕ್ಲಿಪ್ ಶೇರ್ ಮಾಡಿ ಹರ್ಷ ಮಂದರ್ ಹೇಳಿದ್ದಾರೆನ್ನಲಾದ ಮಾತುಗಳನ್ನು ಹೀಗೆ ಬರೆದಿದ್ದರು. "ಈಗ ನಿರ್ಧಾರವನ್ನು ಸಂಸತ್ತು ಅಥವಾ ಸುಪ್ರೀಂ ಕೋರ್ಟಿನಲ್ಲಿ ತೆಗೆದುಕೊಳ್ಳಲಾಗುವುದಿಲ್ಲ,  ಅಯೋಧ್ಯೆ ಮತ್ತು ಕಾಶ್ಮೀರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಜಾತ್ಯತೀತತೆಯನ್ನು ರಕ್ಷಿಸಿಲ್ಲ. ಇದೇ ಕಾರಣಕ್ಕೆ ನಿರ್ಧಾರವನ್ನು ಈಗ ಬೀದಿಗಳಲ್ಲಿ ತೆಗೆದುಕೊಳ್ಳಲಾಗುವುದು'' ಎಂದು ಮಾಳವಿಯ ಹರ್ಷ ಮಂದರ್ ಮಾತುಗಳನ್ನು ತಿರುಚಿ ಬರೆದಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು Free Press Journal  ಒಂದು ವರದಿ ಪ್ರಕಟಿಸಿತ್ತು. ಝೀ ನ್ಯೂಸ್ ನ ಒಂದು ವರದಿ ಹಾಗೂ ಲೋಕ್‍ ಮತ್‍ ನ ಮರಾಠಿ ವರದಿಯಲ್ಲೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಟ್ವೀಟ್ ಉಲ್ಲೇಖವಾಗಿತ್ತು. ಹರ್ಯಾಣದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅರುಣ್ ಯಾದವ್ ಹಾಗೂ ಕರ್ನಾಟಕ ಸಚಿವ ಸಿ ಟಿ ರವಿ ಕೂಡ ಇದೇ ವೀಡಿಯೋ ಶೇರ್ ಮಾಡಿದ್ದರು.

ವೀಡಿಯೋದಲ್ಲೇನಿದೆ ?

ಡಿಸೆಂಬರ್ 16ರಂದು ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ಮಂದರ್ ಈ ಭಾಷಣ ಮಾಡಿದ್ದರು. ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಮಾನ ಹಕ್ಕುಗಳಿವೆ ಎಂದು ಅವರು ಹೇಳಿದ್ದರು. ವಿವಿ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ ನಂತರ ಈ ಭಾಷಣ ನೀಡಲಾಗಿತ್ತು.

ವೀಡಿಯೋದಲ್ಲಿ ಸರಿಯಾಗಿ 3:40 ನಿಮಿಷಗಳಲ್ಲಿ ಮಂದರ್ ಹೀಗೆ ಹೇಳುತ್ತಾರೆ "ನಿಮ್ಮಿಂದ ನಿಮ್ಮ ಹಕ್ಕುಗಳನ್ನು ಕಸಿಯುವ ಮಾತನಾಡುವವರ ವಿರುದ್ಧ ದೇಶದಲ್ಲಿ ಪ್ರತಿಭಟನೆಯ ಅಲೆ ಎದ್ದಿದೆ. ಈ ಪ್ರತಿಭಟನೆಗಳು ನಮ್ಮ ಸಂವಿಧಾನದ ಆತ್ಮವನ್ನು ರಕ್ಷಿಸಲು. ಇದೇ ಕಾರಣದಿಂದ ನಾವು ಬೀದಿಗಿಳಿದಿದ್ದೇವೆ ಹಾಗೂ ಮುಂದೆಯೂ ಹಾಗೆಯೇ ಮಾಡುತ್ತೇವೆ. ಈ ಹೋರಾಟವನ್ನು ಸಂಸತ್ತಿನಲ್ಲಿ ಗೆಲ್ಲಲು ಸಾಧ್ಯವಿಲ್ಲ ಏಕೆಂದರೆ ಜಾತ್ಯತೀತ ಎಂದು ತಮ್ಮನ್ನು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಹೋರಾಡುವ ನೈತಿಕ ಧೈರ್ಯವಿಲ್ಲ. ಈ ಹೋರಾಟವನ್ನು ಸುಪ್ರೀಂ  ಕೋರ್ಟಿನಲ್ಲಿಯೂ ಗೆಲ್ಲಲ್ಲು ಸಾಧ್ಯವಿಲ್ಲ. ಇಲ್ಲಿಂದ ಆರಂಭಗೊಂಡು ಮಂದರ್ ಹೇಳಿದ ಮಾತುಗಳನ್ನು ವೈರಲ್ ಆಗಿರುವ ವೀಡಿಯೋ ಕ್ಲಿಪ್‍ ನಲ್ಲಿ ತೋರಿಸಲಾಗಿದೆ.

"ಅದು ರಸ್ತೆಗಳಲ್ಲಿ ನಡೆಯಲಿದೆ. ನಾವು ಬೀದಿಗಿಳಿದಿದ್ದೇವೆ'' ಎಂದು ಮಂದರ್ ಹೇಳುವಲ್ಲಿಯ ತನಕ ವೈರಲ್ ವೀಡಿಯೋದಲ್ಲಿ ತೋರಿಸಲಾಗಿದೆ. ಆದರೆ ಮೂಲ ವೀಡಿಯೋದಲ್ಲಿ ಮಂದರ್ ಭಾಷಣ ಅಲ್ಲಿಗೆ ಮುಗಿಯುವುದಿಲ್ಲ. ಮುಂದುವರಿದು ಮಾತನಾಡುವ ಅವರು, "ಹೋರಾಟ ರಸ್ತೆಗಳಾಚೆಯೂ  ನಡೆಯುವುದು,  ಅಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಈ ಹೋರಾಟದ ನಿರ್ಧಾರ ಮಾಡುವ ಸ್ಥಳವಾದರೂ ಯಾವುದು ?, ಅದು ನಮ್ಮ ಹೃದಯಗಳಲ್ಲಿದೆ. ನನ್ನ ಹೃದಯ ಹಾಗೂ ನಿಮ್ಮ ಹೃದಯ. ನಾವು ಪ್ರತಿಕ್ರಿಯಿಸಬೇಕಾಗಿದೆ. ಅವರು ನಮ್ಮ  ಹೃದಯಗಳಲ್ಲಿ ದ್ವೇಷ ತುಂಬಲು ಬಯಸಿದರೆ  ಹಾಗೂ ನಾವು ದ್ವೇಷದಿಂದಲೇ  ಪ್ರತಿಕ್ರಿಯಿಸಿದರೆ ದ್ವೇಷ ಇನ್ನಷ್ಟು ಆಳವಾಗುತ್ತದೆ. ಅವರ ದ್ವೇಷಕ್ಕೆ ನಮ್ಮ ಬಳಿಯಿರುವ ಒಂದೇ ಉತ್ತರ ಪ್ರೀತಿ. ಅವರು ಹಿಂಸೆಯಲ್ಲಿ ತೊಡಗಿ ನೀವೂ ಹಿಂಸೆಯಲ್ಲಿ ತೊಡಗುವಂತೆ ಪ್ರೇರೇಪಿಸಬಹುದು. ಆದರೆ ನಾವು ಯಾವತ್ತೂ ಹಿಂಸೆಯಲ್ಲಿ ತೊಡಗುವುದಿಲ್ಲ. ನಿಮ್ಮನ್ನು ಹಿಂಸೆಗೆ ಪ್ರೇರೇಪಿಸಿ ನೀವು ಶೇ.2ರಷ್ಟು ಹಿಂಸೆ ನಡೆಸಿದರೆ ಅವರು ಶೇ 100ರಷ್ಟು ಹಿಂಸೆ ಮೂಲಕ ಪ್ರತಿಕ್ರಿಯಿಸುತ್ತಾರೆ. ಹಿಂಸೆ ಹಾಗೂ ಅನ್ಯಾಯದ ವಿರುದ್ಧ ಹೇಗೆ ಹೋರಾಡಬೇಕೆಂದು ಗಾಂಧೀಜಿಯ ಮೂಲಕ ತಿಳಿದುಕೊಂಡಿದ್ದೇವೆ. ನಾವು ಅಹಿಂಸೆಯ ಮೂಲಕ ಹೋರಾಡುತ್ತೇವೆ. ನಿಮ್ಮನ್ನು ಹಿಂಸೆಗೆ ಪ್ರೇರೇಪಿಸುವವರು ನಿಮ್ಮ ಸ್ನೇಹಿತರಲ್ಲ'' ಎಂದು ಮಂದರ್ ಹೇಳಿದ್ದರು.

ಮಂದರ್ ಅವರು ಹಿಂಸೆಯನ್ನು ಪ್ರೇರೇಪಿಸದೆ ಶಾಂತಿ ಹಾಗೂ ಅಹಿಂಸೆಯ ಮೂಲಕ ಅನ್ಯಾಯದ ವಿರುದ್ಧ ಹೋರಾಡಲು ಕರೆ ನೀಡಿದ್ದರು. ಅವರ ಭಾಷಣದ ಈ ಭಾಗವನ್ನು ಅವರ ಸಂಘಟನೆ 'ಕಾರವಾನ್ ಇ ಮೊಹಬ್ಬತ್' ಟ್ವೀಟ್ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)