varthabharthi

ಸಂಪಾದಕೀಯ

ಕೋಮು ಹಿಂಸಾಚಾರ ತಡೆ ಕಾಯ್ದೆ ಜಾರಿಗೊಳಿಸಲು ಇರುವ ಅಡ್ಡಿಯೇನು?

ವಾರ್ತಾ ಭಾರತಿ : 6 Mar, 2020

ದಿಲ್ಲಿಯಲ್ಲಿ ನಡೆದಿರುವ ಕೋಮು ಹಿಂಸಾಚಾರ ವಿಶ್ವದಾದ್ಯಂತ ಸುದ್ದಿಯಾಗುತ್ತಿದೆ ಮಾತ್ರವಲ್ಲ, ಅಲ್ಪಸಂಖ್ಯಾತರ ಕುರಿತಂತೆ ಭಾರತ ಸರಕಾರದ ನಿಲುವುಗಳು ವ್ಯಾಪಕ ಟೀಕೆಗಳಿಗೆ ಒಳಗಾಗುತ್ತಿವೆ. ಇದೇ ಮೊದಲ ಬಾರಿಗೆ, ವಿಶ್ವ ಶಾಂತಿ, ಸೌಹಾರ್ದದ ಕುರಿತಂತೆ ಅತ್ಯಂತ ಗಟ್ಟಿ ಧ್ವನಿಯಲ್ಲಿ ಭಾರತಕ್ಕೆ ಪಾಠ ಮಾಡತೊಡಗಿವೆ. ದೇಶದ ಜಾತ್ಯತೀತ ವೌಲ್ಯಗಳಿಗೆ ಮುಕ್ಕುಂಟಾಗಿವೆ. ಅಷ್ಟೇ ಅಲ್ಲ, ದಿಲ್ಲಿಯ ಆರ್ಥಿಕ ವ್ಯವಹಾರದ ಮೇಲೂ ಈ ಹಿಂಸಾಚಾರ ಭಾರೀ ದುಷ್ಪರಿಣಾಮಗಳನ್ನು ಬೀರುತ್ತಿವೆ. ಭಾರತಕ್ಕೆ ಪ್ರವಾಸ ಹೋಗದಂತೆ ವಿವಿಧ ರಾಷ್ಟ್ರಗಳು ಈಗಾಗಲೇ ತನ್ನ ಜನಗಳಿಗೆ ಕರೆಗಳನ್ನು ನೀಡಿವೆ. ಬಂಡವಾಳ ಹೂಡುವವರು ಹಿಂದಕ್ಕೆ ಸರಿಯುತ್ತಿದ್ದಾರೆ. ದಿಲ್ಲಿ ಹಿಂಸಾಚಾರ ಭಾರತದ ಭವಿಷ್ಯವನ್ನು ಇನ್ನಷ್ಟು ಕರಾಳತೆಯೆಡೆಗೆ ದೂಡಿದೆ.

ದಿಲ್ಲಿಯ ಹಿಂಸಾಚಾರ ಪೂರ್ವ ನಿಯೋಜಿತ ಮತ್ತು ಏಕಪಕ್ಷೀಯ ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ವರದಿ ಸ್ಪಷ್ಟವಾಗಿ ಹೇಳಿದೆ. ದಂಗೆಗಾಗಿಯೇ ಹೊರಗಿನಿಂದ ಸುಮಾರು 2,000 ಜನರನ್ನು ತರಲಾಗಿತ್ತು ಎನ್ನುವ ಆಘಾತಕಾರಿ ಅಂಶವನ್ನು ಅದು ಬಹಿರಂಗಪಡಿಸಿದೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 102 ಜನರಿಗೆ ಗುಂಡಿನ ಗಾಯಗಳಾಗಿದೆ. 172 ಜನರಿಗೆ ಹರಿತವಾದ ಆಯುಧ ಮತ್ತು ಕಲ್ಲೇಟುಗಳಿಂದ ಗಾಯಗಳಾಗಿವೆ. 53 ಮಂದಿ ಮೃತಪಟ್ಟಿದ್ದರೆ ಇವರಲ್ಲಿ 20ಕ್ಕೂ ಅಧಿಕ ಮಂದಿ ಗುಂಡಿನ ದಾಳಿಯಿಂದಲೇ ಮೃತಪಟ್ಟಿದ್ದಾರೆ ಎನ್ನುವುದನ್ನು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸುತ್ತವೆ. ಈ ಎಲ್ಲ ಹಿಂಸೆಗೆ ಯಾರನ್ನು ಹೊಣೆ ಮಾಡಬೇಕು ? ಎನ್ನುವುದು ಈಗ ಚರ್ಚೆಯಲ್ಲಿದೆ. ತನಿಖಾ ತಂಡಗಳು ಹಿಂಸಾಚಾರದ ಕುರಿತಂತೆ ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ಮಗದೊಂದೆಡೆ ಹಿಂಸಾಚಾರಕ್ಕೆ ಸಂತ್ರಸ್ತ ಸಮುದಾಯವನ್ನು ಕೂಡ ಹೊಣೆ ಮಾಡುವ ಪ್ರಯತ್ನವೊಂದು ನಡೆಯುತ್ತಿದೆ. ಪೊಲೀಸರು ಹೆಚ್ಚೆಂದರೆ, ಈಗಾಗಲೇ ರೌಡಿಶೀಟರ್‌ಗಳಾಗಿರುವ, ಕ್ರಿಮಿನಲ್ ಪ್ರಕರಣಗಳಲ್ಲಿ ಒಳಗೊಂಡಿರುವ ಒಂದಿಷ್ಟು ಜನರನ್ನು ಗುರುತಿಸಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದು. ಆದರೆ ಇಷ್ಟಕ್ಕೇ ಸಂತ್ರಸ್ತರಿಗೆ ನ್ಯಾಯ ದೊರಕಿದಂತಾಗುವುದಿಲ್ಲ. ಹಿಂಸಾಚಾರದ ಹಿಂದೆ ರಾಜಕೀಯ ಶಕ್ತಿಗಳು ಪಾತ್ರವಹಿಸಿರುವ ಬಗ್ಗೆ ಸ್ಪಷ್ಟ ದಾಖಲೆಗಳಿವೆ.

ಬಿಜೆಪಿ ನಾಯಕನೊಬ್ಬ, ಈ ಬಗ್ಗೆ ನಾಲ್ಕು ದಿನಗಳ ಹಿಂದೆಯೇ ದಿಲ್ಲಿಯ ಮುಸ್ಲಿಮರಿಗೆ ಬೆದರಿಕೆಯನ್ನು ಒಡ್ಡಿದ್ದ. ಸಂಸದನೊಬ್ಬ ಬಹಿರಂಗವಾಗಿಯೇ ‘ಗೋಲಿ ಮಾರೋ ಸಾಲೋಂಕೋ’ ಘೋಷಣೆಯನ್ನು ಕೂಗಿದ್ದ. ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾದವರು ಆಯುಧಗಳು ಮಾತ್ರ. ಮರೆಯಲ್ಲಿ ನಿಂತು ಈ ಆಯುಧಗಳನ್ನು ಬಳಸಿದವರನ್ನು ಗುರುತಿಸುವ ಕೆಲಸ ನಡೆದರೆ ಮಾತ್ರ, ಇನ್ನೊಂದು ಹಿಂಸಾಚಾರ ಮರುಕಳಿಸದಂತೆ ತಡೆಯಬಹುದು. ಭಾರತಕ್ಕೆ ಕೋಮು ಹಿಂಸಾಚಾರ ಹೊಸದೇನೂ ಅಲ್ಲ. ಈ ದೇಶದ ಸಂವಿಧಾನದ ಆತ್ಮವನ್ನೇ ಘಾಸಿಗೊಳಿಸಿದ ಹಲವು ಗಲಭೆಗಳು ಭಾರತದಲ್ಲಿ ನಡೆದಿವೆ. ಸಿಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡ, ಮುಂಬಯಿ ಗಲಭೆ, ಸುರತ್ಕಲ್ ಗಲಭೆ ಹೀಗೆ ಹತ್ತು ಹಲವು ಹತ್ಯಾಕಾಂಡಗಳಿಂದ ಈ ದೇಶ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಕೋಮು ಹಿಂಸೆಯನ್ನು ತಡೆಯುವುದಕ್ಕಾಗಿಯೇ ವಿಶೇಷ ಕಾಯ್ದೆಯೊಂದನ್ನು ಜಾರಿಗೊಳಿಸುವ ಕುರಿತಂತೆ ಯುಪಿಎ ಸರಕಾರದ ಅವಧಿಯಲ್ಲಿ ಚರ್ಚೆ ನಡೆದಿತ್ತು. ಈ ದೇಶದ ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಬಹುದಾದ ಈ ಮಸೂದೆ ಬೇರೆ ಬೇರೆ ಕಾರಣಗಳಿಗೆ ನನೆಗುದಿಗೆ ಬಿತ್ತು.

ಕೋಮು ಹಿಂಸೆ (ತಡೆ, ನಿಯಂತ್ರಣ ಮತ್ತು ಸಂತ್ರಸ್ತರ ಪುನರ್ವಸತಿ) ಮಸೂದೆ 2005ರಿಂದ 2014ರವರೆಗೆ ಸಂಸತ್‌ನಲ್ಲೇ ಅಂಗಳದಲ್ಲೇ ಇದ್ದು, ಕೆಲವು ರಾಜಕೀಯ ಶಕ್ತಿಗಳಿಗೆ ಕೋಮುಗಲಭೆಗಳೇ ರಾಜಕೀಯ ಅಸ್ತ್ರವಾಗಿರುವುದರಿಂದಲೋ ಏನೋ, ಕಾಯ್ದೆ ಜಾರಿಗೊಳ್ಳುವಲ್ಲಿ ವಿಫಲವಾಯಿತು. ಕೇಂದ್ರ ಸಚಿವ ಸಂಪುಟ ಕೋಮು ಹಿಂಸೆ ತಡೆ (ನ್ಯಾಯ ಪಡೆಯುವ ಮತ್ತು ಪರಿಹಾರ) ಮಸೂದೆ-2014ಗೆ ಒಪ್ಪಿಗೆ ನೀಡಿದರೂ ಅದು ಸಮಯದ ಅಭಾವದಿಂದಾಗಿ ಸಂಸತ್ತಿಗೆ ಬರಲೇ ಇಲ್ಲ. ಕೊನೆಗೆ ಯುಪಿಎ ಸರಕಾರ ಅದನ್ನು ರದ್ದುಪಡಿಸಿತು. ಆದರೆ ಈ ಕಾನೂನಿನ ಬಗ್ಗೆ ಕಳೆದ ಆರು ವರ್ಷಗಳಲ್ಲಿ ಎನ್‌ಡಿಎ ಸರಕಾರವಾಗಲೀ, ವಿರೋಧ ಪಕ್ಷವಾದ ಯುಪಿಎ ಆಗಲೀ ಚಕಾರ ಎತ್ತಿಲ್ಲ. ದಿಲ್ಲಿ ಕೋಮು ಹಿಂಸಾಚಾರ 53 ಜೀವಗಳನ್ನು ಬಲಿಪಡೆದ ಹಿನ್ನೆಲೆಯಲ್ಲಿ ಈ ಮಸೂದೆ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೋಮು ಹಿಂಸೆ (ತಡೆ, ನಿಯಂತ್ರಣ ಮತ್ತು ಸಂತ್ರಸ್ತರ ಪುನರ್ವಸತಿ) ಮಸೂದೆಯನ್ನು ಅಂದಿನ ಗೃಹಸಚಿವ ಶಿವರಾಜ್ ಪಾಟೀಲ್ ರಾಜ್ಯಸಭೆಯಲ್ಲಿ 2005ರ ಡಿಸೆಂಬರ್ 5ರಂದು ಮಂಡಿಸಿದ್ದರು. ಸುಷ್ಮಾ ಸ್ವರಾಜ್ ನೇತೃತ್ವದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಇದರ ಪರಾಮರ್ಶೆ ನಡೆಸಿ 2006ರಲ್ಲಿ ವರದಿ ನೀಡಿತ್ತು. ಆದರೆ ಸತತ ಎರಡು ಅವಧಿಯಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದರೂ, ಮಸೂದೆಗೆ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. 2004 ಹಾಗೂ 2009ರ ಚುನಾವಣೆಯಲ್ಲಿ ಈ ಮಸೂದೆ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು.

2014ರ ಫೆಬ್ರವರಿ 5ರಂದು ಈ ಸಂಬಂಧ ಕೇಳಿದ ಪ್ರಶ್ನೆಗೆ ಮೇಲ್ಮನೆಯಲ್ಲಿ ಉತ್ತರ ನೀಡಿದ ಗೃಹಖಾತೆ ರಾಜ್ಯ ಸಚಿವ ಆರ್‌ಪಿಎನ್ ಸಿಂಗ್, ಈ ಮಸೂದೆಯನ್ನು ಪರಿಗಣಿಸಿ ಒಪ್ಪಿಗೆ ನೀಡಲು ರಾಜ್ಯಸಭೆಯಲ್ಲಿ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಮಸೂದೆ ಚರ್ಚೆಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಕೋಮು ಹಿಂಸೆ ತಡೆ (ನ್ಯಾಯ ಪಡೆಯುವ ಮತ್ತು ಪರಿಹಾರ) ಮಸೂದೆ-2014 ಸಿದ್ಧಪಡಿಸಲಾಗಿದ್ದು, ಇದಕ್ಕೆ ಸಂಪುಟ ಅನುಮೋದನೆ ನೀಡಿದೆ. ಹಿಂದಿನ ಮಸೂದೆ ಹಿಂಪಡೆದು ಹೊಸ ಮಸೂದೆ ಮಂಡಿಸಲು ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದರು. ಆದರೆ ಸರಕಾರದ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಅದು ಕೂಡಾ ನನೆಗುದಿಗೆ ಬಿದ್ದಿತು. ಕಾನೂನು ವ್ಯವಸ್ಥೆ ಸುಭದ್ರವಾಗಿದ್ದರೆ ಯಾವುದೇ ಕೋಮುಗಲಭೆಗಳು ನಡೆಯಲಾರದು ಎನ್ನುವುದಕ್ಕೆ ಹತ್ತ್ತು ಹಲವು ಉದಾಹರಣೆಗಳು ನಮ್ಮ ಮುಂದಿವೆ. ಕಾನೂನಿನ ದೌರ್ಬಲ್ಯಗಳನ್ನು ಬಳಸಿಕೊಂಡು ದುಷ್ಕರ್ಮಿಗಳು ವಿಜೃಂಭಿಸುತ್ತಾರೆ. ರಾಜಕಾರಣಿಗಳು ಕೋಮುಗಲಭೆ ನಡೆಸಲು ಸಂಚು ರೂಪಿಸಿದರೂ, ಪೊಲೀಸರು ಸಂವಿಧಾನಕ್ಕೆ ಬದ್ಧವಾಗಿ ಕಾನೂನು ಚಲಾಯಿಸಿದರೆ ಆ ಸಂಚನ್ನು ವಿಫಲಗೊಳಿಸಬಹುದು.

ರಾಜಕೀಯ ಶಕ್ತಿಗಳು ಮತ್ತು ಕಾನೂನ ವ್ಯವಸ್ಥೆಯ ನಡುವಿನ ಅನೈತಿಕ ಸಂಬಂಧಗಳಿಂದ ಜನಿಸಿದ ಕೂಸು ಕೋಮುಗಲಭೆಗಳು. ಆದುದರಿಂದ ಯಾವುದೇ ಪ್ರದೇಶಗಳಲ್ಲಿ ಕೋಮುಗಲಭೆ ಸಂಭವಿಸಿದರೆ ಅದರ ನೇರ ಹೊಣೆಯನ್ನು ಜಿಲ್ಲಾ ಪೊಲೀಸ್ ಆಡಳಿತವೇ ವಹಿಸಬೇಕು ಎನ್ನುವಂತಹ ಕಠಿಣ ನಿಯಮವೊಂದರ ಅಗತ್ಯವಿದೆ. ದಿಲ್ಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರು ನೇರವಾಗಿ ಭಾಗವಹಿಸಿದ್ದಾರೆ ಎನ್ನುವ ಆರೋಪಗಳಿರುವುದರಿಂದ, ಇಂತಹದೊಂದು ಕಾನೂನು ಹಿಂದೆಂದಿಗಿಂತ ಹೆಚ್ಚು ಅಗತ್ಯವಿದೆ. ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ ತನ್ನ ವೈಫಲ್ಯಕ್ಕಾಗಿ ಮೊತ್ತ ಮೊದಲು ಬೆಲೆ ತೆರಬೇಕು. ಆ ಬಳಿಕ, ಗಲಭೆಯಲ್ಲಿ ಸಂಚು ನಡೆಸಿದವರ, ನೇರ ಪಾತ್ರವಹಿಸಿದವರ ಮೇಲೆ ಕ್ರಮ ನಡೆಯಬೇಕು. ದಿಲ್ಲಿ ಹಿಂಸಾಚಾರದಲ್ಲಿ ಪೊಲೀಸ್ ವೈಫಲ್ಯ ಮಾತ್ರವಲ್ಲ, ಪೊಲೀಸರೇ ನೇರವಾಗಿ ಪಾತ್ರವಹಿಸಿರುವುದರ ಕುರಿತಂತೆ ಈಗಾಗಲೇ ವಿವಿಧ ತನಿಖಾ ವರದಿಗಳು ಬಹಿರಂಗಪಡಿಸಿವೆ. ಆದರೆ ಈವರೆಗೆ ಒಬ್ಬನೇ ಒಬ್ಬ ಪೊಲೀಸ್ ಅಧಿಕಾರಿ ಅಮಾನತಾಗಿರುವ ಅಥವಾ ಗಲಭೆಯಲ್ಲಿ ಭಾಗವಹಿಸಿರುವ ಪೊಲೀಸರ ಮೇಲೆ ಪ್ರಕರಣ ದಾಖಲಾಗಿರುವ ಕುರಿತಂತೆ ವರದಿಯಾಗಿಲ್ಲ. ಬದಲಾಗಿ ಆರೋಪಿ ಸ್ಥಾನದಲ್ಲಿರುವ ಪೊಲೀಸ್ ಇಲಾಖೆಯ ನೇತೃತ್ವದಲ್ಲೇ ದಿಲ್ಲಿ ಹಿಂಸಾಚಾರದ ತನಿಖೆ ನಡೆಯುತ್ತಿದೆ. ಇವರು ಸಂತ್ರಸ್ತರಿಗೆ ಖಂಡಿತವಾಗಿಯೂ ನ್ಯಾಯವನ್ನು ನೀಡಲಾರರು. ಬದಲಿಗೆ ತನಿಖೆಯ ಹೆಸರಿನಲ್ಲಿ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆಯಲು ಇವರು ಸಿದ್ಧತೆ ನಡೆಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)