varthabharthi

ನಿಮ್ಮ ಅಂಕಣ

ಟ್ರಂಪ್ ಮತ್ತು ಮೋದಿಯವರ ಸ್ನೇಹಕೂಟವು ಹೆಚ್ಚುತ್ತಿರುವ ರಾಜತಾಂತ್ರಿಕ ಐಕ್ಯತೆ ಮತ್ತು ಸೈದ್ಧಾಂತಿಕ ಸಮರೂಪತೆಗಳನ್ನು ತೋರಿಸುತ್ತದೆ.

​ ಜಾಗತಿಕ ಬಲಪಂಥೀಯರ ವ್ಯೂಹಾತ್ಮಕ ಆಲಿಂಗನ

ವಾರ್ತಾ ಭಾರತಿ : 6 Mar, 2020
ಕೃಪೆ: Economic and Political Weekly

ಕಣ್ಣಮುಂದೆ ನಡೆಯುತ್ತಿದ್ದ ಕೊಲೆಗಳ ಬಗ್ಗೆ ಈ ಇಬ್ಬರು ನಾಯಕರು ತೋರಿದ ಸಂವೇದನಾಶೂನ್ಯತೆಯ ಮೂಲ ಅವರಿಬ್ಬರ ಬಲಪಂಥೀಯ ರಾಜಕೀಯ ಸಿದ್ಧಾಂತಗಳಲ್ಲಿದೆ. ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲು ಮಾಡುವ, ವಲಸೆ ವಿರೋಧಿ ನೀತಿಗಳ ಪ್ರತಿಪಾದನೆ ಹಾಗೂ ಇಸ್ಲಾಮ್ ಭೀತಿಗಳು ಮೋದಿ ಮತ್ತು ಟ್ರಂಪ್ ಪರಸ್ಪರ ಹಂಚಿಕೊಳ್ಳುವ ಮೌಲ್ಯಗಳಾಗಿವೆ. ಉದಾರವಾದವೇ ತಮ್ಮ ತಮ್ಮ ನಾಗರಿಕತೆಯ ನೆಲೆಗಳು ದುರ್ಬಲಗೊಳ್ಳಲು ಕಾರಣವೆಂದು ಇಬ್ಬರೂ ಭಾವಿಸುತ್ತಾರೆ.


ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ನೀಡಿದ ಹಾರುಭೇಟಿಯನ್ನು ಅದ್ಭುತವಾದ ಯಶಸ್ಸೆಂದು ಬಣ್ಣಿಸಲಾಗುತ್ತಿದೆ. ಪ್ರಧಾನಿ ಮೋದಿಯವರು ಅಮೆರಿಕದ ಅಧ್ಯಕ್ಷರಿಗೆ ಒಂದು ಸಾಮ್ರಾಟನಿಗೆ ಕೊಡುವಂತಹ ಸ್ವಾಗತವನ್ನೇ ನೀಡಿದರು. ಅದಕ್ಕೆ ಪ್ರತಿಯಾಗಿ ಟ್ರಂಪ್ ಸಹ ತಮ್ಮ ಭಾರತ ಭೇಟಿಯು ‘‘ಅತ್ಯದ್ಭುತವಾಗಿತ್ತು’’ ಎಂದು ಬಣ್ಣಿಸಿದರು. ಈ ಭೇಟಿಯು ರಾಜತಾಂತ್ರಿಕತೆ ಮತ್ತು ರಾಜಕೀಯದ ಒಂದು ಉತ್ತಮ ಮಿಶ್ರಣವಾಗಿತ್ತು. ಈ ಭೇಟಿಯಲ್ಲಿ ಪ್ರದರ್ಶಿಸಲಾದ ನಾಯಕರ ನಡುವಿನ ಬಾಂಧವ್ಯವು ಸರಕಾರದ ನಡುವೆ ಹೆಚ್ಚುತ್ತಿರುವ ಮೈತ್ರಿ ಬೆಸುಗೆಯನ್ನು ಸಾರುವಂತಿತ್ತು. ಇದರ ಪರಿಣಾಮವಾಗಿ ಈಗ ಭಾರತ ಮತ್ತು ಅಮೆರಿಕವು ‘‘ಸಮಗ್ರ ಜಾಗತಿಕ ವ್ಯೆಹಾತ್ಮಕ ಪಾಲುದಾರ’’ರಾಗಿದ್ದಾರೆ. ಭಾರತ ಸರಕಾರದ ಜೊತೆ 3 ಬಿಲಿಯನ್ ಡಾಲರ್ (ಅಂದಾಜು 30,000 ಕೋಟಿ ರೂಪಾಯಿಗಳು) ಮೊತ್ತದ ಕರಾರು ಹಾಗೂ ಅಮೆರಿಕದ ಸೈನ್ಯದ ಜೊತೆಗೆ ಹೆಚ್ಚೆಚ್ಚು ಸೈನಿಕ ಕೊಡುಕೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮೋದಿಯಿಂದ ಭರವಸೆಯನ್ನು ಪಡೆದುಕೊಂಡು ಹಿಂದಿರುಗಿದ ಟ್ರಂಪ್ ಸಹಜವಾಗಿಯೇ ಭೇಟಿಯ ಫಲಿತಾಂಶದಿಂದ ಸಂತಸಗೊಂಡಿದ್ದರು. ಇದರ ಅರ್ಥವೇನೆಂದರೆ ಭಾರತವು ಇನ್ನು ಮುಂದೆ ಅಮೆರಿಕದ ಸೇನೆಯ ಕ್ಲೌಡ್ ಸರ್ವರ್ಸ್ ಜೊತೆ ಸಂಬಂಧವಿರುವ ಸೇನಾ ಸಾಮಗ್ರಿಗಳನ್ನು ಹೆಚ್ಚೆಚ್ಚು ಕೊಳ್ಳಲಿದೆ. ಭಾರತವನ್ನು ‘ಬ್ಲೂ ಡಾಟ್ ನೆಟ್‌ವರ್ಕ್’ಗೂ ಪರಿಚಯಿಸಲಾಗಿದೆ.

ಈ ನೆಟ್‌ವರ್ಕ್‌ಗೆ ಸೇರಿಕೊಳ್ಳುವುದರ ಅರ್ಥವೇನೆಂದರೆ ಇನ್ನು ಮುಂದೆ ಭಾರತದ ಎಲ್ಲಾ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳೂ ಅಮೆರಿಕದ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮ (ಡಿಎಫ್‌ಸಿ)ಗಳ ಮಾನದಂಡದ ಅನುಸಾರ ಪ್ರಮಾಣಿತಗೊಂಡಿರಬೇಕು. ಭಾರತವು ಅಮೆರಿಕದ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸೇನಾ ಜಾಲಗಳಿಗೆ ಬೆಸೆದುಕೊಳ್ಳಲು ಸಮ್ಮತಿಯನ್ನು ತೋರಿದ್ದರಿಂದ ಚೀನಾಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬಲ್ಲ ತನ್ನ ನೆಚ್ಚಿನ ಸಹಭಾಗಿಯನ್ನಾಗಿ ಭಾರತವನ್ನು ಬಳಸಿಕೊಳ್ಳಬಲ್ಲ ಭರವಸೆಯೊಂದಿಗೆ ಟ್ರಂಪ್ ತೃಪ್ತರಾಗಿ ಅಮೆರಿಕಕ್ಕೆ ಹಿಂದಿರುಗಿದ್ದಾರೆ. ಮೋದಿಯವರಿಗೆ ಟ್ರಂಪ್ ಅವರಿಂದ ಎರಡು ತೀರ ಅತ್ಯಗತ್ಯ ಸಹಾಯ ಆಗಬೇಕಿತ್ತು: ಒಂದು ತನ್ನ ವಿದೇಶೀ ಪ್ರವಾಸದ ವಿರುದ್ಧ ನಿಲುವನ್ನು ತೆಗೆದುಕೊಂಡ ಪಾಶ್ಚಿಮಾತ್ಯ ಉದಾರವಾದಿಗಳಿಗೆ ಬಲವಾದ ಹೊಡೆತವನ್ನು ಕೊಡಬೇಕಿತ್ತು ಮತ್ತು ಎರಡನೆಯದಾಗಿ ಕಾಶ್ಮೀರದಲ್ಲಿ ಆರ್ಟಿಕಲ್ 370ಅನ್ನು ಹಿಂದೆಗೆದುಕೊಂಡಿದ್ದರಿಂದಾಗಿ ಅಮೆರಿಕವು ತನ್ನ ಬೆಂಬಲವನ್ನು ಹಿಂದೆಗೆದುಕೊಳ್ಳಬಹುದೆಂಬ ಭೀತಿಯು ನಿವಾರಣೆಯಾಗಬೇಕಿತ್ತು. ಟ್ರಂಪ್ ಅವರು ಮೋದಿಯವರ ಈ ಎರಡೂ ಬೇಡಿಕೆಗಳನ್ನು ಪೂರೈಸಿದ್ದಾರೆ. ಆದರೆ ಟ್ರಂಪ್ ಅವರು ಮೋದಿಯವರು ಬಯಸುತ್ತಿದ್ದಂತೆ ಪಾಕಿಸ್ತಾನವನ್ನು ನೇರವಾಗಿ ಟೀಕಿಸಲು ಹೋಗಲಿಲ್ಲ. ಎಂಎಚ್ 60ಆರ್ ನೌಕಾ ಮತ್ತು ಎಎಚ್-64ಇ ಅಪಾಚೆ ಹೆಲಿಕಾಪ್ಟರುಗಳನ್ನು ಪಡೆದುಕೊಂಡಿದ್ದಕ್ಕೆ ಹಾಗೂ ಹಕಾನಿ ನೆಟ್‌ವರ್ಕ್ ಮತ್ತು ಪಾಕಿಸ್ತಾನದ ತೆಹ್ರೀಕೆ ತಾಲಿಬಾನ್ ಸಂಸ್ಥೆಗಳನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಲು ಒಪ್ಪಿಗೆಯನ್ನು ಪಡೆದುಕೊಂಡಿದ್ದರಿಂದ ಭಾರತದ ಆಡಳಿತ ವರ್ಗ ಸಾಕಷ್ಟು ಖುಷಿಗೊಂಡಿದೆ. ಒಟ್ಟಾರೆಯಾಗಿ ವಾಶಿಂಗ್ಟನ್ ತನ್ನನ್ನು ಮೊದಲಿನಂತೆ ಉಪೇಕ್ಷೆ ಮಾಡದಿರುವುದರ ಬಗ್ಗೆ ಹೊಸದಿಲ್ಲಿ ತೃಪ್ತಗೊಂಡಿದೆ.

ಆದರೆ ಒಂದು ಬಗೆಯಲ್ಲಿ ಸುವ್ಯಸ್ಥಿತವಾಗಿ ಪ್ರಾಯೋಜಿತವಾಗಿದ್ದ ಈ ರಾಜತಾಂತ್ರಿಕ ಭೇಟಿಯ ಘಟನೆಗೆ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಹಾಗೂ ದೊಂಬಿಗಳು ಭುಗಿಲೆದ್ದದ್ದು ಕಪ್ಪುಚುಕ್ಕೆಯನ್ನಂಟಿಸಿತು. ಟ್ರಂಪ್ ಮತ್ತು ಮೋದಿಯವರು ಸಬರಮತಿ ನದಿಯ ದಡದಲ್ಲಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಗಾಂಧಿ ಆಶ್ರಮದಲ್ಲಿ ಶಾಂತಿಯ ಪಾಠಗಳನ್ನು ಕಲಿಯುತ್ತಿರುವ ಹೊತ್ತಿನಲ್ಲಿ ಯಮುನಾ ನದಿಯ ತೀರದಲ್ಲಿ ಒಂದು ಕೋಮುಸಮರವೇ ಸ್ಫೋಟಗೊಂಡಿತ್ತು. ಆದರೆ ದಿಲ್ಲಿಯಲ್ಲಿ ಹೆಚ್ಚುತ್ತಲೇ ಹೋದ ಸಾವುಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಟ್ರಂಪ್ ಮತ್ತು ಮೋದಿಯವರು ಪರಸ್ಪರ ಒಬ್ಬರ ಬೆನ್ನನ್ನು ಮತ್ತೊಬ್ಬರು ಚಪ್ಪರಿಸುವುದನ್ನು ಮುಂದುವರಿಸಿದ್ದರು. ಕಣ್ಣಮುಂದೆ ನಡೆಯುತ್ತಿದ್ದ ಕೊಲೆಗಳ ಬಗ್ಗೆ ಈ ಇಬ್ಬರು ನಾಯಕರು ತೋರಿದ ಸಂವೇದನಾಶೂನ್ಯತೆಯ ಮೂಲ ಅವರಿಬ್ಬರ ಬಲಪಂಥೀಯ ರಾಜಕೀಯ ಸಿದ್ಧಾಂತಗಳಲ್ಲಿದೆ. ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲು ಮಾಡುವ, ವಲಸೆ ವಿರೋಧಿ ನೀತಿಗಳ ಪ್ರತಿಪಾದನೆ ಹಾಗೂ ಇಸ್ಲಾಮ್ ಭೀತಿಗಳು ಮೋದಿ ಮತ್ತು ಟ್ರಂಪ್ ಪರಸ್ಪರ ಹಂಚಿಕೊಳ್ಳುವ ಮೌಲ್ಯಗಳಾಗಿವೆ.

ಉದಾರವಾದವೇ ತಮ್ಮ ತಮ್ಮ ನಾಗರಿಕತೆಯ ನೆಲೆಗಳು ದುರ್ಬಲಗೊಳ್ಳಲು ಕಾರಣವೆಂದು ಇಬ್ಬರೂ ಭಾವಿಸುತ್ತಾರೆ. ಹಾಲಿ ಬಿಕ್ಕಟ್ಟಿನಿಂದ ಇಬ್ಬರೂ ನಾಯಕರು ತಮ್ಮತಮ್ಮ ಲಾಭವನ್ನು ಪಡೆದುಕೊಳ್ಳುತ್ತಾರಾದರೂ, ಟ್ರಂಪ್ ಆಗಮನಕ್ಕೆ ಒಂದು ತಿಂಗಳ ಮುಂಚಿನಿಂದಲೂ ದಿಲ್ಲಿಯಲ್ಲಿ ನೆಲೆಯೂರಿದ್ದ ಅಮೆರಿಕದ ರಹಸ್ಯ ಬೇಹುಗಾರಿಕಾ ಸಂಸ್ಥೆಗಳು ಭಾರತದ ರಾಜಧಾನಿಯಲ್ಲಿ ಬಿಗಡಾಯಿಸುತ್ತಿರುವ ಕಾನೂನು ಭದ್ರತಾ ಪರಿಸ್ಥಿತಿಯ ಬಗ್ಗೆ ಏಕೆ ಆತಂಕವನ್ನು ವ್ಯಕ್ತಪಡಿಸಲಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ. ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ದಿಲ್ಲಿಯ ಸ್ಫೋಟಕ ಕೋಮು ಉದ್ವಿಘ್ನ ಪರಿಸ್ಥಿತಿಯ ಬಗ್ಗೆ ಸರಿಯಾದ ಅಂದಾಜು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾದವು. ರಾಜತಾಂತ್ರಿಕತೆ ಮತ್ತು ರಾಜಕೀಯದ ಈ ಅಪಾಯಕಾರಿ ಮಿಶ್ರಣವು ಕಳೆದ ಸೆಪ್ಟಂಬರ್‌ನಲ್ಲಿ ಪ್ರಾರಂಭವಾಯಿತು. ಆಗ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ (ಈಗ ವಿದೇಶಾಂಗ ಕಾರ್ಯದರ್ಶಿ) ಹರ್ಷವರ್ಧನ್ ಶ್ರಿಂಗ್ಲಾ ಅವರು ಅಮೆರಿಕದ ಅತ್ಯಂತ ಬಲಪಂಥೀಯ ಸಿದ್ಧಾಂತಿಯೂ ಹಾಗೂ ಹಿಂದೊಮ್ಮೆ ಅಮೆರಿಕ ಸರಕಾರದ ಮುಖ್ಯ ವ್ಯೆಹತಾಂತ್ರಿಕ ನಿಪುಣನೂ ಆಗಿದ್ದ ಸ್ಟೀವ್ ಬ್ಯಾನ್ನನ್ ಅವರನ್ನು ಭಾರತೀಯ ರಾಯಭಾರ ಕಚೇರಿಯಲ್ಲಿ ಭೇಟಿಯಾದರು. ಈ ಭೇಟಿಯ ನಂತರ ಶ್ರಿಂಗ್ಲಾ ಅವರು ಎಲ್ಲಾ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೆ ಸರಿಸಿ ಬ್ಯಾನ್ನನ್ ಅವರ ಜೊತೆಗಿನ ತಮ್ಮ ಚಿತ್ರವನ್ನು ‘‘ಚಾರಿತ್ರಿಕ ಮಹತ್ವದ ಸಿದ್ಧಾಂತಿ ಮತ್ತು ಧರ್ಮ ಯೋಧ’’ ಎಂಬ ಶೀರ್ಷಿಕೆಯಡಿ ಟ್ವೀಟ್ ಮಾಡಿದರು.

ಕಾಕತಾಳಿಯವಾಗಿ, ನಿರ್ದೇಶಕ ಎರ್ರೋಲ್ ಮೋರಿಸ್ ಅವರು ಬ್ಯಾನ್ನನ್ ಅವರ ಪ್ರಾಪಂಚಿಕ ದೃಷ್ಟಿಕೋನದ ಬಗ್ಗೆ ಮಾಡಿರುವ ಸಾಕ್ಷ್ಯ ಚಿತ್ರಕ್ಕೆ ‘ಅಮೆರಿಕನ್ ಧರ್ಮ’ ಎಂದೇ ಹೆಸರಿಡಲಾಗಿತ್ತು. ಬ್ಯಾನ್ನನ್ ಅವರು ತಮ್ಮ ಮುಚ್ಚುಮರೆಯಿಲ್ಲದ ಜನಾಂಗೀಯವಾದಿ ದೃಷ್ಟಿಕೋನಕ್ಕೆ ಖ್ಯಾತರಾಗಿದ್ದು ತನ್ನ ರಾಜಕೀಯ ಜೊತೆಗಾರರ ಆಸಕ್ತಿಗಳನ್ನು ರಕ್ಷಿಸುವ ಅಂತರ್‌ರಾಷ್ಟ್ರೀಯ ಬಲಪಂಥೀಯ ಚಳವಳಿಯ ಅಗ್ರಗಣ್ಯ ನಾಯಕರಾಗಿದ್ದಾರೆ. ಟ್ರಂಪ್ ಅವರು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಾಗೂ ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಿದ್ದರು; ಮೋದಿಯವರ ಚುನಾವಣಾ ಗೆಲುವಿನ ಸಾಧ್ಯತೆಗಳು ಇಳಿಮುಖಗೊಳ್ಳಲು ತೊಡಗಿದರೆ ಅವರನ್ನೂ ಕೂಡಾ ರಕ್ಷಿಸಲು ಟ್ರಂಪ್ ಮುಂಬರಬಹುದು. ಭಾರತೀಯ ಅಮೆರಿಕನ್ನರ ನಡುವೆ ಟ್ರಂಪ್ ಅವರ ಇಮೇಜನ್ನು ಹೆಚ್ಚಿಸಲು ಮೋದಿಯವರು ಈಗಾಗಲೇ ಮಾಡಬಹುದಾದ್ದನ್ನೆಲ್ಲಾ ಮಾಡಿದ್ದಾರೆ. ವಿಪರ್ಯಾಸವೆಂದರೆ ರಾಷ್ಟ್ರೀಯವಾದ ಮತ್ತು ಜಾಗತಿಕತೆಯ ವಿರೋಧಿ ನಾಯಕರೇ ಬಲಪಂಥೀಯತೆಯ ರಾಜಕೀಯ ಜಾಗತೀಕರಣದ ಮುಂಚೂಣಿ ನಾಯಕರಾಗಿದ್ದಾರೆ.

ಟ್ರಂಪ್ ಅವರು ಇಸ್ರೇಲ್‌ನ ಹೊಸ ‘ರಾಷ್ಟ್ರ-ಪ್ರಭುತ್ವ’ದ ಕಾನೂನಿಗೆ ಕೊಟ್ಟ ಒಪ್ಪಿಗೆಗೂ ಮತ್ತು ಮೋದಿಯವರು ಭಾರತದ ಪೌರತ್ವದ ರಚನೆಯನ್ನು ಹಾಳುಗೆಡುವುತ್ತಿರುವುದರ ಬಗ್ಗೆ ತೋರುತ್ತಿರುವ ಮೌನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಮೋದಿಯವರು ದಕ್ಷಿಣ ಏಶ್ಯದ ನೇತನ್ಯಾಹು ಎಂಬ ಬಗ್ಗೆ ಟ್ರಂಪ್ ಅವರಿಗೆ ಅತೀವ ವಿಶ್ವಾಸವಿದೆ. ಇಸ್ರೇಲ್‌ನ ಜಿಯೋನಿಸಂ (ಯೆಹೂದಿ ಮೇಲಾಧಿಪತ್ಯವಾದ) ರೀತಿಯೇ ಭಾರತದ ಬ್ರಾಹ್ಮಣೀಯ ಹಿಂದುತ್ವವು ಟ್ರಂಪ್ ಅವರ ಶ್ರೇಷ್ಠತಾವಾದ ಜೊತೆ ನಿರ್ದಿಷ್ಟ ಸಹಮತವನ್ನು ಹೊಂದಿದೆ. ಇಸ್ರೇಲ್‌ನಲ್ಲಿ ಜಿಯೋನಿಸ್ಟರು ಫೆಲೆಸ್ತೀನಿಯನ್ನರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಯಾವ ಬಗೆಯ ಒಪ್ಪಿಗೆಯನ್ನು ಟ್ರಂಪ್ ಅವರು ಸೂಚಿಸಿದ್ದಾರೋ ಅದೇ ರೀತಿಯಲ್ಲಿ ಭಾರತದಲ್ಲಿ ಹಿಂದುತ್ವವು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಮತ್ತವರಿಗೆ ಪೌರತ್ವವನ್ನು ನಿರಾಕರಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಮ್ಮ ಸಮ್ಮತಿಯನ್ನು ತೋರಿದ್ದಾರೆ.

ಟ್ರಂಪ್ ಅವರು ನೇತನ್ಯಾಹು ಅವರ ಜೊತೆ ಒಳಸಂಚು ನಡೆಸಿ ಮಧ್ಯ ಏಶ್ಯ ಶಾಂತಿ ಒಪ್ಪಂದವೊಂದನ್ನು ಹೇರಿದ್ದಾರೆ. ಅದೇ ರೀತಿಯಲ್ಲಿ ಮೋದಿಯವರ ಜೊತೆ ಸೇರಿ ಕಾಶ್ಮೀರದ ವಿಷಯದಲ್ಲೂ, ಇಡೀ ಪ್ರದೇಶದಲ್ಲಿ ಮತ್ತಷ್ಟು ಅಸ್ಥಿರತೆಯನ್ನು ಸೃಷ್ಟಿಸಬಹುದಾದ, ಒಂದು ಏಕಪಕ್ಷೀಯ ಕಾಶ್ಮೀರ ಯೋಜನೆಯೊಂದನ್ನು ರೂಪಿಸುವ ಬಗ್ಗೆ ಪರ್ಯಾಲೋಚನೆ ನಡೆಸುತ್ತಿರಬಹುದು. ಅಮೆರಿಕದ ಅಧ್ಯಕ್ಷರೇ ಖುದ್ದು ಜೊತೆಗಿರುವಾಗ ಸಂಭವಿಸಿದ 1984ರ ಸಿಖ್ ವಿರೋಧಿ ಗಲಭೆಗಳ ನಂತರದಲ್ಲೇ ಅತ್ಯಂತ ತೀವ್ರ ಸ್ವರೂಪದ ಕೋಮು ಉದ್ವಿಗ್ನತೆಯನ್ನು ನಿಭಾಯಿಸುವುದು ಮೋದಿಯವರ ರಾಜಕೀಯ ಜೀವನದ ಮುಂದಿನ ಮಹತ್ತರ ಮೈಲಿಗಲ್ಲಾಗಿದೆ. ಆದರೆ ತಮ್ಮ ವಿರುದ್ಧ ದೂರನ್ನು ಸಲ್ಲಿಸಲು ಉದಾರವಾದಿಗಳ ಪಾಲಿಗೆ ಅಮೆರಿಕ ಉಳಿದಿಲ್ಲವೆಂದು ಮೋದಿಯವರು ಈಗ ಸಾಕಷ್ಟು ಧೈರ್ಯದಿಂದ ಹೇಳಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)